ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

RG ಕರ್ ಪ್ರಕರಣ: ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಭದ್ರತಾ ಕ್ರಮ ಕೈಗೊಳ್ಳಲು ಸೂಚನೆ

Published : 24 ಸೆಪ್ಟೆಂಬರ್ 2024, 15:21 IST
Last Updated : 24 ಸೆಪ್ಟೆಂಬರ್ 2024, 15:21 IST
ಫಾಲೋ ಮಾಡಿ
Comments

ಬೆಂಗಳೂರು: ಕೋಲ್ಕತ್ತದ ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಹಿಂಸಾತ್ಮಕ ಘಟನೆಯ ನಂತರ ಎಚ್ಚೆತ್ತುಕೊಂಡಿರುವ ಆರೋಗ್ಯ ಸಚಿವಾಲಯವು, ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ರಕ್ಷಣೆಗೆ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಈ ಮಾರ್ಗಸೂಚಿಯನ್ನು ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಪಾಲನೆ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಶಿವಕುಮಾರ್‌ ಕೆ.ಬಿ. ಸುತ್ತೋಲೆ ಹೊರಡಿಸಿದ್ದಾರೆ.

ಎಲ್ಲ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ, ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳ ಆವರಣದಲ್ಲಿ ಇಂಗ್ಲಿಷ್‌ ಮತ್ತು ಸ್ಥಳೀಯ ಭಾಷೆಯಲ್ಲಿ ಕಾನೂನು ನಿಬಂಧನೆಗಳನ್ನು ಜನರಿಗೆ ಕಾಣುವಂತೆ ಪ್ರದರ್ಶಿಸಲು ಸೂಚಿಸಿದ್ದಾರೆ.

ನಿಬಂಧನೆ ಏನು?: ಆರೋಗ್ಯ ಸೇವೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಅಥವಾ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸಲಾಗಿದೆ. ಉದ್ದೇಶಪೂರ್ವಕ ಅವಮಾನ ಮಾಡುವಂತಿಲ್ಲ. ಯಾವುದೇ ಹಿಂಸಾತ್ಮಕ ಕೃತ್ಯ ಎಸಗಿದರೆ ಮೂರರಿಂದ ಏಳು ವರ್ಷ ಜೈಲು, ₹25 ಸಾವಿರದಿಂದ ₹2 ಲಕ್ಷವರೆಗೆ ದಂಡ ವಿಧಿಸಲಾಗುತ್ತದೆ. ಅವಮಾನ ಮಾಡಿದರೆ ಮೂರು ತಿಂಗಳು ಜೈಲು, ₹10 ಸಾವಿರ ದಂಡ ವಿಧಿಸಲಾಗುತ್ತದೆ. ಹಾನಿ ಮಾಡಿದರೆ ಅದರ ನಷ್ಟವನ್ನು ಆರೋಪಿಗಳಿಂದ ಭರಿಸಲಾಗುತ್ತದೆ.

ಸಮಿತಿ:

ಎಲ್ಲ ಆಸ್ಪತ್ರೆಗಳಲ್ಲಿ ಭದ್ರತಾ ಸಮಿತಿ ಮತ್ತು ಹಿಂಸೆ ತಡೆ ಸಮಿತಿ ರಚಿಸಬೇಕು. ಸಮಿತಿಯಲ್ಲಿ ವೈದ್ಯಕೀಯ ಅಧೀಕ್ಷಕರು, ಡೀನ್‌, ನಿರ್ದೇಶಕರು/ಜಿಲ್ಲಾ ಶಸ್ತ್ರ ಚಿಕಿತ್ಸಕರು, ಮುಖ್ಯ ವೈದ್ಯಕೀಯ ಅಧಿಕಾರಿ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇವರಲ್ಲಿ ಯಾರಾದರೂ ಒಬ್ಬರು ಸಮಿತಿಯಲ್ಲಿರಬೇಕು. ಸ್ಥಾನಿಕ ವೈದ್ಯಾಧಿಕಾರಿ/ಆಡಳಿತಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರಬೇಕು. ಮಹಿಳಾ ವೈದ್ಯರು, ಕಿರಿಯ ವೈದ್ಯರು, ಭದ್ರತಾ ಮೇಲ್ವಿಚಾರಕರು, ಆಸ್ಪತ್ರೆಯ ನಿರ್ವಹಣಾ ಸಿಬ್ಬಂದಿ ಸದಸ್ಯರಾಗಿರಬೇಕು.

ಪ್ರವೇಶ ನಿಯಂತ್ರಣ:

ಪ್ರಮುಖ ಆಸ್ಪತ್ರೆ ಪ್ರದೇಶಗಳಿಗೆ ಪ್ರವೇಶವನ್ನು ನಿಯಂತ್ರಿಸಲು ಸಾರ್ವಜನಿಕರಿಗೆ ಮತ್ತು ರೋಗಿಗಳ ಪರಿಚಾರಕರಿಗೆ ಪ್ರವೇಶ ಪಾಸ್‌ ವ್ಯವಸ್ಥೆ ಮಾಡಬೇಕು. ಸಂಜೆ 4.30ರ ನಂತರ ಆಸ್ಪತ್ರೆಗಳಿಗೆ ಒಂದು ಪ್ರವೇಶ ದ್ವಾರದಲ್ಲಿ ಮಾತ್ರ ಪ್ರವೇಶಿಸಲು ಅವಕಾಶ ಇರಬೇಕು. ಎಲ್ಲ ಪ್ರವೇಶದ್ವಾರಗಳಲ್ಲಿ ಭದ್ರತಾ ಸಿಬ್ಬಂದಿ ಇರಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ರಾತ್ರಿ 12ರಿಂದ ಮುಂಜಾನೆ 4ರವರೆಗೆ ಪೊಲೀಸ್‌ ಗಸ್ತು ಇರಬೇಕು. 24X7 ಮಾನವಸಹಿತ ಭದ್ರತಾ ನಿಯಂತ್ರಣ ಕೊಠಡಿ ಸ್ಥಾಪಿಸಬೇಕು.

ಲೈಂಗಿಕ ಕಿರುಕುಳ ತಡೆಗಟ್ಟುವಿಕೆ:

ಆಸ್ಪತ್ರೆಗಳಲ್ಲಿ ಲೈಂಗಿಕ ಕಿರುಕುಳ ತಪ್ಪಿಸಲು ಆಂತರಿಕ ಸಮಿತಿ ರಚಿಸಬೇಕು. ಈ ಸಮಿತಿಯು ಕಿರುಕುಳ ಅಥವಾ ಹಲ್ಲೆಯ ಘಟನೆಗಳನ್ನು ದಾಖಲಿಸಲು ಎರಡು ತಿಂಗಳಿಗೊಮ್ಮೆ ಪರಾಮರ್ಶೆ ನಡೆಸಬೇಕು. ಕುಂದುಕೊರತೆಗಳನ್ನು ಪರಿಹರಿಸಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT