ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾ‍ಪುರ: ಹಳೆ ವಾಹನಗಳ ಸೈರನ್ ಲೈಟ್‌ ಮರುಬಳಕೆ

Published : 30 ಸೆಪ್ಟೆಂಬರ್ 2024, 7:04 IST
Last Updated : 30 ಸೆಪ್ಟೆಂಬರ್ 2024, 7:04 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಹಲವು ವರ್ಷಗಳಿಂದ ಬಳಕೆಯಾಗಿ ಮೂಲೆ ಸೇರಿರುವ ಪೊಲೀಸ್ ವಾಹನಗಳಲ್ಲಿನ ಸೈರನ್ ಲೈಟ್‌ಗಳು ಇನ್ನು ಮುಂದೆ ಅಪಘಾತ ವಲಯದಲ್ಲಿ ಮಿನುಗುತ್ತವೆ. 

ಹೌದು...ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಹೀಗೊಂದು ವಿಶಿಷ್ಟ ಯೋಜನೆಯನ್ನು ರೂಪಿಸಿದ್ದಾರೆ. ಗುಜರಿಗೆ ಸೇರಬಹುದಾದ ವಸ್ತುಗಳನ್ನು ಮರುಬಳಕೆ ಮಾಡಲು ಮುಂದಾಗಿದ್ದಾರೆ.

ವಿಶೇಷವಾಗಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯಲು ಮತ್ತು ಸಂಚಾರ ವ್ಯವಸ್ಥೆಗಳನ್ನು ಸುವ್ಯವಸ್ಥಿತಗೊಳಿಸಲು ಈ ಮರುಬಳಕೆಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

‍ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಿಂದ ಕೆಎಸ್‌ಆರ್‌ಟಿಸಿ ಡಿಪೋ ಕಡೆಗೆ ತಿರುವು ಪಡೆಯುವ ಸ್ಥಳದಲ್ಲಿ ಈ ನಿರುಪಯುಕ್ತ ಸೈರನ್‌ಲೈಟ್ ಅನ್ನು ಉಪಯೋಗಿಸಿ ಸಿಗ್ನಲ್ ರೂಪಿಸಿದ್ದಾರೆ. ಜಿಲ್ಲಾಧಿಕಾರಿ ಮನೆ ರಸ್ತೆ ಸಮೀಪದ ಹಳ್ಳಿಮನೆ ಹೋಟೆಲ್ ಮುಂಭಾಗದ ತಿರುವಿನಲ್ಲಿ ಹಳೆ ಸೈರನ್‌ ಲೈಟ್‌ಗಳು ಮಿನುಗುತ್ತಿವೆ. 

ಮುಂದಿನ ದಿನಗಳಲ್ಲಿ ಬಿಬಿ ರಸ್ತೆಯಲ್ಲಿ ವಾಪಸಂದ್ರದಿಂದ ಮಂಚನಬಲೆ ಕಡೆ ಸಾಗುವ ತಿರುವಿನಲ್ಲಿ, ರಾಷ್ಟ್ರೀಯ ಹೆದ್ದಾರಿಯ ಸೇಠ್‌ದಿನ್ನೆ ಬಳಿ ಹೀಗೆ ಜಿಲ್ಲೆಯ ಎಲ್ಲೆಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆಯೊ ಅಂತಹ ಕಡೆಗಳಲ್ಲಿ ಈ ಸಿಗ್ನಲ್‌ಗಳನ್ನು ರೂಪಿಸುವ ಚಿಂತನೆ ಇಲಾಖೆಯದ್ದು.

ಗಮನ ಸೆಳೆಯುತ್ತಿರುವ ಪ್ರಾಯೋಗಿಕ ಮಾದರಿ: ನಗರದ ಹಳ್ಳಿಮನೆ ಹೋಟೆಲ್ ಮುಂಭಾಗದ ತಿರುವಿನಲ್ಲಿ ಅಳವಡಿಸಿರುವ ಸಿಗ್ನಲ್ ಫಲಕ ಗಮನ ಸೆಳೆಯುತ್ತಿದೆ. ದೂರದಿಂದ ವೇಗವಾಗಿ ಬರುತ್ತಿರುವವರಿಗೆ ಇಲ್ಲಿ ಸಿಗ್ನಲ್ ಇದೆ ಎನ್ನುವ ಎಚ್ಚರಿಕೆಯನ್ನು ನೀಡುತ್ತಿದೆ. 

ಪೊಲೀಸ್ ಇಲಾಖೆಯ ಹಳೆ ವಾಹನಗಳಲ್ಲಿದ್ದ ಸೈರನ್ ಲೈಟ್ ಅನ್ನು ಇಲ್ಲಿ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಹೊಸ ಸೋಲಾರ್ ಪ್ಯಾನಲ್ ಜೊತೆ ಈ ಲೈಟ್ ಅಳವಡಿಸಿ ಸಿಗ್ನಲ್ ಲೈಟ್ ರೂಪಿಸಲಾಗಿದೆ. ಬಾಗೇಪಲ್ಲಿ ಕಡೆಯಿಂದ ಬರುವ ವಾಹನಗಳು ಮತ್ತು ಕೆಎಸ್‌ಆರ್‌ಟಿಸಿ ಡಿಪೊ ಕಡೆಯಿಂದ ವೇಗವಾಗಿ ಬರುವ ವಾಹನಗಳಿಗೆ ಈ ಸಿಗ್ನಲ್ ಎಚ್ಚರಿಕೆಯಂತೆ ಇದೆ.

ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ: ಜೊತೆಗೆ ಅಪಘಾತ ತಡೆ ಮತ್ತು ಸಂಚಾರ ನಿಯಮಗಳ ಉಲ್ಲಂಘನೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲಾ ‍ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಮತ್ತಷ್ಟು ಸಿಸಿ ಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲು ಮುಂದಾಗಿದೆ. 

ಚಿಕ್ಕಬಳ್ಳಾಪುರದ ಬಿಬಿ ರಸ್ತೆಯ ಸಿಗ್ನಲ್‌ನಲ್ಲಿ ಇತ್ತೀಚೆಗೆ ಒಂದು ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಮೂಲಕ ಯಾವ ಪ್ರಮಾಣದಲ್ಲಿ ಸಂಚಾರ ನಿಯಮಗಳು ಉಲ್ಲಂಘಟನೆ ಆಗುತ್ತಿವೆ. ಹೆಲ್ಮೆಟ್ ಧರಿಸುವವರ ಪ್ರಮಾಣವೇನು ಇತ್ಯಾದಿ ಸಂಚಾರ ನಿಯಮಗಳಿಗೆ ಸಂಬಂಧಿಸಿದ ವಿಚಾರಗಳನ್ನು ಅವಲೋಕಿಸಲು ಇಲಾಖೆ ಮುಂದಾಗಿದೆ. 

ಹೀಗೆ ಅಪಘಾತ ತಡೆ, ಸಂಚಾರ ನಿಯಮಗಳ ಉಲ್ಲಂಘನೆ ತಡೆ ಮತ್ತು ಅದರ ವಿರುದ್ಧ ಪರಿಣಾಮಕಾರಿಯಾದ ಕ್ರಮಗಳನ್ನು ವಹಿಸಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ.

ಚಿಕ್ಕಬಳ್ಳಾಪುರದ ಬಜಾರ್ ರಸ್ತೆಯ ಸಿಗ್ನಲ್‌ನಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾ
ಚಿಕ್ಕಬಳ್ಳಾಪುರದ ಬಜಾರ್ ರಸ್ತೆಯ ಸಿಗ್ನಲ್‌ನಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾ

ಪೊಲೀಸ್ ವಾಹನವಿದೆ ಎನ್ನುವ ಭಯ

ಜಿಲ್ಲೆಯ ಯಾವ ಸ್ಥಳಗಳಲ್ಲಿ ಹೆಚ್ಚು ಅಪಘಾತಗಳು ನಡೆಯುತ್ತಿವೆ ಎನ್ನುವುದನ್ನು ಗುರುತಿಸಲಾಗಿದೆ. ಇಂತಹ ಕಡೆಗಳಲ್ಲಿ ಈ ಲೈಟ್‌ಗಳನ್ನು ಅಳವಡಿಸಲಾಗುವುದು. ದೂರದಿಂದ ಬರುವವರು ಇದನ್ನು ನೋಡಿದರೆ ಪೊಲೀಸರ ವಾಹನವಿದೆ ಎನ್ನುವ ಭಯ ಮೂಡುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ‘ಪ್ರಜಾವಾಣಿ’ಗೆ ತಿಳಿಸಿದರು. ಈಗ ನಗರದಲ್ಲಿ ಪ್ರಾಯೋಗಿಕ ಎನ್ನುವಂತೆ ಅಳವಡಿಸಿದ್ದೇವೆ. ಮುಂದೆ ಬಹಳಷ್ಟು ಕಡೆಗಳಲ್ಲಿ ಅಳವಡಿಸಲಾಗುವುದು. ವಿಶೇಷ ಅಂದರೆ ನಮ್ಮಲ್ಲಿ ಗುಜರಿ ಸೇರಬಹುದಾದ ಮತ್ತು ಹಳೆ ವಾಹನಗಳಲ್ಲಿನ ವಸ್ತುಗಳನ್ನು ಇದಕ್ಕೆ ಬಳಸಿಕೊಳ್ಳಲಾಗಿದೆ. ಮುಂದೆಯೂ ಈ ಮರುಬಳಕೆ ನಡೆಯಲಿದೆ ಎಂದರು.

ಚಿಕ್ಕಬಳ್ಳಾಪುರ ಬಜಾರ್ ರಸ್ತೆಯ ಸಿಗ್ನಲ್‌ನಲ್ಲಿ ಪ್ರಾಯೋಗಿಕವಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅಳವಡಿಸಲಾಗುವುದು. ಎಷ್ಟು ಸಿಸಿ ಟಿವಿ ಕ್ಯಾಮೆರಾ ಅಗತ್ಯ ವೆಚ್ಚ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು. 

ಹೆಲ್ಮೆಟ್ ಕಡ್ಡಾಯದ ಫಲಕ

ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಬಳಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೆಲ್ಮೆಟ್ ಕಡ್ಡಾಯದ ಫ್ಲೆಕ್ಸ್‌ಗಳನ್ನು ನಗರದ ವಿವಿಧ ಕಡೆಗಳಲ್ಲಿ ಅಳವಡಿಸಿದೆ. ಹಿಂದಿನಿಂದಲೂ ಚಿಕ್ಕಬಳ್ಳಾಪುರದಲ್ಲಿ ಹೆಲ್ಮೆಟ್ ಕಡ್ಡಾಯವಾಗಿರಲಿಲ್ಲ. ಈಗ ಹೆಲ್ಮೆಡ್ ಕಡ್ಡಾಯ ಎನ್ನುವ ಫ್ಲೆಕ್ಸ್‌ಗಳನ್ನು ಅಳವಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT