ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಳಿಗಿರಿರಂಗನಬೆಟ್ಟ: ಸಂಕ್ರಾಂತಿ ರಥೋತ್ಸವಕ್ಕೆ ಜನಸಾಗರ

ವೈಭವದಿಂದ ಜರುಗಿದ ರಂಗನಾಥನ ಚಿಕ್ಕಜಾತ್ರೆ
Published 16 ಜನವರಿ 2024, 12:28 IST
Last Updated 16 ಜನವರಿ 2024, 12:28 IST
ಅಕ್ಷರ ಗಾತ್ರ

ಯಳಂದೂರು (ಚಾಮರಾಜನಗರ): ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಮಂಗಳವಾರ ಅಪಾರ ಭಕ್ತಸಾಗರದ ನಡುವೆ ಬಿಳಿಗಿರಿರಂಗನಾಥಸ್ವಾಮಿಯ ಸಂಕ್ರಾಂತಿ ಚಿಕ್ಕ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಮಕರ ಸಂಕ್ರಾಂತಿ ಹಬ್ಬದ ನಂತರ ನಡೆಯುವ ರಂಗಪ್ಪನ ಚಿಕ್ಕಜಾತ್ರೆಗೆ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಟಪೋತ್ಸವದಲ್ಲಿ ಇರಿಸಿ ಬಗೆಬಗೆ ಹೂವುಗಳ ಹಾರ, ಅರಿಸಿನ ಕುಂಕಮ ಸಿಂಚನ ಮಾಡಿ, ಮಂಗಳಾರತಿ ಬೆಳಗಲಾಯಿತು. 

ಜಾತ್ರೆಯ ನಿಮಿತ್ತ ದೇವಾಲಯ ಮಹಾದ್ವಾರವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಕಬ್ಬು, ಬಾಳೆ, ಬಗೆಬಗೆ ಪುಷ್ಪಗಳ ತೋರಣಗಳಿಂದ ಗುಡಿಯನ್ನು ಸಿಂಗರಿಸಿ, ಹಣ್ಣು, ಕಾಯಿ ಪೂಜೆಗೆ ಭಕ್ತರಿಗೆ ಅವಕಾಶ ನೀಡಲಾಯಿತು.

ಗರ್ಭಗುಡಿಯಲ್ಲಿ ಬಿಳಿಗಿರಿರಂಗನ ಮೂರ್ತಿಗೆ ಬಂಗಾರದ ಕಿರೀಟ, ಚಿನ್ನದ ಹಾರ ಹಾಗೂ ಸೊಂಟಪಟ್ಟಿ ಧರಿಸಿ, ಊದುಕಡ್ಡಿ, ಕರ್ಪೂರ ಚಂದನದ ಆರತಿ ಮಾಡಲಾಯಿತು. ಅರ್ಚಕರ ಮಂತ್ರ ಘೋಷಗಳು ಮುಗಿಯುತ್ತಿದ್ಧಂತೆ ಊಘೇ ರಂಗನಾಥ ಘೋಷಣೆ, ದೇಗುಲದ ಸುತ್ತ ಗಂಧ ಸುಗಂಧದ ಸುವಾಸನೆ ಭಕ್ತರ ತನಮನವನ್ನು ಸೇರಿ ಜಾತ್ರೋತ್ಸವದ ಸೊಬಗು ಇಮ್ಮಡಿಗೊಂಡಿತು.

ರಥಾರೋಹಣ ವೈಭವ

ಮುಂಜಾನೆ ಚಿಕ್ಕರಥಕ್ಕೆ ಬಣ್ಣದ ಪತಾಕೆ ಕಟ್ಟಿ, ಗುಡುಮೆ ಕಾಯಿಗಳ ತೋರಣವನ್ನು ಇಳಿ ಬಿಡಲಾಯಿತು. ಮಲ್ಲಿಗೆ, ಚೆಂಡು, ಜಾಜಿ, ಗುಲಾಬಿ, ಕಾಡು ಫಲ, ಪುಷ್ಪಗಳ ಜೊತೆ, ದಾಳ ಮತ್ತು ಬಾವುಟಗಳ ಶೃಂಗಾರ ರಥದ ಭವ್ಯ ನೋಟವನ್ನು ಭಕ್ತರಿಗೆ ದರ್ಶನ ಮಾಡಿಸಿತು. ತೇರಿನ ಕೈಂಕರ್ಯದಲ್ಲಿ ಭಕ್ತ ಸಮುದಾಯದ ಜೊತೆ ಸೋಲಿಗರು ಮತ್ತು ಸ್ಥಳೀಯ ನಾಯಕ ಸಮುದಾಯದವರು ಪಾಲ್ಗೊಂಡು ಧಾರ್ಮಿಕ ಕಾರ್ಯಕ್ಕೆ ನೆರವಾದರು.

ಮಧ್ಯಾಹ್ನ 11.54ರಿಂದ 12.05 ರೊಳಗೆ ಸಲ್ಲುವ ಶುಭ ಮೀನ ಗುರು ನವಾಂಶ ಶುಭ ಮುಹೂರ್ತದಲ್ಲಿ ಭೂದೇವಿ ಮತ್ತು ಶ್ರೀದೇವಿ ಸಮೇತ ಬಿಳಿಗಿರಿ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥಾರೋಹಣ ಮಾಡಲಾಯಿತು. ಈ ವೇಳೆ ರಂಗನಾಥನಿಗೆ ಗಣ್ಯರು ಪೂಜೆ ಸಲ್ಲಿಸಿದರು. ನಂತರ ಭಕ್ತರು ದೇವಾಲಯದ ಸುತ್ತಲೂ ತೇರನ್ನು ಎಳೆದು ಸಂಭ್ರಮಿಸಿದರು.

ಗರುಡಾಗಮ: ವಿವಿಧ ಆಭರಣಗಳಿಂದ ಕಂಗೊಳಿಸುವ ರಂಗನಾಥಸ್ವಾಮಿ ಉತ್ಸವ ಮೂರ್ತಿ ಹೊತ್ತ ರಥದ ಸುತ್ತ 12.12ರ ಸಮಯದಲ್ಲಿ ಗರುಡಾಗಮನವಾಯಿತು. ದೇವಾಲಯದ ಆಗಸದಲ್ಲಿ ಗರುಡ ಪಕ್ಷಿ ಹಾರಾಡಿತು. ಭಕ್ತಾದಿಗಳು ಜಯಘೋಷ ಮೊಳಗಿಸಿದರು.

ಮಧ್ಯಾಹ್ನ 12.23ಕ್ಕೆ ಸರಿಯಾಗಿ ಪೂರ್ವ ದಿಕ್ಕಿನತ್ತ ತೇರು ಸಂಚರಿಸುತ್ತಿದ್ದಂತೆ ಮಂಗಳವಾದ್ಯ ಮೊಳಗಿಸಲಾಯಿತು. ದಾಸರು ಶಂಖನಾದ ಮಾಡಿ, ಜಾಗಟೆ ಬಾರಿಸಿದರು. ರಥ ಸಾಗುವ ಹಾದಿಯಲ್ಲಿ ಭಕ್ತರು ಬ್ಯಾಟಮನೆ ಹಾಕಿ ಹರಕೆ ಸಲ್ಲಿಸಿದರು. ತೆಂಗಿನ ಕಾಯಿ, ಕರ್ಪೂರದ ಆರತಿ ಮಾಡಿ, ತೇರನ್ನು ಬೆಳಗಿದರು.

ರಂಗನಾಥನ ಭಕ್ತರು ಗೋವಿಂದ ನಾಮ ಸ್ಮರಣೆ ಮಾಡಿದರು. ಕೃಷಿಕರು ಹೊಸ ಫಸಲಿನ ದವಸ, ಧಾನ್ಯವನ್ನು ತೇರಿಗೆ ತೂರಿದರೆ, ಮಹಿಳೆಯರು ನಾಣ್ಯ ತೂರಿ ಸಂಭ್ರಮಿಸಿದರು. ನವ ಜೋಡಿಗಳು ಹಣ್ಣು ಧವನ ಎಸೆದು ಪುನೀತರಾದರು.

ದಾಸರು 'ಆಪರಾಕ್, ಗೋಪರಾಕ್' ಪರಂಪರೆ ಮುಂದುವರಿಸಿ, ಅಕ್ಕಿ, ಕಜ್ಜಾಯ, ಪುರಿ, ಬೆಲ್ಲ ಹಾಕಿ ರಂಗನಿಗೆ ಅರ್ಪಿಸಿದರು. ಶಂಖ, ಜಾಗಟೆ ಸದ್ದು, ಮೊಳಗಿಸಿ ಸಂಭ್ರಮಿಸಿದರು. ಮಧ್ಯಾಹ್ನ 12.43ಕ್ಕೆ ರಥ ಸ್ವಸ್ಥಾನ ಸೇರಿತು. 

ಹರಕೆ ಹೊತ್ತವರು ಅರವಟ್ಟಿಗೆ ಹಾಗೂ ದಾಸೋಹಗಳಲ್ಲಿ ಭಕ್ತರಿಗೆ ಪ್ರಸಾದ ವಿತರಿಸಿದರು. ಶಾಸಕ ಎ.ಆರ್‌.ಕೃಷ್ಣಮೂರ್ತಿ, ತಹಶೀಲ್ದಾರ್‌ ಜಯ ಪ್ರಕಾಶ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು.

––––

ದೇವರ ದರ್ಶನ, ಪಾದುಕೆ ಸ್ಪರ್ಶ

ರಥೋತ್ಸವದ ನಂತರ ಭಕ್ತರು ಗುಡಿಯತ್ತ ದಾಂಗುಡಿ ಇಟ್ಟರು. ಈ ವೇಳೆ ಹೆಚ್ಚಿನ ಜನದಟ್ಟಣೆ ಕಂಡುಬಂದಿತು. ಸರದಿ ಸಾಲಿನಲ್ಲಿ ನಿಂತು ಪೂಜೆ ಪೂರೈಸಿ ಸ್ವಾಮಿಯ ದರ್ಶನ ಪಡೆದರು.

ಅಮ್ಮನವರ ಆಲಯದಲ್ಲಿ ಕುಂಕುಮಾರ್ಚನೆ ನೆರವೇರಿಸಿದರು. ಬಳಿಕ ಭಕ್ತರು ಸ್ವಾಮಿಯ ಪಾದುಕೆಗಳನ್ನು ಶಿರಕ್ಕೆ ಸ್ಪರ್ಶಿಸಿಕೊಂಡರು.

ರಥೋತ್ಸವದ ನಂತರ ಮೂರು ದ್ವಾರಗಳಲ್ಲೂ ಸಮರ್ಪಕವಾಗಿ ಭಕ್ತರು ಹೋಗುವುದಕ್ಕೆ ವ್ಯವಸ್ಥೆ ಮಾಡದ ಕಾರಣ ಮಹಿಳೆಯರು ನೂಕುನುಗ್ಗಲಿನ ನಡುವೆ ಸಿಲುಕಿ ಪರಿತಪಿಸಿದರು.

ಗುಂಬಳ್ಳಿ, ಚಾಮರಾಜನಗರ ತಾಲ್ಲೂಕಿನ ಹೊಂಡರಬಾಳು ತಪಾಸಣಾ ಕೇಂದ್ರಗಳಿಂದ ದ್ವಿಚಕ್ರವಾಹನಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಭಕ್ತರು ಪ್ರಯಾಣ ಬೆಳೆಸಿದರು. 

ಅಪಾರ ಭಕ್ತರು

ಶಾಂತಿ ಸಮೃದ್ಧಿ ಸಾರುವ ಚಿಕ್ಕಜಾತ್ರೆಗೆ ತಾಲ್ಲೂಕು ಜಿಲ್ಲೆಯವರು ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ  ಹೆಚ್ಚಿನ ಸಂಖ್ಯೆಯ ಭಕ್ತರು  ಬಂದಿದ್ದರು. ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT