ಚಾಮರಾಜನಗರ: 2024ನೇ ಸಾಲಿನ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಸಂಭ್ರಮ–50 ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಜಿಲ್ಲೆಯ ಮೂವರು ಸಾಧಕರಿಗೆ ಪ್ರಶಸ್ತಿಗಳು ಸಂದಿವೆ.

ಕೃಷಿ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಚಾಮರಾಜನಗರ ತಾಲ್ಲೂಕಿನ ಪಣ್ಯದಹುಂಡಿಯ ಪುಟ್ಟೀರಮ್ಮ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಂಗಭೂಮಿ ಕಲಾವಿದರಾದ ಸಂತೇಮರಹಳ್ಳಿಯ ಎಂ.ಪಿ.ರಾಜಣ್ಣ ಅವರಿಗೆ ಹಾಗೂ ಸಮಾಜಸೇವಕಿ ಪ್ರೇಮಲತಾ ಕೃಷ್ಣಮೂರ್ತಿ ಅವರನ್ನು ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪುಟ್ಟೀರಮ್ಮ:

ಚಾಮರಾಜನಗರ ತಾಲ್ಲೂಕಿನ ಪಣ್ಯದಹುಂಡಿಯ ರೈತ ಮಹಿಳೆ ಪುಟ್ಟೀರಮ್ಮ ಮಿಶ್ರ ಬೆಳೆ ಹಾಗೂ ಬೆರಕೆ ಸೊಪ್ಪಿನ ಬಗ್ಗೆ ಅಗಾಧ ಜ್ಞಾನ ಭಂಡಾರ ಸಂಪಾದಿಸಿದ್ದಾರೆ. ಪರಂಪರೆಯಿಂದ ದಕ್ಕಿದ ಬೀಜ ಜ್ಞಾನವನ್ನು ಜತನದಿಂದ ಕಾಪಿಟ್ಟುಕೊಂಡು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಕಾರ್ಯದಲ್ಲಿ ನಿರತರಾಗಿರುವ ಪುಟ್ಟೀರಮ್ಮ ‘ನಡೆದಾಡುವ ಕೃಷಿ ವಿಶ್ವವಿದ್ಯಾಲಯ’ ಎಂದರೆ ಅತಿಶಯೋಕ್ತಿಯಲ್ಲ.

ಮನೆಯ ಹಿತ್ತಲು, ಬೇಲಿ, ಹೊಲ, ಸುತ್ತಮುತ್ತಲಿನ ಪರಿಸರದಲ್ಲಿ ಕಾಣಸಿಗುವ 60ಕ್ಕೂ ಹೆಚ್ಚು ಬಗೆಯ ಬೆರಕೆ ಸೊಪ್ಪುಗಳ ಹೆಸರನ್ನು ನಿಖರವಾಗಿ ಗುರುತಿಸಿ ಹೇಳುವುದರ ಜೊತೆಗೆ ಸೊಪ್ಪಿನ ಮಹತ್ವವನ್ನು ಕಾವ್ಯಾತ್ಮಕವಾಗಿ ವಿವರಿಸಿ ಹೇಳುತ್ತಾರೆ ಪುಟ್ಟೀರಮ್ಮ.

ಗಣಿಕೆ, ಪಸರೆ, ಗುಳ್ಸುಂಡೆ, ಮಳ್ಳಿ, ಹಾಲೆ, ಜವಣ, ಅಣ್ಣೆ, ಕರಿಕಡ್ಡಿ, ತಡಗುಣಿ, ನಲ್ಲಿಕುಡಿ, ಹೊನಗಾಲ, ಹೊನಗಾನೆ, ಕಾರೆ, ಕನ್ನೆ, ಕಿರುನಗಲ, ಅಗಸೆ, ಕಿರಕಿಲೆ, ಮುಳ್ಳುಗೀರ, ಒಂದೆಲಗ, ಪುಂಡಿ, ಕಳ್ಳೆ ಹೀಗೆ ಮಾರುಕಟ್ಟೆಯಲ್ಲೂ ಸಿಗದ ತರಹೇವಾರಿ ಸೊಪ್ಪುಗಳು ಪುಟ್ಟೀರಮ್ಮನ ಬಾಯಲ್ಲಿ ಕಾವ್ಯವಾಗಿ ನಲಿಯುತ್ತವೆ.

ಗರ್ಭಿಣಿ, ಬಾಣಂತಿಯರು, ಮಹಿಳೆಯರು, ಮಕ್ಕಳು ಯಾವ ಸೊಪ್ಪು ಸೇವಿಸಬೇಕು, ಯಾವ ಕಾಲದಲ್ಲಿ ಯಾವ ಸೊಪ್ಪು ಎಲ್ಲಿ ಸಿಗುತ್ತದೆ, ಸೊಪ್ಪು ಗುರುತಿಸುವ ಬಗೆ ಹೇಗೆ, ಯಾವ ಸೊಪ್ಪಿನಲ್ಲಿ ಯಾವೆಲ್ಲ ಔಷಧೀಯ ಗುಣಗಳು ಇವೆ, ಹೀಗೆ ಸೊಪ್ಪುಗಳ ಕುರಿತಾಗಿಯೇ ಸಂಶೋಧನಾ ಪ್ರಬಂಧ ಮಂಡಿಸುವಷ್ಟು ಜ್ಞಾನ ಹೊಂದಿದ್ದಾರೆ ಪುಟ್ಟೀರಮ್ಮ.

ಸೊಪ್ಪು ಕೀಳುವಾಗ ಬೇರು ಸಹಿತ ಕೀಳಬಾರದು, ಚಿಗುರನ್ನಷ್ಟೇ ಕಿತ್ತು ಮತ್ತೆ ಚಿಗುರಲು ಬಿಡಬೇಕು ಎಂಬ ಅವರ ಕಾಳಜಿ ಮನುಷ್ಯನ ಆಸೆಬುರುಕತನವನ್ನು ಅಣಕಿಸಿದಂತಾಗುತ್ತದೆ. ಪುಟ್ಟೀರಮ್ಮನ ಸೊಪ್ಪಿನ ಪ್ರೀತಿ ಇಷ್ಟಕ್ಕೆ ಮುಗಿಯುವುದಿಲ್ಲ. ಸೊಪ್ಪುಗಳ ಮೇಲೆ ಪದಗಳನ್ನು ಕಟ್ಟಿ ಹಾಡುತ್ತಾ ಸಾಮಾನ್ಯ ಕಾಯಿಲೆಗಳಿಗೆಲ್ಲ ಸೊಪ್ಪಿನ ಸಾರಿನಲ್ಲೇ ಮದ್ದಿದೆ ಎಂದು ಹೇಳುವ ಅವರ ಮಾತುಗಳು ಹೆಚ್ಚು ಅರ್ಥಪೂರ್ಣವಾಗಿ ಕಾಣುತ್ತವೆ.

ಏಕಬೆಳೆ ಪದ್ಧತಿಯ ಅನುಸರಣೆ ಹೆಚ್ಚಾದ ಬಳಿಕ ತೆರೆಮರೆಗೆ ಸರಿದಿರುವ ಸಾಂಪ್ರದಾಯಿಕ ಮಿಶ್ರ ಬೆಳೆಯ ಮಹತ್ವವನ್ನು ತಿಳಿಸುವ ಪುಟ್ಟೀರಮ್ಮ ಬರೀ ತೊಗರಿಬೇಳೆ ಬೇಯಿಸಿ ತಂದರೆ ಪ್ರಯೋಜನವಿಲ್ಲ, ಅವರೆ, ತೊಗರಿ, ಹಳ್ಳು, ಅಲಸಂದೆ, ಹುರುಳಿ, ತಡಗುಣಿ ಹೀಗೆ ಎಲ್ಲವೂ ಆಹಾರದ ಭಾಗವಾಗಿರಬೇಕು ಎಂದು ಮಿಶ್ರ ಬೆಳೆಯ ಮಹತ್ವವನ್ನು ವಿವರಿಸುತ್ತಾರೆ.

ಯಾವ ಕಾಲದಲ್ಲಿ ಯಾವ ಬೀಜ ಬಿತ್ತಬೇಕು, ಎಷ್ಟು ಸಾಲು ಉತ್ತಬೇಕು ಹೀಗೆ ಬೀಜಗಳ ಬಿತ್ತನೆಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಪುಟ್ಟೀರಮ್ಮ ಸಾಲು ಹೊಡೆದಂತೆ ಕೈನಲ್ಲೇ ಬೀಜ ಬಿತ್ತುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಇವರ ಕೃಷಿ ಜ್ಞಾನದ ಬಗ್ಗೆ ‘ಪುಟ್ಟೀರಮ್ಮನ ಪುರಾಣ’ ಎಂಬ ಪುಸ್ತಕ ಹೊರತರಲಾಗಿದೆ.

ಸಮಾಜಸೇವೆಯಲ್ಲಿ ಖುಷಿ ಕಂಡುಕೊಂಡ ಪ್ರೇಮಲತಾ

ಕೊಳ್ಳೇಗಾಲ ತಾಲ್ಲೂಕಿನ ಪ್ರೇಮಲತಾ ಕೃಷ್ಣಸ್ವಾಮಿ (64) ಸಮಾಜಸೇವೆಯಲ್ಲಿ ಖುಷಿ ಕಂಡುಕೊಂಡ ಮಹಿಳೆ. 1983ರಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅವಕಾಶ ವಂಚಿತ ಮಕ್ಕಳಿಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೈಗೆಟುಕುವಂತೆ ಮಾಡಿದ್ದಾರೆ ಪ್ರೇಮಲತಾ. ಎಚ್.ಕೆ ಟ್ರಸ್ಟ್ (ಎಚ್.ಕೃಷ್ಣಸ್ವಾಮಿ) ಸ್ಥಾಪಿಸಿ ಸಂಸ್ಥಾಪಕ ಕಾರ್ಯದರ್ಶಿಯಾಗಿ ಪತಿಯ ಆದರ್ಶಗಳನ್ನು ಸಾಕಾರಗೊಳಿಸುತ್ತಿರುವ ಪ್ರೇಮಲತಾ ಬಡ ಮಕ್ಕಳಿಗೆ ಉಚಿತ ಶಿಕ್ಷಣ ತಾಂತ್ರಿಕ ತರಬೇತಿ ಕೌಶಲ ತರಬೇತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ. ಇದಲ್ಲದೆ ಆರೋಗ್ಯ ಶಿಬಿರಗಳನ್ನೂ ಆಯೋಜಿಸಿಕೊಂಡು ಬಂದಿದ್ದಾರೆ. ಕ್ರೀಡಾ ಸಾಧಕರಿಗೆ ಆರ್ಥಿಕ ನೆರವು ತರಬೇತಿ ಕ್ರೀಡೆಗಳ ಆಯೋಜನೆ ಮೂಲಕವೂ ಗಮನ ಸೆಳೆದಿದ್ದಾರೆ. ಪತಿ ಕೃಷ್ಣಸ್ವಾಮಿ ಅವರು ಸ್ಥಾಪಿಸಿದ ಸಂಘ ಸಂಸ್ಥೆಗಳು ಶಾಲಾ ಕಾಲೇಜುಗಳನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದು ವಿಶ್ವಚೇತನ ಸಮೂಹ ಸಂಸ್ಥೆ ಕಟ್ಟಿ ಗಮನ ಸೆಳೆದಿದ್ದಾರೆ. ಪ್ರೇಮಲತಾ ಕೃಷ್ಣಸ್ವಾಮಿ ಅವರ ಕಾರ್ಯಕ್ಕೆ ಪುತ್ರ ಡಿವೈಎಸ್ಪಿ ಎಚ್.ಕೆ.ಮಹಾನಂದ ಕೂಡ ಸಾಥ್ ನೀಡಿದ್ದಾರೆ. ‘ಪತಿಯ ಜನಪರ ಸೇವೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು ಅವರ ಹಾದಿಯಲ್ಲಿ ಮುನ್ನಡೆಯುತ್ತಿದ್ದೇನೆ. ಜನಸೇವೆ ಅತ್ಯಂತ ತೃಪ್ತಿ ನೀಡುವ ಕಾಯಕವಾಗಿದ್ದು ಮುಂದೆಯೂ ಮುಂದುವರಿಸಿಕೊಂಡು ಹೋಗುತ್ತೇನೆ. ಪ್ರಶಸ್ತಿ ಸಂದಿರುವುದಕ್ಕೆ ಪತಿ ಕಾರಣರಾಗಿದ್ದು ಪ್ರಶಸ್ತಿ ಬಗ್ಗೆ ಹೆಮ್ಮೆ ಇದೆ’ ಎನ್ನುತ್ತಾರೆ ಪ್ರೇಮಲತಾ ಕೃಷ್ಣಸ್ವಾಮಿ.

ರಂಗಭೂಮಿಯ ಅನನ್ಯ ಸಾಧಕ ಎಂಪಿ.ರಾಜಣ್ಣ

ಬಾಲ್ಯದಿಂದಲೇ ಸಾಹಿತ್ಯ ನಾಟಕ ಹಾಡುಗಾರಿಕೆ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಸಂತೇಮರಹಳ್ಳಿಯ ಎಂ.ಪಿ.ರಾಜಣ್ಣ ರಂಗಭೂಮಿ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ. ಪೌರಾಣಿಕ ನಾಟಕಗಳಲ್ಲಿ ಪಾತ್ರಗಳಿಗೆ ಜೀವ ತುಂಬುವ ರಾಜಣ್ಣ ಅದ್ಭುತ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. 48 ವರ್ಷಗಳಿಂದ ರಾಜ್ಯದ ವಿವಿಧ ಮೂಲೆಗಳಲ್ಲಿ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಾ ಹಾಡುಗಾರಿಕೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರಾಜಣ್ಣ 78ರ ಇಳಿ ವಯಸ್ಸಿನಲ್ಲೂ ಸುಶ್ರಾವ್ಯವಾಗಿ ಹಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಈಗಲೂ ಬಣ್ಣ ಹಚ್ಚಿ ತೆರೆಯ ಮೇಲೆ ಬಂದರೆ ಅಬ್ಬರಿಸುತ್ತಾರೆ. ಬಾಲ್ಯದಲ್ಲಿ ವರನಟ ಡಾ.ರಾಜಕುಮಾರ್ ಅವರ ಭಾವ ತಿಪ್ಪಯ್ಯ ಅವರ ಮುಂದೆ ಗೀತೆಯೊಂದನ್ನು ಹಾಡಿ ಮೆಚ್ಚುಗೆ ಪಡೆದ ರಾಜಣ್ಣ ತಮ್ಮ ಹಾಡುಗಾರಿಕೆಗೆ ಸಾಣೆ ಹಿಡಿಯುತ್ತಾ ಸುಮಧರ ಗಾಯಕರಾಗಿ ರೂಪುಗೊಂಡರು. ಹಾಗೂ ಪೌರಾಣಿಕ ನಾಟಕಕ್ಕೆ ಬಣ್ಣ ಹಚ್ಚುವ ಕಲೆಯನ್ನು ರೂಢಿಸಿಕೊಂಡು ರಂಗಭೂಮಿ ಕಲಾವಿದರಾಗಿ ಬೆಳೆದರು. ಸುಭದ್ರ ಪರಿಣಯ ದಕ್ಷಯಜ್ಞ ಬೇಡರ ಕಣ್ಣಪ್ಪ ಫ್ರಭುಲಿಂಗಲೀಲೆ ಭಕ್ತ ಪ್ರಹ್ಲಾದ ಸತ್ಯ ಹರಿಶ್ಚಂದ್ರ ರಾಜಸುಯಾಗ ರುಕ್ಮಿಣಿ ಸ್ವಯಂವರ ಜಗಜ್ಯೋತಿ ಬಸವೇಶ್ವರ ದಾನಶೂರ ಕರ್ಣ ತ್ರಿಜನ್ಮ ಮೋಕ್ಷ ಸೇರಿದಂತೆ 500ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವ ರಾಜಣ್ಣ ನಾರದ ಹಾಗೂ ಕೃಷ್ಣನ ಪಾತ್ರಧಾರಿಯಾಗಿ ಇಂದಿಗೂ ನಾಟಕ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ರಾಜಣ್ಣ ಅವರ ನಾರದನ ಪಾತ್ರ ಇಂದಿಗೂ ಜನಮನ್ನಣೆ ಉಳಿಸಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ನಾಟಕ ಕಂಪನಿಗಳಲ್ಲಿ ಅಭಿನಯಿಸುವ ರಾಜಣ್ಣ ಅವರ ಸುದೀರ್ಘ ಕಾಲದ ಕಲಾ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ಗ್ರಾಮೀಣ ಪ್ರತಿಭೆಗೆ ಸಿಕ್ಕ ಗೌರವವಾಗಿದೆ. ‘ಗಡಿ ಜಿಲ್ಲೆಯ ಎಲೆಮರೆ ಕಾಯಿಯಂತಹ ಕಲಾವಿದರ ಕಲಾ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ತುಂಬಾ ಸಂತೋಷ ತಂದಿದೆ. ಈ ಪ್ರಶಸ್ತಿ ಚಾಮರಾಜನಗರ ಜಿಲ್ಲೆಯ ಕಲೆಗಳಿಗೆ ದೊರೆತ ಪ್ರಶಸ್ತಿಯಾಗಿದೆ ಎನ್ನುತ್ತಾರೆ ಎಂ.ಪಿ.ರಾಜಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.