ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರುದ್ಧ ಶನಿವಾರ ಪ್ರತಿಭಟನೆ ನಡೆಯಬಹುದು ಎಂಬ ಆತಂಕದಿಂದ ಪರಿಸ್ಥಿತಿ ನಿಯಂತ್ರಿಸಲು ಬೆಳಿಗ್ಗೆಯೇ ನಗರಕ್ಕೆ ಬಂದಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ಕುಮಾರ್ ಪಾಂಡೆ, ಇಡೀ ದಿನ ನಗರದಲ್ಲಿ ಮೊಕ್ಕಾಂ ಹೂಡಿದ್ದರು.

ಸಿಎಎ ಮತ್ತು ಎನ್ಆರ್ಸಿ ವಿರುದ್ಧ ‘ಅಸಹಕಾರ ಚಳವಳಿ’ಯ ಹೆಸರಿನಲ್ಲಿ ನೆಹರೂ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಈ ಹಿಂದೆ ಪ್ರಕಟಿಸಿತ್ತು. ಆದರೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮನವಿಯ ಬಳಿಕ ಪ್ರತಿಭಟನೆಯನ್ನು ಮುಂದೂಡುವ ನಿರ್ಧಾರ ಕೈಗೊಂಡಿತ್ತು.

ಡಿಸೆಂಬರ್ 19ರಂದು ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ಕೆಎಸ್ಎಸ್ಎಫ್) ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ, ಪೊಲೀಸ್ ಕಮಿಷನರ್ ಮನವಿ ಮೇರೆಗೆ ಪ್ರತಿಭಟನೆ ಕೈಬಿಡಲಾಗಿತ್ತು. ಆದರೂ, ಜಿಲ್ಲಾಧಿಕಾರಿ ಕಚೇರಿ ಎದುರು ಜನರು ಜಮಾಯಿಸಿ ಪ್ರತಿಭಟನೆಗೆ ಯತ್ನಿಸಿದ್ದರು. ಬಳಿಕ ಗಲಭೆ ನಡೆದು, ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟಿದ್ದರು. ಶನಿವಾರ ಅಂತಹ ಪರಿಸ್ಥಿತಿ ಮರುಕಳಿಸದಂತೆ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರದ ಸೂಚನೆಯಂತೆ ಖುದ್ದಾಗಿ ಎಡಿಜಿಪಿಯೇ ನಗರಕ್ಕೆ ಬಂದಿದ್ದರು.

ಪರಿಸ್ಥಿತಿ ಅವಲೋಕನ:

ಇಡೀ ದಿನ ಪೊಲೀಸ್ ಕಮಿಷನರ್ ಕಚೇರಿಯಲ್ಲೇ ಇದ್ದ ಅಮರ್ ಕುಮಾರ್ ಪಾಂಡೆ, ನಗರದಲ್ಲಿನ ಪರಿಸ್ಥಿತಿ ಕುರಿತು ಅವಲೋಕಿಸಿದರು. ನಡುವೆಯೇ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಡಿ.19ರ ಗಲಭೆ ಮತ್ತು ಗೋಲಿಬಾರ್ ಕುರಿತು ವಿಸ್ತೃತ ಮಾಹಿತಿ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ, ದಕ್ಷಿಣ ಕನ್ನಡ ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್, ನಗರದ ಡಿಸಿಪಿಗಳಾದ ಅರುಣಾಂಗ್ಷು ಗಿರಿ, ಲಕ್ಷ್ಮೀಗಣೇಶ್ ಸಭೆಯಲ್ಲಿದ್ದರು. ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿ, ಹಿಂಸಾಚಾರಕ್ಕೆ ಯತ್ನಿಸಿದ ಆರೋಪಕ್ಕೆ ಪೂರಕವಾದ ವಿಡಿಯೊ ತುಣುಕುಗಳನ್ನು ಪೊಲೀಸ್ ಕಮಿಷನರ್ ಅವರು ಎಡಿಜಿಪಿಯವರಿಗೆ ತೋರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಗೋಲಿಬಾರ್ ನಡೆಸುವುದು ಅನಿವಾರ್ಯವಾಗಿತ್ತು ಎಂಬುದನ್ನು ಮನವರಿಕೆ ಮಾಡಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಲಭೆಯಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೂರಕವಾಗಿ ಪ್ರಬಲ ಸಾಕ್ಷ್ಯಗಳನ್ನು ಸಂಗ್ರಹಿಸುವಂತೆ ಎಡಿಜಿಪಿ ನಗರದ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ಹಿಂಸೆಗೆ ಪ್ರಚೋದನೆ ನೀಡಿದವರ ವಿರುದ್ಧವೂ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಲು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಪೊಲೀಸರ ಬಗ್ಗೆ ಅಸಮಾಧಾನ?

ಡಿ.19ರಂದು ಬೃಹತ್ ಪ್ರಮಾಣದ ಪ್ರತಿಭಟನೆ ನಡೆಯಬಹುದು ಮತ್ತು ಕೆಲವರು ಗಲಭೆಗೆ ಯತ್ನಿಸಬಹುದು ಎಂಬುದಾಗಿ ಗುಪ್ತಚರ ವಿಭಾಗ ವರದಿ ನೀಡಿದ್ದರೂ ನಗರದ ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಇರುವುದಕ್ಕೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

‘ಅದೇ ದಿನ ಬೆಂಗಳೂರು ಸೇರಿದಂತೆ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಮಂಗಳೂರಿನಲ್ಲೇ ಏಕೆ ಗಲಭೆ ನಡೆಯಿತು? ಪೊಲೀಸರು ಗುಪ್ತಚರ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿದ್ದರೆ, ಗಲಭೆಯನ್ನು ಆರಂಭದಲ್ಲೇ ನಿಯಂತ್ರಿಸಬಹುದಿತ್ತು’ ಎಂದು ಪಾಂಡೆ ಹೇಳಿದ್ದಾರೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.