ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಿಂದ ದೂರವಾದ ವೀರಪ್ಪ ಮೊಯಿಲಿ

ಲೋಕಸಭೆ ಚುನಾವಣೆ ಫಲಿತಾಂಶದ ನಂತರವೂ ಜಿಲ್ಲೆಗೆ ಬಾರದ ಮಾಜಿ ಸಂಸದ
Published : 19 ಸೆಪ್ಟೆಂಬರ್ 2024, 4:24 IST
Last Updated : 19 ಸೆಪ್ಟೆಂಬರ್ 2024, 4:24 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್‌ನ ಭೀಷ್ಮ ಎನಿಸಿದ್ದವರು ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ. ಜಿಲ್ಲೆಯ ಕಾಂಗ್ರೆಸ್‌ನಲ್ಲಿ ನಡೆಯುವ ಯಾವುದೇ ಬೆಳವಣಿಗೆಗಳು ಇರಲಿ ಅಥವಾ ರಾಜಕೀಯ ವಿಚಾರಗಳು ಇರಲಿ ಮೊಯಿಲಿ ಅವರ ಹಾಜರಿ ಮತ್ತು ಪ್ರತಿಕ್ರಿಯೆ ಇದ್ದೇ ಇರುತ್ತಿತ್ತು. 

ಹೀಗೆ ಒಂದೂವರೆ ದಶಕ ಜಿಲ್ಲೆಯ ಕಾಂಗ್ರೆಸ್ ರಾಜಕೀಯದಲ್ಲಿ ಅಗ್ರ ನಾಯಕ ಎನಿಸಿದ್ದರು. ಇಂತಿಪ್ಪ ಮೊಯಿಲಿ ಅವರು ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ. 

ಮಾಜಿ ಸಚಿವ ಶಿಡ್ಲಘಟ್ಟದ ವಿ.ಮುನಿಯಪ್ಪ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರೂ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ನಡೆಯುವ ಪ್ರತಿಭಟನೆ, ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. 

ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ದೊರೆಯದ ಕಾರಣ ‘ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುವೆ. ಆದರೆ ಸಕ್ರಿಯವಾಗಿ ರಾಜಕಾರಣದಲ್ಲಿ ಇರುತ್ತೇನೆ’ ಎಂದು ಮೊಯಿಲಿ ಚಿಕ್ಕಬಳ್ಳಾಪುರ ನೆಲದಲ್ಲಿಯೇ ಘೋಷಿಸಿದ್ದರು. 

ಎಂ.ವೀರಪ್ಪ ಮೊಯಿಲಿ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಲೋಕಸಭೆ ಚುನಾವಣಾ ಪ್ರಚಾರ ನಡೆಸಿದ್ದರು. ಚುನಾವಣೆ ವೇಳೆ ಒಮ್ಮೆ ಚಿಕ್ಕಬಳ್ಳಾಪುರಕ್ಕೆ ಬಂದು ಸುದ್ದಿಗೋಷ್ಠಿ ನಡೆಸಿದ್ದು ಬಿಟ್ಟರೆ ಪ್ರಚಾರದಲ್ಲಿ ಭಾಗಿಯಾಗಲೇ ಇಲ್ಲ. ಇದರಿಂದ ಮೊಯಿಲಿ ಅವರ ಚಿಕ್ಕಬಳ್ಳಾಪುರ ರಾಜಕಾರಣ ಯುಗಾಂತ್ಯವಾಯಿತು ಎನ್ನುವ ಮಾತುಗಳು ಜೋರಾಗಿ ಕೇಳಿ ಬಂದವು. ಆದರೆ ಇಂದಿಗೂ ಮಾಜಿ ಸಂಸದರು ಚಿಕ್ಕಬಳ್ಳಾಪುರಕ್ಕೆ ಭೇಟಿಯನ್ನೇ ನೀಡಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಪಕ್ಷದ ಯಾವುದೇ ನಾಯಕರಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹುದ್ದೆ ನೀಡುವಾಗ ಅಥವಾ ಆ ಹುದ್ದೆಯಿಂದ ಬಿಡುಗಡೆಗೊಳಿಸುವಾಗ ವೀರಪ್ಪ ಮೊಯಿಲಿ ಅವರ ಮಾತೇ ಅಂತಿಮವಾಗುತ್ತಿತ್ತು. ಇದಿಷ್ಟೇ ಅಲ್ಲ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧವೂ ಆಗಾಗ್ಗೆ ರಾಜಕೀಯವಾಗಿ ಮೊಯಿಲಿ ಚಾಟಿ ಬೀಸುತ್ತಿದ್ದರು.

ಜಿಲ್ಲೆಯ ಯಾವುದೇ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮತ್ತು ಹೊರ ಹಾಕುವ ವಿಚಾರದಲ್ಲಿಯೂ ಮೊಯಿಲಿ ಅವರು ಮಾತು ನಿರ್ಣಾಯಕ ಎನಿಸುತ್ತಿತ್ತು. ಈ ಹಿಂದಿನಿಂದಲೂ ರಾಜ್ಯ ಮಟ್ಟದಲ್ಲಿ ಪಕ್ಷದ ಮುಖಂಡರನ್ನು ಕಾರ್ಯಕರ್ತರನ್ನು ನಿಗಮ, ಮಂಡಳಿಗಳಲ್ಲಿ ಅಧಿಕಾರದ ಹುದ್ದೆಗಳನ್ನು ನೀಡುವಾಗ ಮೊಯಿಲಿ ಅವರ ಶಿಫಾರಸು ಮತ್ತು ಮಾತೇ ಪ್ರಮುಖವಾಗುತ್ತಿತ್ತು. ಆದರೆ ಈಗ ಮೊಯಿಲಿ ಅವರು ಚಿಕ್ಕಬಳ್ಳಾಪುರದ ಜಿಲ್ಲೆಯ ರಾಜಕೀಯ ಮತ್ತು ಕಾಂಗ್ರೆಸ್ ಬೆಳವಣಿಗೆಗಳ ಕುರಿತು ಮೌನವಾಗಿದ್ದಾರೆ. 

ಲೋಕಸಭೆ ಚುನಾವಣೆಯ ಸಮಯದಲ್ಲಿ ಒಮ್ಮೆ ಬಂದಿದ್ದು ಬಿಟ್ಟರೆ, ಫಲಿತಾಂಶದ ತರುವಾಯ ಇಲ್ಲಿಯವರೆಗೂ ಚಿಕ್ಕಬಳ್ಳಾಪುರಕ್ಕೆ ಬಂದೇ ಇಲ್ಲ. 

‘ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಗೆದ್ದರೆ ಜಾತ್ಯತೀತ ತತ್ವ ಮತ್ತು ಸಿದ್ದಾಂತದ ಜಯ’ ಎಂದು ತಮ್ಮನ್ನೇ ಉದಾಹರಿಸಿ ಮೊಯಿಲಿ ಅವರು ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ನಾಯಕರ ಕಿವಿಹಿಂಡಿದ್ದರು.

ರಾಜಕೀಯ ಪುನರ್ಜನ್ಮ:

ವೀರಪ್ಪ ಮೊಯಿಲಿ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಸರಣಿಯಾಗಿ ಸೋಲು ಕಂಡರು. ನಂತರ ರಾಜಕೀಯ ಪುನರ್ಜನ್ಮ ನೀಡಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ. ಆರ್‌.ಎಲ್.ಜಾಲಪ್ಪ ಅವರ ರಾಜಕೀಯ ನಿವೃತ್ತಿಯ ತರುವಾಯ ವೀರಪ್ಪ ಮೊಯಿಲಿ ಈ ಕ್ಷೇತ್ರಕ್ಕೆ ಬಂದರು.

2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದರು. 3,90,500 (ಶೇ 39.9) ಮತಗಳನ್ನು ಪಡೆದು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು.  ಈ ಗೆಲುವು ನೇಪಥ್ಯಕ್ಕೆ ಸರಿದಿದ್ದ ಅವರ ರಾಜಕೀಯ ಜೀವನವನ್ನು ಪುನರುಜ್ಜೀವನಗೊಳಿಸಿತು. ಕೇಂದ್ರದ ಯುಪಿಎ ಸರ್ಕಾರದಲ್ಲಿ ಕಾನೂನು, ಪೆಟ್ರೋಲಿಯಂ ಸಚಿವರಾದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT