ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಿಗೆರೆ | ವಿದ್ಯುತ್ ಅವಘಡ: 5 ವರ್ಷಗಳಲ್ಲಿ 15 ಮಂದಿ ಸಾವು

ಕಾಳು ಮೆಣಸು ಕೊಯ್ಲು, ಮರಗಸಿಯ ವೇಳೆ ಪ್ರಾಣ ಕಳೆದುಕೊಂಡವರ ಸಂಖ್ಯೆ ಹೆಚ್ಚು
Published 30 ಜೂನ್ 2024, 15:32 IST
Last Updated 30 ಜೂನ್ 2024, 15:32 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಲ್ಲಿ ಕಳೆದ ಐದು ವರ್ಷಗಳಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಒಬ್ಬ ಸಿಬ್ಬಂದಿಯೂ ಸೇರಿ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಘಡಗಳಲ್ಲಿ ಕಾಫಿ ತೋಟಗಳಿಗೆ ಕೆಲಸ ಮಾಡಲು ಬಂದ ಕಾರ್ಮಿಕರೇ ಬಲಿಯಾಗಿರುವುದು ಹೆಚ್ಚು. ಕಾಳು ಮೆಣಸು ಕೊಯ್ಲು ಹಾಗೂ ಮರಗಸಿಯ ವೇಳೆ ಪ್ರಾಣ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗಿದ್ದು, ತೋಟಗಳಲ್ಲಿ ಹಾದುಹೋಗಿರುವ ವಿದ್ಯುತ್ ಮಾರ್ಗಗಳೇ ವಿದ್ಯುತ್ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.

ವಿದ್ಯುತ್ ಅವಘಡಗಳು ಪ್ರಾಣತೆತ್ತ ಕಾರ್ಮಿಕ ಕುಟುಂಬಕ್ಕೆ ಮಾತ್ರವಲ್ಲ  ಮಾಲೀಕರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತವೆ. ಬಹುತೇಕ ಘಟನೆಗಳಲ್ಲಿ ಮೆಸ್ಕಾಂ ಅಧಿಕಾರಿಗಳು ಮಾಲೀಕರದ್ದೇ ತಪ್ಪು ಎಂದು ನೇರವಾಗಿ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡುತ್ತಾರೆ. ಆದರೆ, ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವಂತೆ ಹೇಳಿದರೆ, ಕಾರ್ಮಿಕರು ಬರುವ ದಿನದಂದು ಬೇರೆ ಕೆಲಸವಿದೆ ಪೂರೈಕೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂಬ ಉತ್ತರ ನೀಡಿದರೆ, ಕೆಲವೊಮ್ಮೆ ವಿದ್ಯುತ್ ಸ್ಥಗಿತಗೊಳಿಸಿದ ದಿನದಂದು ಕಾರ್ಮಿಕರು ಬಾರದೇ ಮಾಲೀಕರು ತೊಂದರೆಗೆ ಸಿಲುಕುತ್ತಾರೆ. ವಿದ್ಯುತ್ ಅವಘಡದ ಬಹುತೇಕ ಪ್ರಕರಣಗಳಲ್ಲಿ ಮಾಲೀಕರು ಕೈಯಿಂದ ದೊಡ್ಡ ಮೊತ್ತವನ್ನು ಪರಿಹಾರವನ್ನಾಗಿ ನೀಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೆ, ಕುಟುಂಬಕ್ಕೆ ಆಧಾರವಾಗಿದ್ದ ಕಾರ್ಮಿಕನ ಸಾವು ಇಡೀ ಕುಟುಂಬವನ್ನು ಆರ್ಥಿಕ ಹೊರೆಗೆ ನೂಕುತ್ತದೆ.

ಮಾರ್ಗ ಬದಲಾವಣೆಗಿಲ್ಲ ಪರಿಹಾರ: ಕಾಫಿ ತೋಟಗಳಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗವನ್ನು ತೆರವುಗೊಳಿಸುವಂತೆ ಮೆಸ್ಕಾಂಗೆ ಹಲವು ರೈತರು ಅರ್ಜಿ ನೀಡಿದ್ದರೂ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಮಾರ್ಗ ಬದಲಾಯಿಸಲು ಹಣ ಕಟ್ಟಬೇಕಾಗಿದ್ದು, ಲಕ್ಷಾಂತರ ಹಣವನ್ನು ಕಟ್ಟಲಾಗದ ರೈತರು ಕೈ ಚೆಲ್ಲಿ ಕೂತಿದ್ದಾರೆ. ಅಪಘಾತಗಳು ಸಂಭವಿಸಿದಾಗ ಒಬ್ಬರನ್ನೊಬ್ಬರು ದೂಷಿಸುವಂತಾಗಿದೆ.

ಶಾರ್ಟ್‌ ಸರ್ಕೀಟ್‌: ತಾಲ್ಲೂಕಿನ ಗೋಣಿಬೀಡಿನಲ್ಲಿ ಕೆ. ಲೋಕೇಶ್ ಅವರ ಕಾಫಿ ತೋಟದಲ್ಲಿ ನಾಲ್ಕು ದಿನಗಳ ಹಿಂದೆ ವಿದ್ಯುತ್ ತಂತಿ ತುಂಡಾಗಿ ಕಾಫಿ ಗಿಡಗಳಿಗೆ ಹಾನಿಯಾಗಿತ್ತು. ಬೇಸಿಗೆಯಾಗಿದ್ದರೆ ಇಡೀ ತೋಟವೇ ಬೆಂಕಿಗೆ ಆಹುತಿಯಾಗುತ್ತಿತ್ತು. ಅಲ್ಲದೇ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರೆ ಜೀವ ಹಾನಿಯೂ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

‘ಮಾರ್ಗ ಬದಲಿಸಬೇಕು’

‘ಕಾಫಿ ತೋಟದಲ್ಲಿ ಹಾದುಹೋಗಿರುವ ಸಾರ್ವಜನಿಕ ವಿದ್ಯುತ್ ಮಾರ್ಗವನ್ನು ಮೆಸ್ಕಾಂ ಉಚಿತವಾಗಿ ತೆರವುಗೊಳಿಸಿ ಬದಲಾಯಿಸಬೇಕು. ರೈತರು ಹೇಳಿದ ದಿನದಂದು ಸಬೂಬು ಹೇಳದೇ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬೇಕು. ಕಾಫಿ ತೋಟದ ಮಾಲೀಕರು ಕಾರ್ಮಿಕರಿಗೆ ವಿಮೆಯನ್ನು ಮಾಡಿಸಿಕೊಂಡು ಅಪಘಾತಗಳು ಸಂಭವಿಸಿದಾಗ ಆರ್ಥಿಕ ಸಂಕಷ್ಟ ಎದುರಾಗದಂತೆ ಜಾಗೃತಿ ವಹಿಸಬೇಕು’ ಎನ್ನುತ್ತಾರೆ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಬಾಳೂರು.

‘ಪ್ಲಾಸ್ಟಿಕ್ ಹೊದಿಕೆ ಅಳವಡಿಸಿ’

‘ಕಾಫಿ ತೋಟಗಳಲ್ಲಿ ಕೊಯ್ಲು ಮರಗಸಿ ಕೆಲಸ ಮಾಡುವಾಗ ಮೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರೆ ವಿದ್ಯುತ್ ಸ್ಥಗಿತಗೊಳಿಸಲಾಗವುದು. ಮಳೆಗಾಲದಲ್ಲಿ ಹೆಚ್ಚಿನ ಅವಘಡಗಳು ಸಂಭವಿಸುವುದರಿಂದ ಹೆಚ್ಚಿನ ಜಾಗೃತಿ ವಹಿಸಬೇಕು. ವಿದ್ಯುತ್ ತಂತಿಗಳಿಗೆ ಪ್ಲಾಸ್ಟಿಕ್ ಹೊದಿಕೆ ಅಳವಡಿಸಿಕೊಂಡರೆ ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದು’ ಎನ್ನುತ್ತಾರೆ ಮೆಸ್ಕಾಂ ಎಇಇ ಲೋಹಿತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT