ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುರ್ತು ಪರಿಸ್ಥಿತಿಯಿಂದ ಬಡವರಿಗೆ ಪ್ರಯೋಜನ: ರಮಾನಾಥ ರೈ

Published 18 ಜುಲೈ 2024, 11:30 IST
Last Updated 18 ಜುಲೈ 2024, 11:30 IST
ಅಕ್ಷರ ಗಾತ್ರ

ಮಂಗಳೂರು: 'ತುರ್ತು ಪ‍ರಿಸ್ಥಿತಿಯಿಂದ ಪ್ರಗತಿಪರ ಕಾರ್ಯಕ್ರಮಗಳ ವಿರೋಧಿಗಳಿಗೆ ತೊಂದರೆ‌ ಆಗಿರಬಹುದು. ಆದರೆ, ನಮ್ಮ ಜಿಲ್ಲೆಯ ಬಡವರಿಗೆ ಇದರಿಂದ ಅನುಕೂಲವೇ ಆಗಿದೆ. ಆ ಸಂದರ್ಭದಲ್ಲಿ ನಮ್ಮ ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದವರು, ಬಡವರು ಯಾರೂ ಬಂಧನಕ್ಕೊಳಗಾಗಿಲ್ಲ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ತುರ್ತು ಪರಿಸ್ಥಿತಿಯ ನೆಪದಲ್ಲಿ ಬಿಜೆಪಿಯವರು ಇಂದಿರಾ ಗಾಂಧಿ ಹಾಗೂ ನೆಹರೂ ಕುಟುಂಬದವರನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಮ್ಮ ಜಿಲ್ಲೆಯ ಜನರು ಇಂದಿರಾ ಗಾಂಧಿಯನ್ನು ಸ್ವಂತ ತಾಯಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದರು’ ಎಂದರು.

‘ಜಿಲ್ಲೆಯಲ್ಲಿ ಭೂ ಮಸೂದೆ ಪರಿಣಾಮಕಾರಿಯಾಗಿ ಜಾರಿಯಾಗಿದ್ದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ. ಬಡವರು ಒಪ್ಪೊತ್ತಿನ ಉಟಕ್ಕೂ ಗತಿ ಇಲ್ಲದೇ ತಮ್ಮಲ್ಲಿದ್ದ ವಸ್ತುಗಳನ್ನು ಗಿರವಿಗೆ ಇಟ್ಟು ಸಾಲ ಪಡೆದಿದ್ದರು. ಆ ಸಂದರ್ಭದಲ್ಲಿ ಜಾರಿಯಾದ ಋಣ ಪರಿಹಾರ ಕಾಯ್ದೆ ಬಡವರನ್ನು ಸಾಲದ ಹೊರೆಯಿಂದ ಮುಕ್ತರನ್ನಾಗಿ ಮಾಡಿತ್ತು. ಕುಮ್ಕಿ ಹಕ್ಕು ರದ್ದುಪಡಿಸಿ, ಆ ಜಾಗವನ್ನು ದುರ್ಬಲವರ್ಗದವರಿಗೆ ಹಂಚಲಾಗಿತ್ತು. ಆಗ ಜಾರಿಯಾದ ಬ್ಯಾಂಕ್ ರಾಷ್ಟ್ರೀಕರಣದಿಂದಲೂ ಬಡವರಿಗೆ ಅನುಕೂಲವಾಗಿತ್ತು’ ಎಂದು ಸಮರ್ಥಿಸಿಕೊಂಡರು.

‘ಕುಮ್ಕಿ ಜಾಗವನ್ನು ಲೀಸ್‌ಗೆ ನೀಡುವುದರಿಂದ ಆ ಜಾಗದಲ್ಲಿ ರಬ್ಬರ್ ಮತ್ತಿತರ ಕೃಷಿ ಮಾಡಿಕೊಂಡವರಿಗೆ ಅನುಕೂಲವೇ ಆಗಲಿದೆ. ಈ ಬಗ್ಗೆ ಟೀಕಿಸಿದವರಿಗೆ ಮಾಹಿತಿಯ ಕೊರತೆ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆಯಲ್ಲಿ ಬಡವರಿಗೆ ಜಾಗ ಮಂಜೂರಾಗಿದ್ದರೆ, ಅದು ಕಾಂಗ್ರೆಸ್ ಜಾರಿಗೊಳಿಸಿದ ಕಾರ್ಯಕ್ರಮಗಳಿಂದ. ಬಗರ್‌ಹುಕುಂ ಕಾಯ್ದೆ, 94 ಸಿ ಅಡಿ ಹಕ್ಕುಪತ್ರ ಕೊಟ್ಟಿದ್ದೇ ಕಾಂಗ್ರೆಸ್‌’ ಎಂದರು.

‘ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾಗಿರಬಹುದು. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವನ್ನು ನಾವು ಮತ್ತೆ ಬಲಿಷ್ಠವಾಗಿ ಕಟ್ಟುತ್ತೇವೆ’ ಎಂದರು.

‘ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಿಂದೂ ಸಮಾಜವನ್ನು ಅವಹೇಳನ ಮಾಡಿಲ್ಲ. ಸತಾತನ ಹಿಂದೂ ಧರ್ಮದಲ್ಲಿ ಹಿಂಸೆಗೆ ಸ್ಥಾನ ಇಲ್ಲ. ನೀವು ಹಿಂಸೆ ಮಾಡುತ್ತೀರಿ’ ಎಂದು ಬಿಜೆಪಿಯವರಿಗೆ ಬುದ್ದಿ ಹೇಳಿದ್ದಾರೆ. ಆದರೆ, ಬಿಜೆಪಿಯವರು ಅದನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಷಡ್ಯಂತ್ರದ ವಿರುದ್ಧ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಧ್ವನಿ ಎತ್ತಬೇಕು’ ಎಂದು ರೈ ಹೇಳಿದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಪಕ್ಷದ ಮುಖಂಡರಾದ ಚಿತ್ತರಂಜನ್ ಶೆಟ್ಟಿ, ಸುರೇಂದ್ರ ಕಂಬ್ಳಿ, ಚೇತನ್, ಯೋಗೀಶ್ ನಾಯ್ಕ್, ಬೇಬಿ ಕುಂದರ್, ಪಿಯೂಷ್ ರಾಡ್ರಿಗಸ್, ಶಹೀದ್, ಅಪ್ಪಿ, ಜಯಶೀಲ ಅಡ್ಯಂತಾಯ, ನೀತ್ ಶರಣ್‌ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT