ಮೇಲ್ಸೇತುವೆ ಕೆಳಸೇತುವೆ ನಿರ್ವಹಣೆಗೆ ಸೂಚನೆ
ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ವಹಣೆ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ವಲಯ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ವಿಡಿಯೊ ಸಂವಾದದಲ್ಲಿ ಮಾತನಾಡಿದ ಅವರು ‘ನಗರದಲ್ಲಿರುವ ಸ್ಕೈವಾಕ್‌ಗಳಲ್ಲಿವ ಲಿಫ್ಟ್‌ಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಸ್ವಚ್ಛತೆ ಕಾಪಾಡಬೇಕು. ಪಾದಚಾರಿಗಳ ಓಡಾಟಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಬೇಕು’ ಎಂದರು. ನ.30ರವರೆಗೆ ಒಟಿಎಸ್: ನವೆಂಬರ್ 30ರವರೆಗೆ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಯನ್ನು ವಿಸ್ತರಿಸಲಾಗಿದೆ. ಸುಸ್ತಿದಾರರಿಂದ ಆಸ್ತಿ ತೆರಿಗೆ ಪಾವತಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ವಿಶೇಷ ಆಯುಕ್ತರಿಗೆ ಸೂಚಿಸಿದರು. ರಸ್ತೆ ಬದಿ ಪಾದಚಾರಿ ಮಾರ್ಗ ಖಾಲಿ ಸ್ಥಳಗಳಲ್ಲಿ ಕಸ ಸುರಿಯುವ ಸ್ಥಳಗಳನ್ನು (ಬ್ಲಾಕ್ ಸ್ಪಾಟ್ಸ್) ಪಟ್ಟಿ ಮಾಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ರಸ್ತೆ ಬದಿ ಕಸ ಸುರಿಯುವುದರಿಂದ ನಗರದ ಸೌಂದರ್ಯ ಹಾಳಾಗಲಿದ್ದು ಈ ಬಗ್ಗೆ ಆಯಾ ವಲಯದ ವ್ಯಾಪ್ತಿಯಲ್ಲಿ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಡಾ. ಕೆ. ಹರೀಶ್ ಕುಮಾರ್ ಎಲ್ಲಾ ವಲಯ ಆಯುಕ್ತರು ವಲಯ ಜಂಟಿ ಆಯುಕ್ತರು ಭಾಗವಹಿಸಿದ್ದರು.