ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು ಸಾರ್ವಜನಿಕ ಆಸ್ಪತ್ರೆ: ಪ್ರತಿದಿನ ಸಾವಿರಾರು ರೋಗಿಗಳ ದಟ್ಟಣೆ

Published 1 ಜುಲೈ 2024, 7:40 IST
Last Updated 1 ಜುಲೈ 2024, 7:40 IST
ಅಕ್ಷರ ಗಾತ್ರ

ಯಳಂದೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿದಿನ ಸಾಲುಗಟ್ಟಿ ನಿಲ್ಲುವ ರೋಗಿಗಳು. ಗೌಜು ಗದ್ದಲ ಸಂಭಾಳಿಸಿ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುವ ವೈದ್ಯರು. ಮಕ್ಕಳ ಅಳು, ಮಹಿಳೆಯರ ಮಾತು, ಸರದಿ ಸಾಲಿನಲ್ಲೂ ನಗುಮೊಗದಿಂದ ಆರೈಕೆ ಮಾಡುವ ಶುಶ್ರೂಷಕರು ಹಾಗೂ ಸಿಬ್ಬಂದಿ. ಇದು ತಾಲ್ಲೂಕು ಕೇಂದ್ರದಲ್ಲಿರುವ ಆಸ್ಪತ್ರೆಯಲ್ಲಿ ಕಂಡುಬರುವ ದೈನಂದಿನ ನೋಟ.

ತಾಲ್ಲೂಕು ಕೇಂದ್ರದಲ್ಲಿ 1 ಆಸ್ಪತ್ರೆ ಹಾಗೂ ಗ್ರಾಮಾಂತರ ಭಾಗಗಳಲ್ಲಿ 5 ಪ್ರಾಥಮಿಕ ಕೇಂದ್ರಗಳು ಇವೆ. ಪ್ರತಿದಿನ ನೂರಾರು ರೋಗಿಗಳು ಇಲ್ಲಿ‌ ತಪಾಸಣೆಗೆ ಬರುತ್ತಾರೆ. ಹತ್ತಾರು ಜನರು ಡಯಾಲಿಸ್ ಕೇಂದ್ರದ ಮುಂದೆ ಜಮಾಯಿಸಿರುತ್ತಾರೆ. ವೈದ್ಯರ ಕೊರತೆಯ ನಡುವೆಯೂ ಇರುವವರೇ ರೋಗಿಗಳನ್ನು ಉಪಚರಿಸಬೇಕಾದ ಪರಿಸ್ಥಿತಿ ಇಲ್ಲಿದೆ.

ಮಿತಿಯಾದ ಕೊಠಡಿ, ಕಿರಿದಾದ ವಾರ್ಡ್ ಹಾಗೂ ಇತಿಮಿತಿಯ ವೈದ್ಯಕೀಯ ಪರಿಕರಗಳ ನಡುವೆ ವೈದ್ಯ ಕಾಯಕಕ್ಕೆ ಕುಂದು ಉಂಟಾಗದಂತೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಜನರ ವಿಶ್ವಾಸ ಗಳಿಸಿದ್ದಾರೆ. ಅಕ್ಕಪಕ್ಕದ ತಾಲ್ಲೂಕುಗಳ ಜನರು ಇಲ್ಲಿ ಚಿಕಿತ್ಸೆಗೆ ಬರುವುದು ವಿಶೇಷ.

ಐದು ದಶಕಗಳ ಹಿಂದೆ ನಿರ್ಮಾಣವಾದ ಆಸ್ಪತ್ರೆಗೆ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಕಲ್ಪಿಸಿಲ್ಲ. ಆದರೆ, ಇಲ್ಲಿನ ವೈದ್ಯರು ಆರೋಗ್ಯಕರ ಸಮಾಜ ನಿರ್ಮಿಸುವ ದಿಸೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬ ಮೆಚ್ಚುಗೆ ಸಾರ್ವಜನಿಕರಲ್ಲಿ ಇದೆ. ಸಣ್ಣ ರೋಗಗಳಿಂದ ಹೆರಿಗೆವರೆಗೂ ಸಕಾಲದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.  

‘ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಗಳು ನಡೆಯುತ್ತಿದೆ. ₹30.5 ಕೋಟಿ ವೆಚ್ಚದಲ್ಲಿ 100 ಬೆಡ್‌ಗಳ ಆಸ್ಪತ್ರೆ ಶೀಘ್ರ ತಲೆ ಎತ್ತಲಿದೆ. ಹತ್ತಕ್ಕೂ ಹೆಚ್ಚಿನ ತಜ್ಞ ವೈದ್ಯರು, 30ಕ್ಕೂ ಹೆಚ್ಚಿನ ಅರೆ ವೈದ್ಯಕೀಯ ಸಿಬ್ಬಂದಿ ನೇಮಕ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಆರಂಭವಾಗಿದ್ದು, ಆರಂಭದಲ್ಲಿ 2 ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲಾಗಿದ್ದು ಗ್ರಾಮೀಣ ಪ್ರದೇಶದ ಬಹಳಷ್ಟು ರೋಗಿಗಳಿಗೆ ಅನುಕೂಲವಾಗಿದೆ’ ಎನ್ನುತ್ತಾರೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್.

 ತಾಳ್ಮೆಯೇ ಆಭರಣ: ‘ರೋಗಿಗಳು ಹೆಚ್ಚಾದಾಗ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗುತ್ತದೆ. ಇಂತಹ ಸಮಯದಲ್ಲಿ ವೈದ್ಯರು ಊಟ, ನಿದ್ದೆ ಬಿಟ್ಟು ದುಡಿಯಬೇಕು. ವೈದ್ಯ ಮತ್ತು ದಾದಿಯರ ವೃತ್ತಿ ನಂಬಿದ ಮೇಲೆ ಸಮಸ್ಯೆಗಳು ಸಹಜ. ಸಂಜೆ ಸಮಯ ವೈದ್ಯಕೀಯ ಸೇವೆ ಸಿಗದ ಬಗ್ಗೆ ದೂರು, ಹೋರಾಟ, ಟೀಕೆಗಳು ಕೇಳಿ ಬರುತ್ತವೆ. ವೈದ್ಯರು ಇಂತಹ ಕ್ಲಿಷ್ಟ ಸಮಯದಲ್ಲೂ ರೋಗಿಯ ಸೂಕ್ಷ್ಮತೆ ಅರಿತು, ತಾಳ್ಮೆ, ವಿಶ್ವಾಸ ಮತ್ತು ಪ್ರೀತಿಯಿಂದ ಚಿಕಿತ್ಸೆ ಮುಂದುವರಿಸಬೇಕು’ ಎನ್ನುತ್ತಾರೆ ತಾಲ್ಲೂಕು ವೈದ್ಯಾಧಿಕಾರಿ ತನುಜಾ.

ಡಾ. ರಾಯ್ ಸ್ಮರಣೆ ಇಂದು
ಡಾ.ಬಿ.ಸಿ.ರಾಯ್ ಜನ್ಮ ದಿನದ ಗೌರವಾರ್ಥ ಪ್ರತಿ ವರ್ಷ ಜುಲೈ 1ರಂದು ‘ವೈದ್ಯರ ದಿನ’ವಾಗಿ ಆಚರಿಸಲಾಗುತ್ತಿದೆ. ಪಶ್ಚಿಮ ಬಂಗಾಳ ಮೂಲದ ಡಾ.ಬಿ.ಸಿ.ರಾಯ್‌ ಶ್ರೇಷ್ಠ ವೈದ್ಯರು. ವೈದ್ಯಕೀಯ ಜತೆಗೆ ಶಿಕ್ಷಣ ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಬಂಗಾಲದ ಮುಖ್ಯಮಂತ್ರಿ ಆಗಿಯೂ ಜನಮನ್ನಣೆ ಗಳಿಸಿದ್ದರು. ಅವರ ಗೌರವಾರ್ಥವಾಗಿ ಆಚರಿಸುವ ರಾಷ್ಟ್ರೀಯ ವೈದ್ಯರ ದಿನದಂದು ವೈದ್ಯರಿಗೆ ಗೌರವ ಸಲ್ಲಿಸಬೇಕಾಗಿರುವುದು ಸಮಾಜದ ಕರ್ತವ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT