ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿಬಿದನೂರು | ಹುಚ್ಚು ನಾಯಿ ಕಡಿತ: 14 ಮಂದಿಗೆ ಗಾಯ

Published : 8 ಅಕ್ಟೋಬರ್ 2024, 14:06 IST
Last Updated : 8 ಅಕ್ಟೋಬರ್ 2024, 14:06 IST
ಫಾಲೋ ಮಾಡಿ
Comments

ಗೌರಿಬಿದನೂರು: ನಗರದಲ್ಲಿ ಮಂಗಳವಾರ ಹುಚ್ಚುನಾಯಿ ಕಡಿತದಿಂದ ಮಕ್ಕಳು, ವೃದ್ಧರು ಸೇರಿ 14 ಮಂದಿ ಗಾಯಗೊಂಡಿದ್ದಾರೆ.

ಬೆಳಗ್ಗೆ ಕಾಣಿಸಿಕೊಂಡ ಹುಚ್ಚು ನಾಯಿ, ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಜನರ ಮೇಲೆ ಮನ ಬಂದಂತೆ ಕಚ್ಚುತ್ತಾ ಸಾಗಿದೆ. ಬೆಂಗಳೂರು ವೃತ್ತದಿಂದ ಪ್ರಾರಂಭಿಸಿ ನ್ಯಾಷನಲ್ ಕಾಲೇಜಿನವರೆಗೂ 14 ಜನರನ್ನು ಗಾಯಗೊಳಿಸಿದೆ. ದ್ವಿಚಕ್ರ ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಹೋಗಿದೆ. ಇದರಿಂದ ವಾಹನ ಸವಾರರು ಗಾಬರಿಗೊಂಡು ಅಡ್ಡಾದಿಡ್ಡಿಯಾಗಿ ಚಲಿಸಿ ಕೆಳಗೆ ಬಿದ್ದು ಕೈ ಕಾಲುಗಳಿಗೆ ಗಾಯ ಮಾಡಿಕೊಂಡಿದ್ದಾರೆ.

ಸ್ಥಳೀಯರು ಸೇರಿ ನಾಯಿಯನ್ನು ಕೊಲ್ಲಲು ಪ್ರಯತ್ನಿಸಿದರು. ಅದು ತಪ್ಪಿಸಿಕೊಂಡು ಬೇರೆ ಬೇರೆ ವಾರ್ಡ್‌ ಓಡಿ ಹೋಗಿದೆ ಎಂದು ಸ್ಥಳೀಯರು ತಿಳಿಸಿದರು.

ಗಾಯಗೊಂಡವರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಇನ್ನು ಹಲವು ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲವರ ಕೈ ಮತ್ತು ಕಾಲಿನ ಭಾಗಕ್ಕೆ ನಾಯಿ ಕಚ್ಚಿದೆ. ಯಾರಿಗೂ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದರು.

ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ ಶಾಲಾ, ಕಾಲೇಜು ಮಕ್ಕಳು ಮತ್ತು ವಾಹನ ಸವಾರರಿಗೆ ರಸ್ತೆಯಲ್ಲಿ ಓಡಾಡಲು ಭಯ ಪಡಬೇಕಾದ ವಾತಾವರಣ ಇದೆ. ನಗರದಲ್ಲಿ ಅಂದಾಜು 2,500ಕ್ಕೂ ಅಧಿಕ ಬೀದಿನಾಯಿಗಳಿವೆ.

ತಾಲ್ಲೂಕಿನಾದ್ಯಂತ ಒಂದೇ ದಿನದಲ್ಲಿ ನಗರ ಭಾಗದಲ್ಲಿ 17 ಮತ್ತು ಗ್ರಾಮೀಣ ಭಾಗದಲ್ಲಿ 6 ಸೇರಿ ಒಟ್ಟು 23 ನಾಯಿ ಕಚ್ಚಿದ ಪ್ರಕರಣ ದಾಖಲಾಗಿದೆ.

ಬೀದಿನಾಯಿಗಳ ಸೆರೆ ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಟೆಂಡರ್‌ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತೆ ಡಿ.ಎಂ ಗೀತಾ ತಿಳಿಸಿದರು.

ನಗರಸಭೆ 21 ವಾರ್ಡ್‌ನ ನಿವಾಸಿ ನಾಗಭೂಷಣ್ ಮಾತನಾಡಿ, ‘ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ನಮ್ಮ ವಾರ್ಡ್ ನಾಗರಿಕರು ಸೇರಿದಂತೆ ಹಲವು ಜನರ ಮೇಲೆ ನಾಯಿಗಳು ದಾಳಿ ನಡೆಸುತ್ತಿವೆ. ತಕ್ಷಣ ಸೆರೆ ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT