ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್ಸಿ, ಎಸ್ಟಿಗಳ ₹70 ಸಾವಿರ ಕೋಟಿ ದುರ್ಬಳಕೆ: ಬಿಎಸ್‌ಪಿ ಆರೋಪ

Published 26 ಜುಲೈ 2024, 15:52 IST
Last Updated 26 ಜುಲೈ 2024, 15:52 IST
ಅಕ್ಷರ ಗಾತ್ರ

ಬೀದರ್‌: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ₹70 ಸಾವಿರ ಕೋಟಿ ಅನುದಾನವನ್ನು ಬಿಜೆಪಿ, ಕಾಂಗ್ರೆಸ್‌ ಸರ್ಕಾರಗಳ ಅವಧಿಯಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಇದು ಪರಿಶಿಷ್ಟರಿಗೆ ಮಾಡಿರುವ ದೊಡ್ಡ ದ್ರೋಹ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಜಿಲ್ಲಾ ಘಟಕ ಆರೋಪಿಸಿದೆ.

ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ರಾಜ್ಯ ಸರ್ಕಾರ 2013–14ರಲ್ಲಿ ಜಾರಿಗೆ ತಂದಿತ್ತು. ಇದರ ಪ್ರಕಾರ ರಾಜ್ಯ ಯೋಜನಾ ವೆಚ್ಚದ ಒಂದು ಭಾಗವನ್ನು ಮೀಸಲಿಡಲು ಅಧಿನಿಯಮ ಅವಕಾಶ ಮಾಡಿಕೊಟ್ಟಿದೆ. ಹಿಂದಿನ ಬಿಜೆಪಿ ಸರ್ಕಾರ ಸುಮಾರು ₹19 ಸಾವಿರ ಕೋಟಿ ಅನ್ಯ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ. ಬಿಜೆಪಿ ಆಡಳಿತದಲ್ಲಿ ಬೋವಿ ಅಭಿವೃದ್ಧಿ ನಿಗಮ, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಭವ ಅಭಿವೃದ್ಧಿ ನಿಗಮಗಳಲ್ಲಿ ಹತ್ತಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿತ್ತು. ಇತ್ತೀಚೆಗೆ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಹಗರಣ ನಡೆದಿದೆ. ಎಸ್ಸಿ/ಎಸ್ಟಿಗಳಿಗೆ ಮಾಡಿರುವ ದ್ರೋಹ ಇದಾಗಿದೆ ಎಂದು ಪಕ್ಷದ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿ ವಿವರಿಸಿದರು.

2014-15ರಿಂದ ಇದುವರೆಗೆ ಮೀಸಲಿಟ್ಟ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ಹಣದಿಂದ ಪರಿಶಿಷ್ಟರ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣ ಉಚಿತವಾಗಿ ನೀಡಬಹುದಿತ್ತು. ನಿರುದ್ಯೋಗಿ ಯುವಜನತೆಗೆ ಸ್ವಯಂ ಉದ್ಯೋಗ ಒದಗಿಸಬಹುದಿತ್ತು. ವಸತಿರಹಿತ ಎಸ್‌ಸಿ/ಎಸ್‌ಟಿ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಸಿಕೊಡಬಹುದಿತ್ತು. ಭೂರಹಿತರಿಗೆ, ಕೃಷಿ ಕಾರ್ಮಿಕರಿಗೆ ತಲಾ 5 ಎಕರೆ ಕೃಷಿ ಜಮೀನು ಖರೀದಿಸಿ ಕೊಡಬಹುದಿತ್ತು. ಅತಿ ಬಡ ರೋಗಿಗಳಿಗೆ ಉಚಿತವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಬಹುದಿತ್ತು. ರಾಜ್ಯಪಾಲರು ಮಧ್ಯಪ್ರವೇಶಿಸಿ, ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅನ್ಯ ಉದ್ದೇಶಕ್ಕೆ ಕೊಟ್ಟಿರುವ ಅನುದಾನವನ್ನು ಮರಳಿ ಪಡೆದು, ಪರಿಶಿಷ್ಟರ ಕಲ್ಯಾಣಕ್ಕೆ ಉಪಯೋಗಿಸಬೇಕೆಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಉಸ್ತುವಾರಿ ದತ್ತು ಸೂರ್ಯವಂಶಿ, ಜಿಲ್ಲಾಧ್ಯಕ್ಷ ಅಶೋಕ ಮಂಠಾಳಕರ್, ಪ್ರಮುಖರಾದ ಯೋಹನ ಡಿಸೋಜಾ ಚಿಲ್ಲರ್ಗಿ, ಸಂಜುಕುಮಾರ ಮೇಧಾ, ಗುಣವಂತ ಸೂರ್ಯವಂಶಿ, ಪುಟ್ಟರಾಜ ನಂದಿ, ಶಕ್ತಿಕಾಂತ ಭಾವಿದೊಡ್ಡಿ, ಜಿ. ಆಸ್ಕರ್, ಸತ್ಯದೀಪ ಹಾವನೂರ್, ಶಾದ್ರಕ್, ದತ್ತಪ್ಪ ಭಂಡಾರಿ, ಜಾಫರ್, ಶ್ರೀಮಂತ ಬಗದಲ್‌, ಸೋಪಾನರಾವ ಡೋಂಗ್ರೆ, ಉಮೇಶ ಗುತ್ತೇದಾರ, ಶಂಕರ ಫುಲೆ, ನಾಗನಾಥ ಭಂಗಾರೆ, ಪ್ರದೀಪ ಎಂ., ರಜನಿಕಾಂತ ನಾಯಕ, ಅಶೋಕ ಬುಡನೋರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT