ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಸಗಿ ಏಜೆನ್ಸಿಗಳ ಅವಧಿ ಮುಕ್ತಾಯ, ದುರಸ್ತಿ ಕಾಣದ ಶುದ್ಧ ನೀರಿನ ಘಟಕಗಳು

Published 15 ಜುಲೈ 2024, 7:29 IST
Last Updated 15 ಜುಲೈ 2024, 7:29 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಾದ್ಯಂತ ನೂರಾರು ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದು, ದುರಸ್ತಿ ರಿಪೇರಿ ಕಾಣದಾಗಿವೆ. ಘಟಕಗಳನ್ನು ನಿರ್ವಹಣೆ ಮಾಡುತ್ತಿದ್ದ ಖಾಸಗಿ ಏಜೆನ್ಸಿಗಳು ಹೇಳದೇ ಕೇಳದೇ ಕಾಲ್ಕಿತ್ತಿದ್ದು, ಮುಂದೆ ಅವುಗಳನ್ನು ನಿರ್ವಹಣೆ ಮಾಡುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಅಸಮರ್ಪಕ ನಿರ್ವಹಣೆಯಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಹೆಸರಿಗಷ್ಟೇ ಆರ್‌ಒ ಪ್ಲಾಂಟ್‌ಗಳಿದ್ದು, ಅಲ್ಲಿ ನೀರು ಬರುತ್ತಿಲ್ಲ. ಪ್ರತಿ ಗ್ರಾಮದಲ್ಲೂ ಇಂಥದ್ದೇ ಪರಿಸ್ಥಿತಿ ಇದೆ. ಅವುಗಳನ್ನು ದುರಸ್ತಿ ಮಾಡುವವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆಯುತ್ತಿಲ್ಲ.

ಬಹುತೇಕ ಘಟಕಗಳಿಗೆ ನೀರಿನ ಸಂಪರ್ಕ ಕಡಿತಗೊಂಡು ಅವು ಕಾರ್ಯನಿರ್ವಹಿಸುತ್ತಿಲ್ಲ. ಜೊತೆಗೆ ಸಾವಿರಾರು ರೂಪಾಯಿ ವಿದ್ಯುತ್‌ ಬಾಕಿ ಉಳಿಸಿಕೊಂಡ ಕಾರಣ ಘಟಕಗಳಿಗೆ ಪೂರೈಸಿದ್ದ ವಿದ್ಯುತ್‌ ಸಂಪರ್ಕವನ್ನು ಬೆಸ್ಕಾಂ ಅಧಿಕಾರಿಗಳು ಕಡಿತ ಮಾಡಿದ್ದಾರೆ. ಘಟಕ ಆರಂಭವಾಗಿ ವರ್ಷ ಕಳೆಯುವುದರೊಳಗೆ ಘಟಕಗಳು ಬಂದ್‌ ಆಗಿದ್ದು, ಶುದ್ಧ ನೀರು ಮರೀಚಿಕೆಯಾಗಿದೆ.

ಅಧಿಕಾರಿಗಳು, ಜನಪ್ರತಿನಿಧಿಗಳು ಹಳ್ಳಿಗೆ ಹೋದರೆ ಜನರು ಮುಗಿ ಬೀಳುತ್ತಿದ್ದು, ಶುದ್ಧ ನೀರಿನ ಘಟಕ ದುರಸ್ತಿ ಮಾಡಿಸಿಕೊಡಿ ಎಂದು ಕೇಳುತ್ತಿದ್ದಾರೆ. ಘಟಕಗಳ ನಿರ್ವಹಣೆಗೆ ಖಾಸಗಿ ಏಜೆನ್ಸಿಗಳು ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿವೆ. ಕೆಲವೆಡೆ ನೀರು ಬರುತ್ತಿಲ್ಲ, ಯಂತ್ರ ಕೆಟ್ಟು ಹೋಗಿವೆ. ಆದರೂ ಖಾಸಗಿ ಏಜೆನ್ಸಿಗಳು ನಿರ್ವಹಣಾ ವೆಚ್ಚ ಪಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ 1,055 ಶುದ್ಧ ನೀರಿನ ಘಟಕಗಳಿವೆ. ಪ್ರತಿ ಹಳ್ಳಿಯಲ್ಲಿ ಕನಿಷ್ಠ 1–2 ಘಟಕಗಳನ್ನು ಕಾಣಬಹುದು. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ ಅನುಸಾರ ಜಿಲ್ಲೆಯಲ್ಲಿ 114 ಘಟಕಗಳು ಮಾತ್ರ ಹಾಳಾಗಿದ್ದು, ಉಳಿದವು ಕಾರ್ಯನಿರ್ವಹಣೆ ಮಾಡುತ್ತಿವೆ. ಆದರೆ ವಾಸ್ತವವಾಗಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ನೀರಿನ ಘಟಕಗಳು ಕೆಟ್ಟು ಹೋಗಿವೆ.

ನಿರ್ವಹಣಾ ಅವಧಿ ಮುಕ್ತಾಯ:

ಶುದ್ಧ ನೀರಿನ ಘಟಕಗಳು ಕೆಟ್ಟು ಹೋಗಿರುವುದಕ್ಕೆ ಖಾಸಗಿ ಏಜೆನ್ಸಿಗಳ ನಿರ್ವಹಣಾ ಅವಧಿ ಮುಕ್ತಾಯಗೊಂಡಿರುವುದು ಮುಖ್ಯ ಕಾರಣ. ನಿಯಮಾನುಸಾರ ಖಾಸಗಿ ಏಜೆನ್ಸಿಗಳ ನಿರ್ವಹಣಾ ಅವಧಿ ಮುಕ್ತಾಯಗೊಂಡ ನಂತರ ಅವುಗಳನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಬೇಕು. ನಂತರ ಅವುಗಳನ್ನು ತಾಲ್ಲೂಕು ಪಂಚಾಯಿತಿ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳೇ ನಿರ್ವಹಣೆ ಮಾಡಬೇಕು.

ಆದರೆ ಬಹುತೇಕ ಶುದ್ಧ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಗಳು ಹಸ್ತಾಂತರ ಮಾಡಿಸಿಕೊಂಡಿಲ್ಲ. ಖಾಸಗಿ ಏಜೆನ್ಸಿಗಳು ಕಾರ್ಯನಿರ್ವಹಣಾ ಅವಧಿಯಲ್ಲೇ ಹಸ್ತಾಂತರ ಮಾಡಬೇಕು. ಅದಕ್ಕೂ ಮೊದಲು ಯಂತ್ರೋಪಕರಣಗಳು ಸುಸ್ಥಿತಿಯಲ್ಲಿರಬೇಕು. ವಿದ್ಯುತ್‌ ಬಿಲ್‌ ಪಾವತಿ ಮಾಡಿರಬೇಕು.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆರ್‌ಒಗಳು ಹಾಳಾಗಿವೆ. ವಿದ್ಯುತ್‌ ಬಿಲ್‌ ಬಾಕಿ ಉಳಿದಿದ್ದು, ದುರಸ್ತಿಯಾಗದ ಆರ್‌ಒ ಘಟಕಗಳನ್ನು ಪಡೆಯಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಿದ್ಧರಿಲ್ಲ. 

ಚಿತ್ರದುರ್ಗ ನಗರದಲ್ಲೇ 20ಕ್ಕೂ ಹೆಚ್ಚು ಆರ್‌ಒ ಘಟಕ ಹಾಳಾಗಿದ್ದು, ಜನರು ಶುದ್ಧ ನೀರಿಗೆ ಪರದಾಡುವಂತಾಗಿದೆ. ನಗರಸಭೆ ವಿವಿಧ ಬಡಾವಣೆಗಳಿಗೆ 3–4 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದ್ದು, ಕುಡಿಯುವ ನೀರಿಗೆ ಕೊರತೆ ಉಂಟಾಗಿದೆ. ನಗರಕ್ಕೆ ವಿವಿ ಸಾಗರ, ಶಾಂತಿ ಸಾಗರದಿಂದ ನೀರು ಪಡೆಯಲಾಗುತ್ತಿದೆ. ಪೈಪ್‌ಲೈನ್‌ ವ್ಯವಸ್ಥೆ ಬೇಡಿಕೆಗಿಂತಲೂ ಕಡಿಮೆ ನೀರು ಪೂರೈಕೆ ಮಾಡುತ್ತಿರುವ ಕಾರಣ ನೀರಿನ ಕೊರತೆ ಇದೆ. ಶುದ್ಧ ಕುಡಿಯುವ ನೀರಿನ ಘಟಕಗಳೂ ಹಾಳಾಗಿದ್ದು, ಕೊರತೆ ಮತ್ತಷ್ಟು ಹೆಚ್ಚಳವಾಗಿದೆ.

ಈಚೆಗೆ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌, ‘ಅಧಿಕಾರಿಗಳು ಈ ವಿಷಯದಲ್ಲಿ ಏಜೆನ್ಸಿಗಳ ಮೇಲೆ ದೂರು ಹೇಳುವ ಬದಲು ಸಮಸ್ಯೆ ಬಗೆಹರಿಸಲು ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬೇಕು. ಡಿಎಂಎಫ್‌ ಅಥವಾ 15ನೇ ಹಣಕಾಸು ಯೋಜನೆ ಅಡಿಯಾದರೂ ಆರ್‌ಒ ಘಟಕಗಳನ್ನು ನಿರ್ವಹಣೆ ಮಾಡಬೇಕು’ ಎಂದು ಸೂಚಿಸಿದ್ದರು.

ಚಳ್ಳಕೆರೆಯಲ್ಲಿ ಮುದಿರ ಆರ್‌ಒ ಘಟಕದ ಬಾಗಿಲು ಮುರಿದಿದ್ದು ಯಂತ್ರೋಪಕರಣ ಹಾಳಾಗಿದೆ
ಚಳ್ಳಕೆರೆಯಲ್ಲಿ ಮುದಿರ ಆರ್‌ಒ ಘಟಕದ ಬಾಗಿಲು ಮುರಿದಿದ್ದು ಯಂತ್ರೋಪಕರಣ ಹಾಳಾಗಿದೆ
ಧರ್ಮಪುರ ಆರ್‌ಒ ಘಟಕದ ಸ್ಥಿತಿ
ಧರ್ಮಪುರ ಆರ್‌ಒ ಘಟಕದ ಸ್ಥಿತಿ
ಪಾಳು ಕಟ್ಟಡಗಳಾದ ಆರ್‌ಒ ಘಟಕಗಳು ನೀರು ಪೂರೈಕೆ ಇಲ್ಲ, ವಿದ್ಯುತ್‌ ಬಿಲ್‌ ಬಾಕಿ ಕೆಟ್ಟು ಹೋದ ಯಂತ್ರಗಳು, ಬಾರದ ನೀರು
ಆರ್‌ಒ ಘಟಕಗಳ ನಿರ್ವಹಣೆ ಮಾಡುತ್ತಿದ್ದ ಏಜೆನ್ಸಿಗಳ ಅವಧಿ ಮುಗಿದಿದೆ. ಮುಂದೆ ಅವುಗಳ ನಿರ್ವಹಣೆ ಕುರಿತಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗಿದೆ.
ದಯಾನಂದ್‌ ಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ದುರಸ್ತಿ ಇಲ್ಲದೇ ಕೆಲ ಆರ್‌ಒ ಘಟಕಗಳು ಪಾಳು ಬಿದ್ದಿವೆ. ಇನ್ನು ಕೆಲವು ಅನೈತಿಕ ಚಟುವಟಿಕೆಯ ಕೇಂದ್ರವಾಗಿ ಮಾರ್ಪಟ್ಟಿವೆ. ಸರ್ಕಾರ ವೆಚ್ಚ ಮಾಡಿದ ಲಕ್ಷಾಂತರ ರೂಪಾಯಿ ಹೊಳೆಯಲ್ಲಿ ಹಾಕಿದಂತಾಗಿದೆ.
ನಿಂಗಮ್ಮ ಚಳ್ಳಕೆರೆ
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶೇ 40ಕ್ಕೂ ಹೆಚ್ಚು ಘಟಕಗಳು ಕೆಟ್ಟು ನಿಂತಿವೆ. ಉಪ್ಪಿನಾಂಶ ಹೆಚ್ಚು ನೀರು ಇರುವುದರಿಂದ ಫಿಲ್ಟರ್‌ಗಳು ಬೇಗ ಹಾಳಾಗುತ್ತಿದ್ದು ಗುಣಮಟ್ಟದ ಸಾಮಗ್ರಿ ಬಳಸದಿರುವುದು ಘಟಕಗಳು ಹಾಳಾಗಲು ಕಾರಣ.
ರವಿಕುಮಾರ್‌ ಮೊಳಕಾಲ್ಮುರು
ನಿರ್ವಹಣೆಗೆ ಗ್ರಾ.ಪಂಗಳಲ್ಲಿ ಹಣ ಇಲ್ಲ
ಕೊಂಡ್ಲಹಳ್ಳಿ ಜಯಪ್ರಕಾಶ ಮೊಳಕಾಲ್ಮುರು: ತಾಲ್ಲೂಕಿನಲ್ಲಿ 15 ವರ್ಷಗಳ ಹಿಂದೆ ಪ್ರಥಮವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಯಿತು. ಹೈದರಾಬಾದ್‌ನ ಡಾಕ್ಟರ್‌ ವಾಟರ್ಸ್‌ ಕಂಪನಿಯ 3 ಘಟಕಗಳು ಆರಂಭವಾದವು. ನಂತರ ಜನಪ್ರತಿನಿಧಿಗಳ ಅನುದಾನದಲ್ಲಿ ಘಟಕಗಳು ಆರಂಭಿಸಲು ಶುರುಮಾಡಿದ ನಂತರ ಅವುಗಳ ಸಂಖ್ಯೆ ಹೆಚ್ಚಾಯಿತು. ಕೆಲವೆಡೆ ಘಟಕಗಳಿಗೆ ನೀರು ಸಂಪರ್ಕಿಸುವ ಕೊಳವೆಬಾವಿ ಬತ್ತಿರುವುದು ಇನ್ನು ಕೆಲವೆಡೆ ವಿದ್ಯುತ್ ಸಂಪರ್ಕ ಸಮಸ್ಯೆ ಕಾಯಿನ್‌ ಬದಲು ವಾಷರ್‌ಗಳನ್ನು ಹಾಕುವ ದೂರು ಕೇಳಿಬಂದಿದೆ. ಕೊಂಡ್ಲಹಳ್ಳಿ ಬಿ.ಜಿ.ಕೆರೆ ಕೋನಸಾಗರ ರಾಂಪುರಮುಂದಾದ ದೊಡ್ಡ ಗ್ರಾಮಗಳಲ್ಲಿ ಘಟಕಗಳು ಕೆಟ್ಟು ವರ್ಷಗಳು ಕಳೆದರೂ ಹೊಣೆ ಹೊತ್ತವರು ತಲೆ ಕೆಡಿಸಿಕೊಂಡಿಲ್ಲ. ನಿರ್ವಹಣೆ ಅವಧಿ ನಂತರ ಗ್ರಾಮ ಪಂಚಾಯಿತಿಗಳು ಘಟಕಗಳ ದುರಸ್ತಿ ಮಾಡಿಸಬೇಕು ಎಂಬ ಕಾನೂನು ಇದೆ. ಆದರೆ ಸಾವಿರಗಟ್ಟಲೆ ಹಣವನ್ನು ದುರಸ್ತಿಗೆ ನೀಡಲು ನಮ್ಮಲ್ಲಿ ಅನುದಾನ ಸಾಧ್ಯವಿಲ್ಲ ಎನ್ನುತ್ತಾರೆ ಪಿಡಿಒಗಳು. ತಾಲ್ಲೂಕಿಗೆ ಶುದ್ಧ ನೀರು ನೀಡುವ ನಿಟ್ಟಿನಲ್ಲಿ ತುಂಗಭದ್ರಾ ಹಿನ್ನೀರು ಯೋಜನೆ ಪೂರ್ಣಗೊಂಡು ಪರೀಕ್ಷಾರ್ಥ ಹಂತದಲ್ಲಿದೆ. ಯೋಜನೆ ಆರಂಭ ನಂತರ ಹೊಸ ಘಟಕ ಆರಂಭಕ್ಕೆ ದುರಸ್ತಿಗೆ ಅನುದಾನ ನೀಡುವುದಿಲ್ಲ ಎನ್ನಲಾಗಿದೆ. ಸಧ್ಯ ತಾಲ್ಲೂಕಿನಲ್ಲಿ 88 ಘಟಕ ಆರಂಭಿಸಿದ್ದು ಶೇ 40ರಷ್ಟು ಸುಸುಸ್ಥಿತಿಯಲ್ಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕಳಪೆ ಸಲಕರಣೆ ಅಳವಡಿಕೆ ಶಿವಗಂಗಾ ಚಿತ್ತಯ್ಯ
ಚಳ್ಳಕೆರೆ: ಜನರಿಗೆ ಕುಡಿಯುವ ಶುದ್ಧ ನೀರು ಪೂರೈಕೆ ಮಾಡಲು ಸ್ಥಾಪಿಸಿದ್ದ ಬಹುತೇಕ ಆರ್‌ಒ ಘಟಕಗಳು ದುರಸ್ತಿ ಕಂಡಿಲ್ಲ. ಇಲ್ಲಿನ ಇಂದಿರಾ ತರಕಾರಿ ಮಾರುಕಟ್ಟೆ ಹಿಂಭಾಗ ಇಂಜನಹಟ್ಟಿ ಕಾಟಪ್ಪನಹಟ್ಟಿ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ಪೆತ್ತಮ್ಮನವರಹಟ್ಟಿ ಬಂಡೆಹಟ್ಟಿ ಪೂಜಾರಿ ಪಾಲಯ್ಯನಹಟ್ಟಿ ಬಂಗಾರದೇವರಹಟ್ಟಿ ಕವಲಾರಹಟ್ಟಿ ಇಮಾಂಪುರ ಗೊರ್ಲಕಟ್ಟೆ ದೊರೆಹಟ್ಟಿ ತೊಡ್ಲರಹಟ್ಟಿ ಕರೆಕಾಟ್ಲಹಟ್ಟಿ ಕ್ಯಾದಿಗುಂಟೆ ಜಾಜೂರು ಟಿ.ಎನ್.ಕೋಟೆ ಗೋಸಿಕೆರೆ ಬೊಮ್ಮಸಮುದ್ರ ಬುಡ್ನಹಟ್ಟಿ ದೇವರಮರಿಕುಂಟೆ ಸಾಣಿಕೆರೆ ಹೀಗೆ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಸೇರಿ ತಾಲ್ಲೂಕಿನಲ್ಲಿ ಒಟ್ಟು 40ಕ್ಕೂ ಹೆಚ್ಚು ಗ್ರಾಮದಲ್ಲಿ ಕುಡಿಯುವ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿವೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಿದ್ದರೂ ನಿರ್ವಹಣೆಯ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನ ಜನತೆ ಶುದ್ಧ ನೀರಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ತಾಲ್ಲೂಕಿನ ಕೆಲ ಗ್ರಾಮದಲ್ಲಿ ಘಟಕ ಸ್ಥಾಪನೆಗೆ ಬಳಸಿದ್ದ ಸಲಕರಣೆಗಳು ಕಳಪೆಯಾಗಿದ್ದ ಕಾರಣ ಈಗ ಅ ಸಲಕರಣೆಗಳು ತುಕ್ಕು ಹಿಡಿದಿವೆ. ಬಾಗಿಲುಗಳು ಮುರಿದು ಹೋಗಿವೆ. ವಿದ್ಯುತ್ ಸಂಪರ್ಕದ ತಂತಿ ಕಿತ್ತು ಹೋಗಿದೆ. ಕೆಟ್ಟು ನಿಂತ ಘಟಕಗಳನ್ನು ದುರಸ್ತಿ ಮಾಡಿಸಲು ಸಂಬಂಧಪಟ್ಟ ಇಲಾಖೆಗೆ ಎರಡು ಪತ್ರ ಬರೆದು ದೂರವಾಣಿ ಮೂಲಕ ಮಾಹಿತಿ ನೀಡಿದರೂ ‘ದುರಸ್ತಿ ಮಾಡಿಸುತ್ತೇವೆ’ ಎಂದು ನೆಪ ಹೇಳುತ್ತಾರೆ ಹೊರತು ರಿಪೇರಿ ಮಾಡಲು ಯಾರೂ ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಮಾಭಿವೃದ್ಧಿ ಅಧಿಕಾರಿಗಳು.
ಕುಡಿಯುವ ನೀರಿಗೆ ಕೊರತೆ ವಿ. ವೀರಣ್ಣ
ಧರ್ಮಪುರ: ಹೋಬಳಿಯ ಹತ್ತು ಗ್ರಾಮ ಪಂಚಾಯಿತಿಗಳಲ್ಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಬರ ಆರಂಭವಾಗಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಹೋಬಳಿಯ ಬಹುತೇಕ ಕೆರೆಗಳಲ್ಲಿ ನೀರು ಸಂಗ್ರಹವಾಗಿದ್ದು ಕುಡಿಯುವ ನೀರಿಗೆ ಸಮಸ್ಯೆ ಇರಲಿಲ್ಲ. ಈಗ ಕೆರೆಗಳಲ್ಲಿ ನೀರು ಖಾಲಿಯಾಗಿರುವುದರಿಂದ ಅಂತರ್ಜಲ ಬತ್ತಿ ಹೋಗಿದ್ದು ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದೆ.  ಪಿ.ಡಿ.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಕ್ಕರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾದಾಗಿನಿಂದ ಯಂತ್ರೋಪಕರಣಗಳ ಸಮಸ್ಯೆಯಿಂದ ಆಗಾಗ್ಗೆ ಕೆಟ್ಟು ಹೋಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗೊಲ್ಲರಹಟ್ಟಿ ಮತ್ತು ಎ.ಕೆ.ಕಾಲೊನಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲದೇ ಇರುವುದರಿಂದ ಎರಡು ಮೂರು ಕಿ.ಮೀ.ದೂರದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರು ತರಬೇಕಾದ ಅನಿವಾರ್ಯತೆ ಶುರುವಾಗಿದೆ. ಅದಕ್ಕಾಗಿ ಅಂತಹ ಪ್ರದೇಶದಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಬೇಕು ಎಂಬುದು ನಾಗರಿಕರ ಒತ್ತಾಯ. ‘ಸಕ್ಕರ ಗ್ರಾಮದಲ್ಲಿ ಮೂರು ಸಾವಿರ ಜನಸಂಖ್ಯೆ ಇದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಒಂದು ವರ್ಷವಾಗಿದೆ. ಇದರಿಂದ ತೊಂದರೆಯಾಗುತ್ತಿದ್ದು ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸಬೇಕು’ ಎಂದು ಗ್ರಾಮದ ಪುಟ್ಟಮ್ಮ ಒತ್ತಾಯಿಸಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT