ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೆರಿಯಾ ತೋಟದ ಜಮೀನು ಸರ್ಕಾರದ್ದಲ್ಲ: ಹೈಕೋರ್ಟ್

Published : 6 ಜುಲೈ 2024, 16:28 IST
Last Updated : 6 ಜುಲೈ 2024, 16:28 IST
ಫಾಲೋ ಮಾಡಿ
Comments

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ನೆರಿಯಾ ಎಸ್ಟೇಟ್ ರೂರಲ್ ಇಂಡಸ್ಟ್ರೀಸ್ ಅಸೋಸಿಯೇಷನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಸೇರಿದ ತೋಟದ ಜಮೀನಿಗೆ ಸಂಬಂಧಿಸಿದ ದಶಕಗಳ ವಿವಾದಕ್ಕೆ ತೆರೆ ಎಳೆದಿರುವ ಹೈಕೋರ್ಟ್ ‘ಈ ಜಮೀನನ್ನು ತನ್ನ ಸ್ವಾಧೀನದಲ್ಲಿಟ್ಟುಕೊಳ್ಳಲು ಸಂಸ್ಥೆಗೆ ಕಾನೂನಿನ ಅಡ್ಡಿ ಎದುರಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಈ ಸಂಬಂಧ ನೆರಿಯಾ ಎಸ್ಟೇಟ್ ರೂರಲ್ ಇಂಡಸ್ಟ್ರೀಸ್ ಅಸೋಸಿಯೇಷನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನೆರಿಯಾ ಗೋಪಾಲಕೃಷ್ಣ ಹೆಬ್ಬಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.

‘ಈ ಜಮೀನಿನ ಮೇಲೆ ಸರ್ಕಾರ ಯಾವುದೇ ಮಾಲೀಕತ್ವ ಅಥವಾ ಸ್ವಾಧೀನದ ಹಕ್ಕು ಹೊಂದುವಂತಿಲ್ಲ’ ಎಂದು ವಿವರಿಸಿರುವ ನ್ಯಾಯಪೀಠ, ಈ ಸಂಬಂಧ 2007ರ ಆಗಸ್ಟ್‌ 21ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.

‘ಮುಂದಿನ ಮೂರು ತಿಂಗಳ ಒಳಗಾಗಿ ಮೇಲ್ಮನವಿದಾರರ ಹೆಸರನ್ನು ಕಂದಾಯ ದಾಖಲೆಗಳಲ್ಲಿ ಸೇರ್ಪಡೆ ಮಾಡಬೇಕು’ ಎಂದು ಆದೇಶಿಸಿದೆ. ಮೇಲ್ಮನವಿದಾರರ ಪರ ಹಿರಿಯ ವಕೀಲರಾದ ಬಿ.ವಿ. ಆಚಾರ್ಯ ಮತ್ತು ಬಿ.ಎಲ್. ಆಚಾರ್ಯ ವಾದ ಮಂಡಿಸಿದ್ದರು.

ಪ್ರಕರಣವೇನು?: ಭೂ ಸ್ವಾಧೀನ ಹಕ್ಕು ಪ್ರತಿಪಾದಿಸಿ ನೆರಿಯಾ ಸಂಸ್ಥೆ ಅರ್ಜಿ ನಮೂನೆ-7 ಅನ್ನು ಸಲ್ಲಿಸಿತ್ತು. "ಕಂಪನಿಗಳು, ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ-1974ರ ಕಲಂ (2) (34) ಪ್ರಕಾರ ಭೂ ಹಿಡುವಳಿದಾರ ಆಗುವಂತಿಲ್ಲ" ಎಂಬ ಕಾರಣ ನೀಡಿ ಭೂ ನ್ಯಾಯ ಮಂಡಳಿ ಈ ಅರ್ಜಿಯನ್ನು ತಿರಸ್ಕರಿಸಿತ್ತು.

ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, "ಜಮೀನು ಸರ್ಕಾರಕ್ಕೆ ಸೇರಿದೆ" ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

ವಿಭಾಗೀಯ ನ್ಯಾಯಪೀಠವು, ‘ಕಂಪನಿ ಭೂ ಹಿಡುವಳಿ ಹೊಂದುವಂತಿಲ್ಲ ಎಂದು ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ-1974ರ ಕಲಂ 79 (ಬಿ)ರಲ್ಲಿ ಹೇಳಲಾಗಿತ್ತು. ಆದರೆ, 2020ರಲ್ಲಿ ಪುನಃ ತಿದ್ದುಪಡಿ ತರಲಾಗಿದ್ದು ಕಲಂ 79 (ಬಿ) ಅನ್ನು ತೆಗೆದು ಹಾಕಲಾಗಿದೆ. ಆದ್ದರಿಂದ, ಜಮೀನಿನ ಸ್ವಾಧೀನ ಹೊಂದಲು ಸಂಸ್ಥೆಗೆ ಯಾವುದೇ ಕಾನೂನಿನ ಅಡ್ಡಿ ಇರುವುದಿಲ್ಲ’ ಎಂದು ಈಗ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT