ಶಿಡ್ಲಘಟ್ಟ: ಇಲ್ಲಿನ ರೇಷ್ಮೆ ಬಹಳ ಪ್ರಸಿದ್ಧಿ. ಇಲ್ಲಿ ತಯಾರಾಗುವ ರೇಷ್ಮೆ ದೂರದೂರುಗಳಿಗೆ ಹೋಗುತ್ತದೆ. ಆದರೆ ಈ ರೇಷ್ಮೆಯನ್ನು ನಂಬಿ ಜೀವನ ನಡೆಸುವವರ ಬದುಕು ಚಂದವಿಲ್ಲ.

ರೇಷ್ಮೆ ಗೂಡನ್ನು ಕುದಿಯುವ ನೀರಲ್ಲಿ ಹಾಕಿ ಅದರಿಂದ ರೇಷ್ಮೆ ಎಳೆಯನ್ನು ತೆಗೆಯುತ್ತಾರೆ. ಈ ರೇಷ್ಮೆಯು ಸೀರೆ ತಯಾರಿಸಲು ಕಂಚಿ, ಧರ್ಮಾವರಂ, ಜರಿ ತಯಾರಿಸಲು ಸೂರತ್ಗೆ ಹೆಚ್ಚಾಗಿ ಹೋಗುತ್ತದೆ.

ಶಿಡ್ಲಘಟ್ಟದಲ್ಲಿರುವ 4,000 ರೇಷ್ಮೆ ಘಟಕಗಳಲ್ಲಿ ಸುಮಾರು 20,000 ಮಂದಿ ಕೆಲಸ ಮಾಡುತ್ತಾರೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ 5,000 ಹೆಕ್ಟೇರ್ ಭೂಮಿಯಲ್ಲಿ ರೇಷ್ಮೆ ಕೃಷಿ ಅಂದರೆ ಕಂಬಳಿ (ಹಿಪ್ಪು ನೇರಳೆ) ಸೊಪ್ಪು ಬೆಳೆಯುತ್ತಾರೆ. ಸುಮಾರು 10,000 ರೈತ ಕುಟುಂಬಗಳು ಇದನ್ನು ಅವಲಂಬಿಸಿವೆ. ಇದಲ್ಲದೆ ರೇಷ್ಮೆ ಕೊಳ್ಳುವವರು, ಮಾರುವವರು, ದಳ್ಳಾಳಿಗಳು, ಮೂಟೆ ಹೊರುವವರು, ನೀರು ಗಾಡಿಯವರು, ಸೌದೆ ಮಂಡಿಗಳು, ಫ್ಯಾಕ್ಟರಿಗೆ ಬೇಕಾದ ಸಾಮಾನು ಮಾರುವವರು, ಟೆಂಪೊ, ಕಾರು, ತಳ್ಳುವ ಗಾಡಿಗಳು.... ಒಂದೇ ಎರಡೇ.. ಲಕ್ಷಾಂತರ ಜನರಿಗೆ ಅನ್ನದಾತ ಈ ರೇಷ್ಮೆ.

ಹಮಾಲಿ ಕಾರ್ಮಿಕರು:

ರೇಷ್ಮೆಗೂಡು ಮಾರುಕಟ್ಟೆಯಲ್ಲಿ ನಿತ್ಯವೂ ಲಕ್ಷಾಂತರ ರೂಪಾಯಿಯಲ್ಲಿ ವಹಿವಾಟು ನಡೆಯುತ್ತದೆ. ಆದರೆ ಕಾರ್ಮಿಕರ ಕೂಲಿಯು ದಿನಕ್ಕೆ ₹250 ಗಡಿ ದಾಟುವುದಿಲ್ಲ. ಪಾದಗಳಿಗೆ ಚಪ್ಪಲಿಯೂ ಹಾಕಿಕೊಳ್ಳದೇ ಕೆಲಸ ಮಾಡುವ ಈ ಶ್ರಮಿಕರು ತಲೆಯ ಮೇಲೆ 30 ರಿಂದ 50 ಕೆ.ಜಿಯಷ್ಟು ತೂಕದ ರೇಷ್ಮೆ ಗೂಡನ್ನು ಹೊರುತ್ತಾರೆ. ಸೈಕಲ್ನಲ್ಲೇ ಸಾಗುವ ಅವರು ತಲೆಯ ಮೇಲೆ ಮೂಟೆಯ ಸಮತೋಲನ ಕಾಯ್ದುಕೊಳ್ಳುವುದರ ಜೊತೆಗೆ ಅಪಘಾತಕ್ಕೀಡಾಗದಂತೆ ಎಚ್ಚರಿಕೆ ವಹಿಸಬೇಕು.

ಅಸಂಘಟಿತ ವಲಯದಲ್ಲಿರುವ ಈ ಕಾರ್ಮಿಕರಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳಿಲ್ಲ. ಅನಾರೋಗ್ಯ ಸೇರಿದಂತೆ ಯಾವುದೇ ಗಂಭೀರ ಸಮಸ್ಯೆ ಕಾಡಿದರೂ ಅವರು ದಿನದ ಸಂಪಾದನೆಯಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆ ಹೊರತು ಬೇರೆ ಮಾರ್ಗವಿಲ್ಲ.

ಹುಳು ಸಂಸ್ಕರಣೆ: ರೇಷ್ಮೆ ಕಾಯಕದಲ್ಲಿ ಕಡೆಯ ಹಂತದ ಹುಳು ಸಂಸ್ಕರಣೆಯನ್ನು ಮಾಡುವ ಕಾರ್ಮಿಕರ ಕೆಲಸವಂತೂ ಕ್ಲಿಷ್ಟಕರವಾದದ್ದು. ರೇಷ್ಮೆ ಗೂಡನ್ನು ಕುದಿಯುವ ನೀರಿನಲ್ಲಿ ಕುದಿಸಿ ರೇಷ್ಮೆ ಎಳೆಯನ್ನು ತೆಗೆಯಲಾಗುತ್ತದೆ. ಅಲ್ಲಿ ಉಳಿಯುವ ಹುಳು ಮತ್ತು ತ್ಯಾಜ್ಯ ರೇಷ್ಮೆ ಪೊರೆಯನ್ನು ಕೆಲವರು ಕೊಳ್ಳುತ್ತಾರೆ. ಅತ್ಯಂತ ಕೆಟ್ಟ ವಾಸನೆಯನ್ನು ಬೀರುವ ಈ ತ್ಯಾಜ್ಯದ ಸಂಸ್ಕರಣೆಗಾಗಿ ಶಿಡ್ಲಘಟ್ಟ ತಾಲ್ಲೂಕಿನ ಇದ್ಲೂಡು ಗ್ರಾಮದ ಹೊರವಲಯದಲ್ಲಿ ಈ ಹುಳುಗಳ ಸಂಸ್ಕರಣೆಗಾಗಿಯೇ ಕೆಲವರು ಬಯಲು ಪ್ರದೇಶಗಳಲ್ಲಿ ಘಟಕ ನಿರ್ಮಿಸಿಕೊಂಡಿದ್ದಾರೆ.

‘ಕೆಟ್ಟ ವಾಸನೆ ಬೀರಿದರೂ ಈ ಕೆಲಸ ನಮಗೆ ರೂಢಿಯಾಗಿದೆ. ಬೆಳಗ್ಗೆ 6ರಿಂದ 11 ಗಂಟೆಯವರೆಗೂ ದುಡಿಮೆ ಮಾಡುತ್ತೇವೆ. ಸುಮಾರು ವರ್ಷಗಳಿಂದ ಈ ಕೆಲಸವನ್ನೇ ಮಾಡುತ್ತಿದ್ದೇವೆ. ಬೇರೆಯವರು ನಮ್ಮನ್ನು ಕಂಡು ಅಸಹ್ಯ ಪಡುತ್ತಾರೆ. ಆದರೆ ಅದನ್ನು ಬಿಟ್ಟರೆ ಬೇರೇನು ಮಾಡುವುದೆಂದು ಕಷ್ಟವೋ, ವಾಸನೆಯೋ ಅದನ್ನೇ ಮಾಡುತ್ತಿದ್ದೇವೆ’ ಎನ್ನುತ್ತಾರೆ ಕಾರ್ಮಿಕರು.

ಹಳಸಿದ ಕೈಗಳು:

‘ನಮ್ಮ ಕೈಗಳು ನೋಡಿ ಸ್ವಾಮಿ, ಹೇಗೆ ಹಳಸಿಹೋಗಿವೆ. ಈ ಕೈಯಲ್ಲಿ ಊಟ ಮಾಡಲೂ ಆಗುವುದಿಲ್ಲ. ಮಳೆಬಿದ್ದಾಗ, ಮೋಡ ಕವಿದಾಗ, ರೇಷ್ಮೆ ಗೂಡು ಸರಿಯಾಗಿ ಕಟ್ಟದಿರುವುದರಿಂದ ಕೈಯೆಲ್ಲಾ ಇನ್ನಷ್ಟು ಹಾಳಾಗಿ ಒಮ್ಮೊಮ್ಮೆ ರಕ್ತ ಬರುತ್ತದೆ. ಆದರೇನು ಮಾಡೋದು. ಈ ಕೆಲಸವೇ ಅಂಥದ್ದು. ಬಿಸಿನೀರಿನಲ್ಲಿ ಕೈಯಾಡಿಸಲೇ ಬೇಕು. ಆಗಷ್ಟೇ ಒಳ್ಳೆಯ ರೇಷ್ಮೆ ತಯಾರಿಸಲು ಸಾಧ್ಯ. ಮನೆಗೆ ಹೋದ ಮೇಲೆ ಔಷಧಿಗಳನ್ನು ಬಳಿದುಕೊಳ್ಳತ್ತೇವೆ. ರಾತ್ರಿಯೆಲ್ಲಾ ಚರ್ಮ ಹೊಂದಿಕೊಳ್ಳುತ್ತದೆ. ಪುನಃ ಬೆಳಿಗ್ಗೆಯಿಂದ ರೇಷ್ಮೆ ತಯಾರಿಸಲು ಬಿಸಿನೀರಿಗೆ ಕೈಯೊಡ್ಡುತ್ತೇವೆ’ ಎನ್ನುತ್ತಾ ರೇಷ್ಮೆ ತಯಾರಿಕಾ ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಸಮಸ್ಯೆಯನ್ನು ವಿವರಿಸುತ್ತಾರೆ.

ರೇಷ್ಮೆ ಗೂಡನ್ನು ಕುದಿಯುವ ನೀರಲ್ಲಿ ಹಾಕಿ ಒಂದು ಕಡ್ಡಿಯಲ್ಲಿ ಎಂಟು ಆಕಾರದಲ್ಲಿ ತಿರುಗಿಸಿ ಮೊದಲು ಒರಟಾದ ಜೋಟನ್ನು ತೆಗೆಯುತ್ತಾರೆ. ನಂತರ ಸ್ವಲ್ಪ ಬಿಸಿ ನೀರಿರುವ ಬೇಸನ್ನೊಳಗೆ ಈ ಎಳೆಬಿಚ್ಚಿದ ಗೂಡನ್ನು ಹಾಕುತ್ತಾರೆ. ಅಲ್ಲಿ ಆರು ಅಥವಾ ಎಂಟು ಗೂಡುಗಳ ಎಳೆಗಳನ್ನು ಒಂದಾಗಿಸಿ ಕಚ್ಚಾ ರೇಷ್ಮೆಯನ್ನು ತಯಾರಿಸುವ ಈ ಪ್ರಕ್ರಿಯೆಯಲ್ಲಿ ರೇಷ್ಮೆ ಕಾರ್ಮಿಕರ ಕೈ ಸದಾ ಬಿಸಿ ನೀರಿನ ಸಂಪರ್ಕದಲ್ಲಿರುತ್ತದೆ. ರೇಷ್ಮೆ ಗೂಡಿನೊಳಗಿನ ಹುಳುವು ಕುದಿ ನೀರಿನಲ್ಲಿ ಬಿದ್ದು ಸತ್ತ ನಂತರ ಹೊಳಪು ರೇಷ್ಮೆ ಎಳೆಗಳನ್ನು ತೆಗೆಯುವ ಕೆಲಸ ಮಾಡುವ ಕಾರ್ಮಿಕರ ಕೈಗಳು ರಾತ್ರಿ ಊಟ ಕೂಡ ಮಾಡುವ ಸ್ಥಿತಿಯಲ್ಲಿರುವುದಿಲ್ಲ, ಅಲ್ಲದೆ ಅವರ ಆರೋಗ್ಯವೂ ಹದಗೆಟ್ಟಿರುತ್ತದೆ.

ಆಸ್ತಮಾ ಕಾಯಿಲೆ:

ಶಿಡ್ಲಘಟ್ಟದಲ್ಲಿ ಆಸ್ತಮಾ ಖಾಯಿಲೆಯಿಂದ ಸಾಕಷ್ಟು ಮಂದಿ ಬಳಲುತ್ತಾರೆ. ರೇಷ್ಮೆ ಗೂಡಿನಿಂದ ಹೊಮ್ಮುವ ಸಣ್ಣ ದೂಳಿನ ಕಣಗಳ ಸಂಪರ್ಕಕ್ಕೆ ಸದಾ ಬರುವುದರಿಂದ ಇಲ್ಲಿ ಆಸ್ತಮಾ ರೋಗಿಗಳು ಹೆಚ್ಚು ಎಂಬುದು ವೈದ್ಯರ ಅಭಿಪ್ರಾಯ. ಶಿಡ್ಲಘಟ್ಟದಲ್ಲಿ ಆಸ್ತಮಾ ಕಾಯಿಲೆಗಾಗಿ ಬಳಸುವ ಸಾಲ್ ಬುಟಮಾಲ್ ಮುಂತಾದ ಔಷಧಿಗಳು, ಕೈಗಳು ಹಳಸಿಹೋಗಿವುದಕ್ಕೆ ಬಳಿಯುವ ಸಪಟ್ ಮುಲಾಮ್, ಬೆಟ್ನಾವೆಟ್ ಮುಂತಾದ ಮುಲಾಮುಗಳು ಹೆಚ್ಚು ಖರ್ಚಾಗುತ್ತವೆ ಎನ್ನುತ್ತಾರೆ ಔಷಧಿ ಅಂಗಡಿಯವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.