ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಸ್‌ಆರ್‌ಟಿಸಿ: ವೋಲ್ವೊ ಬಸ್‌ ಸೇವೆ ಶೇ 50ರಷ್ಟು ರದ್ದು

Published 22 ಜುಲೈ 2024, 4:22 IST
Last Updated 22 ಜುಲೈ 2024, 4:22 IST
ಅಕ್ಷರ ಗಾತ್ರ

ಮಂಗಳೂರು: ಶಿರಾಡಿ ಘಾಟಿಯಲ್ಲಿ ಶನಿವಾರ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ವಾಹನ ಸಂಚಾರ ನಿರ್ಬಂಧವಿದ್ದುದರಿಂದ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಕೆಎಸ್‌ಆರ್‌ಟಿಸಿಯ ವೋಲ್ವೊ ಹಾಗೂ ಎ.ಸಿ. ಸ್ಲೀಪರ್‌ ಬಸ್‌ಗಳ ಶೇ 50ರಷ್ಟು ಬಸ್‌ಗಳು ಶನಿವಾರ ರಾತ್ರಿಯ ಸೇವೆಯನ್ನು ರದ್ದುಪಡಿಸಲಾಗಿದೆ. ಈ ಬಸ್‌ಗಳಲ್ಲಿ ಟಿಕೆಟ್‌ ಕಾಯ್ದಿರಿಸಿದ್ದ ಕೆಲವು ಪ್ರಯಾಣಿಕರು ಸಮಸ್ಯೆ ಎದುರಿಸಿದರು.

‘ಬೆಂಗಳೂರಿಗೆ ತೆರಳುವ ಎ.ಸಿ. ಸ್ಲೀಪರ್‌ ಹಾಗೂ ವೊಲ್ವೊ ಬಸ್‌ಗಳು ರಾತ್ರಿ ವೇಳೆ  ಗುಂಡ್ಯದಲ್ಲಿ ನಿಂತು ಬೆಳಿಗ್ಗೆ 6ರಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿವೆ. ಈ ಬಗ್ಗೆ ನಾವು ಪ್ರಯಾಣಿಕರಿಗೆ ಮೊದಲೇ ತಿಳಿಸಿದ್ದೆವು. ಇದಕ್ಕೆ ಒಪ್ಪಿದ್ದ ಪ್ರಯಾಣಿಕರನ್ನು ಮಾತ್ರ ಕರೆದೊಯ್ದಿದ್ದೇವೆ. ಒಪ್ಪದ ಪ್ರಯಾಣಿಕರಿಗೆ ಟಿಕೆಟ್ ಹಣವನ್ನು ಮರಳಿಸಿದ್ದೇವೆ. ಹಾಗಾಗಿ ಎ.ಸಿ. ಸ್ಲೀಪರ್ ಹಾಗೂ ವೋಲ್ವೊ ಬಸ್‌ಗಳಲ್ಲಿ ಶೇ 50ರಷ್ಟು ಸೇವೆ ರದ್ದಾಗಿತ್ತು’ ಎಂದು ಕೆಎಸ್‌ಆರ್‌ಡಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಂಡ್ಯದಿಂದ ಬೆಳಿಗ್ಗೆ 6ರ ಬಳಿಕ ಹೊರಟ ಬಸ್‌ಗಳು ಬೆಳಿಗ್ಗೆ 9.00 ಹಾಗೂ 9.30ರ ನಡುವೆ ಬೆಂಗಳೂರಿಗೆ ತಲುಪಿವೆ. ಬೆಂಗಳೂರಿಗೆ ಭಾನುವಾರ ರಾತ್ರಿ  ಇಲ್ಲಿಂದ ಹೊರಡುವ ವೋಲ್ವೊ ಹಾಗೂ ಎ.ಸಿ.ಸ್ಲೀಪರ್‌ ಬಸ್‌ಗಳಿಗೆ ಟಿಕೆಟ್‌ ಕಾಯ್ದಿರಿಸುವಿಕೆ ಪ್ರಮಾಣ ಕಡಿಮೆ ಇದೆ. ಹಾಗಾಗಿ ಕೆಲವು ಬಸ್‌ಗಳ ಸೇವೆಯನ್ನು ರದ್ದುಪಡಿಸಬೇಕಾದೀತು’ ಎಂದರು.

ರಾಜಹಂಸ ಹಾಗೂ ಕರ್ನಾಟಕ ಸಾರಿಗೆ ಬಸ್‌ಗಳು ಶನಿವಾರ ರಾತ್ರಿ ಚಾರ್ಮಾಡಿ ಘಾಟಿ ಮೂಲಕ ಬೆಂಗಳೂರನ್ನು ತಲುಪಿವೆ. ಆದರೆ, ಈ ಬಸ್‌ಗಳು ನಿಗದಿತ ಸಮಯಕ್ಕೆ ಮುನ್ನವೇ ಹೊರಟಿದ್ದರಿಂದ ಕೆಲವು ಪ್ರಯಾಣಿಕರು ಸಮಸ್ಯೆ ಎದುರಿಸಿದರು.

‘ನಾನು ಬೆಂಗಳೂರಿಗೆ ಪ್ರಯಾಣಿಸಲು ರಾಜಹಂಸ ಬಸ್‌ನಲ್ಲಿ ಟಿಕೆಟ್‌ ಕಾಯ್ದಿರಿಸಿದ್ದೆ. ಮಂಗಳೂರಿನಿಂದ 11 ಗಂಟೆಗೆ ಹೊರಡಬೇಕಿತ್ತು. ಆದರೆ, ನಿರ್ವಾಹಕ ಫೋನ್‌ ಮಾಡಿ ರಾತ್ರಿ 10 ಗಂಟೆಗೆ ಬಸ್‌ ಹೊರಡಲಿದೆ ಎಂದು ತಿಳಿಸಿದರು. ಹಾಗಾಗಿ ಬೆಂಗಳೂರಿನ ಪ್ರಯಾಣವನ್ನು ರದ್ದುಪಡಿಸಬೇಕಾಯಿತು’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT