ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಆರ್‌ಆರ್‌ ಭೂಸ್ವಾಧೀನಕ್ಕೆ ಸರ್ಕಾರದಿಂದ ಸಾಲ: ಸರ್ಕಾರದ ನಿರ್ಧಾರ

ರಸ್ತೆ ಅಗಲ 50 ಮೀಟರ್‌ಗೆ ಕಡಿತ, ಮುಖ್ಯಮಂತ್ರಿ ಸಭೆಯಲ್ಲಿ ನಿರ್ಧಾರ
Published 17 ಜುಲೈ 2024, 21:28 IST
Last Updated 17 ಜುಲೈ 2024, 21:28 IST
ಅಕ್ಷರ ಗಾತ್ರ

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆಗೆ (ಪಿಆರ್‌ಆರ್‌) ಅಗತ್ಯವಿರುವ ಸುಮಾರು 3,500 ಎಕರೆ ಭೂಮಿ ಸ್ವಾಧೀನದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲು ನಿರ್ಧರಿಸಿದ್ದು, ಇದಕ್ಕಾಗಿ ಬ್ಯಾಂಕ್‌ ಸಾಲ ಮಾಡಲು ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬುಧವಾರ ನಡೆದ ನಗರದ ಸಚಿವರು, ಶಾಸಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯೋಜಿಸಿರುವ 74 ಕಿ.ಮೀ ಉದ್ದ ಪಿಆರ್‌ಆರ್‌ ನಿರ್ಮಾಣಕ್ಕೆ ₹27 ಸಾವಿರ ಕೋಟಿ ಮೊತ್ತಕ್ಕೆ ಟೆಂಡರ್‌ ಕರೆಯಲಾಗಿತ್ತು. ಆದರೆ, ಯಾರೂ ಆಸಕ್ತಿ ತೋರಿರಲಿಲ್ಲ. ಖಾಸಗಿಯವರು ಭೂಸ್ವಾಧೀನ ಮತ್ತು ನಿರ್ಮಾಣ ವೆಚ್ಚಕ್ಕೆ ಸರ್ಕಾರದಿಂದ ‘ನಿಧಿ’ಯನ್ನು ಬಯಸಿದ್ದರು. ಗುತ್ತಿಗೆದಾರರನ್ನು ಹುಡುಕುವಲ್ಲಿಯೇ ಬಿಡಿಎ ಎರಡು ವರ್ಷ ಕಳೆದಿದ್ದು, ಹಲವು ಬಾರಿ ಟೆಂಡರ್‌ ಆಹ್ವಾನಿಸಿತ್ತು.

ಪಿಆರ್‌ಆರ್‌ ಅಭಿವೃದ್ಧಿಗಿರುವ ಸಾಧ್ಯತೆಗಳು, ಸಂಪನ್ಮೂಲ ಕ್ರೋಡೀಕರಣದ ಅವಕಾಶಗಳನ್ನು ಪರಿಶೀಲಿಸಿ, ವಿವರವಾದ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ಮಂಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

‘ಭೂಸ್ವಾಧೀನಕ್ಕಾಗಿಯೇ ಯೋಜನೆಯ ಶೇ 80ರಷ್ಟು ಹಣ ವೆಚ್ಚವಾಗಲಿದ್ದು, ಇದನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ನಿರ್ಮಾಣ ವೆಚ್ಚಕ್ಕೆ ಜಪಾನ್‌ ಇಂಟರ್‌ನ್ಯಾಷನಲ್‌ ಕೊಆಪರೇಷನ್‌ ಏಜೆನ್ಸಿ (ಜೈಕಾ) ಹಣ ನೀಡಲಿದೆ’ ಎಂದು ಮೂಲಗಳು ತಿಳಿಸಿವೆ.

‘ಭೂಸ್ವಾಧೀನಕ್ಕೆ ಹಣ ಪಡೆಯಲು ಖಾಸಗಿಯವರನ್ನು ಅವಲಂಬಿಸಿರುವುದರಿಂದ ಯೋಜನೆ ವಿಳಂಬವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾದರಿಯಂತೆ ಸರ್ಕಾರವೇ ಭೂಸ್ವಾಧೀನದ ವೆಚ್ಚ ಭರಿಸಬಹುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ಸಲಹೆ ನೀಡಿದರು ಎನ್ನಲಾಗಿದೆ.

‘ಪಿಆರ್‌ಆರ್‌ ನಿರ್ಮಾಣದ ನಂತರ ಎರಡೂ ಬದಿಯ ಜಮೀನನ್ನು ಹರಾಜು ಹಾಕುವ ಮೂಲಕ ರಾಜ್ಯ ಸರ್ಕಾರ ಸಾಲವನ್ನು ಮರುಪಾವತಿ ಮಾಡಬಹುದಾಗಿದೆ. ಈ ಭಾಗದಲ್ಲಿ ಉತ್ತಮ ಮೌಲ್ಯ ಪಡೆಯಲು, ಹೆಚ್ಚುವರಿ ಫ್ಲೋರ್‌ ಎರಿಯಾ ರೆಷಿಯೊ (ಎಫ್‌ಎಆರ್) ನೀಡಲೂ ಸರ್ಕಾರ ಆಲೋಚಿಸಿದೆ’ ಎಂದು ಮೂಲಗಳು ತಿಳಿಸಿವೆ.

ಪಿಆರ್‌ಆರ್‌ ಅಗಲ 50 ಮೀಟರ್: ‘ಭೂಸ್ವಾಧೀನದ ವೆಚ್ಚವನ್ನು ಕಡಿಮೆ ಮಾಡಲು, ರಾಜ್ಯ ಸರ್ಕಾರ, ಪಿಆರ್‌ಆರ್‌ ಅಗಲವನ್ನು 50 ಮೀಟರ್‌ಗೆ ಕಡಿತಗೊಳಿಸಲು ಉದ್ದೇಶಿಸಿದೆ. ಈ ರಸ್ತೆ ಎಂಟು ಮುಖ್ಯ ಮಾರ್ಗಗಳು ಮತ್ತು ಎರಡು ಸರ್ವೀಸಸ್‌ ರಸ್ತೆಯನ್ನು ಹೊಂದಲಿದೆ. ಯೋಜನೆಯ ಮೊದಲ ಹಂತದಲ್ಲಿ ಪಿಆರ್‌ಆರ್‌ 100 ಮೀಟರ್‌ ಅಗಲ ಹೊಂದಿದ್ದು, ಸೈಕಲ್‌ ಮಾರ್ಗ, ಹಸಿರು ಮಾರ್ಗ, ಅಗಲವಾದ ವಿಭಜಕ ನಿರ್ಮಿಸುವ ಯೋಜನೆ ಇತ್ತು. ಇದಕ್ಕೆಲ್ಲ ಹೆಚ್ಚಿನ ಜಮೀನು ಅಗತ್ಯವಿರುವುದರಿಂದ, ಅದಕ್ಕೆ ಅಧಿಕ ವೆಚ್ಚಾಗುವುದರಿಂದ ಅವುಗಳನ್ನು ಕೈಬಿಟ್ಟು ಯೋಜನೆಯನ್ನು ಮರು ವಿನ್ಯಾಸಗೊಳಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ನಗರದಲ್ಲಿ ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ ಹಾಗೂ ಆಯವ್ಯಯದಲ್ಲಿ ಘೋಷಿಸಿದಂತೆ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆ ನಿರ್ಮಾಣ ಅಭಿವೃದ್ಧಿ, ರಾಜಕಾಲುವೆಗಳ ಬಫರ್‌ ಝೋನ್‌ಗಳಲ್ಲಿ ರಸ್ತೆ ನಿರ್ಮಿಸುವ ಯೋಜನೆಗಳ ಕುರಿತು ಚರ್ಚೆ ನಡೆಯಿತು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಮುಖ್ಯಮಂತ್ರಿ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌. ಕೆ. ಅತೀಕ್ ಸಭೆಯಲ್ಲಿ ಪಾಲ್ಗೊಂಡಿದ್ದರು.

‘102 ಕಿ.ಮೀ ಎಲಿವೇಟೆಡ್‌ ಕಾರಿಡಾರ್ ಪ್ರಸ್ತಾವ’

ಐದು ವರ್ಷಗಳ ಹಿಂದೆ ಸಾರ್ವಜನಿಕ ವಿರೋಧದಿಂದ ಕೈಬಿಟ್ಟಿದ್ದ 102 ಕಿ.ಮೀ ಉದ್ದದ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಮಾಡುವ ಬಗ್ಗೆ ಮುಖ್ಯಮಂತ್ರಿಯವರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಸ್ತಾಪಿಸಿದ್ದಾರೆ.

‘ಎಲಿವೇಟೆಡ್‌ ಕಾರಿಡಾರ್‌ ಯೋಜನೆ, ಸುರಂಗ ರಸ್ತೆ ಮತ್ತು ಹೊಸ ರಸ್ತೆಗಳ ನಿರ್ಮಾಣ ಬಗ್ಗೆ ಚರ್ಚೆ ನಡೆಸಿದೆವು. ಈ ಎಲ್ಲ ಯೋಜನೆಗಳನ್ನು ಸಚಿವ ಸಂಪುಟದ ಮುಂದೆ ಇರಿಸಲಾಗುತ್ತದೆ. ಸಚಿವರ ಸಲಹೆಗಳನ್ನು ಪಡೆಯಲು ಸಭೆ ನಡೆಸಲಾಯಿತು. ನಗರದ ಶಾಸಕರ ಸಭೆಯನ್ನು 27ರಂದು ನಡೆಸಿ, ಮತ್ತೊಮ್ಮೆ ಈ ಬಗ್ಗೆ ಚರ್ಚಿಸಲಾಗುತ್ತದೆ’ ಎಂದರು.

ನಗರದ ಉತ್ತರ ಮತ್ತು ದಕ್ಷಿಣ ಹಾಗೂ ಪೂರ್ವ ಮತ್ತು ಪಶ್ಚಿಮವನ್ನು ಸಂಪರ್ಕಿಸಲು ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣವನ್ನು ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ಸಂಚಾರ ತಜ್ಞರು ಮತ್ತು ನಾಗರಿಕರ ಗುಂಪುಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಟೆಂಡರ್‌ ಅನ್ನು
ರದ್ದುಪಡಿಸಲಾಗಿತ್ತು. 

ಬಿಬಿಎಂಪಿ ಪುನಾರಚನೆ ಸಮಿತಿ ಸದಸ್ಯರೊಂದಿಗೆ ಬುಧವಾರ ಸಂಜೆ ಪ್ರತ್ಯೇಕವಾಗಿ ಸಭೆ ನಡೆಸಿದ
ಡಿ.ಕೆ. ಶಿವಕುಮಾರ್‌ ಅವರು, ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ಗೆ ಅಂತಿಮ ರೂಪ ನೀಡಲು ಸೂಚಿಸಿದರು. ಈ ಕರಡು ಸೋಮವಾರ ನಡೆಯುವ ಸಚಿವ ಸಂಪುಟದ ಮುಂದೆ ಬರುವ ಸಾಧ್ಯತೆಗಳಿವೆ.

ಪಿಆರ್‌ಆರ್‌ ಅಗಲ 50 ಮೀಟರ್

‘ಭೂಸ್ವಾಧೀನದ ವೆಚ್ಚವನ್ನು ಕಡಿಮೆ ಮಾಡಲು, ರಾಜ್ಯ ಸರ್ಕಾರ, ಪಿಆರ್‌ಆರ್‌ ಅಗಲವನ್ನು 50 ಮೀಟರ್‌ಗೆ ಕಡಿತಗೊಳಿಸಲು ಉದ್ದೇಶಿಸಿದೆ.

ಈ ರಸ್ತೆ ಎಂಟು ಮುಖ್ಯ ಮಾರ್ಗಗಳು ಮತ್ತು ಎರಡು ಸರ್ವೀಸಸ್‌ ರಸ್ತೆಯನ್ನು ಹೊಂದಲಿದೆ. ಯೋಜನೆಯ ಮೊದಲ ಹಂತದಲ್ಲಿ ಪಿಆರ್‌ಆರ್‌ 100 ಮೀಟರ್‌ ಅಗಲ ಹೊಂದಿದ್ದು, ಸೈಕಲ್‌ ಮಾರ್ಗ, ಹಸಿರು ಮಾರ್ಗ, ಅಗಲವಾದ ವಿಭಜಕ ನಿರ್ಮಿಸುವ ಯೋಜನೆ ಇತ್ತು. ಇದಕ್ಕೆಲ್ಲ ಹೆಚ್ಚಿನ ಜಮೀನು ಅಗತ್ಯವಿರುವುದರಿಂದ, ಅದಕ್ಕೆ ಅಧಿಕ ವೆಚ್ಚಾಗುವುದರಿಂದ ಅವುಗಳನ್ನು ಕೈಬಿಟ್ಟು ಯೋಜನೆಯನ್ನು ಮರು ವಿನ್ಯಾಸಗೊಳಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ. ನಗರದಲ್ಲಿ ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ ಹಾಗೂ ಆಯವ್ಯಯದಲ್ಲಿ ಘೋಷಿಸಿದಂತೆ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆ ನಿರ್ಮಾಣ ಅಭಿವೃದ್ಧಿ, ರಾಜಕಾಲುವೆಗಳ ಬಫರ್‌ ಝೋನ್‌ಗಳಲ್ಲಿ ರಸ್ತೆ ನಿರ್ಮಿಸುವ ಯೋಜನೆಗಳ ಕುರಿತು ಚರ್ಚೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT