ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ದಸರಾ: 10ನೇ ಖಾಸಗಿ ದರ್ಬಾರ್‌ ನಡೆಸಿದ ಯದುವೀರ್‌

Published : 3 ಅಕ್ಟೋಬರ್ 2024, 10:59 IST
Last Updated : 3 ಅಕ್ಟೋಬರ್ 2024, 10:59 IST
ಫಾಲೋ ಮಾಡಿ
Comments

ಮೈಸೂರು: ಅಂಬಾವಿಲಾಸ ಅರಮನೆಯ ದರ್ಬಾರ್‌ ಅಂಗಳದಲ್ಲಿ ಗುರುವಾರ ಶರನ್ನವರಾತ್ರಿ ಪ್ರಯುಕ್ತ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು 10ನೇ ಬಾರಿ ಖಾಸಗಿ ದರ್ಬಾರ್ ನಡೆಸಿದರು. ಸಂಸದರಾದ ಬಳಿಕ ಇದೇ ಮೊದಲ ದರ್ಬಾರ್ ಕೂಡ ಆಗಿದೆ.

ಅರಮನೆಯಲ್ಲಿ ಮುಂಜಾನೆ 5.30ರಿಂದಲೇ ಅರಮನೆಯಲ್ಲಿ ನವರಾತ್ರಿ ಪೂಜಾ ಕಾರ್ಯಕ್ರಮಗಳು ಆರಂಭವಾದವು. ಶರನ್ನವರಾತ್ರಿಯ ಮೊದಲ ದಿನದಲ್ಲಿ ಸಿಂಹಾಸನಕ್ಕೆ ಸಿಂಹದ ಮೂರ್ತಿ ಜೋಡಿಸುವ ಕಾರ್ಯ ಬೆಳಿಗ್ಗೆ 5.45ರಿಂದ 6.10ರವರೆಗೆ ನಡೆಯಿತು.

ಅರಮನೆ ಒಳ ಆವರಣದ ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಅವರಿಗೆ ಬೆಳಿಗ್ಗೆ 7.45ರಿಂದ 8.45ರೊಳಗೆ ಕಂಕಣ ಧಾರಣೆ ಮಾಡಲಾಯಿತು. ವಾಣಿವಿಲಾಸ ದೇವರ ಮನೆಯಲ್ಲಿ ಅವರ ಪತ್ನಿ ತ್ರಿಷಿಕಾ ಕುಮಾರಿ ಅವರಿಗೂ ಕಂಕಣ ಧಾರಣೆ ನಡೆಯಿತು.

ಪಟ್ಟದ ಆನೆ ‘ಕಂಜನ್‌’, ನಿಶಾನೆ ಆನೆ ‘ಭೀಮ’, ಅರಮನೆ ಆನೆಗಳಾದ ‘ಪ್ರೀತಿ’, ‘ಚಂಚಲ’, ಪಟ್ಟದ ಕುದುರೆ, ಪ‍ಟ್ಟದ ಹಸು, ಪಟ್ಟದ ಒಂಟೆಗೆ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಆನೆ ಬಾಗಿಲಿಗೆ ಕರೆ ತರಲಾಯಿತು. ನಂತರ ಅವುಗಳಿಗೆ ಸವಾರಿ ತೊಟ್ಟಿಯಲ್ಲಿ ಬೆಳಿಗ್ಗೆ 10.30ಕ್ಕೆ ಯದುವೀರ ಅವರು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ದರ್ಬಾರ್‌ ಸಭಾಂಗಣದಲ್ಲಿ ನವಗ್ರಹ ‍ಪೂಜೆ ನಂತರ ಸವಾರಿ ತೊಟ್ಟಿಯಿಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ‘ಬಹುಪರಾಕ್‌’ ಹೇಳಿ ಸ್ವಾಗತಿಸಲಾಯಿತು. ಸಿಂಹಾಸನಕ್ಕೆ ಪ್ರದಕ್ಷಿಣೆ ಹಾಕಿದ ನಂತರ 11ರ ಸುಮಾರು ಕಳಶ ಹಾಗೂ ಸಿಂಹಾಸನಕ್ಕೆ ಪೂಜೆ ಸಲ್ಲಿಸಿದರು. ಬೆಳಿಗ್ಗೆ 11.35ರಿಂದ 12.05ರೊಳಗೆ ಸಿಂಹಾಸನದಲ್ಲಿ ಆಸೀನರಾದ ಯದುವೀರ ದರ್ಬಾರ್‌ ನಡೆಸಿದರು.

ಅರ್ಚಕರು ಅರಮನೆ ಆವರಣದಲ್ಲಿರುವ ದೇವಾಲಯಗಳು, ನಂಜನಗೂಡಿನ ಶ್ರೀಕಂಠೇಶ್ವರ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲ, ಉತ್ತನಹಳ್ಳಿ ಮಾರಮ್ಮ, ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇಗುಲ ಸೇರಿದಂತೆ 23 ದೇವಾಲಯಗಳಿಂದ ತಂದಿದ್ದ ತೀರ್ಥವನ್ನು ಯದುವೀರ ಅವರಿಗೆ ಪ್ರೋಕ್ಷಿಸಿದರು.

ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಚಾಮುಂಡೇಶ್ವರಿ ವಿಗ್ರಹ ತರಲಾಯಿತು. ಸಿಂಹಾಸನರೂಢರಾದ ಯದುವೀರ ನಮಸ್ಕರಿಸಿದರು. ಸಿಂಹಾಸನದಿಂದ ಇಳಿಯುವ ಮುನ್ನ ಅದರ ಮೇಲೆ ನಿಂತು ಸೆಲ್ಯೂಟ್‌ ಮಾಡಿದರು. ಸಂಸ್ಥಾನ ಗೀತೆ ‘ಕಾಯೌ ಶ್ರೀ ಗೌರಿ’ ವಾದ್ಯ ಸಂಗೀತ ನುಡಿಸಲಾಯಿತು. ರಾಜಮನೆತನದ ಸದಸ್ಯರು ವಂದನೆ ಸಲ್ಲಿಸಿದರು.

ಅದಲ್ಲದೆ, ಮಹಾಗಣಪತಿಂ, ಸರಸ್ವತಿ ಭಗವತಿಂ, ಐಗಿರಿ ನಂದಿನಿ, ವಿಜಯಾಂಬಿಕೆ, ಶ್ರೀ ಚಾಮುಂಡೇಶ್ವರಿ ಸೇರಿದಂತೆ ವಿವಿಧ ಸಂಗೀತ ಕೃತಿಗಳನ್ನು ಪೊಲೀಸ್‌ ಬ್ಯಾಂಡ್‌ ನುಡಿಸಿತು. ಆಸ್ಥಾನ ವಿದ್ವಾಂಸರು, ರಾಜ ಪುರೋಹಿತರು, ಅರ್ಚಕರು, ದ್ವಾರಪಾಲಕರು ಈ ಸಡಗರಕ್ಕೆ ಸಾಕ್ಷಿಯಾದರು. ನಂತರ ಪ್ರಮೋದಾದೇವಿ ಒಡೆಯರ್ ಅವರಿಗೆ ಯದುವೀರ ತಲೆಬಾಗಿ ನಮಿಸಿದರು. ಬಳಿಕ ಯದುವೀರ ಅವರಿಗೆ ತ್ರಿಷಿಕಾ ಕುಮಾರಿ ಒಡೆಯರ್ ಅವರು ಪಾದಪೂಜೆ ಮಾಡಿದರು. ಈ ವೇಳೆ ಆದ್ಯವೀರ ನರಸಿಂಹರಾಜ ಒಡೆಯರ್ ಕೂಡ ತಂದೆ ಪಾದಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಮೂಲಕ ಮೊದಲ ದಿನದ ಅರಮನೆ ಕಾರ್ಯಕ್ರಮ ಮುಕ್ತಾಯ ಗೊಂಡಿತು. ಪ್ರಮೋದಾದೇವಿ ಒಡೆಯರ್‌ ಮಾರ್ಗದರ್ಶನದಲ್ಲಿ, ಅ.11ರವರೆಗೆ ಖಾಸಗಿ ದರ್ಬಾರ್‌ ನಡೆಯಲಿದೆ. 12ರಂದು ವಿಜಯಯಾತ್ರೆ ಯದುವೀರ ನಡೆಸಲಿದ್ದಾರೆ. ಖಾಸಗಿ ದರ್ಬಾರ್ ಪ್ರಯುಕ್ತ ಮಧ್ಯಾಹ್ನ 2ರವರೆಗೂ ಅರಮನೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT