ಚಿತ್ರದುರ್ಗ: ದಸರಾ ಅಂಗವಾಗಿ ನಗರದ ದಾವಣಗೆರೆ ರಸ್ತೆಯ ‘ಸಂಜನಾ’ ನಿವಾಸದಲ್ಲಿ ಆಯೋಜಿಸಲಾಗಿರುವ ಗೊಂಬೆ ಹಬ್ಬವು ‘ವಿಶ್ವ ಸಂಸ್ಕೃತಿ ಸಂಗಮ’ವನ್ನು ಅನಾವರಣಗೊಳಿಸಿದೆ. ಭಕ್ತಿ ಪರಿಕಲ್ಪನೆಯ ಮೇಲೆ ಅರಳಿ ನಿಂತಿರುವ ಗೊಂಬೆಗಳು ಪುರಾಣಗಳ ಕತೆ ಹೇಳುತ್ತಿದ್ದು ನೋಡುಗರ ಮನಸೂರೆಗೊಳ್ಳುತ್ತಿವೆ.

ಕೆ.ವಿ.ಪ್ರಭಾಕರ್ – ವಿಜಯಾ ಪ್ರಭಾಕರ್ ಅವರು ಕಳೆದ 15 ವರ್ಷಗಳಿಂದಲೂ ತಮ್ಮ ಮನೆಯಲ್ಲಿ ನವರಾತ್ರಿ ಅಂಗವಾಗಿ ಗೊಂಬೆ ಹಬ್ಬ ಆಚರಿಸುತ್ತಾ ಬಂದಿದ್ದಾರೆ. ಈ ವರ್ಷ 5 ಸಾವಿರಕ್ಕೂ ಹೆಚ್ಚು ಗೊಂಬೆಗಳು ದರ್ಶನ ನೀಡುತ್ತಿದ್ದು ನೋಡುಗರನ್ನು ಕಣ್ಣರಳಿಸುವಂತೆ ಮಾಡಿವೆ. ‘ಸಂಜನಾ’ ನಿವಾಸವನ್ನು ಪ್ರವೇಶಿಸುತ್ತಿದ್ದಂತೆ ದ್ವಾರಪಾಲಕರ ಪ್ರತಿಮೆಗಳು ಸ್ವಾಗತ ಕೋರುತ್ತವೆ. ದ್ವಾರದಲ್ಲೇ ತಿರುಪತಿ ವೆಂಕಟೇಶ್ವರ ದೇವಾಲಯದ ಅರಳಿ ನಿಂತಿದೆ.

ಹಲವು ರಾಷ್ಟ್ರಗಳ ಗೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದ್ದು ಆಯಾ ದೇಶಗಳ ಸಂಪ್ರದಾಯಗಳನ್ನು ಅವು ಸಾರಿ ಹೇಳುತ್ತಿವೆ. ಆಫ್ರಿಕಾದ ಜಿರಾಫೆ, ಕಾಂಬೋಡಿಯಾದ ವಾದ್ಯಗಾರ, ಸ್ವೀಡನ್ನಿನ ಸಾಂಪ್ರದಾಯಿಕ ಧಿರಿಸು, ಸ್ಕಾಟ್ಕೆಂಡ್ನ ಬ್ಯಾಗ್ಪೈಪರ್, ದುಬೈ ಶೇಖ್, ಜರ್ಮನಿಯ ಮಕ್ಕಳ ಗೊಂಬೆಗಳು ಗಮನ ಸೆಳೆಯುತ್ತವೆ. ಅಷ್ಟೇ ಅಲ್ಲದೇ ಜಪಾನ್, ಫ್ರಾನ್ಸ್, ಇಂಗ್ಲೆಂಡ್, ಕೊರೊಶಿಯಾ ಮುಂತಾದ ದೇಶಗಳ ಗೊಂಬೆಗಳು ಕೂಡ ಗಮನ ಸೆಳೆಯುತ್ತವೆ.

ಅಂಡಮಾನ್–ನಿಕೋಬಾರ್ನ ಬುಡಕಟ್ಟು ಸಂಪ್ರದಾಯ ಬಿಂಬಿಸುವ ಗೊಂಬೆಗಳಿಗೂ ಸ್ಥಾನ ನೀಡಲಾಗಿದೆ. ಜೊತೆಗೆ ಕೋಟೆನಗರಿಯ ಅಸ್ಮಿತೆಯಾಗಿರುವ ಒನಕೆ ಓಬವ್ವ, ನಾಯಕ ಅರಸರ ಗೊಂಬೆಗಳನ್ನೂ ಕಾಣಬಹುದಾಗಿದೆ. ಚಾಮುಂಡಿ ಬೆಟ್ಟದ ತದ್ರೂಪವನ್ನು ತೆರೆದಿಡಲಾಗಿದ್ದು ದೇವರ ವಿಗ್ರಹ, ಮಹಿಷಾಸುರ, ಬೆಟ್ಟದ ಮೇಲಿರುವ ಮಾರುಕಟ್ಟೆ, ಹೋಟೆಲ್, ವಾಹನ ನಿಲ್ದಾಣವನ್ನು ಗೊಂಬೆಗಳ ಮೂಲಕ ಅನಾವರಣಗೊಳಿಸಲಾಗಿದೆ.

ಮೈಸೂರು ಅರಮನೆ ಮುಂದೆ ನಡೆಯುವ ದಸರಾ ಸಂಪ್ರದಾಯವನ್ನು ಇಲ್ಲಿ ಕಾಣಬಹುದಾಗಿದೆ. ಅಂಬಾರಿ ಮೇಲೆ ಕುಳಿತ ಚಾಮುಂಡಿ ತಾಯಿ, ರಾಜ, ಮಹಾರಾಜರ ಗೊಂಬೆಗಳು, ಆನೆ, ಕುದುರೆ, ಸೈನಿಕ, ಕಾಲಾಳುಗಳ ಗೊಂಬೆಗಳು ಕಣ್ಣಿಗೆ ಕಟ್ಟುತ್ತವೆ. ಗಣಪತಿ ಚಿತ್ರ, ಭೀಮಾರ್ಜುನ ಸಂವಾದ ಯಕ್ಷಗಾನ ಗೊಂಬೆಗಳು ಇಲ್ಲಿವೆ. ನಿವಾಸದ ದೇವರ ಮನೆಯಲ್ಲಿ ಗೌರಿ, ವೈಭವ ಲಕ್ಷ್ಮಿ, ಅನ್ನಪೂರ್ಣೇಶ್ವರಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀಕೃಷ್ಣ ಹುಟ್ಟು ಸೇರಿದಂತೆ ಆತನ ಜನ್ಮವೃತ್ತಾಂತವನ್ನು ಬಿಂಬಿಸುವ ಗೊಂಬೆಗಳನ್ನು ಕೂರಿಸಿರುವುದು ವಿಶೇಷವಾಗಿದೆ.

ನಿವಾಸದ ಹಜಾರದಲ್ಲಿ ನವದುರ್ಗೆಯರ ದೇವಾಲಯವೇ ಧರಗಿಳಿದುಬಂದಂತೆ ಕಲಾತ್ಮಕ ರೂಪ ನೀಡಲಾಗಿದೆ. ದೇವಿಯರ ಮೂರ್ತಿಗಳಿಗೆ ಸೊಗಸಾದ ಅಲಂಕಾರ ಮಾಡಲಾಗಿದೆ. ಹಜಾರದ ಮತ್ತೊಂದೆಡೆ ದುರ್ಗಾದೇವಿ, ಸರಸ್ವತಿ, ಲಕ್ಷ್ಮಿ, ಕೊಲ್ಹಾಪುರದ ಮಹಾಲಕ್ಷ್ಮಿ, ಅಷ್ಟಲಕ್ಷ್ಮಿಯರು, ಸಪ್ತಮಾತೃಕೆ, ರಾಜರಾಜೇಶ್ವರಿ, ಶೃಂಗೇರಿ ಶಾರದೆ, ಕಂಚಿ ಕಾಮಾಕ್ಷಿ, ತುಳಜಾಭವಾನಿ, ಗಾಯತ್ರಿದೇವಿ ಪ್ರತಿಮೆಗಳನ್ನು ಕೂರಿಸಲಾಗಿದ್ದು ನೋಡುಗರಲ್ಲಿ ಭಕ್ತಿ ಭಾವ ಸೃಷ್ಟಿ ಮಾಡುತ್ತಿದೆ. ಸಾಯಿ ಬಾಬಾ, ರಾಘವೇಂದ್ರ ಸ್ವಾಮಿಗಳ ಜನ್ಮ ವೃತ್ತಾಂತವನ್ನು ಗೊಂಬೆಗಳ ಮೂಲಕ ಚಿತ್ರಿಸಲಾಗಿದೆ.

ಮೇಲುಕೋಟೆ ಚೆಲುವನಾರಾಯಣಸ್ವಾಮಿ, ವಿಶ್ವಕರ್ಮ, ಕುಬೇರ, ಧನ್ವಂತರಿ ಮೂರ್ತಿ ಇಲ್ಲಿವೆ. ಆರೋಗ್ಯ, ಸಂಪತ್ತು, ನೆಮ್ಮದಿ ಪರಿಕಲ್ಪನೆಯ ಸಂಕೇತಿಸುವ ಗೊಂಬೆಗಳು ಹೊಸ ಭಾವ ಸೃಷ್ಟಿಸುತ್ತವೆ. ಮಾನವತೆಯಿಂದ ದೈವತ್ವಕ್ಕೇರಿದ ಅಣ್ಣ ಬಸವಣ್ಣ, ಅಕ್ಕ ಮಹಾದೇವಿ, ಶಂಕರಾಚಾರ್ಯ, ರಾಮಾನುಜಾಚಾರ್ಯ, ಕನಕದಾಸ, ಮಾಧ್ವಾ ಚಾರ್ಯ, ಸಂಗೊಳ್ಳಿ ರಾಯಣ್ಣನ ಗೊಂಬೆಗಳೂ ಇವೆ. ರಾಮಾಯಣ, ಮಹಾಭಾರತದ ಕತೆ ಹೇಳುವ ಗೊಂಬೆಗಳು ನೋಡುಗರನ್ನು ಪುರಾಣ ಲೋಕಕ್ಕೆ ಕರೆದೊಯ್ಯುತ್ತವೆ.

ನಿವಾಸದ ಮೇಲ್ಮಹಡಿಯಲ್ಲಿ ಗಣೇಶ– ಸುಬ್ರಹ್ಮಣ್ಯರ ವಿಶ್ವಪರ್ಯಟನೆ ಗೊಂಬೆಗಳಿಗೆ ಚಲನಾ ರೂಪ ನೀಡಲಾಗಿದೆ. ಬಣ್ಣಬಣ್ಣದ ದೀಪಾಲಂಕಾರದ ನಡುವೆ ಚಲಿಸುವ ಗೊಂಬೆಗಳು ಮಕ್ಕಳನ್ನು ಕಣ್ಣರಳಿಸುವಂತೆ ಮಾಡಿವೆ. ಹತ್ತಿಯ ಮೂಲಕ ರೂಪಿಸಲಾಗಿರುವ ಶಿವನ ಕೈಲಾಸ ಪರ್ವತ ಆಶ್ಚರ್ಯ ಸೃಷ್ಟಿಸುತ್ತದೆ.

ದೇಶದ ಹಲವು ದೇವಾಲಯಗಳ ತದ್ರೂಪ ಸೃಷ್ಟಿಸಲಾಗಿದೆ. ನಾಯಕನಹಟ್ಟಿ ತಿಪ್ಪೇಸ್ವಾಮಿ ರಥ, ಭದ್ರಿನಾಥ, ಕೇದಾರನಾಥ, ಕಾಶಿ ವಿಶ್ವನಾಥ, ಅಮೃತಸರ ದೇವಾಲಯ, ಕಾಮಾಕ್ಯ ದೇವಿ, ಕುಕ್ಕೆ ಸುಬ್ರಹ್ಮಣ್ಯ, ಶ್ರೀರಂಗಂ, ತಿರುವಣ್ಣ ಮಲೈ, ಬದಾಮಿ ಬನಶಂಕರಿ ದೇವಾಲಯ, ಹುಬ್ಬಳ್ಳಿ ಸಿದ್ಧಾರೂಢ ಮಠದ ತದ್ರೂಪವನ್ನು ಸೊಗಸಾಗಿ ಸೃಷ್ಟಿಸಲಾಗಿದೆ. ಹಳ್ಳಿಯ ಜೀವನ ಸಾರುವ ಗೊಂಬೆಗಳು ಮಕ್ಕಳಿಗೆ ಇಷ್ಟವಾಗುತ್ತವೆ. ಪಂಚತಂತ್ರ ಕತೆಗಳನ್ನೂ ಗೊಂಬೆಗಳು ಹೇಳುತ್ತಿವೆ.

ಸಂಸ್ಕೃತಿ, ಸಂಪ್ರದಾಯ, ಶಿಕ್ಷಣದ ಸಂದೇಶ ಹೊತ್ತು ನಿಂತಿರುವ ಗೊಂಬೆಗಳು ಕೋಟೆ ನಗರಿ ಜನರಿಗೆ ಮುದ ನೀಡುತ್ತಿವೆ. ನವರಾತ್ರಿ ಮೊದಲ ದಿನದಿಂದಲೇ ಗೊಂಬೆ ಹಬ್ಬ ಆರಂಭವಾಗಿದ್ದು ಅ.15ರವರೆಗೂ ಮುಂದುವರಿಯಲಿದೆ.

ಕಲಾವಿದೆಯ ಕೈಚಳಕ...

ಕೆ.ವಿ.ಪ್ರಭಾಕರ್ ಅವರ ಪತ್ನಿ ವಿಜಯಾ ಅವರು ಚಿತ್ರಕಲಾ ಕಲಾವಿದೆಯೂ ಆಗಿದ್ದು ಗೊಂಬೆಹಬ್ಬ ಆಯೋಜನೆಯ ಹಿಂದಿನ ಶಿಲ್ಪಿಯಾಗಿದ್ದಾರೆ. ಹಬ್ಬ ಆಯೋಜನೆಗಾಗಿ ಕಳೆದೆರಡು ತಿಂಗಳುಗಳಿಂದಲೂ ಸಿದ್ಧತೆ ನಡೆಸಿ ಹೊಸ ರೂಪ ನೀಡಿದ್ದಾರೆ. ಅವರ ಮನೆ ಕೇವಲ ವಾಸದ ಮನೆ ಮಾತ್ರವೇ ಆಗಿರದೆ ಕಲಾ ಕುಸುರಿಯ ಪ್ರದರ್ಶನಾಲಯವೂ ಆಗಿದೆ. ಮನೆಯ ಗೋಡೆ ಗೋಡೆಗಳಲ್ಲಿ ಮೂಲೆ ಮೂಲೆಯಲ್ಲಿ ಅವರೇ ಚಿತ್ರಿಸಿರುವ 150ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಗ್ಲಾಸ್ ಪೇಂಟಿಂಗ್ ತಂಜಾವೂರು ಪೇಂಟಿಂಗ್ನಲ್ಲಿ ವಿಜಯಾ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ. ‘ಪ್ರತಿ ವರ್ಷವೂ ಒಂದೊಂದು ಪರಿಕಲ್ಪನೆಯಡಿ ನಾವು ಗೊಂಬೆ ಹಬ್ಬ ಆಯೋಜನೆ ಮಾಡುತ್ತೇವೆ. ಕಳೆದ ವರ್ಷ ಅಯೋಧ್ಯೆ ರಾಮಮಂದಿರ ಪರಿಕಲ್ಪನೆಯಲ್ಲಿ ಹಬ್ಬ ಆಯೋಜಿಸಿದ್ದೆವು. ಈ ಬಾರಿ ದೇವಿಯರ ಪ್ರತಿಮೆ ಪ್ರತಿಷ್ಠಾಪನೆಗೆ ಆದ್ಯತೆ ನೀಡಲಾಗಿದೆ’ ಎಂದು ವಿಜಯಾ ಪ್ರಭಾಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.