ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಇ–ಸ್ವತ್ತು ಪಡೆಯಲು ನಾಗರಿಕರು ಸುಸ್ತು: ಗ್ರಾಮೀಣ ಜನರ ಅಲೆದಾಟ

Published : 9 ಸೆಪ್ಟೆಂಬರ್ 2024, 6:38 IST
Last Updated : 9 ಸೆಪ್ಟೆಂಬರ್ 2024, 6:38 IST
ಫಾಲೋ ಮಾಡಿ
Comments

ಚಾಮರಾಜನಗರ: ನಗರ, ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ‘ಇ- ಸ್ವತ್ತು’ ಪಡೆಯಲು ಪರದಾಡುತ್ತಿದ್ದಾರೆ. ಮಧ್ಯವರ್ತಿಗಳ ನೆರವಿಲ್ಲದೆ ಇ -ಸ್ವತ್ತು ಮಾಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿತ್ಯ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿದ್ದಾರೆ.

ನಿವೇಶನ, ಕಟ್ಟಡ ಹಾಗೂ ಮನೆಗಳ ಮಾರಾಟ ಹಾಗೂ ಪರಭಾರೆ ಮಾಡಲು, ಆಸ್ತಿ ವಿಂಗಡಣೆ ಸೇರಿದಂತೆ ಆಸ್ತಿ ಅಡಮಾನವಿಟ್ಟು ಬ್ಯಾಂಕ್‌ಗಳಿಂದ ಸಾಲ ಪಡೆಯಲು ‘ಇ–ಸ್ವತ್ತು’ ಅತ್ಯಗತ್ಯವಾಗಿರುವುದರಿಂದ ಸಾರ್ವಜನಿಕರು ಇ–ಸ್ವತ್ತು ಕೋರಿ ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ನಿತ್ಯವೂ ಸಾವಿರಾರು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.

ಹೀಗೆ ಸಲ್ಲಿಕೆಯಾದ ಆರ್ಜಿಗಳಿಗೆ ಪೂರಕ ದಾಖಲೆಗಳ ಕೊರತೆಯ ನೆಪವೊಡ್ಡಿ ಇ– ಸ್ವತ್ತು ನೀಡಲು ಅಧಿಕಾರಿಗಳು ನಿರಾಕರಿಸಲಾಗುತ್ತಿದ್ದು, ಉಳ್ಳವರಿಗೆ ಮಾತ್ರ ಇ– ಸ್ವತ್ತು ಲಭ್ಯವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಶೇ 60ಕ್ಕೂ ಹೆಚ್ಚು ಆಸ್ತಿಗೆ ಇಲ್ಲ ಇ–ಸ್ವತ್ತು !

ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ಅವುಗಳ ವ್ಯಾಪ್ತಿಯಲ್ಲಿ 24,897 ಆಸ್ತಿಗಳನ್ನು ಗುರುತಿಸಲಾಗಿದೆ. ಈ ಪೈಕಿ ಇ –ಸ್ವತ್ತು ಆಗಿರುವ ಆಸ್ತಿಗಳ ಸಂಖ್ಯೆ ಕೇವಲ 11,680 ಮಾತ್ರ. ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ಅಕ್ರಮವಾಗಿ ನಿರ್ಮಿಸಿರುವ ಖಾಸಗಿ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡಿರುವವರು, ವಸತಿ ಉದ್ದೇಶಕ್ಕೆ ಕೃಷಿಭೂಮಿ ಪರಿವರ್ತನೆ ಮಾಡಿಸಿಕೊಳ್ಳದೆ ಮನೆ ಕಟ್ಟಿಕೊಂಡಿರುವವರು, ನಿವೇಶನ ಮಾಡಿಕೊಂಡಿರುವವರು ಇ ಸ್ವತ್ತು ಮಾಡಿಸಿಕೊಳ್ಳಲಾಗದೆ ಪರದಾಡುತ್ತಿದ್ದಾರೆ.

ಇ– ಸ್ವತ್ತು ಹಿನ್ನೆಡೆಗೆ ಕಾರಣ:

‘ನಗರಸಭೆ ವ್ಯಾಪ್ತಿಯಲ್ಲಿರುವ 1, 2, 3, 4, 10, 17, 18, 23 ಹಾಗೂ 24ನೇ ವಾರ್ಡ್‌ಗಳಲ್ಲಿರುವ ಬಹುತೇಕ ಆಸ್ತಿಗಳ ಮಾಲೀಕತ್ವ ತಾತ, ಮುತ್ತಾತ ಹಾಗೂ ಪೂರ್ವಜರ ಹೆಸರಿನಲ್ಲಿವೆ. ಆಸ್ತಿಯ ಮೂಲ ದಾಖಲೆಗಳೂ ಇಲ್ಲ. ದಾಖಲೆಗಳಿಲ್ಲದ ಆಸ್ತಿಗಳಿಗೆ ಇ–ಸ್ವತ್ತು ನೀಡಲು ಬರುವುದಿಲ್ಲ. ಈ ಸಮಸ್ಯೆ  ಸರ್ಕಾರದ ಮಟ್ಟದಲ್ಲಿಯೇ ಬಗೆಹರಿಯಬೇಕು’ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಗ್ರಾಮೀಣ ಜನರ ಅಲೆದಾಟ:

ಯಳಂದೂರು: ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ವಿತರಿಸಲಾಗುತ್ತದೆ. ಕ್ರಮಬದ್ಧ ಆಸ್ತಿಗಳಿಗೆ ಇ-ಸ್ವತ್ತು ದಿಶಾಂಕ್ ಆ್ಯಪ್ ಮೂಲಕ ನಮೂನೆ-9 ಮತ್ತು 11 ಎ ವಿತರಿಸಲಾಗುತ್ತದೆ. ಮಾಲೀಕತ್ವದ ಹಕ್ಕು ಪತ್ರ ಪಡೆಯಲು ಮೂಲ ದಾಖಲಾತಿ ಅತ್ಯಗತ್ಯ. ಪಿಡಿಒ ಮೂಲಕ ಸಲ್ಲಿಕೆಯಾಗುವ ಅರ್ಜಿ 30 ದಿನಗಳ ಒಳಗೆ ಆಸ್ತಿಗೆ ಸಂಬಂಧಿಸಿದ ಮಾಹಿತಿ ತಂತ್ರಾಂಶದಲ್ಲಿ ಅಪ್ಲೋಡ್ ಆಗುತ್ತದೆ. ನಂತರ ಡಿಜಿಟಲ್ ಸಹಿಯ ಮೂಲಕ ನಮೂನೆ 9 ಮತ್ತು 11 ‘ಎ’ ಗಳನ್ನು ಪಿಡಿಒಗಳು ವಿತರಿಸುತ್ತಾರೆ.

ಕ್ರಮಬದ್ಧವಲ್ಲದ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ನಮೂನೆ 11 ಬಿ ಪಡೆಯಲು ಮಾಲೀಕರು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು. ನಂತರ ಪಿಡಿಒಗಳು ಲೋಪಗಳನ್ನು ಗುರುತಿಸಿ, ಸಂಬಂಧಪಟ್ಟ ಇಲಾಖೆಗೆ ತಿಳಿಸುತ್ತಾರೆ. ತಿದ್ದುಪಡಿಯ ನಂತರ ಮಾಲೀಕತ್ವ ಖಾತ್ರಿ ಪಡಿಸಿಕೊಂಡು 11 ‘ಬಿ’ ವಿತರಿಸಲಾಗುತ್ತದೆ ಎಂದು ಕೆಸ್ತೂರು ಗ್ರಾಮ ಪಂಚಾಯಿತಿ ಪಿಡಿಒ ಮಹದೇವಸ್ವಾಮಿ ಮಾಹಿತಿ ನೀಡಿದರು.

ದಲ್ಲಾಳಿಗಳ ಕಿರಿಕಿರಿ:

ಕೊಳ್ಳೇಗಾಲ: ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರು ಇ– ಸ್ವತ್ತು ಪಡೆಯಲು ನಿತ್ಯವೂ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಇ– ಸ್ವತ್ತು ಸಿಗದೆ ಮನೆ ಕಟ್ಟಿಕೊಳ್ಳಲು, ಮನೆ, ನಿವೇಶನ ಮಾರಾಟ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಣ ಕೊಟ್ಟರೆ ಇ– ಸ್ವತ್ತು:

ನಗರಸಭೆಯಲ್ಲಿ ದಾಖಲೆ ಕೊಟ್ಟರೂ ಇ–ಸ್ವತ್ತು ಬೇಗ ಸಿಗುವುದಿಲ್ಲ. ಸಾಮಾನ್ಯ ಜನರು ಇ– ಸ್ವತ್ತು ಪಡೆಯುವುದು ಬಹಳ ಕಷ್ಟ. ಇ– ಸ್ವತ್ತಿಗೆ ಮೂಲ ದಾಖಲೆ ಕೇಳುತ್ತಾರೆ. ಪೂರ್ವಜರ ಹೆಸರಿನಲ್ಲಿ ಆಸ್ತಿಗಳಿದ್ದು ದಾಖಲಾತಿ ಸಿಗುತ್ತಿಲ್ಲ. ನೂರಾರು ವರ್ಷಗಳಿಂದ ಆಸ್ತಿ ಅನುಭೋಗಿಸುತ್ತಿದ್ದರೂ, ಆಸ್ತಿಗೆ ಕಂದಾಯ ಕಟ್ಟುತ್ತಿದ್ದರೂ ಮೂಲ ದಾಖಲಾತಿ ಕೇಳುವುದು ಸರಿಯಲ್ಲ

‘ನಗರಸಭೆಯಲ್ಲಿ ಹಣ ಕೊಟ್ಟರೆ ದಾಖಲೆಗಳು ಸಿಗುತ್ತವೆ. ಬಡವರಿಗೊಂದು ಶ್ರೀಮಂತರಿಗೊಂದು ನ್ಯಾಯ ಇದೆ. ನಗರಸಭೆ ಅಧ್ಯಕ್ಷರು ಹಾಗೂ ಶಾಸಕರು ಗಮನಹರಿಸಿ ಶೀಘ್ರ ಇ–ಸ್ವತ್ತು ಸಿಗುವಂತೆ, ಆಸ್ತಿ ದಾಖಲೆಗಳು ಲಭ್ಯವಾಗುವಂತೆ ಮಾಡಬೇಕು’ ಎನ್ನುತ್ತಾರೆ ಹಿರಿಯ ಮುಖಂಡರಾದ ಪ್ರಭು.

ಪೂರಕ ಮಾಹಿತಿ: ಅವಿನ್‌ ಪ್ರಕಾಶ್‌ ವಿ, ಮಲ್ಲೇಶ ಎಂ, ಮಹದೇವ್ ಹೆಗ್ಗವಾಡಿಪುರ, ನಾ.ಮಂಜುನಾಥಸ್ವಾಮಿ, ಬಿ.ಬಸವರಾಜು

ಚಾಮರಾಜನಗರ ನಗರಸಭಾ ಕಚೇರಿ
ಚಾಮರಾಜನಗರ ನಗರಸಭಾ ಕಚೇರಿ

ಅಧಿಕೃತ ಆಸ್ತಿಗೆ ಇ -ಸ್ವತ್ತು ಪಡೆಯಲು ದಾಖಲಾತಿಗಳು

* ಅನುಮೋದನೆಗೊಂಡ ಲೇಔಟ್‌ಗಳಲ್ಲಿರುವ ಕಟ್ಟಣ ಮನೆ ನಿವೇಶನಗಳಿಗೆ ಇ- ಸ್ವತ್ತು ಪಡೆಯಬೇಕಾದರೆ ಕೃಷಿಯೇತರ ಭೂಮಿಯಾಗಿ ಪರಿವರ್ತನೆಗೊಂಡ ಆದೇಶದ ಪ್ರತಿ ಬಡಾವಣೆ ನಿರ್ಮಾಣಕ್ಕೆ ಅನುಮೋದನೆಗೊಂಡ ಆದೇಶದ ಪ್ರತಿ ಬಡಾವಣೆಯ ನಕ್ಷೆ ಹಾಗೂ ನಿವೇಶನಗಳನ್ನು ಬಿಡುಗಡೆ ಮಾಡಿದ ಆದೇಶ ಪ್ರತಿಯನ್ನು ಸಲ್ಲಿಸಬೇಕು.

*ಸರ್ಕಾರ ಸ್ಥಳೀಯ ಸಂಸ್ಥೆಗಳಿಂದ ಅನುಮೋದಿತ ಆಸ್ತಿಗಳಿಗೆ ಇ-ಸ್ವತ್ತು ಪಡೆಯಲು ಹಕ್ಕುಪತ್ರ ಸಲ್ಲಿಸಬೇಕು. ಗ್ರಾಮ ಠಾಣಾ ವ್ಯಾಪ್ತಿಯ ಆಸ್ತಿಗಳಿಗೆ ಇ- ಸ್ವತ್ತು ಪಡೆಯಲು ತಹಶೀಲ್ದಾರ್ ಸರ್ವೆಯರ್ ನೀಡಿರುವ ಆದೇಶದ ಪ್ರತಿ ಗಣಕೀಕೃತ ಡಿಜಿಟಲ್ ಸಹಿಯುಳ್ಳ ನಮೂನೆ 9ರ ಪ್ರತಿ ಸಲ್ಲಿಕೆ ಕಡ್ಡಾಯ.

*ಕೈಗಾರಿಕಾ ಉದ್ದೇಶಕ್ಕೆ ಪರಿವರ್ತಿಸಿದ ಜಮೀನಿಗೆ ಇ–ಸ್ವತ್ತು ಪಡೆಯಲು ಕೃಷಿಯೇತರ ಭೂಮಿಯಾಗ ಪರಿವರ್ತನೆಯಾದ ಆದೇಶದ ಪ್ರತಿ ಲೇಔಟ್ ಅನುಮೋದನೆಗೊಂಡ ಆದೇಶದ ಪ್ರತಿ ನಿವೇಶನಗಳನ್ನು ಬಿಡುಗಡೆ ಮಾಡಿದ ಆದೇಶದ ಪ್ರತಿಕೆ ಹಂಚಿಕೆಯಾದ ಆದೇಶದ ಪ್ರತಿ ಸಲ್ಲಿಸಬೇಕು. ಮೇಲಿನ ಯಾವುದೇ ದಾಖಲಾತಿ ಇಲ್ಲದಿರುವ ನಿವೇಶನಗಳನ್ನು ಅಧಿಕೃತವಲ್ಲದ ಆಸ್ತಿ ಎಂದೇ ಪರಿಗಣಿಸಲಾಗುತ್ತದೆ.

*ಈಗಾಗಲೇ ಈ ಸ್ವತ್ತು ಇದ್ದರೆ ಮರು ಪಡೆಯಲು ಅರ್ಜಿ ಸಲ್ಲಿಸಿದರೆ 3 ದಿನಗಳಲ್ಲಿ ಕೊಡಬೇಕು ಹೊಸದಾಗಿ ಇ– ಸ್ವತ್ತು ಕೋರಿ ಅರ್ಜಿ ಸಲ್ಲಿಸಿದರೆ 7 ದಿನಗಳೊಳಗೆ ವಿಲೇವಾರಿ ಮಾಡಬೇಕು.

ಇ–ಸ್ವತ್ತಿಗೆ ಅಗತ್ಯ ದಾಖಲೆಗಳು

* ಆಧಾರ್ ಕಾರ್ಡ್‌ ಅಥವಾ ಮತದಾರರ ಗುರುತಿನ ಪತ್ರ

* ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

* ಖಾಲಿ ನಿವೇಶನವಾದರೆ ಮಾಲೀಕರು ನಿವೇಶನದೊಳಗೆ ನಿಂತಿರುವ ಫೋಟೊ (ಜಿಪಿಎಸ್‌ ವಿವರ ಇರಬೇಕು)

* ಕಟ್ಟಡದ ಫೋಟೊ (ಜಿಪಿಎಸ್‌ ವಿವರ ಇರಬೇಕು)

*ಬಡಾವಣೆ ನಕ್ಷೆ

* ಕಂದಾಯ ಪಾವತಿಸಿರುವ ರಶೀದಿ

ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಚಾಮರಾಜ ನಗರ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಗಂಭೀರವಾಗಿದೆ. ಕಂದಾಯ ಅಧಿಕಾರಿಗಳು ಕರ ವಸೂಲಿಗಾರರು ಕೇಸ್ ವರ್ಕರ್‌ಗಳ ಕೊರತೆ ಹೆಚ್ಚಾಗಿದೆ. ಒಬ್ಬರಿಗೆ ಎರಡರಿಂದ ಮೂರು ಹುದ್ದೆಗಳ ಜವಾಬ್ದಾರಿ ವಹಿಸಿರುವುದರಿಂದ ಹಾಗೂ ಸರ್ವರ್ ಸಮಸ್ಯೆ ಸೇರಿದಂತೆ ತಾಂತ್ರಿಕ ಕಾರಣಗಳಿಂದ ಸಾರ್ವಜನಿಕರ ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗಿರಬಹುದು. ಇ– ಸ್ವತ್ತಿಗೆ ಆನ್‌ಲೈನ್ ಅರ್ಜಿ ಸ್ವೀಕಾರ ಮಾಡುವುದರಿಂದ ಸಮಯಕ್ಕೆ ಸರಿಯಾಗಿ ವಿಲೇವಾರಿಯಾಗುತ್ತಿದೆ. ಇ– ಸ್ವತ್ತು ಪಡೆಯಲು ಪೂರಕ ದಾಖಲೆ ಸಲ್ಲಿಸಿದವರ ಅರ್ಜಿಗಳು ಮಾತ್ರ ವಿಲೇವಾರಿಗೆ ಬಾಕಿ ಇವೆ. ಅವರಿಗೆ ಪೂರಕ ದಾಖಲೆ ನೀಡಲು ಹಿಂಬರಹ ನೀಡಿದರೂ ಸ್ವೀಕರಿಸದೆ ಹಲವು ತಿಂಗಳು ಬಿಟ್ಟು ಕಚೇರಿಗೆ ಬಂದು ವರ್ಷವಾದರೂ ಅರ್ಜಿ ವಿಲೇವಾರಿ ಮಾಡಿಲ್ಲ ಎಂದು ಆರೋಪಿಸುತ್ತಾರೆ.

–ಎಸ್‌.ಎ.ರಾಮದಾಸ್‌ ಚಾಮರಾಜನಗರ ನಗರಸಭೆ ಪೌರಾಯುಕ್ತ

ದಾಖಲೆ ಇದ್ದರೆ ಮಾತ್ರ ಇ–ಸ್ವತ್ತು ಇ –ಸ್ವತ್ತಿಗೆ ಅರ್ಜಿ ಸಲ್ಲಿಸುವಾಗ ಸರಿಯಾದ ದಾಖಲೆಗಳು ಇದ್ದರೆ ಮಾತ್ರ ಪರಿಶೀಲಿಸಿ ಇ– ಸ್ವತ್ತು ನೀಡುತ್ತಿದ್ದೇವೆ. ದಾಖಲಾತಿಗಳು ಇಲ್ಲದಿದ್ದರೆ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

–ರಮೇಶ್ ಪೌರಾಯುಕ್ತ 

ಸಮಸ್ಯೆ ನಿವಾರಣೆ ಕಳೆದ ವಾರದಿಂದ ಇ-ಸ್ವತ್ತು ಸಮಸ್ಯೆ ಕಂಡುಬಂದಿಲ್ಲ. ಸುಗಮವಾಗಿ ಇ– ಸ್ವತ್ತು ನೀಡುವ ಕಾರ್ಯ ನಡೆದಿದ್ದು ಶೇ 30ರಷ್ಟು ವೇಗ ಪಡೆದಿದೆ. 12 ಗ್ರಾಮ ಪಂಚಾಯಿತಿಗಳಲ್ಲೂ ಇ-ಸ್ವತ್ತು ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ಸರ್ವರ್ ಸಮಸ್ಯೆ ನಿವಾರಿಸಲಾಗಿದೆ

–ಆರ್.ಉಮೇಶ್ ಯಳಂದೂರು ತಾಲ್ಲೂಕು ಪಂಚಾಯಿತಿ ಇಒ

‘ಪಂಚಾಯಿತಿಗಳಲ್ಲಿ ಇ ಸ್ವತ್ತು ಲಭ್ಯ’ ಗುಂಡ್ಲುಪೇಟೆ ತಾಲ್ಲೂಕಿನ ಗ್ರಾಮೀಣ ಭಾಗದ ಪಂಚಾಯಿತಿಗಳಲ್ಲಿ ಇ ಸ್ವತ್ತು ಸಿಗುತ್ತದೆ. ಕಂದಾಯ ಕಟ್ಟಿದ ದಾಖಲೆಗಳು ಸರಿಯಾಗಿದ್ದರೆ ಇ ಸ್ವತ್ತು ಬೇಗ ಸಿಗುತ್ತದೆ. ದಾಖಲಾತಿಗಳಿದ್ದರೂ ಇ ಸ್ವತ್ತು ಸಿಗುವುದಿಲ್ಲ ಎಂಬ ಆರೋಪ ಸತ್ಯವಲ್ಲ.

–ಶಾಂತಮಲ್ಲಪ್ಪ ಹಂಗಳ ಪಿಡಿಒ

ಸರ್ವರ್ ಸಮಸ್ಯೆಗೆ ಜನರು ಹೈರಾಣ
ಇ-ಸ್ವತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಆಸ್ತಿಗಳ ಮಾಲೀಕತ್ವದ ಹಕ್ಕು ಖಾತ್ರಿಪಡಿಸುತ್ತದೆ. ಯಾವುದೇ ಸಹಿ ಇಲ್ಲದ ಅನನ್ಯ ಡಿಜಿಟಲ್ ಪ್ರಮಾಣ ಪತ್ರ ಇದಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಆಲ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಯಾದಾಗ ಸರ್ವರ್ ಸಮಸ್ಯೆ ಗಂಭೀರವಾಗಿ ಕಾಡುತ್ತದೆ. ಕೆಲವೊಮ್ಮೆ ಇ-ಸ್ವತ್ತು ಪ್ರಕ್ರಿಯೆ ಹಂತದಲ್ಲಿ ನೆಟ್‌ವರ್ಕ್ ಕಡಿತವಾದರೆ ಮತ್ತೆ ಮೊದಲಿನಿಂದಲೇ ಅರ್ಜಿಗೆ ದತ್ತಾಂಶ ನಮೂದಿಸಬೇಕು. ಇದು ಹೆಚ್ಚಿನ ಸಮಯವನ್ನು ಬೇಡುವುದರಿಂದ ಗ್ರಾಮಸ್ಥರು ಹೈರಾಣಾಗುತ್ತಿದ್ದಾರೆ.
ಇ–ಸ್ವತ್ತು ಕಾರ್ಯ ನಿರ್ವಹಣೆ ಹೇಗೆ
ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಇ–ಸ್ವತ್ತು ಪಡೆಯಲು ಸಕಾಲದ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿದಾಗ ಅರ್ಜಿಯ ವಿವರ ಆಸ್ತಿ ತೆರಿಗೆ ಮಾಹಿತಿ ಆಸ್ತಿಗಳ ಮಾಹಿತಿ ದಾಖಲಿಸಿ ಪೌರಾಯುಕ್ತರ ಅಥವಾ ಮುಖ್ಯಾಧಿಕಾರಿಗಳ ಅನುಮೋದನೆ ಪಡೆದು ಡಿಜಿಟಲ್ ಸಹಿಯುಳ್ಳ ನಮೂನೆ–3 ಸೃಜಿಸಲಾಗುತ್ತದೆ. ನಂತರ ಕರ ವಸೂಲಿಗಾರರು ಆಸ್ತಿ ಮಾಹಿತಿಯುಳ್ಳ ಚೆಕ್‌ಲಿಸ್ಟ್ ಸೃಜಿಸಿ ಕಂದಾಯ ನಿರೀಕ್ಷಕರಿಗೆ ಕಳಿಸುತ್ತಾರೆ. ಕಂದಾಯ ನಿರೀಕ್ಷಕರು ಆಸ್ತಿಗಳ ಮಹಜರು ಮಾಡಿ ಮಾಹಿತಿ ದಾಖಲಿಸುತ್ತಾರೆ. ಕರ ವಸೂಲಿಗಾರರು ನಿರ್ವಹಿಸಿದ ಆಸ್ತಿಗಳ ಮಾಹಿತಿ ಪರಿಶೀಲಿಸಿ ಕಂದಾಯ ಅಧಿಕಾರಿಗಳಿಗೆ ಕಡತವನ್ನು ರವಾನಿಸುತ್ತಾರೆ. ಕಂದಾಯ ನಿರೀಕ್ಷಕರ ವರದಿಯನ್ನು ಪರಿಶೀಲಿಸಿ ಸರಿಯಾಗಿದ್ದರೆ ಆಯುಕ್ತರು ಪೌರಾಯುಕ್ತರು ಅಥವಾ ಮುಖ್ಯಾಧಿಕಾರಿಗೆ ಕಳುಹಿಸುತ್ತಾರೆ. ಈ ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ಎಂಜಿನಿಯರ್‌ಗಳು ಹೊಸದಾಗಿ ಸೇರ್ಪಡೆಗೊಂಡ ಆಸ್ತಿಗಳಿಗೆ ಇ–ಸ್ವತ್ತು ಆಸ್ತಿ ಗುರುತಿನ ಸಂಖ್ಯೆಯನ್ನು ನೀಡುತ್ತಾರೆ. ಅಂತಿಮವಾಗಿ ಪೌರಾಯುಕ್ತರು ಆಸ್ತಿಗಳಿಗೆ ಡಿಜಿಟಲ್ ಸಹಿಯೊಂದಿಗೆ ಅನುಮೋದನೆ ನೀಡುತ್ತಾರೆ.
‘ತಿಂಗಳುಗಳು ಕಾದರೂ ಸಿಗದ ಇ–ಸ್ವತ್ತು’
‘ಗುಂಡ್ಲುಪೇಟೆ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಎಂಬ ಕಾರಣಕ್ಕೆ ಕೆಎಸ್ಎನ್ ಮತ್ತು ಅಶ್ವಿನಿ ಬಡಾವಣೆಗಳ ನಿವೇಶನ ಕಟ್ಟಡ ಮನೆಗಳಿಗೆ ಇ–ಸ್ವತ್ತು ನೀಡಲಾಗತ್ತಿಲ್ಲ. ಉಳಿದ ಬಡಾವಣೆಗಳಲ್ಲೂ ಜನರು ಇ–ಸ್ವತ್ತಿಗೆ ಅರ್ಜಿ ಹಾಕಿ ತಿಂಗಳಾದರು ಸಿಗುವುದಿಲ್ಲ. ಅಧಿಕಾರಿಗಳು ಹಣಕ್ಕೆ ಬೇಡಿಕೆ ಇರಿಸುತ್ತಾರೆ. ಕೊಡದಿದ್ದರೆ ತಿಂಗಳುಗಳ ಅಲೆಯ ಬೇಕಾದ ಪರಿಸ್ಥಿತಿ ಇದೆ’ ಎಂದು ಪಟ್ಟಣದ ಮಂಜು ದೂರುತ್ತಾರೆ.
ಸಾರ್ವಜನಿಕರ ಪರದಾಟ
‘ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಾಮಾನ್ಯರು ನಿವೇಶನಗಳ ಇ-ಸ್ವತ್ತು ಮಾಡಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ನಿವೇಶನದ ಇ-ಸ್ವತ್ತು ಮಾಡಿಸಿಕೊಳ್ಳಲು ದಾಖಲಾತಿ ನೀಡಿ ವರ್ಷಗಳಾದರೂ ಕೆಲಸ ಆಗಿಲ್ಲ. ದಾಖಲಾತಿ ಸಮರ್ಪಕವಾಗಿದ್ದರೂ ಇ-ಸ್ವತ್ತು ಕೊಡಲು ವಿಳಂಬ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದ್ದು ಕಡಿವಾಣ ಹಾಕಬೇಕು. 13ನೇ ವಾರ್ಡಿನಲ್ಲಿರುವ ನಿವೇಶನಕ್ಕೆ ಇ-ಸ್ವತ್ತು ನಕಲು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿ 9 ತಿಂಗಳಾದರೂ ನೀಡಿಲ್ಲ’ ಎನ್ನುತ್ತಾರೆ ನಾಗರಿಕ ಸೂರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT