ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜವಳಿ ಪಾರ್ಕ್‌ಗೆ ಜಾಗ ಸಿದ್ಧ

ಹಿರೇಗೌಜ ಸರ್ವೆ ನಂಬರ್‌ನಲ್ಲಿ 15 ಎಕರೆ ಜಾಗ ಮೀಸಲು
Published : 15 ಸೆಪ್ಟೆಂಬರ್ 2024, 5:47 IST
Last Updated : 15 ಸೆಪ್ಟೆಂಬರ್ 2024, 5:47 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ನಗರದ ಹೊರ ವಲಯದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಜಿಲ್ಲಾಡಳಿತ ಜಾಗ ಗುರುತಿಸಿದೆ. ಹಿರೇಗೌಜ ಸರ್ವೆ ನಂಬರ್‌ನಲ್ಲಿ 15 ಎಕರೆ ಗೋಮಾಳವನ್ನು ಕೈಮಗ್ಗ ಮತ್ತು ಜವಳಿ ಇಲಾಖೆಗೆ ವರ್ಗಾಯಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಲಕ್ಯಾ ಹೋಬಳಿ, ಹಿರೇಗೌಜ ಗ್ರಾಮದ 111 ಸರ್ವೆ ನಂಬರ್‌ನಲ್ಲಿ ಪರಿಭಾವಿತ ಅರಣ್ಯ ಪಟ್ಟಿ–1ರಲ್ಲಿ 25 ಎಕರೆ, ಪರಿಭಾವಿತ ಅರಣ್ಯ ಪಟ್ಟಿ –2ರಲ್ಲಿ 18 ಎಕರೆ ಜಾಗವಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ 25 ಎಕರೆಯನ್ನು ಪರಿಭಾವಿತ ಅರಣ್ಯಕ್ಕಾಗಿ ಕಾಯ್ದಿರಿಸಿ ನಕ್ಷೆ ಸಿದ್ಧಪಡಿಸಿದ್ದಾರೆ.

25 ಎಕರೆಯನ್ನು ಪರಿಭಾವಿತ ಅರಣ್ಯ ಎಂದು ಇಂಡೀಕರಣ ಮಾಡಿದ ಬಳಿಕ ಪಕ್ಕದಲ್ಲೇ ಇರುವ 15 ಎಕರೆಯನ್ನು ಜವಳಿ ಪಾರ್ಕ್ ನಿರ್ಮಾಣಕ್ಕೆ ಕಾಯ್ದಿರಿಸಬಹುದು ಎಂದು ಅರಣ್ಯ ಇಲಾಖೆ ಅಭಿಪ್ರಾಯ ನೀಡಿದೆ.

ಪ್ರಸ್ತಾಪಿತ ಜಾಗದಲ್ಲಿ ಜವಳಿ ಪಾರ್ಕ್ ಸ್ಥಾಪನೆಯಾದರೆ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಗಾರ್ಮೆಂಟ್ಸ್‌ ಘಟಕಗಳು, ಜವಳಿ ಘಟಕಗಳು ಸ್ಥಾಪನೆಯಾಗುವುದರಿಂದ ಪರೋಕ್ಷ ಉದ್ಯೋಗವೂ ಹೆಚ್ಚಿನ ಜನರಿಗೆ ಸಿಗಲಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

‘ಪಕ್ಕಾ ಪೋಡು ಸಿದ್ಧಪಡಿಸಿ ಕೈಮಗ್ಗ ಮತ್ತು ಜವಳಿ ಇಲಾಖೆಗೆ ಜಾಗ ಹಸ್ತಾಂತರಿಸಲು ಭೂದಾಖಲೆಗಳ ಇಲಾಖೆ ಕ್ರಮ ವಹಿಸಬೇಕು. ಜಾಗವನ್ನು ವಶಕ್ಕೆ ಪಡೆದು ತಂತಿ ಬೇಲಿ ಅಥವಾ ಕಾಂಪೌಂಡ್ ನಿರ್ಮಿಸಿಕೊಂಡು ಜವಳಿ ಇಲಾಖೆಯು ಸಂರಕ್ಷಣೆ ಮಾಡಿಕೊಳ್ಳಬೇಕು. ಯಾವುದೇ ಒತ್ತುವರಿಗೆ ಅವಕಾಶ ನೀಡಬಾರದು. ಕಾಯ್ದಿರಿಸಿದ ಜಾಗದಲ್ಲಿರುವ ಮರಗಳನ್ನು ಸಂರಕ್ಷಣೆ ಮಾಡಬೇಕು’ ಎಂದು ಷರತ್ತು ವಿಧಿಸಿದ್ದಾರೆ.

ಅಲ್ಲದೇ ಉದ್ದೇಶಿತ ಜವಳಿ ಪಾರ್ಕ್ ಯೋಜನೆಯನ್ನು ಮೂರು ವರ್ಷಗಳಲ್ಲಿ ಆರಂಭಿಸಬೇಕು. ಜವಳಿ ಪಾರ್ಕ್ ಹೊರತಾಗಿ ಬೇರೆ ಉದ್ದೇಶಕ್ಕೆ ಜಾಗ ಬಳಕೆ ಮಾಡುವಂತಿಲ್ಲ. ಈ ಯೋಜನೆ ಅನುಷ್ಠಾನ ಮಾಡದಿದ್ದರೆ ಅಷ್ಟೂ ಜಾಗವನ್ನು ಕಂದಾಯ ಇಲಾಖೆಗೆ ಹಿಂದಿರುಗಿಸಬೇಕು. ಪರಭಾರೆ ಮಾಡುವುದು, ಬೇರೆ ಉದ್ದೇಶಕ್ಕೆ ತಾತ್ಕಾಲಿಕ ಹಕ್ಕು ನೀಡುವುದನ್ನು ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT