ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೋಗಿಹಟ್ಟಿ ದತ್ತು ಪಡೆದ ಕೆನರಾ ಬ್ಯಾಂಕ್

Published : 11 ಫೆಬ್ರುವರಿ 2014, 8:00 IST
ಫಾಲೋ ಮಾಡಿ
Comments

ನಾಯಕನಹಟ್ಟಿ: ಜೋಗಿಹಟ್ಟಿ ಹಳ್ಳಿಯಲ್ಲಿ 400 ಮನೆಗಳಿದ್ದರೂ ಬೆರಳೆಣಿಕೆಯಷ್ಟು ಶೌಚಾಲಯಗಳು ಕಾಣಸಿಗುವುದಿಲ್ಲ. ವ್ಯವಸಾಯ, ಕೂಲಿ ಮಾಡಿ ಇಲ್ಲಿನ ಜನ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಇಡೀ ಗ್ರಾಮದಲ್ಲಿ ಹಲವು ದಶಕಗಳಿಂದ ಶೌಚಾಲಯ ಸಮಸ್ಯೆ ಇದೆ. ಈ ಸಮಸ್ಯೆ ನಿವಾರಿಸಲು ಮುಂದಾಗಿದೆ ಕೆನರಾಬ್ಯಾಂಕ್‌.

ಕಳೆದ ಮೇ 30ರಂದು ಕೆನರಾ ಬ್ಯಾಂಕ್‌ನ ಹುಬ್ಬಳಿಯ ವಲಯ ಪ್ರಬಂಧಕ  ಬೀರಾದಾರ ಅವರು ಸಿಬ್ಬಂದಿಯೊಂದಿಗೆ ಭೇಟಿ ನೀಡಿ,  ಜೋಗಿಹಟ್ಟಿ ಗ್ರಾಮವನ್ನು ಕೆನರಾ ಬ್ಯಾಂಕ್ ದತ್ತು ಪಡೆದು ಅಭಿವೃದ್ಧಿ ಮಾಡುತ್ತದೆ ಎಂಬ ಭರವಸೆಯನ್ನು ನೀಡಿದ್ದರು. ಅಂತೆಯೇ ಇಂದು ಗ್ರಾಮದ ಹಲವೆಡೆ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮಹಾರಾಷ್ಟ್ರದ ಗ್ರಾಮೀಣ ಬ್ಯಾಂಕ್ ಸಾಂಘ್ವಿ ಹಳ್ಳಿಯನ್ನು ದತ್ತು

ಪಡೆದು ಅಭಿವೃದ್ಧಿ ಪಡಿಸಿದ ಮಾದರಿಯಲ್ಲಿ  ಜೋಗಿಹಟ್ಟಿಯನ್ನೂ ಸಹ ಸರ್ಕಾರದ ಅನೇಕ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳ ಸಹಯೋಹಗದೊಂದಿಗೆ ಕೆನರಾ ಬ್ಯಾಂಕ್ ಅಭಿವೃದ್ಧಿ ಪಡಿಸುತ್ತದೆ ಎಂದು ಹುಬ್ಬಳ್ಳಿ  ವಲಯ ಉಪ ಮಹಾ ಪ್ರಬಂಧಕ ಜಯರಾಮರೆಡ್ಡಿ  ಪತ್ರಿಕೆಗೆ ತಿಳಿಸಿದರು.

ಶೌಚಾಲಯ ನಿರ್ಮಾಣ: ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸುಮಾರು 200 ಮನೆಗಳಿಗೆ ಶೌಚಾಲಯಗಳನ್ನು ರಾಜ್ಯ ಸರ್ಕಾರ, ಸರ್ಕಾರೇತರ ಸಂಸ್ಥೆಯ ಸಹಯೋಗದೊಂದಿಗೆ ನಿರ್ಮಿಸಿ ಕೊಡಲಾಗುತ್ತದೆ ಎಂದರು.

ಶುದ್ಧ ಕುಡಿಯುವ ನೀರಿನ ಘಟಕ: ನಾಯಕನಹಟ್ಟಿ ಹೋಬಳಿಯಲ್ಲಿ ಅಂತರ್ಜಲ ಪಾತಾಳ ಸೇರಿದೆ. ಬೋರ್‌ವೆಲ್‌ಗಳಲ್ಲಿ ಫ್ಲೋರೈಡ್ ಯುಕ್ತ ನೀರು ಬರುತ್ತಿದ್ದು, ಜನರ ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ಸುಮಾರು ₨12 ಲಕ್ಷ ವೆಚ್ಚದಲ್ಲಿ ಜೋಗಿಹಟ್ಟಿಯಲ್ಲಿ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗುವುದು. ಸೇವಾ ಶುಲ್ಕವಾಗಿ ₨ 5ಕ್ಕೆ 20 ಲೀಟರ್ ಶುದ್ಧ ನೀರನ್ನು ನೀಡಲಾಗುವುದು ಎಂದು ನಾಯಕನಹಟ್ಟಿ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ಹರೀಶ್ ತಿಳಿಸಿದರು.

ಶಿಕ್ಷಣಕ್ಕೆ ಆದ್ಯತೆ: ಹಿಂದುಳಿದ ಮಕ್ಕಳ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಜೋಗಿಹಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 4 ಕಂಪ್ಯೂಟರ್‌ಗಳನ್ನು ನೀಡಲಾಗುತ್ತಿದೆ. ಜತೆಗೆ ಮಕ್ಕಳಿಗೆ ಸಮವಸ್ತ್ರವನ್ನು ಸಹ ನೀಡಲಾಗುವುದು ಎಂದರು.ಸೌರದೀಪ ವಿತರಣೆ: ನಬಾರ್ಡ್ ಮತ್ತು ಸರ್ಕಾರದ ನೆರವು ಹಾಗೂ ಕೆನರಾ ಬ್ಯಾಂಕಿನ ಸಹಾಯದಿಂದ ಈ ಹಳ್ಳಿಯಲ್ಲಿ ಸುಮಾರು 200 ಮನೆಗಳಿಗೆ ಸೌರದೀಪ ಅಳವಡಿಸಲಾಗುತ್ತಿದೆ. ಇದರಿಂದ ವಿದ್ಯುತ್ ಉಳಿತಾಯ ವಾಗುತ್ತದೆ  ಎಂಬುದು ಬ್ಯಾಂಕ್‌ನ ಸಿಬ್ಬಂದಿಅನಿಸಿಕೆ.

ಜೋಗಿಹಟ್ಟಿಯಲ್ಲಿ ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಶೀಘ್ರ ನಡೆಯಲಿದ್ದು, ನಬಾರ್ಡ್‌ ಅಧ್ಯಕ್ಷರು, ಕೆನರಾಬ್ಯಾಂಕ್‌ ಅಧ್ಯಕ್ಷರಾದ ಆರ್.ಕೆ.ದುಬೆ, ಆರ್‌ಬಿಐ ಡೆಪ್ಯೂಟಿ ಗವರ್ನರ್‌ ಹಳ್ಳಿಗೆ ಬಂದು ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸುತ್ತಾರೆ ಎಂದು ನಾಯಕನಹಟ್ಟಿ ಕೆನರಾ ಬ್ಯಾಂಕಿನ ಪ್ರಬಂಧಕ ಹರೀಶ್ ಪತ್ರಿಕೆಗೆ ತಿಳಿಸಿದರು. ಸೌಲಭ್ಯ ವಂಚಿತ ಹಳ್ಳಿಗೆ ಕೆನರಾ ಬ್ಯಾಂಕ್ ಕಾಲಿಟ್ಟು ಇಡೀ ಗ್ರಾಮವನ್ನು ಅಭಿವೃದ್ಧಿ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ.
–ಚೌಳೂರು ಲೋಕೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT