ಶಿಡ್ಲಘಟ್ಟ: ಸುಮಾರು 15-16ನೇ ಶತಮಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ ಸುಗಟೂರು ಪಾಳೇಗಾರರು ಶೈವಧರ್ಮದ ಪ್ರೋತ್ಸಾಹಕರಾಗಿದ್ದರು. ಈಗಿನ ಶಿಡ್ಲಘಟ್ಟ ತಾಲ್ಲೂಕಿನ ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಟಿ.ಬುಸ್ಸನಹಳ್ಳಿ (ಇದನ್ನು ಬಿ.ತಿಮ್ಮಸಂದ್ರ ಎಂದೂ ಕರೆಯುವರು)ಯನ್ನು ಸೋಸಲೆಯ ರೇವಣಾರಾಧ್ಯರಿಗೆ ಕೊಡುಗೆಯಾಗಿ ಕೊಟ್ಟಿದ್ದರು ಎಂಬ ಸಂಗತಿ ತಿಳಿಸುವ ಶಾಸನದ ಬಗ್ಗೆ ಶಾಸನತಜ್ಞರು ಬೆಳಕು ಚೆಲ್ಲಿದ್ದಾರೆ.

ಜಂಗಮಕೋಟೆ ಹತ್ತಿರವಿರುವ ಸುಗಟೂರು ಗ್ರಾಮವು ಚೋಳರ ಕಾಲಕ್ಕಾಗಲೇ ಪ್ರಮುಖ ನೆಲೆಯಾಗಿತ್ತು ಮತ್ತು ಸಮೃದ್ಧ ವೈಭವೋಪೇತ ನಗರವಾಗಿತ್ತು ಎಂಬುದು ಈ ಭಾಗದಲ್ಲಿನ ಶಾಸನಗಳಿಂದ ತಿಳಿದುಬರುತ್ತದೆ.

ಸುಗಟೂರು ಪಾಳೇಪಟ್ಟು ಎಂದೇ ಇತಿಹಾಸದಲ್ಲಿ ದಾಖಲಾಗಿರುವ ಈ ಪ್ರದೇಶವನ್ನು ಆಳಿದ ಸುಗಟೂರು ಪಾಳೇಗಾರರು ಕೂಡ ಐತಿಹಾಸಿಕ ಸ್ಥಾನ ಪಡೆದಿದ್ದಾರೆ. ಅವರ ಆಳ್ವಕೆಗೆ ಕೋಲಾರ, ಮುಳಬಾಗಿಲು ಹಾಗೂ ಶಿಡ್ಲಘಟ್ಟ ತಾಲ್ಲೂಕುಗಳು ಒಳಪಟ್ಟಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಹುಟ್ಟಿಗೂ ಅವರೇ ಕಾರಣರು. ಸುಮಾರು 1451 ರಿಂದ 1669 ಕಾಲಾವಧಿಗೆ ಸೇರಿದ ಅವರ ಅನೇಕ ಶಾಸನಗಳು ಜಿಲ್ಲೆಯಲ್ಲಿ ಲಭಿಸಿವೆ.

‘ಶಾಸನವಿರುವ ಬಂಡೆ ಬುಸ್ಸನಹಳ್ಳಿಯ ಕುಂಟೆಯೊಂದರಲ್ಲಿ ಇದೆ. ಆ ಕುಂಟೆ ಹಾಗೂ ಅದರ ಪರಿಸರವನ್ನು ಪರಿಶುಭ್ರವಾಗಿ ಇಟ್ಟುಕೊಂಡಿರುವ ಬುಸನಹಳ್ಳಿ ಗ್ರಾಮಸ್ಥರು ಅಭಿನಂದನಾರ್ಹರು’ ಎನ್ನುತ್ತಾರೆ ಶಾಸನತಜ್ಞ ಡಿ.ಎನ್.ಸುದರ್ಶನರೆಡ್ಡಿ.

ಈ ಶಾಸನದ ಪಠ್ಯ ಹೀಗಿದೆ– ಶ್ರೀ ಶುಭಮಸ್ತು, ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರ್ಷ 1532 ಸೌಮ್ಯ ಸಂವತ್ಸರದ ಚೈತ್ರ ಸು 11 ಲು ಶ್ರೀಮಾನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ವೆಂಕಟಪತಿಮಹಾರಾಯರು ಪೃಥ್ವೀರಾಜ್ಯಂಗೈಯ್ಯುತ್ತಿರಲು ಸುಗಟೂರು ಇಮ್ಮಡಿ ತಮ್ಮಯ್ಯಗೌಡರ ಪುತ್ರರಾದ ಮುಮ್ಮಡಿ ತಮ್ಮಯ್ಯಗೌಡರು ಸೋಸಲೆಯ ಗುರುಮಠದ ದೇವಣಾರಾಧ್ಯರಿಗೆ ಈ ಬುಸನಹಳ್ಳಿಯಲ್ಲು ಸರ್ವಮಾನ್ಯವಾಗಿ ಶಿವಪೀಠ ಕೊಟ್ಟಿದ್ದು..

‘ಬುಸ್ಸನಹಳ್ಳಿ ಶಾಸನದಲ್ಲಿ ಉಲ್ಲೇಖಿಸಲಾಗಿರುವ ಸೋಸಲೆಯ ರೇವಣಾರಾಧ್ಯರು ಚಿಕ್ಕನಾಯಕನಹಳ್ಳಿಯಲ್ಲಿ ಹಾಗಲವಾಡಿಯ ಮುದಿಯಪ್ಪನಾಯಕರ ಆಸ್ಥಾನದಲ್ಲಿದ್ದ ವೀರಶೈವಕವಿ. ಶಾರೀರ ಪ್ರಕಾಶಿಕೆ, ಅಂತಃಕರಣ ಪ್ರಕಾಶಿಕೆ, ಸ್ವಸ್ವರೂಪ ಪ್ರಕಾಶಿಕೆ, ನಿಜದೀಪ್ತಿಪ್ರಕಾಶಿಕೆ ಎಂಬ ಸ್ವತಂತ್ರ ಗ್ರಂಥಗಳನ್ನು ರಚಿಸಿದ್ದಾರೆ. ಜೊತೆಗೆ ಅನೇಕ ಟೀಕಾಗ್ರಂಥಗಳನ್ನೂ ಬರೆದಿದ್ದಾರೆ. ಈ ಕವಿಯ ಗೌರವಾರ್ಥವಾಗಿ ಸುಗಟೂರು ಪಾಳೇಗಾರರು ಬುಸನಹಳ್ಳಿಯನ್ನು ಕೊಡುಗೆ ಕೊಟ್ಟಿದ್ದಾರೆ’ ಎಂದು ಅವರು ವಿವರಿಸಿದರು.

ಪಠ್ಯವನ್ನು ಶಾಸನತಜ್ಞ ಸುದರ್ಶನರೆಡ್ಡಿ, ಕೆ.ಆರ್.ನರಸಿಂಹನ್, ಯುವರಾಜ, ಎಚ್.ಜಿ.ಶಶಿಧರ್ ಓದಿ ಅರ್ಥೈಸಿ ವಿವರಣೆ ನೀಡಿದರು. ಗ್ರಾಮದ ಮನುಮನೋಹರ್ ಗೌಡ ಮತ್ತು ಪ್ರವೀಣ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.