ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿಪೆಂಡೆನ್ಸ್ ಕಪ್‌ ಫುಟ್‌ಬಾಲ್‌ ಟೂರ್ನಿ: ಜಾಯ್‌ಲ್ಯಾಂಡ್‌, ಯೆನೆಪೋಯ ಫೈನಲ್‌ಗೆ

ಜಾಯ್‌ಲ್ಯಾಂಡ್‌ ‘ಬಿ’, ಬೊವಿಸ್‌ಗೆ ನಿರಾಶೆ
Published 26 ಜುಲೈ 2024, 4:15 IST
Last Updated 26 ಜುಲೈ 2024, 4:15 IST
ಅಕ್ಷರ ಗಾತ್ರ

ಮಂಗಳೂರು: ನಗರದ ಯೆನೆಪೋಯ ಮತ್ತು ಕೊಲ್ಯದ ಸೇಂಟ್ ಜೋಸೆಫ್ ಜಾಯ್‌ಲ್ಯಾಂಡ್ ‘ಎ’ ತಂಡಗಳು ಗುರುವಾರ ಆರಂಭಗೊಂಡ ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಟೂರ್ನಿಯ ಹಿರಿಯ ಪ್ರಾಥಮಿಕ ಶಾಲೆ ಬಾಲಕಿಯರ ವಿಭಾಗದ ಫೈನಲ್‌ ಪ್ರವೇಶಿಸಿದವು.

ದಕ್ಷಿಣ ಕನ್ನಡ ಜಿಲ್ಲಾ ಫುಟ್‌ಬಾಲ್ ಸಂಸ್ಥೆ ನೆಹರೂ ಮೈದಾನದಲ್ಲಿ ಆಯೋಜಿಸಿರುವ 26ನೇ ವರ್ಷದ ಟೂರ್ನಿಯ ಸೆಮಿಫೈನಲ್‌ನಲ್ಲಿ ಯೆನೆಪೋಯ ತಂಡ ಜಾಯ್‌ಲ್ಯಾಂಡ್ ‘ಬಿ’ ವಿರುದ್ಧ ಮತ್ತು ಜಾಯ್‌ಲ್ಯಾಂಡ್‌ ‘ಎ’ ತಂಡ ಉಚ್ಚಿಲದ ಬೊವಿಸ್ ಎದುರು ಜಯ ಸಾಧಿಸಿತು.

ರೋಚಕ ಹೋರಾಟ ಕಂಡ ಮೊದಲ ಸೆಮಿಫೈನಲ್‌ ಪಂದ್ಯದ 17ನೇ ನಿಮಿಷದಲ್ಲಿ ನೇಹಾ ಗಳಿಸಿದ ಗೋಲಿನ ಬಲದಿಂದ ಯೆನೆಪೋಯ ಜಯ ಸಾಧಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿ ಪ್ರದರ್ಶಿಸಿದರು. ಟೈ ಬ್ರೇಕರ್‌ನಲ್ಲಿ 4–3 ಅಂತರದಿಂದ ಜಾಯ್‌ಲ್ಯಾಂಡ್ ಜಯ ಗಳಿಸಿತು. 

ಹಿರಿಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗದ ನಾಕೌಟ್ ಪಂದ್ಯಗಳಲ್ಲಿ ಬಜಾಲ್‌ನ ಬದ್ರಿಯಾ ಶಾಲೆ ಕಣಚೂರು ಶಾಲೆಯ ವಿರುದ್ಧ ಟೈಬ್ರೇಕರ್‌ನಲ್ಲಿ 3–2ರಲ್ಲಿ ಗೆಲುವು ಸಾಧಿಸಿತು. ಪ್ರೆಸ್ಟಿಜ್ ಇಂಟರ್‌ನ್ಯಾಷನಲ್ ಶಾಲೆ ಯೆನೆಪೋಯ ‘ಬಿ’ ತಂಡವನ್ನು, ಸುರತ್ಕಲ್‌ನ ಎನ್‌ಐಟಿಕೆ ಶಾಲೆ ಉಳ್ಳಾಲದ ಹಜರತ್ ಸೈಯದ್ ಮದನಿ ಶಾಲೆ ವಿರುದ್ಧ, ಕೊಲ್ಯದ ಜಾಯ್‌ಲ್ಯಾಂಡ್ ಶಾಲೆ ಅಲೀಫ್ ಶಾಲೆ ವಿರುದ್ಧ, ಕ್ರೆಸೆಂಟ್ ಶಾಲ ಮೌಂಟ್ ಕಾರ್ಮೆಲ್ ವಿರುದ್ಧ, ಕಸಬಾ ಸರ್ಕಾರಿ ಶಾಲೆ ಇಖ್ರಾ ಶಾಲೆ ವಿರುದ್ಧ ಜಯ ಸಾಧಿಸಿತು.  

‍ಪ್ರೋತ್ಸಾಹಧನಕ್ಕೆ ಪ್ರಯತ್ನ: ಟೂರ್ನಿ ಉದ್ಘಾಟಿಸಿದ ಮೇಯರ್ ಸುಧೀರ್ ಶೆಟ್ಟಿ, ನಗರದ ಹೃದಯಭಾಗದಲ್ಲಿರುವ ನೆಹರು ಮೈದಾನದ ಅಭಿವೃದ್ಧಿಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅನುದಾನ ಮೀಸಲಿಡಲಾಗಿದೆ ಎಂದರು. 26 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಟೂರ್ನಿಗೆ ಪ್ರೋತ್ಸಾಹಧನ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲಾಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ಮಹಾನಗರಪಾಲಿಕೆ ಸದಸ್ಯರಾದ ದಿವಾಕರ್, ರವೂಫ್‌, ಅಬ್ದುಲ್ ಲತೀಫ್, ಉದ್ಯಮಿಗಳಾದ ಆಜಾದ್ ಮನ್ಸೂರ್ ಮತ್ತು ಅಬ್ದುಲ್ ಅಮೋನ್ ಇದ್ದರು.

ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ ಪಂದ್ಯಗಳು ನಡೆಯುತ್ತಿದ್ದು ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ, ಪದವಿ ಕಾಲೇಜು ವಿದ್ಯಾರ್ಥಿಗಳ ತಂಡಗಳು ಸೆಣಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT