ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನವದುರ್ಗೆಯರ ನಾಡಲ್ಲಿ ನವರಾತ್ರಿ ಸಂಭ್ರಮ

ಮುಂಜಾನೆ ಬನ್ನಿ ಮರಕ್ಕೆ ಪೂಜೆ; ವಿಶೇಷ ಅಲಂಕಾರಕ್ಕೆ ಮನಸೋತ ಭಕ್ತರು
Published : 3 ಅಕ್ಟೋಬರ್ 2024, 22:30 IST
Last Updated : 3 ಅಕ್ಟೋಬರ್ 2024, 22:30 IST
ಫಾಲೋ ಮಾಡಿ
Comments

ಚಿತ್ರದುರ್ಗ: ಕೋಟೆನಾಡಿನಲ್ಲಿ ನವರಾತ್ರಿ ಸಂಭ್ರಮಕ್ಕೆ ಗುರುವಾರ ಮುಂಜಾನೆ ವಿದ್ಯುಕ್ತ ಚಾಲನೆ ದೊರೆತಿದೆ. ಮೊದಲ ದಿನವೇ ಭಕ್ತರು ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶಕ್ತಿ ದೇವತೆಗಳ ಆರಾಧಕರಿಗೆ ನವರಾತ್ರಿ ಮುಖ್ಯ ಹಬ್ಬವಾಗಿದೆ. ಒಂಭತ್ತು ದಿನದ ನವದುರ್ಗಿಯರನ್ನು ಪೂಜಿಸುವುದು ಕೂಡ ವೈಶಿಷ್ಟ್ಯ. ಶೈಲಪುತ್ರಿ ಅಲಂಕಾರದ ಮೂಲಕ ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ, ಪಾಳೆಗಾರರ ಕುಲದೈವ ಉಚ್ಚಂಗಿ ಯಲ್ಲಮ್ಮ, ಕಣಿವೆ ಮಾರಮ್ಮ, ಚೌಡೇಶ್ವರಿ, ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ ದೇಗುಲಗಳಲ್ಲಿ ಪೂಜೆ ಸಲ್ಲಿಸಲಾಯಿತು.

ಮಹಿಳೆಯರು ಸೂರ್ಯ ಉದಯಸುವ ಮುನ್ನವೇ ಮನೆಗಳಲ್ಲಿ ಸಂಪ್ರದಾಯದಂತೆ ಕಳಸ, ದೇವಿ ಪ್ರತಿಷ್ಠಾಪಿಸಿ ಪೂಜಾ ಕಾರ್ಯ ಮುಗಿಸಿದರು. ಬಳಿಕ ಮನೆಗಳ ಸಮೀಪದ ಬನ್ನಿ ಮರಕ್ಕೆ ತೆರಳಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ದೇವಿ ಪುರಾಣ, ಕುಂಕುಮಾರ್ಚನೆ, ಅಷ್ಟೋತ್ತರ, ಸಹಸ್ರನಾಮ, ಮಹಾಮಂಗಳಾರತಿ ನೆರವೇರಿದವು. ಮುಂಜಾನೆಯಿಂದ ಸಂಜೆವರೆಗೂ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು.

ಬರಗೇರಮ್ಮ ದೇವಿಗೆ ಬೆಳಿಗ್ಗೆ 5.30ಕ್ಕೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಪೂಜೆ ನಡೆದವು. ಶುಕ್ರವಾರ ಹೊರತುಪಡಿಸಿ ಭಕ್ತರಿಗೆ ದರ್ಶನಕ್ಕೆ ರಾತ್ರಿ 8ರವರೆಗೂ ಅವಕಾಶ ಕಲ್ಪಿಸಲಾಗಿದೆ. ವಿಜಯದಶಮಿ ಹಬ್ಬವಾದ ಮರುದಿನ ದೇವಿಯ ಕೆಂಡಾರ್ಚನೆ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇಗುಲದ ಅರ್ಚಕ ಪೂಜಾರ್ ಸತ್ಯಪ್ಪ ತಿಳಿಸಿದ್ದಾರೆ.

ನಗರದೇವತೆ ಉಚ್ಚಂಗಿಯಲ್ಲಮ್ಮ ದೇಗುಲದಲ್ಲಿ ವಿಶೇಷ ಅಲಂಕಾರದ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಬನ್ನಿಮಹಾಕಾಳಮ್ಮ, ಉಚ್ಚಂಗಿಯಲ್ಲಮ್ಮ ದೇವಿಯ ಕೆಂಡೋತ್ಸವ ಈ ಬಾರಿ ಅ. 12ರ ವಿಜಯದಶಮಿ ದಿನದಂದು ಜರುಗಲಿದೆ.

ಒಂಬತ್ತು ರಾತ್ರಿ, ಹತ್ತು ಹಗಲು ಶಕ್ತಿದೇವತೆಗಳನ್ನು ಪೂಜಿಸಲಾಗುತ್ತದೆ. ಅ. 4ಬ್ರಹ್ಮಚಾರಿಣಿ, 5 ಚಂದ್ರಘಂಟಾ, 6 ಕೂಷ್ಮಾಂಡಾ, 7 ಸ್ಕಂದ ಮಾತೆ, 8 ಕಾತ್ಯಾಯನಿ, 9 ಮಾತೆ ಮಹಾ ಸರಸ್ವತಿ, 10 ಕಾಳಿಮಾತೆ, 11 ಧನಲಕ್ಷ್ಮಿಯ ನವರೂಪದಲ್ಲಿ ಅಲಂಕಾರ ಸೇವೆ ನಡೆಯಲಿದೆ. ನವ ಧಾನ್ಯ, ಪುಷ್ಪ, ತರಕಾರಿ, ಆಹಾರ ಪದಾರ್ಥ, ರೇಷ್ಮೆ ಸೀರೆ ಹೀಗೆ ವಿವಿಧ ಬಗೆಯ ವಸ್ತುಗಳಿಂದ ದೇವಿಯರ ಮೂರ್ತಿಗೆ ನಿತ್ಯ ವೈಭವೋಪೇತ ಅಲಂಕಾರ ಸೇವೆ ಜರುಗಲಿದೆ.

ಚಿತ್ರದುರ್ಗ ನಗರದ ಬರಗೇರಮ್ಮ ದೇವಸ್ಥಾನದ ಆವರಣದಲ್ಲಿ ಬನ್ನಿಮರಕ್ಕೆ ಗುರುವಾರ ಪೂಜೆ ಸಲ್ಲಿಸಿದ ಮಹಿಳೆಯರು
ಚಿತ್ರದುರ್ಗ ನಗರದ ಬರಗೇರಮ್ಮ ದೇವಸ್ಥಾನದ ಆವರಣದಲ್ಲಿ ಬನ್ನಿಮರಕ್ಕೆ ಗುರುವಾರ ಪೂಜೆ ಸಲ್ಲಿಸಿದ ಮಹಿಳೆಯರು
ಬರಗೇರಮ್ಮ ದೇವಿ
ಬರಗೇರಮ್ಮ ದೇವಿ
ಕಣಿವೆಮಾರಮ್ಮ ದೇವಿ
ಕಣಿವೆಮಾರಮ್ಮ ದೇವಿ
ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ
ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT