ಈ ಸಾಲಿನಿಂದ ‘ಬಸವ ಭಾಸ್ಕರ’ ರಾಷ್ಟ್ರೀಯ ಪ್ರಶಸ್ತಿ
‘ಅನುಭವ ಮಂಟಪ ಉತ್ಸವದಲ್ಲಿ ಈ ಸಾಲಿನಿಂದ ಬಸವಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ₹1 ಲಕ್ಷ ನಗದು ಸ್ಮರಣಿಕೆ ಒಳಗೊಂಡಿರಲಿದೆ. ಹಾರಕೂಡ ಹಿರೇಮಠ ಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಈ ಪ್ರಶಸ್ತಿ ಸ್ಥಾಪಿಸಿದ್ದು ಅದರ ಮೊತ್ತ ಅವರೇ ಭರಿಸಲು ಮುಂದೆ ಬಂದಿದ್ದಾರೆ’ ಎಂದು ಬಸವಲಿಂಗ ಪಟ್ಟದ್ದೇವರು ತಿಳಿಸಿದರು. ಬಸವಭಾಸ್ಕರ ರಾಷ್ಟ್ರೀಯ ಪ್ರಶಸ್ತಿಗೆ ಮಹಾರಾಷ್ಟ್ರ ಕೊಲ್ಲಾಪುರದ ಬಸವ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಬಿ.ಎಂ. ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ. ‘ಡಾ. ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ’ ರಾಷ್ಟ್ರೀಯ ಪ್ರಶಸ್ತಿಗೆ ಬೆಂಗಳೂರಿನ ಡಾ.ಕೆ. ಎಸ್. ರಾಜಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ₹1 ಲಕ್ಷ ನಗದು ಸ್ಮರಣಿಕೆ ಒಳಗೊಂಡಿರುವ ಪ್ರಶಸ್ತಿಯ ಭಕ್ತಿ ದಾಸೋಹವನ್ನು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಸಚಿವ ಈಶ್ವರ ಬಿ. ಖಂಡ್ರೆ ಮಾಡುವರು ಎಂದು ವಿವರಿಸಿದರು. ‘ಅನುಭವ ಮಂಟಪ’ ರಾಷ್ಟ್ರೀಯ ಪ್ರಶಸ್ತಿಯನ್ನು ಬಸವ ಟಿ.ವಿ. ಸಂಸ್ಥಾಪಕ ಈ. ಕೃಷ್ಣಪ್ಪ ಅವರಿಗೆ ಪ್ರದಾನ ಮಾಡಲಾಗುವುದು. ಗೋರಟಾ (ಬಿ) ಗ್ರಾಮದ ಗಂಗಮ್ಮ ಹಾಗೂ ಗುರುನಾಥ ಪಟ್ನೆ ಅವರು ₹1 ಲಕ್ಷ ನಗದು ಸ್ಮರಣಿಕೆಯ ಭಕ್ತಿ ದಾಸೋಹ ಮಾಡುವರು. ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಭಕ್ತಿ ದಾಸೋಹ ಮಾಡಿರುವ ₹50 ಸಾವಿರ ನಗದು ಸ್ಮರಣಿಕೆ ಹೊಂದಿರುವ ಪ್ರಶಸ್ತಿಗೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.