ಬೆಂಗಳೂರು: ‘ಬನ್ನಿ ಉಳಿಸೋಣ.. ನಮ್ಮ ಹಸಿರು ಬೆಂಗಳೂರನ್ನು...’

ನಗರದ ಅರಮನೆ ಮೈದಾನದ ಬಳಿ ಭಾನುವಾರ ಕೇಳಿ ಬಂದ ಒಕ್ಕೊರಲಿನ ಧ್ವನಿ ಇದು.

ಬಸವೇಶ್ವರ ವೃತ್ತದಿಂದ ಹೆಬ್ಬಾಳ ನಡುವೆ ಉಕ್ಕಿನ ಸೇತುವೆ ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೂರು ವರ್ಷಗಳ ಹಿಂದೆ ಮುಂದಾಗಿತ್ತು. ಆಗಲೂ ಭಾರಿ ಸಂಖ್ಯೆಯಲ್ಲಿ ಜನ ಈ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈಗ ‘ಎತ್ತರಿಸಿದ ರಸ್ತೆ’ ಎಂಬ ಹೊಸ ಹೆಸರಿನೊಂದಿಗೆ ಈ ಯೋಜನೆ ಜಾರಿಗೆ ತರಲು ಮುಂದಾಗಿರುವ ಸರ್ಕಾರ, ‘ಏನೇ ವಿರೋಧ ಬಂದರೂ ಈ ಯೋಜನೆ ಜಾರಿಗೊಳಿಸಿಯೇ ಸಿದ್ಧ’ ಎನ್ನುತ್ತಿದೆ. ಸರ್ಕಾರದ ಈ ಧೋರಣೆಗೆ ಸೆಡ್ಡು ಹೊಡೆಯಲು ಸಿಟಿಜನ್ಸ್ ಫಾರ್ ಬೆಂಗಳೂರು (ಸಿಎಫ್ಬಿ) ನೇತೃತ್ವದಲ್ಲಿ 27 ಸಂಘಟನೆಗಳ ಸದಸ್ಯರು ಅರಮನೆ ಮೈದಾನದಲ್ಲಿ ಸೇರಿ, ‘ಜನರ ಮಾತು ಕೇಳಿ’ ಎಂದು ಏಕಕಂಠದಲ್ಲಿ ಧ್ವನಿ ಮೊಳಗಿಸಿದರು. ಯಾವುದೇ ಯೋಜನೆಗೂ ಮರಗಳನ್ನು ಕಳೆದುಕೊಳ್ಳಲು ನಗರದ ಜನತೆ ಸಿದ್ಧರಿಲ್ಲ ಎಂಬ ಸಂದೇಶ ಸಾರಿದರು.

ಪುಟಾಣಿಗಳಿಂದ ಹಿರಿಯರವರೆಗೆ ನೂರಾರು ಜನ ಈ ಅಭಿಯಾನದಲ್ಲಿ ಕೈಜೋಡಿಸಿದರು. ಗಾಯಾಳುವೊಬ್ಬರು ಗಾಲಿಕುರ್ಚಿಯಲ್ಲಿ ಬಂದು ಬೆಂಬಲ ವ್ಯಕ್ತಪಡಿಸಿದರು.ಈ ಯೋಜನೆಗಾಗಿ ತೆರವುಗೊಳಿಸಲು ಗುರುತಿಸಲಾದ ಮರಗಳ ಮುಂದೆ ನಿಂತು ವಿರೋಧ ವ್ಯಕ್ತಪಡಿಸಿದರು. ಮರಗಳಿಗೆ ಹಸಿರು ರಿಬ್ಬನ್ನ ರಕ್ಷೆ ಕಟ್ಟಿ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಭರವಸೆ ನೀಡಿದರು. ಶೀಷ್ಮಹಲ್ ಗೇಟ್ ಮುಂಭಾಗದಿಂದ ಗುಟ್ಟಹಳ್ಳಿ ಮಾರ್ಗದಲ್ಲಿ (ಬಳ್ಳಾರಿ ರಸ್ತೆ) ಸಾಲಾಗಿ ನಿಂತ ಪ್ರತಿಭಟನಾಕಾರರು ಮರ ಹತ್ಯೆ ತಡೆಯಬೇಕು ಎಂದು ಒತ್ತಾಯಿಸಿದರು.

‘ಮರಗಳೇ ನಾಡಿನ ಹಸಿರು...’ ‘ಮರಗಳೇ ನಮ್ಮ ಉಸಿರು...’ ‘ಮರಗಳಿಲ್ಲದ ನಮ್ಮ ಊರು ಮರುಭೂಮಿ.. ’ ಮುಂತಾದ ಬರಹಗಳ ಪ್ಲೇಕಾರ್ಡ್ ಹಿಡಿದು ಸರ್ಕಾರವನ್ನು ಎಚ್ಚರಿಸಿದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಎಂಜಿನಿಯರ್ಗಳು, ಪರಿಸರ ಸಂಬಂಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು, ಶಿಕ್ಷಕರು, ಕೆಲವು ಅಧಿಕಾರಿಗಳು ಸೇರಿ ಬೆಂಗಳೂರಿನ ಹಸಿರುಳಿಸಲು ಪಣ ತೊಟ್ಟರು.

ಸರಳವಾದ ಯೋಜನೆಗಳನ್ನು ಬಿಟ್ಟು ದುಬಾರಿ ವೆಚ್ಚದ ಈ ಯೋಜನೆಯ ಉದ್ದೇಶವಾದರೂ ಏನು? ಹೈಕೋರ್ಟ್, ರಾಷ್ಟ್ರೀಯ ಹಸಿರು ಪೀಠ ಈ ಯೋಜನೆಗೆ ಸಮ್ಮತಿಸದಿದ್ದರೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರಿಗೆ ಈ ಬಗ್ಗೆ ಹಠ ಏಕೆ? ಎಂಬುದು ಪ್ರತಿಭಟನಕಾರರ ಪ್ರಶ್ನೆ.

ಸಿಎಫ್ಬಿ ಸಹ ಸಂಸ್ಥಾಪಕರಾದ ತಾರಾ ಕೃಷ್ಣಸ್ವಾಮಿ, ‘ನಗರದಾದ್ಯಂತ ಸುಮಾರು 102 ಕಿಲೋಮೀಟರ್ ಉದ್ದದ ಎತ್ತರಿಸಲ್ಪಟ್ಟ ಮಾರ್ಗ ನಿರ್ಮಾಣಕ್ಕಾಗಿ ವ್ಯಯಿಸುವ ಮೊತ್ತ ರಾಜ್ಯದ ಶಿಕ್ಷಣ ಮತ್ತು ಆರೋಗ್ಯಕ್ಕೆ ಮೀಸಲಿಡುವ ಬಜೆಟ್ ಮೊತ್ತಕ್ಕಿಂತ ಅಧಿಕವಾಗಿದೆ. ಆದರೆ, ಇದಕ್ಕೆ ಪರ್ಯಾಯಗಳನ್ನೇಕೆ ಕಂಡುಕೊಂಡಿಲ್ಲ’ ಎಂದು ಪ್ರಶ್ನಿಸಿದರು.

‘ನಗರದ ಸಂಚಾರ ದಟ್ಟಣೆಗೆ ಫ್ಲೈ ಓವರ್ ಪರಿಹಾರ ಅಲ್ಲ. ಬದಲಾಗಿ ಬಸ್, ರೈಲು, ಮೆಟ್ರೊ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಬಹುದು’ ಎಂದು ಅವರು ಸಲಹೆ ಮಾಡಿದರು.

ವೃಕ್ಷ ತಜ್ಞ ವಿಜಯ್ ನಿಶಾಂತ್ ಅವರು ಮೇಖ್ರಿ ವೃತ್ತದ ಸುತ್ತಮುತ್ತಲಿನ ಮರಗಳಿಂದಾಗಿ ಉಳಿದಿರುವ ಜೀವ ವೈವಿಧ್ಯದ ಬಗ್ಗೆ ವರ್ಣಿಸಿದರು. ಇಂಥ ಸೇತುವೆ ನಿರ್ಮಾಣದಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ವಿವರಿಸಿದರು.
ಸಿಎಫ್ಬಿ ಪ್ರಮುಖರಾದ ಶ್ರೀನಿವಾಸ ಅಲವಿಲ್ಲಿ, ಬೈಸಿಕಲ್ ಮೇಯರ್ ಸತ್ಯ ಶಂಕರನ್ ಸೇರಿದಂತೆ ನಿವಾಸಿ ಸಂಘಟನೆಗಳ ಹಲವು ಪ್ರಮುಖರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.