ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್– ಶ್ರೀರಂಗಪಟ್ಟಣ ಹೆದ್ದಾರಿ: ಅಭಿವೃದ್ಧಿ ವಿಳಂಬ

ತಂತಿಯ ಮೇಲಿನ ನಡಿಗೆ, ಎಚ್ಚರ ತಪ್ಪಿದರೆ ಅಪಾಯ
Published 19 ಜುಲೈ 2024, 6:10 IST
Last Updated 19 ಜುಲೈ 2024, 6:10 IST
ಅಕ್ಷರ ಗಾತ್ರ

ಹಿರಿಯೂರು: ಪಟ್ಟಣದ ಮೂಲಕ ಹಾದುಹೋಗಿರುವ ಬೀದರ್‌–ಶ್ರೀರಂಗಪಟ್ಟಣ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆರಂಭವಾಗಿ 4 ವರ್ಷ ಕಳೆದರೂ ಕುಂಟುತ್ತಾ ಸಾಗಿದೆ.

ಹುಳಿಯಾರು–ಹಿರಿಯೂರು ಮಾರ್ಗದಲ್ಲಿ ₹ 100 ಕೋಟಿ ವೆಚ್ಚದ ಈ ಚತುಷ್ಪಥ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಕಾರಣ ರಸ್ತೆ ಬದಿಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ.

‘ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಹಿರಿಯೂರಿನಿಂದ ಹುಳಿಯಾರುವರೆಗೆ ಯಾರು ಸರಾಗವಾಗಿ ವಾಹನ ಚಲಾಯಿಸುತ್ತಾರೋ ಅವರಿಗೆ ಒಂದೇ ದಿನಕ್ಕೆ ಸಾರಿಗೆ ಇಲಾಖೆ ಚಾಲನಾ ಪರವಾನಗಿ ನೀಡಬಹುದು’ ಎಂದು ಕೆಲವರು ಆಡಿರುವ ವ್ಯಂಗ್ಯಭರಿತ ಮಾತು ಕಾಮಗಾರಿಯ ಸ್ಥಿತಿ ಬಿಂಬಿಸುತ್ತದೆ.

ಈ ಮಾರ್ಗದ ಉಡುವಳ್ಳಿ, ಹಿಂಡಸಕಟ್ಟೆ, ಯಲ್ಲದಕೆರೆ, ಚಿಕ್ಕಬ್ಯಾಲದಕೆರೆ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ.

ರಸ್ತೆಯ ಎರಡೂ ಬದಿಗೆ ಜಮೀನು ಹೊಂದಿರುವವರು ಮತ್ತೊಂದು ಜಮೀನಿಗೆ ಹೋಗಲು ದೊಡ್ಡ ಗಾತ್ರದ ಏರಿಯನ್ನು ಹತ್ತಿ ಹೋಗಬೇಕು. ಸಣ್ಣ ಪ್ರಮಾಣದ ಮಳೆ ಬಂದರೂ ಇಡೀ ರಸ್ತೆ ಕೆಸರುಗದ್ದೆಯಂತೆ ಆಗುತ್ತದೆ. ಬಿಸಿಲು ಬಿದ್ದಾಗ ರಸ್ತೆ ಪಕ್ಕದ ಅಡಿಕೆ, ತೆಂಗು, ಬಾಳೆ ಇತ್ಯಾದಿ ಬೆಳೆಗಳ ಮೇಲೆ ಧೂಳಿನ ಸಿಂಚನ ಆಗುತ್ತದೆ. ರಸ್ತೆಯ ಒಂದು ಭಾಗವನ್ನು ಗುತ್ತಿಗೆದಾರರು ಅಗೆದಿರುವ ಕಾರಣ ಉಳಿದ ಒಂದು ರಸ್ತೆಯಲ್ಲಿ ಎರಡು ವಾಹನಗಳು ದಾಟಿಕೊಂಡು ಹೋಗಲು ಪ್ರಯಾಸ ಪಡಬೇಕಾಗಿದೆ. ಭಾರಿ ಗಾತ್ರದ ಲಾರಿಗಳು ಬಂದರಂತೂ ದಾರಿಗಾಗಿ ನಿತ್ಯ ಜಗಳ, ವಾಗ್ವಾದ ನಡೆಯುವುದು ಸಾಮಾನ್ಯ ಎಂಬಂತಾಗಿದೆ.

ಉಡುವಳ್ಳಿ ಸಮೀಪ ರಸ್ತೆಯ ಒಂದು ಭಾಗ ಒಂದೂವರೆ ಅಡಿಗಿಂತ ಎತ್ತರವಿದ್ದು, ಮತ್ತೊಂದು ಭಾಗದ ರಸ್ತೆಗೆ ಜಲ್ಲಿ, ಮಣ್ಣು ತುಂಬಲಾಗುತ್ತಿದೆ. ಬಲಭಾಗದಲ್ಲಿ ಮಳೆಯ ನೀರಿನಿಂದ ರಸ್ತೆ ಕೊರಕಲು ಬಿದ್ದಿದ್ದು, ಅಲ್ಲಿ ವಾಹನ ಇಳಿಸುವುದು ಸಾಧ್ಯವಾಗದ ಮಾತು. ಹೀಗಾಗಿ ಈ ಜಾಗದಲ್ಲಿ ನಿತ್ಯ ಹತ್ತಾರು ಬಾರಿ ವಾಹನ ದಟ್ಟಣೆ ಉಂಟಾಗುತ್ತದೆ.

‘ಗೋಕುಲನಗರ, ಅರಿಶಿಣಗುಂಡಿ, ಯಲ್ಲದಕೆರೆ, ಪಿಲ್ಲಾಜನಹಳ್ಳಿ, ಹಾಲುಮಾದೇನಹಳ್ಳಿ, ಬಡಗೊಲ್ಲರಹಟ್ಟಿ, ನಾಯಕರಕೊಟ್ಟಿಗೆ, ಸೀಗೆಹಟ್ಟಿ, ಹಿಂಡಸಕಟ್ಟೆ ಗ್ರಾಮಗಳ ರೈತರು ಹಣ್ಣು, ತರಕಾರಿ, ಸೊಪ್ಪು, ಹಾಲು ತೆಗೆದುಕೊಂಡು ನಿತ್ಯ ಎರಡು ಬಾರಿ ಹಿರಿಯೂರು ನಗರಕ್ಕೆ ಹೋಗಿ ಬರುವುದುಂಟು. ಗುಂಡಿ ಬಿದ್ದ ರಸ್ತೆಯಲ್ಲಿ ಸುರಕ್ಷಿತವಾಗಿ ಮನೆ ತಲುಪುವ ಖಾತರಿ ರೈತರಿಗಿಲ್ಲ’ ಎನ್ನುತ್ತಾರೆ ಪಿಲ್ಲಾಜನಹಳ್ಳಿಯ ರೈತ ನಿಂಗಣ್ಣ.

ಚಿತ್ರದುರ್ಗ, ಬಳ್ಳಾರಿ ಕಡೆಯಿಂದ ಮೈಸೂರು, ಹಾಸನದ ಕಡೆ ಹೋಗುವವರಿಗೆ ಈ ಮಾರ್ಗ ತುಂಬ ಹತ್ತಿರ. ರಸ್ತೆ ಸರಿ ಇದ್ದರೆ ಹಿರಿಯೂರಿನಿಂದ ಹುಳಿಯಾರಿಗೆ 35–40 ನಿಮಿಷದಲ್ಲಿ ತಲುಪಬಹುದು. ಆದರೆ ಈಗ ಒಂದೂವರೆ ಗಂಟೆ ಬೇಕಾಗುತ್ತದೆ. ಹೀಗಾಗಿ ದೂರವಾದರೂ ಸರಿ ಎಂದು ತುಮಕೂರು–ಕುಣಿಗಲ್–ಮದ್ದೂರು ಮಾರ್ಗವಾಗಿ ಮೈಸೂರಿಗೆ ಹೋಗುತ್ತಿದ್ದಾರೆ ಎಂದು ರೈತ ಸಂಘದ ಕಾರ್ಯಾಧ್ಯಕ್ಷ  ಕೆ.ಸಿ. ಹೊರಕೇರಪ್ಪ ಹೇಳುತ್ತಾರೆ.

‘ಇದ್ದಲನಾಗೇನಹಳ್ಳಿ ಹಾಗೂ ಯಲ್ಲದಕೆರೆ ಸಮೀಪವೂ ಭೂಸ್ವಾಧೀನ ಸಮಸ್ಯೆಯಿಂದ ಕಾಮಗಾರಿ ತಡವಾಗಿದೆ. ಈ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಅವರಿಂದ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್ ನರೇಂದ್ರ ತಿಳಿಸಿದ್ದಾರೆ.

ಹಿರಿಯೂರು ತಾಲ್ಲೂಕಿನ ಹಿಂಡಸಕಟ್ಟೆ ಸಮೀಪ ರಸ್ತೆ ದಾಟಲು ರೈತರೊಬ್ಬರು ಕಾಯುತ್ತಿರುವುದು
ಹಿರಿಯೂರು ತಾಲ್ಲೂಕಿನ ಹಿಂಡಸಕಟ್ಟೆ ಸಮೀಪ ರಸ್ತೆ ದಾಟಲು ರೈತರೊಬ್ಬರು ಕಾಯುತ್ತಿರುವುದು
ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಸಮೀಪ ಹೆದ್ದಾರಿ ಕಾಮಗಾರಿಗಾಗಿ ರಸ್ತೆ ಅಗೆದಿರುವುದು
ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಸಮೀಪ ಹೆದ್ದಾರಿ ಕಾಮಗಾರಿಗಾಗಿ ರಸ್ತೆ ಅಗೆದಿರುವುದು

ಅಪೂರ್ಣವಾಗಿರುವ ರಸ್ತೆಯಲ್ಲಿ ವಾಹನ ಸವಾರರು ಅಪಘಾತಕ್ಕೀಡಾಗಿ ಮೃತಪಟ್ಟರೆ ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನೇ ಹೊಣೆಯಾಗಿಸಬೇಕು.

-ಕೆ.ಸಿ. ಹೊರಕೇರಪ್ಪ ಜಿಲ್ಲಾ ಕಾರ್ಯಾಧ್ಯಕ್ಷ ರೈತ ಸಂಘ

‘ಭೂಸ್ವಾಧೀನ ಸಮಸ್ಯೆ’

‘ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಯ ಹಿರಿಯೂರು–ಹುಳಿಯಾರು ನಡುವಿನ 31 ಕಿ.ಮೀ. ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಉಂಟಾಗಿರುವ ಸಮಸ್ಯೆ ಕಾರಣ. 31 ಕಿ.ಮೀ. ರಸ್ತೆಯಲ್ಲಿ 28 ಕಿ.ಮೀ. ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಕೆಲವು ರೈತರು ಹೆಚ್ಚಿನ ಭೂ ಪರಿಹಾರ ಕೋರಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಹಿಂಡಸಕಟ್ಟೆ ಸಮೀಪ ರಸ್ತೆಯಲ್ಲಿನ ತಿರುವು (ಅಪಘಾತ ವಲಯ) ಬದಲಿಗೆ ರಸ್ತೆ ನೇರಗೊಳಿಸಲು ತೋಟಗಳು ಅಡ್ಡಿಯಾಗಿದ್ದವು. ಅದರಲ್ಲಿ ಒಬ್ಬ ರೈತರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಅವರು ಆಸ್ಪತ್ರೆಯಿಂದ ಹೊರಬರುವವರೆಗೆ ಕಾಯಬೇಕಾಯಿತು. ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಭೂಸ್ವಾಧೀನದ ಸಮಸ್ಯೆ ಮುಗಿದರೆ 2–3 ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT