ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಕೊಠಡಿಯಲ್ಲೂ ಕ್ಯಾಮೆರಾ ಕಣ್ಗಾವಲು

ಶಿಕ್ಷಣ ಇಲಾಖೆಯ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ, ಅಕ್ರಮಕ್ಕೆ ಅಂಕುಶ
ನಾ.ಮಂಜುನಾಥಸ್ವಾಮಿ
Published : 24 ಮಾರ್ಚ್ 2024, 6:45 IST
Last Updated : 24 ಮಾರ್ಚ್ 2024, 6:45 IST
ಫಾಲೋ ಮಾಡಿ
Comments

ಯಳಂದೂರು: ಸೋಮವಾರದಿಂದ (ಮಾರ್ಚ್‌ 25) ನಡೆಯಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಾಗಿ ಶಾಲಾ ಶಿಕ್ಷಣ ಇಲಾಖೆ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ.  ಸುಗಮ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸುತ್ತಿದೆ. ಈ ಬಾರಿ, ಪರೀಕ್ಷೆ ನಡೆಯುವ ಎಲ್ಲ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಇಲಾಖೆ ಸೂಚನೆ ನೀಡಿದ್ದು, ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. 

ಮೊದಲು ಪರೀಕ್ಷಾ ಕೇಂದ್ರ ಹಾಗೂ ಆವರಣದಲ್ಲಿ ಮಾತ್ರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂಬ ನಿಯಮ ಇತ್ತು. ಪರೀಕ್ಷಾ ಕೊಠಡಿಗಳಲ್ಲಿ ಅಕ್ರಮ ನಡೆಯುವ ಸಾಧ್ಯತೆ ಇರುವುದರಿಂದ ಅದರ ಮೇಲೆ ನಿಗಾ ಇಡಲು ಈ ಬಾರಿ ಕೊಠಡಿಗಳಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚನೆ ನೀಡಲಾಗಿದೆ.  ಶಿಕ್ಷಣ ಇಲಾಖೆಯ ಈ ಕ್ರಮ ಪೋಷಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಜಿಲ್ಲೆಯಲ್ಲಿ 45 ಪರೀಕ್ಷಾ ಕೇಂದ್ರಗಳಿವೆ. ಕೇಂದ್ರಗಳ ಸುತ್ತಮುತ್ತ ಹಾಗೂ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಲೈವ್ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಪರೀಕ್ಷಾ ಪ್ರಕ್ರಿಯೆಯ ಮೇಲೆ ಇಲಾಖೆಯ ಉನ್ನತ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಆಯಾ ಜಿಲ್ಲಾ ಕೇಂದ್ರದಲ್ಲಿ ವೀಕ್ಷಿಸಲು ತಾಂತ್ರಿಕ ವ್ಯವಸ್ಥೆ ಮಾಡಲಾಗಿದೆ.

‘ತಾಲ್ಲೂಕಿನ ಆದರ್ಶ ವಿದ್ಯಾಲಯ, ಯಳಂದೂರಿನ ಜೆಎಸ್ಎಸ್  ಸರ್ಕಾರಿ ಪ್ರೌಢಶಾಲೆ ಹಾಗೂ ಮದ್ದೂರು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರತಿ ಕೇಂದ್ರದ ಕೋಡಿಂಗ್ ನಂಬರ್ ಬಳಸಿ ಆನ್‌ಲೈನ್‌ ಮೂಲಕ ಕೇಂದ್ರ, ಕೊಠಡಿಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ವೀಕ್ಷಿಸಬಹುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಪರೀಕ್ಷಾ ಕೇಂದ್ರಗಳಲ್ಲಿ ಹಲವು ವರ್ಷಗಳಿಂದಲೇ  360 ಡಿಗ್ರಿ ಕಣ್ಗಾವಲಿಡುವ ಕ್ಯಾಮೆರಾ ಅಳವಡಿಸಿ ಪರೀಕ್ಷೆ ನಡೆಸುವಂತೆ ಇಲಾಖೆ ಮಾರ್ಗಸೂಚಿ ನೀಡುತ್ತಲೇ ಬಂದಿದೆ. ಆದರೆ, ಈ ವ್ಯವಸ್ಥೆಯನ್ನು ತಾಂತ್ರಿಕ ಕಾರಣಗಳ ನೆಪವೊಡ್ಡಿ ಜಾರಿಗೆ ತರುತ್ತಿರಲಿಲ್ಲ. ಆದರೆ, ಕೆಲವು ಶಾಲಾ-ಕಾಲೇಜುಗಳು ಶಾಶ್ವತವಾಗಿ ವೆಬ್ ಕ್ಯಾಮೆರಾ ಅಳವಡಿಸಿ ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ನಡೆಸುತ್ತ ಬಂದಿವೆ’ ಎಂದು ಹೇಳುತ್ತಾರೆ ಖಾಸಗಿ ವಿದ್ಯಾಲಯಗಳ ಮುಖ್ಯಸ್ಥರು.

ಕೊಠಡಿಗಳಲ್ಲಿ ಕ್ಯಾಮೆರಾ ಅಳವಡಿಸುವುದರಿಂದ ಕೊಠಡಿಗಳಲ್ಲೂ ಯಾವುದೇ ರೀತಿಯ ಅಕ್ರಮ ಮಾಡಲು ಅವಕಾಶ ಇಲ್ಲದಂತಾಗಿದೆ. ಅಧಿಕಾರಿಗಳು ಮತ್ತು ಮೇಲ್ವಿಚಾರಕರು ನಿರ್ಭೀತಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗಲಿದೆ. ಪರೀಕ್ಷಾ ಅಕ್ರಮಗಳಿಗೆ ಸಹಕರಿಸುವವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಇದು ಅತ್ಯತ್ತಮ ವಿಧಾನವೂ ಹೌದು.

ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಆದರ್ಶಾ ವಿದ್ಯಾಲಯದಲ್ಲಿ  ಶುಕ್ರವಾರ ಸಿಸಿಟಿವಿ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ರಾಮಚಂದ್ರ ರಾಜೇ ಅರಸ್‌
ರಾಮಚಂದ್ರ ರಾಜೇ ಅರಸ್‌
ಎಲ್ಲ ಕೊಠಡಿಗಳಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಗಿದೆ. ಎಲ್ಲ ಕೇಂದ್ರಗಳಲ್ಲೂ ಅಳವಡಿಸಲಾಗುತ್ತಿದೆ
ರಾಮಚಂದ್ರ ರಾಜೇ ಅರಸ್‌ ಡಿಡಿಪಿಐ

ಇಲಾಖೆ ಕ್ರಮಕ್ಕೆ ಮೆಚ್ಚುಗೆ  ‘ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ಆಯೋಜಿಸುವ ಕ್ರಮವನ್ನು ವಿದ್ಯಾರ್ಥಿ ಹಾಗೂ ಪೋಷಕರು ಸ್ವಾಗತಿಸಿದ್ದಾರೆ. ಇದರಿಂದ ವರ್ಷಪೂರ್ತಿ ಪ್ರಾಮಾಣಿಕವಾಗಿ ಕಲಿಸುವ ಶಿಕ್ಷಕ ಸಮುದಾಯ ಮತ್ತು ಕಲಿಯುವ ಮಕ್ಕಳಿಗೆ ಉತ್ಸಾಹ ತುಂಬಿದಂತೆ ಆಗುತ್ತದೆ’ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.  ‘ಇದರಿಂದಾಗಿ ಶಾಲೆಗೆ ಬರದೆ ಗೈರಾಗುವ ಮಕ್ಕಳು ವರ್ಷದ ಕೊನೆಯಲ್ಲಿ ಅನ್ಯ ಮಾರ್ಗದಲ್ಲಿ ಪ್ರವೇಶ ಪತ್ರ ಪಡೆದು ಪಾಸಾಗುವ ಮಾರ್ಗ ಮುಚ್ಚುತ್ತದೆ. ಪರೀಕ್ಷೆ  ಸಮಯದಲ್ಲಿ ನಕಲು ಮಾಡಿಸಿ ಕಲಿಕಾರ್ಥಿಗಳನ್ನು ದಿಕ್ಕು ತಪ್ಪಿಸುವ ವ್ಯವಸ್ಥೆಗೂ ಇದು ಎಚ್ಚರಿಕೆ ಗಂಟೆಯಾಗುತ್ತದೆ. ಇದರಿಂದ ವರ್ಷಪೂರ್ತಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ತುಂಬಲಿದೆ’ ಎಂದು ಪೋಷಕರಾದ ಚಿನ್ನತಾಯಮ್ಮ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT