ಮಕ್ಕಳು ಹದಿಹರೆಯದವರು ಮಹಿಳೆಯರು ಹಾಗೂ ವೃದ್ಧರಿಗೆ ಮಾನಸಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದಂತೆ ಸಲಹೆಗಳ ಆಯ್ಕೆಯನ್ನು ಪ್ರತ್ಯೇಕವಾಗಿ ನೀಡಲಾಗಿದೆ. ನಿಗದಿತ ವರ್ಗದವರು ತಮ್ಮ ಆಯ್ಕೆ ಕ್ಲಿಕ್ಕಿಸಿದಲ್ಲಿ ಅಗತ್ಯ ಸಲಹೆಗಳು ತೆರೆದುಕೊಳ್ಳಲಿವೆ. ಮಕ್ಕಳು ಸೇರಿ ವಿವಿಧ ವರ್ಗದವರು ಯಾವ ರೀತಿ ಒತ್ತಡ ನಿರ್ವಹಣೆ ಮಾಡಬೇಕು? ಮಾನಸಿಕ ಅನಾರೋಗ್ಯ ಸಮಸ್ಯೆ ಗುರುತಿಸುವುದು ಹೇಗೆ? ಸಮಸ್ಯೆ ಇರುವವರನ್ನು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವುದೂ ಸೇರಿ ಹಲವು ಪ್ರಶ್ನೆಗಳಿಗೆ ಉತ್ತರ ಒದಗಿಸಲಾಗಿದೆ. ಯೋಗ ಮತ್ತು ಮಾನಸಿಕ ಆರೋಗ್ಯ ಸೇರಿ ಮನೋವೈದ್ಯಕೀಯ ವಿಭಾಗಕ್ಕೆ ಸಂಬಂಧಿಸಿದ ವಿವಿಧ ಲೇಖನಗಳು ಆ್ಯಪ್‌ನಲ್ಲಿ ಲಭ್ಯವಿದೆ.
ವೈದ್ಯಕೀಯ ಸಂಸ್ಥೆಗಳ ಮಾಹಿತಿ
ಮನೋವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯವಾರು ವೈದ್ಯಕೀಯ ಸಂಸ್ಥೆಗಳ ಮಾಹಿತಿಯನ್ನೂ ಒದಗಿಸಲಾಗಿದೆ. ನಿರ್ದಿಷ್ಟ ರಾಜ್ಯದ ಆಯ್ಕೆಯನ್ನು ಕ್ಲಿಕ್ಕಿಸಿದ ಬಳಿಕ ವೈದ್ಯಕೀಯ ಸಂಸ್ಥೆಗಳ ವಿಳಾಸ ಸಹಿತ ವಿವರ ತೆರೆದುಕೊಳ್ಳಲಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ನಿಮ್ಹಾನ್ಸ್ ಸೇರಿ 23 ವೈದ್ಯಕೀಯ ಸಂಸ್ಥೆಗಳ ವಿವರ ಒದಗಿಸಲಾಗಿದೆ.