ಚಿಕ್ಕಬಳ್ಳಾಪುರ: ಅಳಿವಿನಂಚಿನಲ್ಲಿರುವ ಹೆಬ್ಬಕ ಪಕ್ಷಿಗಳ (ಗ್ರೇಟ್ ಇಂಡಿಯನ್ ಬಸ್ಟರ್ಡ್) ಆವಾಸಸ್ಥಾನ ಅಭಿವೃದ್ಧಿ ಹಾಗೂ ಸಂತಾನೋತ್ಪತ್ತಿ ಸಂರಕ್ಷಣೆಗಾಗಿ ರಾಜ್ಯದಲ್ಲಿ ಅರಣ್ಯ ಇಲಾಖೆ ಯೋಜನೆಯೊಂದನ್ನು ರೂಪಿಸಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಯೋಜನೆಯ ಕೆಲಸ ಆರಂಭಗೊಂಡಿದೆ.

ದೈತ್ಯ ಪಕ್ಷಿಗಳ ಸಾಲಿಗೆ ಸೇರುವ ಹೆಬ್ಬಕ ಹಕ್ಕಿಗಳ ಸಂಖ್ಯೆ ದೇಶದಲ್ಲಿ ಈಗ ಕೇವಲ 130 ಇದೆ ಎನ್ನಲಾಗಿದೆ. ಆದ್ದರಿಂದ ಈ ಪಕ್ಷಿಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಕಳೆದ ಜುಲೈನಲ್ಲಿ ₹33.85 ಕೋಟಿಯ ಯೋಜನೆಗೆ ಚಾಲನೆ ನೀಡಿತ್ತು. ಅದರ ಅಡಿ ಕೇಂದ್ರ ಪರಿಸರ ಸಚಿವಾಲಯವು ಹೆಬ್ಬಕ ಸೇರಿದಂತೆ ಅಳಿವಿನಂಚಿನಲ್ಲಿರುವ 21 ಪ್ರಭೇದದ ಪಕ್ಷಿಗಳ ಆವಾಸಸ್ಥಾನ ಅಭಿವೃದ್ಧಿ ಹಾಗೂ ಸಂತಾನೋತ್ಪತ್ತಿ ಸಂರಕ್ಷಣೆಗಾಗಿ ರಾಜ್ಯಗಳಿಗೆ ಅನುದಾನ ಒದಗಿಸುತ್ತಿದೆ. ಇದೇ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ₹1.60 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ.

ಹುಲ್ಲುಗಾವಲು ಪ್ರದೇಶದಲ್ಲಿ ಜೋಡಿಯಾಗಿ ಬದುಕುವ ಹೆಬ್ಬಕ ಇದೀಗ ರಾಜ್ಯದಲ್ಲಿ ಅಪರೂಪದ ಜೀವ ಸಂಕುಲವಾಗಿದೆ. ಎದೆ, ಕುತ್ತಿಗೆ ಭಾಗದಲ್ಲಿ ತೆಳುಹಳದಿ ಬಣ್ಣ. ಬೆನ್ನು, ರೆಕ್ಕೆಗಳು ಗಾಢ ಕಂದುಬಣ್ಣ, ಉಷ್ಟ್ರಪಕ್ಷಿಯಷ್ಟು ಶರೀರ ಮತ್ತು ಉದ್ದ ಕತ್ತು, ಕಾಲುಗಳನ್ನು ಹೊಂದಿರುವ ಈ ಹಕ್ಕಿಯು ಸರಾಸರಿ 18 ಕೆ.ಜಿ ತೂಗುತ್ತದೆ.

ಬಹುಪಾಲು ನೆಲವಾಸಿಯಾಗಿರುವ ಈ ಹಕ್ಕಿಗಳಿಗೆ ಅಪಾಯ ಎದುರಾದಾಗ ಹಾರುವ ಸಾಮರ್ಥ್ಯವೂ ಇದೆ. ಬಾಚಿಹಲ್ಲು ಇರುವ ದಂಶಕ ಪ್ರಾಣಿಗಳು, ಹುಳುಗಳು, ಹುಲ್ಲಿನ ಜಾತಿಯ ತೆನೆ, ಹಲ್ಲಿ, ಕಪ್ಪೆ, ಆಹಾರ ಧಾನ್ಯ, ಸಸ್ಯದ ಚಿಗುರು ತಿಂದು ಈ ಪಕ್ಷಿಗಳು ಜೀವಿಸುತ್ತವೆ.

ಈ ಹಕ್ಕಿಗೆ ಬಳ್ಳಾರಿ ಭಾಗದಲ್ಲಿ ‘ಎರೆಭೂತ’, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಭಾಗದಲ್ಲಿ ‘ಎರಲಾಡ’, ‘ಹೆಬ್ಬಕ’ ಎಂಬ ಹೆಸರಿದೆ. ಎರಡು ದಶಕದ ಹಿಂದೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಭಾಗದ ಹುಲ್ಲುಗಾವಲು ಪ್ರದೇಶ ಈ ಹಕ್ಕಿಗಳಿಗೆ ನೆಲೆಯಾಗಿತ್ತು. ಇವು ಬಳ್ಳಾರಿ ಜಿಲ್ಲೆಯಲ್ಲಿಯೂ ಕಾಣಸಿಗುತ್ತಿದ್ದವು. ಈ ಭಾಗದಲ್ಲಿ ಆರಂಭಗೊಂಡ ಅವ್ಯಾಹತ ಗಣಿಗಾರಿಕೆಗೆ ಈ ಪಕ್ಷಿಗಳ ನೆಲೆಗೆ ಕಂಟಕವಾದವು ಎನ್ನುವುದು ಪಕ್ಷಿ ತಜ್ಞರ ಅಭಿಪ್ರಾಯ.

ಸುಮಾರು ಏಳು ವರ್ಷಗಳ ಹಿಂದೆ ಬಳ್ಳಾರಿಯ ಜಿಲ್ಲೆಯ ಸಿರುಗುಪ್ಪ, ಚೇಳ್ಳಗುರ್ಕಿ ಭಾಗದಲ್ಲಿ ಎರಡು ಹೆಬ್ಬಕಗಳು ಕಂಡುಬಂದಿದ್ದು, ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಆ ನಂತರ ಈ ಹಕ್ಕಿಗಳು ಕಾಣಿಸಿಕೊಂಡಿದ್ದು ಅಪರೂಪ. ಅಭಿವೃದ್ಧಿಯ ನಾಗಾಲೋಟ, ಎಗ್ಗಿಲ್ಲದೆ ಸಾಗಿರುವ ಬೇಟೆಯಿಂದ ಅಳಿವಿನಂಚಿಗೆ ತಲುಪಿರುವ ಹೆಬ್ಬಕಗಳ ಸಂಖ್ಯೆ ಈ ಯೋಜನೆಯಿಂದ ವೃದ್ಧಿಸಲಿದೆ ಎನ್ನುವ ಆಶಾವಾದ ಅರಣ್ಯ ಇಲಾಖೆ ಅಧಿಕಾರಿಗಳದ್ದು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಂಜಯ್ ಮೋಹನ್, ‘ಮೂರು ತಿಂಗಳ ಹಿಂದೆಯೇ ಈ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯದ ಅನುಮೋದನೆ ದೊರೆತಿದೆ. ಇದರಲ್ಲಿ ಶೇ 60 ರಷ್ಟು ಕೇಂದ್ರ ಮತ್ತು ಶೇ 40 ರಷ್ಟು ರಾಜ್ಯದ ಪಾಲು ಇರಲಿದೆ. ಈ ಹಿಂದೆ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಹೆಬ್ಬಕಗಳು ಇದ್ದವು. ಹೀಗಾಗಿ, ಯೋಜನೆಗಾಗಿ ಬಳ್ಳಾರಿ ಜಿಲ್ಲೆ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಈ ಯೋಜನೆ ಅನುಷ್ಠಾನಕ್ಕೆ ಎರಡು ವರ್ಷಗಳ ಕಾಲಾವಕಾಶವಿದೆ. ನಾವು ಈಗಾಗಲೇ ಕೆಲಸ ಶುರು ಮಾಡಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಬೇಟೆ ತಡೆಯುವುದು, ಹುಲ್ಲುಗಾವಲು ಶೋಧ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆರಂಭಿಸಿದ್ದೇವೆ. ಜತೆಗೆ ಹೆಬ್ಬಕಗಳ ಆಹಾರ ಕ್ರಮ, ಆವಾಸ ಸ್ಥಾನದ ಸ್ವರೂಪಗಳ ಬಗ್ಗೆ ಕೂಡ ಸಂಶೋಧನೆ ನಡೆಸಲು ಉದ್ದೇಶಿಸಿದ್ದೇವೆ’ ಎಂದು ತಿಳಿಸಿದರು.

ರಣಹದ್ದುಗಳಿಗೆ ಕೃತಕ ಸಂತಾನೋತ್ಪತ್ತಿ ಕೇಂದ್ರ
‘ರಾಮನಗರದ ರಾಮದೇವರ ಬೆಟ್ಟ ರಣಹದ್ದು ಅಭಯಾರಣ್ಯದಲ್ಲಿ ರಣಹದ್ದುಗಳ ಸಂತತಿ ಕ್ಷೀಣಿಸುತ್ತಿದೆ. ಆದ್ದರಿಂದ ₹1.30 ಕೋಟಿ ವೆಚ್ಚದಲ್ಲಿ ರಾಮದೇವರ ಬೆಟ್ಟದಲ್ಲಿ ಕೃತಕ ಸಂತಾನೋತ್ಪತ್ತಿ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಗುಜರಾತ್ ಕಾಡುಗಳಿಂದ ಮೊಟ್ಟೆಗಳನ್ನು ತಂದು, ಈ ಕೇಂದ್ರದಲ್ಲಿ ಮರಿಗಳನ್ನು ಮಾಡಿ ಹದ್ದುಗಳ ಸಂತಾನೋತ್ಪತ್ತಿ ವೃದ್ಧಿಸಲು ಉದ್ದೇಶಿಸಿದ್ದೇವೆ’ ಎಂದು ಸಂಜಯ್ ಮೋಹನ್ ತಿಳಿಸಿದರು.

ರಾಜ್ಯದಲ್ಲಿ ಬರೀ 8 ರಿಂದ 10 ಹೆಬ್ಬಾಕಗಳಿರುವ ಅಂದಾಜಿದೆ. ಹೀಗಾಗಿ, ಅವುಗಳ ಆವಾಸಸ್ಥಾನ ಅಭಿವೃದ್ಧಿಪಡಿಸಿ, ರಾಜಸ್ಥಾನದ ಹೆಬ್ಬಕ ಸಂತಾನೋತ್ಪತ್ತಿ ಕೇಂದ್ರದ ಸಹಕಾರದೊಂದಿಗೆ ರಾಜ್ಯದಲ್ಲೂ ಆ ಪಕ್ಷಿ ಸಂತಾನ ವೃದ್ಧಿಸಲು ನಿರ್ಧರಿಸಿದ್ದೇವೆ.
-ಸಂಜಯ್ ಮೋಹನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.