ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ: ಶೋಭಾಯಾತ್ರೆಗೆ ಬಿರುಸಿನ ಸಿದ್ಧತೆ

Published : 18 ಸೆಪ್ಟೆಂಬರ್ 2024, 16:28 IST
Last Updated : 18 ಸೆಪ್ಟೆಂಬರ್ 2024, 16:28 IST
ಫಾಲೋ ಮಾಡಿ
Comments

ಹೊಸದುರ್ಗ: ಪಟ್ಟಣದ ಟಿ.ಬಿ. ವೃತ್ತದ ಸಮೀಪ ಅಯೋಧ್ಯೆ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಬೃಹತ್ ಶೋಭಾಯಾತ್ರೆ ಗುರುವಾರ ನಡೆಯಲಿದ್ದು, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕೇಸರಿ ಬಾವುಟ, ಪ್ಲೆಕ್ಸ್, ಆಕರ್ಷಕ ವಿದ್ಯುತ್ ದೀಪಾಲಂಕಾರ ಸೇರಿದಂತೆ ಹಲವು ಸಿದ್ಧತೆಗಳು ಬಿರುಸಿನಿಂದ ಸಾಗಿವೆ.

ವಿರಾಟ್ ಹಿಂದೂ ಮಹಾಸಾಗರ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಕಳೆದ 13 ದಿನಗಳಿಂದ ವಿಶೇಷ ಪೂಜೆ, ಪ್ರಸಾದ ವಿತರಣೆ ಮತ್ತು ನಿತ್ಯವೂ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. 12ನೇ ದಿನವಾದ ಬುಧವಾರ ಗಣಹೋಮ ಹಾಗೂ ಇನ್ನಿತರ ಪೂಜಾ ಕಾರ್ಯಗಳು ನೆರವೇರಿದವು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಪ್ರತಿಷ್ಠಾಪನಾ ಸ್ಥಳದಿಂದ ಆರಂಭವಾಗುವ ಶೋಭಾಯಾತ್ರೆ ಅಂಬೇಡ್ಕರ್ ಸರ್ಕಲ್, ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್, ಮದಕರಿ ಸರ್ಕಲ್ ಮತ್ತು ವೀರಭದ್ರೇಶ್ವರ ಸ್ವಾಮಿ ದೇವಾಲಯದ ಮೂಲಕ ಮಠದ ಬಾವಿ ತಲುಪಲಿದೆ. ರಾತ್ರಿ 9 ಗಂಟೆಗೆ ವಿಸರ್ಜನೆ ನಡೆಯಲಿದೆ. ಮೆರವಣಿಗೆಯಲ್ಲಿ ಅಂದಾಜು 15,000 ಜನರು ಸೇರುವ ನಿರೀಕ್ಷೆ ಇದೆ ಎಂದು ಸೇವಾ ಸಮಿತಿಯ ಅಧ್ಯಕ್ಷ ಪ್ರದೀಪ್ ಸುಂಡ ತಿಳಿಸಿದ್ದಾರೆ.

ಭದ್ರತೆಗೆ ಒಬ್ಬ ಹೆಚ್ಚುವರಿ ಎಸ್ಪಿ, ಒಬ್ಬ ಡಿವೈಎಸ್ಪಿ, 4 ಸಿಪಿಐ, 12 ಪಿಎಸ್ಐ, 250 ಪೊಲೀಸ್ ಸಿಬ್ಬಂದಿ, ಒಂದು ಕೆಎಸ್‌ಆರ್‌ಪಿ, 4 ವಿಶೇಷ ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ತಿಮ್ಮಣ್ಣ ಮಾಹಿತಿ ನೀಡಿದರು.

ಪಟ್ಟಣಕ್ಕೆ ಬರುವ ವಾಹನ ಮಾರ್ಗದಲ್ಲಿ ಬದಲಾವಣೆ : ಬೆಂಗಳೂರು–ಶ್ರೀರಾಂಪುರ ಮಾರ್ಗವಾಗಿ ಬರುವ ವಾಹನಗಳು ಪಟ್ಟಣದ ಎಪಿಎಂಸಿ ಬಳಿ ಕಪ್ಪಗೆರೆ ರಸ್ತೆಯ ಮುಖಾಂತರ ಬಜ್ಜಪ್ಪನಹಟ್ಟಿ ಮಾರ್ಗವಾಗಿ ಹಿರಿಯೂರು ರಸ್ತೆ ಸೇರಿ ನಂತರ ಖಾಸಗಿ ಅಥವಾ ಸರ್ಕಾರಿ ಬಸ್ ನಿಲ್ದಾಣ ತಲುಪಬಹುದು. ಹೊಳಲ್ಕೆರೆಯಿಂದ ಬರುವ ವಾಹನಗಳು ಪಟ್ಟಣದ ಪ್ರವಾಸಿ ಮಂದಿರದ ಬಳಿ ಇರುವ ಬೈಪಾಸ್ ರಸ್ತೆ ಸೇರಿ ಡಿಗ್ರಿ ಕಾಲೇಜ್ ಮುಖಾಂತರ ಕುಂಚಿಟಿಗ ಮಠದ ಮಾರ್ಗವಾಗಿ ಹಿರಿಯೂರು ರಸ್ತೆ ತಲುಪಿ, ಬಸ್ ನಿಲ್ದಾಣಕ್ಕೆ ಹೋಗಬಹುದು. ತರೀಕೆರೆ ಅಜ್ಜಂಪುರ ಮಾರ್ಗವಾಗಿ ಬರುವ ವಾಹನಗಳು ಅಂಜಿ ಪೆಟ್ರೋಲ್ ಬಂಕ್ ಬಳಿ ಎಡಕ್ಕೆ ತಿರುಗಿ ಸಿದ್ದರಾಮೇಶ್ವರ ಸಮುದಾಯ ಭವನದ ಮುಖಾಂತರ ಹೊಳಲ್ಕೆರೆ ರಸ್ತೆ ಸೇರಿ ಅಲ್ಲಿಂದ ಬೈಪಾಸ್ ರಸ್ತೆ ಮೂಲಕ ಸಾಗಬೇಕು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ತಿಮಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT