ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ | ಮುರುಗಮಲ್ಲ ದರ್ಗಾ: ₹ 29.55 ಲಕ್ಷ ಸಂಗ್ರಹ

Published 12 ಜುಲೈ 2024, 15:23 IST
Last Updated 12 ಜುಲೈ 2024, 15:23 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್-ಬಾವಾಜಾನ್ ದರ್ಗಾದಲ್ಲಿ ಗುರುವಾರ ನಡೆದ ಹುಂಡಿ ಎಣಿಕೆಯಲ್ಲಿ ₹ 29.55 ಲಕ್ಷ ಸಂಗ್ರಹಣೆ ಆಗಿತ್ತು.

ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳ ನೇತೃತ್ವದಲ್ಲಿ ದರ್ಗಾ ಸಮಿತಿಯ ಸದಸ್ಯರು, ಕೆನರಾ ಬ್ಯಾಂಕ್ ಸಿಬ್ಬಂದಿ ಎಣಿಕೆ ಮಾಡಿದರು. ಸಂಗ್ರಹವಾದ ಹಣವನ್ನು ಸ್ಥಳೀಯ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ವಕ್ಫ್ ಮಂಡಳಿ ಖಾತೆಗೆ ಜಮಾ ಮಾಡಲಾಯಿತು.

ದರ್ಗಾ ಕಾರ್ಯದರ್ಶಿ ಆರೀಫ್ ಖಾನ್ ಮಾತನಾಡಿ, ದರ್ಗಾ ಅಭಿವೃದ್ಧಿಯ ಕಡೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ವಕ್ಫ್ ಸಚಿವರಿಗೆ, ಮಂಡಳಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಹಲವಾರು ಬಾರಿ ಪತ್ರಗಳನ್ನು ಬರೆದಿದ್ದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಉರುಸ್ ನಡೆದು 10 ತಿಂಗಳಾದರೂ ಕಾರ್ಯಕ್ರಮದ ಅನುದಾನದ ಹಣ ಇದುವರೆಗೂ ಬಿಡುಗಡೆ ಮಾಡಿಲ್ಲ. ಪುನಃ  ಎರಡು ತಿಂಗಳಿಗೆ ಉರುಸ್ ಆಚರಿಸಬೇಕಾಗುತ್ತದೆ. ಕಳೆದ ಬಾರಿಯ ಉರುಸ್ ಅನುದಾನವನ್ನು ನೀಡದೆ ಈ ವರ್ಷ ಹೇಗೆ ಉರುಸ್ ಆಚರಿಸುವುದು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮುಜ್ಮಿಲ್ ಪಾಷಾ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ದರ್ಗಾ ಅಭಿವೃದ್ಧಿ ಪಡಿಸಲು ಸರ್ಕಾರದ ಮೇಲೆ ಒತ್ತಡ ತಂದು ವಿಶೇಷ ಅನುದಾನ ಮಂಜೂರು ಮಾಡಿಸಬೇಕು. ಹುಂಡಿ ಹಣದಿಂದ ದರ್ಗಾದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯ ವೇತನ ಹಾಗೂ ವಿದ್ಯುತ್ ಬಿಲ್ ಪಾವತಿ ಮತ್ತಿತರ ವೆಚ್ಚಗಳಿಗಾಗಿ ತಿಂಗಳಿಗೆ ₹ 3 ಲಕ್ಷ ಖರ್ಚಾಗುತ್ತದೆ. ದರ್ಗಾ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಅಗತ್ಯವಿದೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಅಧಿಕಾರಿ ನವೀದ್ ಪಾಷಾ ಮತನಾಡಿ ದರ್ಗಾಗೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ, ದರ್ಗಾ ಆವರಣವನ್ನು ಸ್ವಚ್ಛವಾಗಿಡಲು ಹೆಚ್ಚಿನ ಗಮನ ಹರಿಸಲಾಗುವುದು ಎಂದರು.

ದರ್ಗಾ ಸಮಿತಿ ಸದಸ್ಯರಾದ ಅಮಾನುಲ್ಲಾ, ಜಬೀ ಉಲ್ಲಾ, ಅಲ್ಲಾಬಕಾಶ್, ಅಬ್ದುಲ್ ಸಲಾಂ, ಮೇಲ್ವಿಚಾರಕ ತಯ್ಯೂಬ್ ನವಾಜ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅಫ್ಸಲ್ ಮತ್ತಿತರರು ಭಾಗವಹಿಸಿದ್ದರು. ಕೆಂಚಾರ್ಲಹಳ್ಳಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT