‘ಉದ್ಯಾನ ನಗರಿ’ ಎಂಬ ಹಿರಿಮೆಯ ಗರಿ ಮುಡಿಗೇರಿಸಿಕೊಂಡಿದ್ದ ಬೆಂಗಳೂರಿನ ತಂಪು ಇತ್ತೀಚಿನ ವರ್ಷಗಳಲ್ಲಿ ಮರೀಚಿಕೆಯಾಗುತ್ತಿದೆ. ಸಮೃದ್ಧವಾದ ಹಸಿರು ಹಾಗೂ ತಂಪಾದ ವಾತಾವರಣವನ್ನು ಉಳಿಸಿಕೊಳ್ಳಲು ಪಾಲಿಕೆ ವತಿಯಿಂದ ಅಲ್ಲಲ್ಲಿ ಸೊಂಪಾದ ಉದ್ಯಾನಗಳನ್ನೇನೋ ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದಾಗಿ ಇಂತಹ ಅನೇಕ ಹಸಿರು ತಾಣಗಳು ಪ್ರಶಾಂತತೆ ಬಯಸಿ ಬರುವವರ ಮನಕೆ ಮುದ ನೀಡುವ ಬದಲು ರೇಜಿಗೆ ಹುಟ್ಟಿಸುವಂತಿವೆ.

ಯಂತ್ರಗಳ ಮೊರೆತದಿಂದ ದೂರವಾಗಿ ಒಂದಷ್ಟು ವಿರಾಮಕ್ಕಾಗಿ ಉದ್ಯಾನಗಳನ್ನು ಹೊಕ್ಕರೆ ತಂಗಾಳಿ, ಸೊಂಪಾದ ನೆರಳಿನ ಬದಲಿಗೆಕಸದ ರಾಶಿ, ದೂಳು, ಕಿತ್ತುಹೋದ ನಡಿಗೆ ಪಥ, ತುಕ್ಕು ಹಿಡಿದ ಕಸದ ಬುಟ್ಟಿಗಳು, ಮುರಿದು ನೇತಾಡುವ ವ್ಯಾಯಾಮದ ಪರಿಕರಗಳು ಸ್ವಾಗತಿಸುತ್ತವೆ. ಒಂದೊಂದು ಉದ್ಯಾನಗಳಲ್ಲೂ ಒಂದೊಂದು ಅಧ್ವಾನದ ಕತೆಗಳಿವೆ.

ಪ್ರತಿ ವಾರ್ಡ್ನಲ್ಲೂ ಸರ್ಕಾರಿ ಜಮೀನುಗಳಲ್ಲಿ ಒಂದಿಲ್ಲೊಂದು ಸಾರ್ವಜನಿಕ ಉದ್ಯಾನಗಳಿವೆ. ಬಹುತೇಕ ಕಡೆ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ, ವ್ಯಾಯಾಮಕ್ಕೆ, ಯೋಗ ಮತ್ತು ಮಕ್ಕಳ ಆಟೋಟಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಕಸದ ತೊಟ್ಟಿಯಾಗುತ್ತಿವೆ: ಪಾರ್ಕ್ಗಳ ಸುತ್ತ ಕಸದ ರಾಶಿಗಳು ಉದ್ಭವಿಸುತ್ತಿವೆ. ಉದ್ಯಾನಗಳ ಒಳಗಿನ ಕಸದ ಬುಟ್ಟಿಗಳು ಮುರಿದು ಬಿದ್ದಿವೆ. ಕೆಲವೆಡೆ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದು, ದುರ್ವಾಸನೆ ಹರಡುತ್ತಿದೆ. ಇದರಿಂದ ಜನರು ವಾಯುವಿಹಾರಕ್ಕಾಗಿ ಉದ್ಯಾನಕ್ಕೆ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಮರಗಿಡಗಳಿಂದ ಉದುರುವ ತರಗೆಲೆಗಳ ರಾಶಿ ಮತ್ತು ಮುರಿದು ಬೀಳುವ ಒಣಕೊಂಬೆಗಳನ್ನು ಸರಿಯಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಅನೇಕ ಕಡೆಗಳಲ್ಲಿ ಇಲ್ಲ. ಇದರಿಂದಾಗಿ ಉದ್ಯಾನದ ಮೂಲೆಗಳು ಇಂತಹ ಕಸ ಶೇಖರಣೆ ಮಾಡುವ ಸ್ಥಳಗಳಾಗಿ ಬಿಟ್ಟಿವೆ.

ಜಯನಗರ, ಅರಕೆರೆ, ಸಂಪಂಗಿರಾಮನಗರ, ಜೆ.ಪಿ.ನಗರ, ರಾಧಾಕೃಷ್ಣ ದೇವಸ್ಥಾನ, ಪೀಣ್ಯ ಕೈಗಾರಿಕಾ ಪ್ರದೇಶ, ವಿಜಯನಗರ, ಹೊಸಹಳ್ಳಿ, ಕಸ್ತೂರಿನಗರ, ಬಾಣಸವಾಡಿ, ಆರ್.ಟಿ.ನಗರ ಸೇರಿದಂತೆ ಹಲವು ಪ್ರದೇಶಗಳ ಉದ್ಯಾನಗಳ ಸುತ್ತಲಿನ ಕಸದ ರಾಶಿ ಎರಡು ವಾರ ಕಳೆದರೂ ವಿಲೇವಾರಿ ಆಗುತ್ತಿಲ್ಲ.

ಹೊಗೆ ಕೊಡುಗೆ: ಉದ್ಯಾನದ ಸ್ವಚ್ಛತಾ ಸಿಬ್ಬಂದಿ ತರಗೆಲೆಗಳನ್ನು ತಡೆಗೋಡೆ ಬಳಿ ಹಾಕಿ ಬೆಂಕಿ ಹಾಕುತ್ತಾರೆ. ವಾಯುಮಾಲಿನ್ಯವನ್ನು ಕಡಿಮೆ ಮಾಡಬೇಕಾದ ಉದ್ಯಾನಗಳು ಮೊದಲೇ ಕಲುಷಿತಗೊಂಡ ವಾತಾವರಣಕ್ಕೆ ಮತ್ತಷ್ಟು ಹೊಗೆಯನ್ನು ಸೇರಿಸುತ್ತಿವೆ.

ಸುತ್ತಲೂ ಕತ್ತಲು: ಅನೇಕ ಉದ್ಯಾನಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲ. ಇದರಿಂದಾಗಿ ಮುಸ್ಸಂಜೆ ಹೊತ್ತಿನಲ್ಲಿ ಹಾಗೂ ನಸುಕಿನಲ್ಲಿ ವಾಯುವಿಹಾರಕ್ಕೆ ಬರುವವರು ಸಮಸ್ಯೆ ಎದುರಿಸುವಂತಾಗಿದೆ. ಕೆಲವೆಡೆ ಕೈಯಲ್ಲಿ ಟಾರ್ಚ್ ಹಿಡಿದು ವಿಹಾರಕ್ಕೆ ಬರಬೇಕಾದ ವಾತಾವರಣವಿದೆ. ಕತ್ತಲೆಯಲ್ಲಿ ವಿಷಜಂತುಗಳ ಭಯದಿಂದಲೇ ಹೆಜ್ಜೆ ಹಾಕಬೇಕಾಗಿದೆ ಎಂದು ಜೆ.ಪಿ.ನಗರ, ಲಕ್ಕಸಂದ್ರ, ಹೊಂಬೇಗೌಡನಗರ, ಸಂಪಂಗಿರಾಮನಗರ ಉದ್ಯಾನಗಳಲ್ಲಿ ವಾಯು ವಿಹಾರಕ್ಕೆ ಬಂದವರು ಅಳಲು ತೋಡಿಕೊಂಡರು.

ಇನ್ನು ಕೆಲವೆಡೆ ವಿದ್ಯುತ್ ಉಪಕರಣಗಳು ಕೆಟ್ಟು ನಿಂತಿವೆ. ಅವುಗಳ ವೈಯರ್ಗಳು ಹೊರಚಾಚಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕಮ್ಮನಹಳ್ಳಿಯ ರಾಜ್ಕುಮಾರ್ ಉದ್ಯಾನದಲ್ಲಿ ಫೆ. 24ರಂದು ವಿದ್ಯುತ್ ಸ್ಪರ್ಶಿಸಿ ಬಾಲಕ ಉದಯ್ ಕುಮಾರ್ ಎಂಬಾತ ಮೃತಪಟ್ಟ ಪ್ರಕರಣದ ಬಳಿಕ ಎಚ್ಚೆತ್ತ ಪಾಲಿಕೆ ಉದ್ಯಾನಗಳಲ್ಲಿ ಅಪಾಯ ತರುವ ಸ್ಥಿತಿಯಲ್ಲಿ ವಿದ್ಯುತ್ ಉಪಕರಣ ಹಾಗೂ ತಂತಿಗಳಿದ್ದರೆ ಪರಿಶೀಲಿಸಿ ಕ್ರಮ ಕೈಗೊಂಡಿತ್ತು. ಇದರ ಹೊರತಾಗಿಯೂ ಅನೇಕ ಕಡೆ ಈಗಲೂ ಅಪಾಯದ ಸ್ಥಿತಿ ಮುಂದುವರಿದಿದೆ.

ಮುರಿದ ಕಲ್ಲುಬೆಂಚುಗಳಿಲ್ಲದ ಉದ್ಯಾನವೇ ಇಲ್ಲ. ನಡಿಗೆ, ವ್ಯಾಯಾಮದಿಂದ ಸುಸ್ತಾದ ಸಾರ್ವಜನಿಕರು ಹಲವು ಕಡೆ ನಡಿಗೆ ಪಥದಲ್ಲೇ ವಿಶ್ರಾಂತಿ ಪಡೆಯುತ್ತಾರೆ.ಜಯನಗರದ ಶಾಸಕರ ಕಚೇರಿ ಹಿಂಭಾಗದಲ್ಲಿರುವ ಉದ್ಯಾನದಲ್ಲಿನ ಆಸನಗಳಲ್ಲಿ ಸ್ವಚ್ಛತೆ ಮಾಯವಾಗಿದೆ. ವಾಯುವಿಹಾರಿಗಳು ಪಕ್ಕದ ಆಟದ ಮೈದಾನದ ಮೆಟ್ಟಿಲುಗಳ ಮೇಲೆ ಕುಳಿತುಕೊಂಡು ದಣಿವು ನಿವಾರಿಸಿಕೊಳ್ಳುತ್ತಾರೆ.

ಸುರಕ್ಷತೆಗಿಲ್ಲ ಆದ್ಯತೆ: ಬಹುತೇಕ ಉದ್ಯಾನಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಸ್ವಚ್ಛತಾ ಸಿಬ್ಬಂದಿಗೇ ಕಾವಲುಗಾರರ ಕೆಲಸವನ್ನೂ ವಹಿಸಲಾಗಿದೆ. ಸರಿಯಾಗಿ ಸಂಬಳ ನೀಡದ ಕಾರಣ ಇರುವ ಸಿಬ್ಬಂದಿ ಸಹ ನಿಯಮಿತವಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲ. ಇದರಿಂದ ಮಹಿಳೆಯರು ಹಾಗೂ ಮಕ್ಕಳಿಗೆ ಅಸುರಕ್ಷತೆಯ ಭಾವ ಕಾಡುತ್ತಿದೆ. ಮಾಡಲು ಕೆಲಸವಿಲ್ಲದೇ ಉದ್ಯಾನಗಳಲ್ಲೇ ಠಿಕಾಣಿ ಹೂಡುವ ಪುಂಡ ಪೋಕರಿಗಳು ವಿಹಾರಕ್ಕೆ ಮಹಿಳೆಯರನ್ನು ಚುಡಾಯಿಸುವುದು, ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿರುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಲೇ ಇವೆ.

ಉದ್ಯಾನಕ್ಕೆ ಟ್ಯಾಂಕರ್ ನೀರು: ಕೊಳಚೆನೀರನ್ನು ಸಂಸ್ಕರಿಸಿ ಉದ್ಯಾನಗಳಿಗೆ ಹರಿಸುವ ಪ್ರಸ್ತಾವ ಪಾಲಿಕೆ ಮುಂದಿದೆ. ಆದರೆ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಆಸಕ್ತಿಯನ್ನೇ ತೋರುತ್ತಿಲ್ಲ. ಜಲಮಂಡಳಿ ನಿತ್ಯ ಲಕ್ಷಾಂತರ ಲೀಟರ್ ಕೊಳಚೆನೀರನ್ನು ಎರಡು ಹಂತಗಳಲ್ಲಿ ಸಂಸ್ಕರಣೆಗೆ ಒಳಪಡಿಸುತ್ತದೆ. ಉದ್ಯಾನಗಳಲ್ಲಿ ನೀರಿನ ಕೊರತೆ ತಲೆದೋರಿದಾಗ ಈ ಶುದ್ಧೀಕರಿಸಿದ ನೀರನ್ನು ಬಳಸಬಹುದು. ಆದರೆ, ಪಾಲಿಕೆಯ ತೋಟಗಾರಿಕಾ ವಿಭಾಗ ಖಾಸಗಿ ಟ್ಯಾಂಕರ್ ನೀರಿಗೆ ಮೊರೆ ಹೋಗುತ್ತದೆ. ಆಗ ಪ್ರತಿ ಉದ್ಯಾನಕ್ಕೆ ದಿನಕ್ಕೆ ಎರಡು ಟ್ಯಾಂಕರ್ ನೀರನ್ನು ಹಾಕುತ್ತದೆ. ಪ್ರತಿ ಟ್ಯಾಂಕರ್ ನೀರಿಗೆ ₹ 800 ಖರ್ಚು ಮಾಡುತ್ತದೆ. ಈ ಹಣದ ವ್ಯವಹಾರದಿಂದ ಕೆಲವು ಅಧಿಕಾರಿಗಳು ಲಾಭ ಮಾಡಿಕೊಳ್ಳುತ್ತಿರುವ ಆರೋಪವೂ ಇದೆ.

ಕೊಳವೆಬಾವಿ ಮತ್ತು ಟ್ಯಾಂಕರ್ಗಳಲ್ಲಿ ತಂದ ನೀರನ್ನು ಶೇಖರಣೆ ಮಾಡಲು ತೊಟ್ಟಿಗಳನ್ನು ನಿರ್ಮಿಸುವ ಯೋಜನೆಯನ್ನು ಪಾಲಿಕೆ ರೂಪಿಸುತ್ತಿದೆ. ‘ಇದರಲ್ಲಿ ಗರಿಷ್ಠ 20 ಸಾವಿರ ಲೀಟರ್ ವರೆಗೂ ನೀರು ಸಂಗ್ರಹಿಸಬಹುದು. ಇದರಿಂದ ಉದ್ಯಾನಗಳಿಗೆ ಬೇಕಾದಾಗ ನೀರು ಹಾಕಲು ಅನುಕೂಲ ಆಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಮಳೆ ನೀರನ್ನು ಸಂಗ್ರಹಿಸಿ ಬಳಸಲು ಇಂತಹದ್ದೇ ತೊಟ್ಟಿ ರೂಪಿಸಿದರೆ ಬೇಸಿಗೆಯಲ್ಲಿ ಎದುರಾಗುವ ನೀರಿನ ಕೊರತೆಯನ್ನು ಸುಲಭವಾಗಿ ನೀಗಿಸಬಹುದು. ಆದರೆ, ಇಂತಹ ಸುಸ್ಥಿರ ಕ್ರಮಗಳ ಬಗ್ಗೆ ಆಸಕ್ತಿ ಅಷ್ಟಕ್ಕಷ್ಟೇ.

ಉದ್ಯಾನದ ವಿಸ್ತಾರಕ್ಕೆ ಅನುಗುಣವಾಗಿ ನಿರ್ವಹಣೆಗಾರರು (ಗಾರ್ಡನರ್) ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬ ನಿಯಮವನ್ನು ಪಾಲಿಕೆಯೇ ರೂಪಿಸಿಕೊಂಡಿದೆ. ಇದು ಕಡತದಲ್ಲಿದೆಯೇ ಹೊರತು ಪಾಲಿಸುತ್ತಿಲ್ಲ. ನಿರ್ವಹಣೆಗಾರರಿಗೆ ಉದ್ಯಾನದ ಮೂಲೆಯೊಂದರಲ್ಲಿ ಶೆಡ್ ಹಾಕಿಕೊಂಡು ವಾಸಿಸಲು ಅನುಮತಿ ನೀಡಿದೆ. ಅವರು ಕೈಲಾದಷ್ಟು ಸಸಿಗಳನ್ನು ಪೋಷಣೆ ಮಾಡುತ್ತ, ಬಿದ್ದ ಕಸ–ಕಡ್ಡಿಯನ್ನು ತೆಗೆದು ಸ್ವಚ್ಛ ಮಾಡುತ್ತ, ಉದ್ಯಾನಕ್ಕೆ ಕಾವಲು ಕಾಯುತ್ತ ದಿನದೂಡುತ್ತಿದ್ದಾರೆ. ಅವರಿಗೆ ತಿಂಗಳಿಗೆ ₹ 11 ಸಾವಿರ ನೀಡಲಾಗುತ್ತಿದೆ. ‘ಇಷ್ಟು ಕಡಿಮೆ ಸಂಬಳದಲ್ಲಿ ನಗರದಲ್ಲಿ ಹೇಗೆ ಜೀವನ ನಡೆಸುವುದು’ ಎಂಬುದು ನಿರ್ವಹಣೆಗಾರರ ಪ್ರಶ್ನೆ.

ಪ್ರತಿ ಉದ್ಯಾನದ ಅಭಿವೃದ್ಧಿ ಕಾರ್ಯಗಳು ಪಾಲಿಕೆಯ ತೋಟಗಾರಿಕೆ ಮತ್ತು ಯೋಜನಾ ವಿಭಾಗಗಳಲ್ಲಿ ಹಂಚಿಕೆಯಾಗಿವೆ. ಸಸಿಗಳನ್ನು ನೆಟ್ಟು ಪೋಷಿಸುವ, ಮರಗಳನ್ನು ನಿರ್ವಹಣೆ ಮಾಡುವ ಹೊಣೆ ತೋಟಗಾರಿಕೆ ವಿಭಾಗದ್ದು. ಉದ್ಯಾನದಲ್ಲಿನ ಪಾದಚಾರಿ ಮಾರ್ಗ ನಿರ್ಮಾಣ, ಮಕ್ಕಳ ಆಟದ ಸಾಮಗ್ರಿ, ವ್ಯಾಯಾಮದ ಸಲಕರಣೆಗಳ ಜೋಡಣೆ, ಇಂಗುಗುಂಡಿಗಳ ನಿರ್ಮಾಣ, ಎಲೆಕ್ಟ್ರಿಕ್ ಕಾಮಗಾರಿಗಳ ಉಸ್ತುವಾರಿಯನ್ನು ಯೋಜನಾ ವಿಭಾಗವು ನೋಡಿಕೊಳ್ಳುತ್ತದೆ.

ಭೇಟಿ ಸಮಯ ವಿಸ್ತರಿಸಿ:ಉದ್ಯಾನಗಳಿಗೆ ಭೇಟಿ ನೀಡುವ ಸಮಯವನ್ನು ಬೆಳಿಗ್ಗೆ 5.30ರಿಂದ 9.30ರ ವರೆಗೆ ಮತ್ತು ಸಂಜೆ 4 ರಿಂದ 8 ಗಂಟೆಯ ವರೆಗೆ ನಿಗದಿಪಡಿಸಲಾಗಿದೆ. ‘ಉದ್ಯಾನಗಳಿಗೆಬೆಳಿಗ್ಗೆಯಿಂದ ರಾತ್ರಿಯವರೆಗೂ ಮುಕ್ತ ಪ್ರವೇಶದ ಅವಕಾಶ ಕಲ್ಪಿಸಬೇಕು’ ಎಂಬುದು ಜನರ ಬಹುದಿನಗಳ ಬೇಡಿಕೆ. ಆದರೆ, ‘ಸಸಿಗಳು, ಹುಲ್ಲುಹಾಸಿಗೆ ನೀರುಣಿಸುವುದು, ಸ್ವಚ್ಛತಾ ಕಾರ್ಯ, ಅಲಂಕಾರಿಕ ಸಸಿಗಳನ್ನು ಆಕರ್ಷಕವಾಗಿ ಕತ್ತರಿಸುವ (ಟ್ರಿಮ್) ಕೆಲಸದ ಸಲುವಾಗಿ ಬೆಳಿಗ್ಗೆ ಮತ್ತು ಮಧ್ಯಾಹ್ನದ ಸಮಯ ಉದ್ಯಾನಗಳಿಗೆ ಪ್ರವೇಶ ನಿರ್ಬಂಧಿಸಲೇಬೇಕಾಗುತ್ತದೆ’ ಎಂಬುದು ಪಾಲಿಕೆಯ ಅಧಿಕಾರಿಗಳ ಉತ್ತರ.

‘ಜೇಬು ತುಂಬುವ ಖಜಾನೆ’
ಜನರಿಗೆ ಮನೋಲ್ಲಾಸ ತುಂಬುವ ತಾಣವಾಗಬೇಕಾದ ಉದ್ಯಾನಗಳು ಪಾಲಿಕೆ ಸದಸ್ಯರ, ಶಾಸಕರ ಹಾಗೂ ಅಧಿಕಾರಿಗಳ ‘ಜೇಬು ತುಂಬುವ’ ಖಜಾನೆಗಳಂತಾಗಿವೆ. ಇಲ್ಲಿ ಸಸಿ ನೆಡುವ, ನಿರ್ಮಿಸುವ ನಡಿಗೆ ಪಥ, ಅಳವಡಿಸುವ ಕಲ್ಲು ಬೆಂಚು, ಬಯಲು ವ್ಯಾಯಾಮ ಶಾಲೆ, ಯೋಗ ಕೇಂದ್ರ, ಮುರಿದ ಪರಿಕರಗಳನ್ನು ಬದಲಾಯಿಸುವ ಕಾರ್ಯಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ. ಕಾಣದ ಕೈಗಳ ನಡುವೆ ಕಾಂಚಾಣ ಹರಿದಾಡಲು ಅವಕಾಶ ಮಾಡಿಕೊಡುವ ಇಂತಹ ಕಾರ್ಯಗಳ ಮೇಲೆ ನಿಗಾ ಇಡುವ ಸೂಕ್ತ ವ್ಯವಸ್ಥೆ ಪಾಲಿಕೆಯಲ್ಲಿಲ್ಲ.

ಸುಸ್ಥಿತಿಯಲ್ಲಿದ್ದ ನಡಿಗೆ ಪಥಗಳನ್ನು ಕಿತ್ತುಹಾಕಿ ಹೊಸದನ್ನು ನಿರ್ಮಿಸಿರುವ ಹಾಗೂ ಚೆನ್ನಾಗಿರುವ ಬಯಲು ವ್ಯಾಯಾಮದ ಪರಿಕರಗಳನ್ನು ವಿನಾಕಾರಣ ಬದಲಾಯಿಸಿದ ಉದಾಹರಣೆಗಳು ಬಹಳಷ್ಟಿವೆ.

ಆರ್.ಟಿ.ನಗರದ ಸಾರ್ವಜನಿಕ ಉದ್ಯಾನದಲ್ಲಿ ಲೋಕಸಭಾ ಚುನಾವಣಾ ನೀತಿಸಂಹಿತೆ ಜಾರಿಯಾಗುವ ಮುನ್ನ ಸುಸ್ಥಿತಿಯಲ್ಲಿದ್ದ ವ್ಯಾಯಾಮ ಪರಿಕರಗಳನ್ನು ಏಕಾಏಕಿ ಬದಲಾಯಿಸಿದ್ದು ಸ್ಥಳೀಯರ ಹುಬ್ಬೇರುವಂತೆ ಮಾಡಿತ್ತು. ಇದು ಇತ್ತೀಚಿನ ಉದಾಹರಣೆ. ಇಂತಹ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ.

ಅನೇಕ ಉದ್ಯಾನದಲ್ಲಿನ ಹುಲ್ಲುಹಾಸು, ಗಿಡಮರಗಳ ಪೋಷಣೆಗೆ ಕೊಳವೆಬಾವಿಯ ನೀರನ್ನೇ ಅವಲಂಬಿಸಲಾಗಿದೆ. ಕೊಳವೆಬಾವಿಗಳು ಕೆಟ್ಟು ನಿಂತಾಗ, ಅಥವಾ ಬೇಸಿಗೆಯಲ್ಲಿ ಅವುಗಳಲ್ಲಿ ನೀರು ಬತ್ತಿದಾಗ ಸಸಿಗಳು ಬಾಡುತ್ತವೆ. ಈ ಬಾರಿ ಏಪ್ರಿಲ್ನಲ್ಲಿ ಕೆಲವೆಡೆ ಕೊಳವೆಬಾವಿಗಳು ಬತ್ತಿದ್ದವು. ಅದೃಷ್ಟವಶಾತ್ ಪದೇ ಪದೇ ಮಳೆ ಸುರಿದ ಪರಿಣಾಮ ಉದ್ಯಾನಗಳ ನಿರ್ವಹಣೆಗೆ ಅಷ್ಟೇನೂ ಕಷ್ಟವಾಗಲಿಲ್ಲ.

ಪ್ರತಿ ಚದರ ಅಡಿಗೆ ₹ 150
ಉದ್ಯಾನಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಅವುಗಳನ್ನು ನಿರ್ವಹಿಸುವ ಗುತ್ತಿಗೆಯನ್ನು ಪಾಲಿಕೆ ಪ್ರತಿವರ್ಷ ನೀಡುತ್ತದೆ.

ಅದರಲ್ಲಿ 400 ಚದರ ಅಡಿ ವಿಸ್ತೀರ್ಣದ ವರೆಗಿನ ಉದ್ಯಾನದಲ್ಲಿನ ಪ್ರತಿ ಚದರ ಅಡಿ ನಿರ್ವಹಣೆಗೆ ₹ 150 ನಿಗದಿ ಪಡಿಸಲಾಗಿದೆ. ವಿಸ್ತೀರ್ಣ ಹೆಚ್ಚಿದಂತೆ ನಿರ್ವಹಣಾ ವೆಚ್ಚ ಕಡಿಮೆ ಆಗುತ್ತದೆ. ಪ್ರತಿ ಚದರ ಅಡಿ ನಿರ್ವಹಣೆಯ ಕನಿಷ್ಠ ದರ ₹ 70 ಇದೆ.

ಈ ಲೆಕ್ಕದಲ್ಲಿ ಪ್ರತಿವರ್ಷ ಲಕ್ಷಾಂತರ ರೂಪಾಯಿ ಗುತ್ತಿಗೆದಾರರ ಜೇಬು ಸೇರುತ್ತಿದ್ದರೂ, ಉದ್ಯಾನಗಳ ಚಿತ್ರಣವಂತೂ ಆಮೂಲಾಗ್ರವಾಗಿ ಬದಲಾಗುತ್ತಿಲ್ಲ.

‘ಉದ್ಯಾನ ನಿರ್ವಹಣೆ ಬಿಲ್ಗಳನ್ನು ಎಂಟತ್ತು ತಿಂಗಳು, ವರ್ಷದ ಬಳಿಕ ಬಿಡುಗಡೆ ಮಾಡುತ್ತಾರೆ. ಇದರಿಂದ ಉದ್ಯಾನ ನಿರ್ವಹಣೆಗಾರರಿಗೆ ಪ್ರತಿ ತಿಂಗಳು ಸಂಬಳ ನೀಡಲು ಬಹಳ ತೊಂದರೆ ಆಗುತ್ತದೆ. ಕೇಳಿದರೆ ಅನುದಾನದ ಕೊರತೆ ಇದೆ ಎಂಬ
ಉತ್ತರ ನೀಡುತ್ತಾರೆ’ ಎಂದು ಗುತ್ತಿಗೆದಾರರೊಬ್ಬರು ತಿಳಿಸಿದರು.

ಕಹಿ ಘಟನೆಗಳು
*2018ರ ನವೆಂಬರ್ನಲ್ಲಿ ಯಲಹಂಕದ ಮಹಿಳೆಯೊಬ್ಬರು ತಮ್ಮ ಮನೆ ಎದುರಿನ ಉದ್ಯಾನದಲ್ಲಿ ವಾಯುವಿಹಾರ ಮಾಡುತ್ತಿದ್ದಾಗಪಾನಮತ್ತನಾಗಿ ಬಂದಿದ್ದ ವ್ಯಕ್ತಿಯೊಬ್ಬ ಅವರನ್ನು ತಬ್ಬಿಕೊಂಡಿದ್ದ. ಆಕೆ ಚೀರಿಕೊಳ್ಳುತ್ತಿದ್ದಂತೆಯೇ ರಕ್ಷಣೆಗೆ ಧಾವಿಸಿದ ಸ್ಥಳೀಯರು, ಆತನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.

* 2017ರ ಅಕ್ಟೋಬರ್ನಲ್ಲಿ ಬಾಲಕಿಯೊಬ್ಬಳಿಗೆ ತಿಂಡಿ ಆಸೆ ತೋರಿಸಿ ಕಿಡಿಗೇಡಿಗಳು ಮಲ್ಲೇಶಪಾಳ್ಯ ಉದ್ಯಾನಕ್ಕೆ ಕರೆದುಕೊಂಡು ಹೋಗಿದ್ದರು. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.

* 2017ರ ಅಕ್ಟೋಬರ್ನಲ್ಲಿಯೇ ಫ್ರೇಜರ್ಟೌನ್ ಸಮೀಪದ ಕೋಲ್ಸ್ ಪಾರ್ಕ್ನಲ್ಲಿ ,‘ವಾಯುವಿಹಾರ ಮಾಡುವಾಗ ಕೆಲವು ಯುವಕರು ಹಿಂಬಾಲಿಸಿಕೊಂಡು ಬಂದು ಅಶ್ಲೀಲ ರೀತಿಯಲ್ಲಿ ಮಾತನಾಡುತ್ತಾರೆ’ ಎಂದು ಯುವತಿಯರು ಪೊಲೀಸರಿಗೆ ದೂರು ನೀಡಿದ್ದರು. ಮಹಿಳಾ ಪೊಲೀಸ್ ಸಿಬ್ಬಂದಿ ಆ ಪುಂಡರನ್ನು ಹಿಡಿಯಲು ಚೂಡಿದಾರ ತೊಟ್ಟು ವಾಯುವಿಹಾರಿಗಳ ಸೋಗಿನಲ್ಲಿ ಉದ್ಯಾನದಲ್ಲಿ ಸುತ್ತಿದರು. ಆಗ ಪುಂಡರು ಪೊಲೀಸರ ಅತಿಥಿಯಾಗಿದ್ದರು.

ಹಸಿರು ನುಂಗುತ್ತಿವೆ
ಉದ್ಯಾನಗಳಲ್ಲಿನ ಮರಗಿಡಗಳನ್ನು ಕಡೆದು ವಾರ್ಡ್ ಕಚೇರಿ, ಬೆಂಗಳೂರು ಒನ್ ಕೇಂದ್ರ, ಒಣತ್ಯಾಜ್ಯ ವಿಂಗಡಣಾ ಕೇಂದ್ರ, ಯೋಗ ಕೇಂದ್ರ ನಿರ್ಮಿಸುವ ಪರಿಪಾಠ ಬೆಳೆದಿದೆ. ಈಗಾಗಲೇ ಅನೇಕ ವಾರ್ಡ್ಗಳಲ್ಲಿ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ತಮ್ಮ ಕಚೇರಿಗೆ ಉದ್ಯಾನಗಳ ಜಾಗದಲ್ಲಿಯೇ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ.

ಇಲ್ಲಿವೆ ಮಾದರಿಗಳು
ಸಮಸ್ಯೆಗಳನ್ನು ಮೈಹೊದ್ದುಕೊಂಡಿರುವ ಉದ್ಯಾನಗಳ ನಡುವೆಯೂ ಹಲವು ಮಾದರಿ ಉದ್ಯಾನಗಳು ಹಸಿರುಡುಗೆ ತೊಟ್ಟುನಾಗರಿಕರನ್ನು ಕೈಬೀಸಿ ಕರೆಯುತ್ತಿವೆ.

ಜಯನಗರದ ಸೌತ್ ಎಂಡ್ ವೃತ್ತದ ಬಳಿಯ ಔಷಧ ಗಿಡಗಳ ಧನ್ವಂತರಿ ಹಾಗೂ ಸಂಜೀವಿನಿ ವನಗಳು ಸಮೃದ್ಧ ಆಮ್ಲಜನಕವನ್ನು ಮೊಗೆದುಕೊಡುತ್ತಿವೆ.

ಈ ಎರಡು ಉದ್ಯಾನಗಳುಒಂದೂವರೆ ಎಕರೆ ವಿಸ್ತಿರ್ಣದಲ್ಲಿ ಮೈಚಾಚಿಕೊಂಡಿವೆ. ಯೋಗಕೇಂದ್ರವೂ ಇಲ್ಲಿದೆ. 40 ಮಂದಿ ಏಕಕಾಲದಲ್ಲಿ ಕುಳಿತುಕೊಂಡು ಧ್ಯಾನ ಮಾಡಬಹುದು. ದೇಶದ ವಿವಿಧ ಭಾಗಗಳಿಂದ ತಂದು ನೆಟ್ಟ 290 ಪ್ರಭೇದಗಳ ಔಷಧಿ ಸಸ್ಯಗಳು ಇಲ್ಲಿವೆ.

ಸದಾನಂದ ನಗರದ ಉದ್ಯಾನ, ಕಸ್ತೂರಿನಗರದ ಶಿವರಾಮ ಕಾರಂತ ಉದ್ಯಾನ, ಬಾಣಸವಾಡಿ, ಆರ್.ಟಿ.ನಗರದಲ್ಲಿನ ಸಾರ್ವಜನಿಕ ಉದ್ಯಾನಗಳು, ಮತ್ತಿಕೆರೆಯ ಜೆ.ಪಿ.ಉದ್ಯಾನ, ಸ್ಯಾಂಕಿ ಕೆರೆ ಬದಿಯ ಉದ್ಯಾನ, ಜಯನಗರದ ರಣಧೀರ ಕಂಠೀರವ ಉದ್ಯಾನ, ನಾಗರಬಾವಿಯ ಜೆನ್ ಉದ್ಯಾನ, ಪೀಣ್ಯದ ಲಕ್ಷ್ಮೀದೇವಿ ಉದ್ಯಾನ, ಆರ್.ಆರ್.ನಗರದ ಹನುಮಗಿರಿ ಉದ್ಯಾನಗಳನ್ನು ಪಾಲಿಕೆ ಉತ್ತಮವಾಗಿ ನಿರ್ವಹಿಸಿದೆ.

ಬೆಳಿಗ್ಗೆ ಹಾಗೂ ಸಂಜೆ ಈ ಉದ್ಯಾನಗಳಿಗೆ ನೂರಾರು ಜನರು ವಾಯುವಿಹಾರಕ್ಕೆ ಬರುತ್ತಾರೆ. ಹಿರಿಯ ನಾಗರಿಕರು ಒಂದಷ್ಟು ನೆಮ್ಮದಿಯಾಗಿ ಕಾಲ ಕಳೆದು ಹೋಗುತ್ತಾರೆ.

‘ಪಾರ್ಕ್ಗಳ ನಿರ್ವಹಣೆಗೆ ಅನುದಾನದ ಕೊರತೆ’
ಉದ್ಯಾನಗಳ ನಿರ್ವಹಣೆಗೆ ಅನುದಾನದ ಕೊರತೆ ಎದುರಾಗಿದೆ. ಆದರೂ ದೊಡ್ಡ ಉದ್ಯಾನಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸುತ್ತಿದ್ದೇವೆ. ಉದ್ಯಾನಗಳ ಸಮಸ್ಯೆಗಳ ಬಗ್ಗೆ ಶೀಘ್ರ ಪರಿಶೀಲನೆ ನಡೆಸುತ್ತೇವೆ.
-ಬಿ.ಎನ್.ಐಶ್ವರ್ಯಾ,ಅಧ್ಯಕ್ಷೆ, ತೋಟಗಾರಿಕಾ ಸ್ಥಾಯಿ ಸಮಿತಿ, ಬಿಬಿಎಂಪಿ

‘ಕಾರಂಜಿಗಳಿಂದ ನೀರು ವ್ಯರ್ಥ’
ಉದ್ಯಾನಗಳಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸಿದರೆ ಹೆಚ್ಚು ನೀರು ಬೇಕಾಗುತ್ತದೆ. ಹಾಗಾಗಿ ಬೃಹತ್ ಮರವಾಗುವ ಸಸಿಗಳನ್ನು ಬೆಳೆಸಬೇಕು. ಬಿಬಿಎಂಪಿಯಿಂದಲೇ ಪ್ರತಿ ಮನೆಗೂ ಸಸಿಗಳನ್ನು ವಿತರಿಸಿ ಅವುಗಳನ್ನು ಸಂರಕ್ಷಿಸುವಂತೆ ತಿಳಿಸಬೇಕು. ಉದ್ಯಾನಗಳಲ್ಲಿ ಕಾರಂಜಿಗಳನ್ನು ನಿರ್ಮಿಸುವುದನ್ನು ಕಡಿಮೆ ಮಾಡಬೇಕು. ಅದರಿಂದ ನೀರು ವ್ಯರ್ಥವಾಗಲಿದೆ. ಮಳೆನೀರು ಇಂಗುಗುಂಡಿಗಳನ್ನು ನಿರ್ಮಿಸ ಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಇದರಿಂದ ಉದ್ಯಾನದ ತೇವಾಂಶವೂ ಸಂರಕ್ಷಣೆಯಾಗುತ್ತದೆ.
-ಎಸ್.ಜಿ.ನೇಗಿನ್ಹಾಳ್,ನಿವೃತ್ತ ಅರಣ್ಯ ಅಧಿಕಾರಿ

ಉದ್ಯಾನ ಅಭಿವೃದ್ಧಿ ಜನ ಹೇಳುವುದೇನು?
‘ಚಿಣ್ಣರ ಆಟದ ಪರಿಕರ– ಹಿರಿಯರಿಂದ ದುರ್ಬಳಕೆ’

ಉದ್ಯಾನಕ್ಕೆ ಸ್ನೇಹಿತರೊಂದಿಗೆ ನಿತ್ಯ ಆಟ ಆಡಲು ಬರುತ್ತೇನೆ. ಮಕ್ಕಳಿಗಾಗಿ ಅಳವಡಿಸಲಾದ ಆಟಿಕೆಗಳ ಮೇಲೆ ದೊಡ್ಡವರೂ ಕೂರುತ್ತಾರೆ. ಭದ್ರತಾ ಸಿಬ್ಬಂದಿ ಇದ್ದರೂ ಅದನ್ನು ತಡೆಯುವುದಿಲ್ಲ. ಆದ್ದರಿಂದ ಆಟಿಕೆಗಳು ಮುರಿದು ಹೋಗಿವೆ. ಅವುಗಳನ್ನು ರಿಪೇರಿ ಮಾಡಿಸುತ್ತಿಲ್ಲ. ಚಿಣ್ಣರಿಗಾಗಿಯೂ ಪ್ರತ್ಯೇಕ ಉದ್ಯಾನ ನಿರ್ಮಿಸಬೇಕು.
-ಮಂಜುನಾಥ್, ಅರಕೆರೆ

‘ಎಲ್ಲಿ ಹೋಗುತ್ತದೆ ಅಭಿವೃದ್ಧಿ ಅನುದಾನ’
ನಾವು ಇರುವ ಬಡಾವಣೆಯಿಂದ ಉದ್ಯಾನ ತುಂಬಾ ದೂರದಲ್ಲಿದೆ.ಹಿರಿಯ ನಾಗರಿಕರಿಗೆ ನಡೆದು ಹೋಗಲು ಆಗುವುದಿಲ್ಲ. ಆ ಉದ್ಯಾನವೂ ನಿರ್ವಹಣೆ ಕೊರತೆಯಿಂದ ನರಳುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಹಾಗಾದರೆ ಉದ್ಯಾನ ನಿರ್ವಹಣೆಗೆ ಮಂಜೂರಾಗುವ ಅನುದಾನ ಎಲ್ಲಿಗೆ ಹೋಗುತ್ತದೆ?
-ಎನ್.ನಂಜೇಗೌಡ, ವಕೀಲ, ಕೆಂಗೇರಿ

‘ಮೊಣಕಾಲುದ್ದ ಬೆಳೆದು ನಿಲ್ಲುವ ಹುಲ್ಲು’
ಉದ್ಯಾನಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸಿಬ್ಬಂದಿ ಉದ್ಯಾನದಲ್ಲಿನ ಗಿಡಗಳ ಮೇಲೆ ನಿಗಾ ವಹಿಸುವುದಿಲ್ಲ. ಒಂದೊಂದು ಬಾರಿ ಹುಲ್ಲು ಮೊಣಕಾಲುದ್ದ ಬೆಳೆದು ನಿಂತಿರುತ್ತದೆ. ಇರುವ ಆಸನಗಳು ದುಸ್ಥಿತಿಗೆ ತಲುಪಿವೆ. ಶೌಚಾಲಯ ವ್ಯವಸ್ಥೆ ಸರಿಯಾಗಿ ಇಲ್ಲ.
-ಬಾಲಕೃಷ್ಣ, ಸುಧಾಮನಗರ

‘ಕಡ್ಡಾಯವಾಗಿ ಶೌಚಾಲಯದ ವ್ಯವಸ್ಥೆ ಮಾಡಿ’
ಉದ್ಯಾನಗಳಲ್ಲಿ ಪ್ರತಿವರ್ಷ ಸಸಿಗಳನ್ನು ನೆಡುತ್ತಾರೆ. ಅವುಗಳಲ್ಲಿ ಬಹಳಷ್ಟು ಬೆಳೆಯುವುದೇ ಇಲ್ಲ. ಸೂರ್ಯನ ಶಾಖ ಬೀಳದ ನೆರಳಿನಲ್ಲೂ ಅವೈಜ್ಞಾನಿಕ ಸಸಿಗಳನ್ನು ನೆಟ್ಟು ಹಣ ಪೋಲು ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ವಿಹಾರಕ್ಕೆ ಬರುವ ಮಧುಮೇಹ ಹೊಂದಿರುವ ಜನರಿಗೆ ಶೌಚಾಲಯ ಬೇಕಾಗುತ್ತದೆ. ಎಲ್ಲ ಉದ್ಯಾನಗಳಲ್ಲೂ ಕಡ್ಡಾಯವಾಗಿ ಶೌಚಾಲಯದ ವ್ಯವಸ್ಥೆ ಮಾಡಬೇಕು.
-ಲೊನಪ್ಪನ್, ಬಾಣಸವಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.