ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳೆ ನಷ್ಟ ಸಮೀಕ್ಷೆಯಲ್ಲಿ ಅನ್ಯಾಯ; ಪ್ರತಿಭಟನೆ

ವಿಮಾ ಕಂಪನಿಗಳಿಂದ ಬಾರದ ನಷ್ಟ ಪರಿಹಾರ; ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
Published 24 ಜುಲೈ 2024, 16:27 IST
Last Updated 24 ಜುಲೈ 2024, 16:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೆಳೆ ಸಮೀಕ್ಷಾ ವರದಿ ತಯಾರಿಸುವಲ್ಲಿ ಪಿಡಿಒಗಳು ಮಳೆಯಾಶ್ರಿತ ಪ್ರದೇಶದ ಬದಲಾಗಿ ನೀರಾವರಿ ಪ್ರದೇಶ ಆಯ್ಕೆ ಮಾಡಿಕೊಂಡು  ರೈತರಿಗೆ ವಿಮಾ ಹಣ ಬರುವುದನ್ನು ತಪ್ಪಿಸಿದ್ದಾರೆ. ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದ ಬಳಿ ಸೇರಿದ ಮುಖಂಡರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪಿಡಿಒಗಳು ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಘೋಷಣೆ ಕೂಗಿದರು. ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ರೈತರು, ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಮುಖಂಡರು ಸಮಸ್ಯೆ ಸರಿಪರಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಬರಗಾಲ ಘೋಷಣೆ ಮಾಡಿದ್ದರೂ ಅಧಿಕಾರಿಗಳ ತಪ್ಪಿನಿಂದಾಗಿ ಹಿಂಗಾರು, ಮುಂಗಾರು ಮಳೆ ಅವಧಿಯ ಬೆಳೆ ನಷ್ಟ ಪರಿಹಾರ ರೈತರಿಗೆ ಬಂದಿಲ್ಲ. ನೀರಾವರಿ ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಲಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿರುವ ಮಾಹಿತಿಯನ್ನು ವಿಮಾ ಕಂಪನಿಗಳಿಗೆ ಕಳಿಸಿದ್ದರೆ ರೈತರಿಗೆ ಪರಿಹಾರ ಸಿಗುತ್ತಿತ್ತು. ರೈತರಿಗೆ ಅನ್ಯಾಯವಾಗಿದ್ದು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಸಮಸ್ಯೆ ಸರಿಪಡಿಸಬೇಕು. ರೈತರಿಗೆ ನಷ್ಟ ಪರಿಹಾರ ಕೊಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕೃಷಿ ಬೆಳೆಗಳ ಬೆಲೆ ಭದ್ರತೆ ಕಾಯ್ದೆ ಜಾರಿಗೊಳಿಸುವವರೆಗೂ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವಯಂ ವೆಚ್ಚ ಯೋಜನೆಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಆರ್.ಆರ್.ನಂಬರ್‌ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವಂತೆ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ ‘ರೈತರ ಕೃಷಿಗೆ ಬಹುಮುಖ್ಯವಾಗಿ ಬೇಕಾಗಿರುವ ನೀರು ಹಾಗೂ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿದರೆ ಎಲ್ಲಾ ಸಬ್ಸಿಡಿಗಳನ್ನು ಕೈಬಿಡುತ್ತೇವೆ. ಎಲ್ಲಿಯವರೆಗೂ ಈ ಸೌಕರ್ಯಗಳನ್ನು ಒದಗಿಸಲು ಸಾಧ್ಯವಿಲ್ಲವೋ ಅಲ್ಲಿಯತನಕ ಆರ್.ಆರ್.ನಂಬರ್‌ಗೆ ಆಧಾರ್ ಜೋಡಣೆ ಮಾಡುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಸಿದರು.

ಕಾಯ್ದೆ ವಿರುದ್ಧ ಆಕ್ರೋಶ: ‘ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ಮಾಡಿದವರಿಗೆ 3 ವರ್ಷ ಜೈಲು, ₹ 50 ಸಾವಿರ ದಂಡ ವಿಧಿಸುವ ಕುರಿತಂತೆ ಶಾಸಕಾಂಗ ಸಭೆಯಲ್ಲಿ ಸಚಿವ ಸಂಪುಟ ತೀರ್ಮಾನಿಸಿದೆ. ಸದ್ಯದಲ್ಲಿಯೇ ಇದು ಕಾಯ್ದೆಯಾಗಿ ಜಾರಿಯಾಗಲಿದೆ. ಆದರೆ ಕೆಲವು ವೈದ್ಯರು ಹಣಕ್ಕಾಗಿ ಕೆಲಸ ಮಾಡುತ್ತಿದ್ದು ಬಡವರ ರಕ್ತ ಹೀರುತ್ತಿದ್ದಾರೆ. ಅವರ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ’ ಎಂದು ಈಚಘಟ್ಟದ ಸಿದ್ದವೀರಪ್ಪ ಪ್ರಶ್ನಿಸಿದರು.

‘ಹಣ ಕೊಟ್ಟು ಪ್ರಮಾಣಪತ್ರ ಪಡೆದು ಮತ್ತೆ ಬಡವರಿಂದ ಹಣ ಹೀರುತ್ತಿರುವ ವೈದ್ಯರು ಈಗಲೂ ಇದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೇಳಿದಷ್ಟು ಹಣ ಕೊಟ್ಟು, ಲಕ್ಷಾಂತರ ರೂಪಾಯಿ ಬೆಲೆಯ ಔಷಧಿಗಳನ್ನೆಲ್ಲಾ ತಂದರೂ ಕೊನೆಗೆ ಹೆಣ ಹಾಕಿಕೊಂಡು ಮನೆಗೆ ಹೋಗುವ ಹೀನ ಪರಿಸ್ಥಿತಿ ಮುಂದುವರಿದಿದೆ. ಅಂತಹ ಸಂದರ್ಭಗಳಲ್ಲಿ ವೈದ್ಯರ ಮೇಲೆ ಜನರು ಕೋಪಗೊಳ್ಳುವುದು ಸಹಜ. ಅದಕ್ಕೆ ಜನರನ್ನು ಜೈಲಿಗೆ ಹಾಕುವುದು ಸರಿಯಲ್ಲ’ ಎಂದರು.

‘ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಶಾಲೆಗಳಲ್ಲಿ ಮಕ್ಕಳಿಂದ ಡೊನೇಷನ್ ಪಡೆಯಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಎಷ್ಟು ಶುಲ್ಕವಿದೆಯೋ ಅಷ್ಟೇ ಶುಲ್ಕವನ್ನು ಪಡೆದು ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಾಗಬೇಕು. ಡೊನೇಷನ್‌ ಹಾವಳಿ ತಪ್ಪಿಸುವಂತೆ ಕೋರಿ ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಖಾಸಗಿ ಶಾಲೆಯ ಪೋಷಕರು ಹಣ ವಸೂಲಿ ಮಾಡುವುದನ್ನು ಮುಂದುವರಿಸಿದ್ದಾರೆ’ ಎಂದು ಆರೋಪಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ಮುಖಂಡರಾದ ಹನುಮಂತರೆಡ್ಡಿ ಚಂದ್ರಮೌಳಿ, ಎಂ.ಟಿ.ಸತೀಶ್‌ರೆಡ್ಡಿ, ಎಂ.ಬಸವರಾಜಪ್ಪ, ತಿಮ್ಮಾರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT