ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರಜಾವಾಣಿ’ ವರದಿ ಪರಿಣಾಮ | ಎಸ್‌ಎಚ್‌ಡಿಪಿ: 34 ಬಿಡ್‌ಗಳ ಅನುಮೋದನೆ

Published 12 ಜುಲೈ 2024, 16:02 IST
Last Updated 12 ಜುಲೈ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಎಸ್‌ಎಚ್‌ಡಿಪಿ) ಐದನೇ ಹಂತದ ಮೊದಲನೇ ಘಟ್ಟದ ಟೆಂಡರ್‌ ಪ್ರಕ್ರಿಯೆ ವೇಗ ಪಡೆದಿದ್ದು, 34 ಪ್ಯಾಕೇಜ್‌ ಕಾಮಗಾರಿಗಳ ಆರ್ಥಿಕ ಬಿಡ್‌ಗೆ ಯೋಜನಾ ಅನುಷ್ಠಾನ ಘಟಕ ಶುಕ್ರವಾರ ಅನುಮೋದನೆ ನೀಡಿದೆ.

₹ 4,000 ಕೋಟಿ ವೆಚ್ಚದಲ್ಲಿ 1,200 ಕಿ.ಮೀ. ಉದ್ದದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು 184 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿತ್ತು. ಮೇ 8ರಂದು ತಾಂತ್ರಿಕ ಬಿಡ್‌ ತೆರೆದಿದ್ದು, ಎರಡು ತಿಂಗಳಾದರೂ ಆರ್ಥಿಕ ಬಿಡ್‌ ತೆರೆಯದೇ ಎಸ್‌ಎಚ್‌ಡಿಪಿಯ ಕೆಲವು ಅಧಿಕಾರಿಗಳು ಗುತ್ತಿಗೆದಾರರನ್ನು ಸತಾಯಿಸುತ್ತಿದ್ದರು. ಈ ಕುರಿತು ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ‘ಎಸ್‌ಎಚ್‌ಡಿಪಿ: ಟೆಂಡರ್‌ಗೆ ‘ಗ್ರಹಣ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.

‘ವರದಿ ಪ್ರಕಟವಾದ ಬಳಿಕ ಎಸ್‌ಎಚ್‌ಡಿಪಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ತಕ್ಷಣ ಆರ್ಥಿಕ ಬಿಡ್‌ ತೆರೆದು, ಪರಿಶೀಲಿಸಿ, ಅರ್ಹ ಬಿಡ್‌ಗಳಿಗೆ ಅನುಮೋದನೆ ನೀಡುವಂತೆ ತಾಕೀತು ಮಾಡಿದ್ದರು. ಮೂರೇ ದಿನಗಳಲ್ಲಿ ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಿರುವ ಅಧಿಕಾರಿಗಳು, 34 ಬಿಡ್‌ಗಳಿಗೆ ಶುಕ್ರವಾರ ನಡೆದ ಸಭೆಯಲ್ಲಿ ಅನುಮೋದನೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಇನ್ನೂ 100ಕ್ಕೂ ಹೆಚ್ಚು ಪ್ಯಾಕೇಜ್‌ ಕಾಮಗಾರಿಗಳ ಆರ್ಥಿಕ ಬಿಡ್‌ ತೆರೆಯುವುದು ಬಾಕಿ ಇದೆ. ಆ ಕಾಮಗಾರಿಗಳ ಬಿಡ್‌ಗಳ ಪರಿಶೀಲನೆಯ ವೇಗವೂ ಹೆಚ್ಚಿದೆ. ಶೀಘ್ರದಲ್ಲಿ ಎಲ್ಲ ಬಿಡ್‌ಗಳನ್ನೂ ತೆರೆದು, ಅರ್ಹ ಬಿಡ್‌ಗಳಿಗೆ ಅನುಮೋದನೆ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT