ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನಕ್ಕೆ ಜೈ ಎನ್ನುವವರಿಗೆ ಮಂಗಳೂರಿಗೆ ಹೆಜ್ಜೆ ಇಡಲೂ ಬಿಡೆವು: ಆರ್‌. ಅಶೋಕ

Published 14 ಜುಲೈ 2024, 5:39 IST
Last Updated 14 ಜುಲೈ 2024, 5:39 IST
ಅಕ್ಷರ ಗಾತ್ರ

ಮಂಗಳೂರು: ‘ಯಾರದೋ ವಂಶದ ಹೆಸರು ಹೇಳಿ ಗೆದ್ದವರಲ್ಲ ನಾವು. ನಾವು ಗೆದ್ದಿದ್ದು ಹಿಂದೂ ವಿಚಾರದಲ್ಲಿ. ನಾವು ಭಾರತ್ ಮಾತಾ ಕಿ ಜೈ ಎನ್ನುತ್ತೇವೆ. ಪಾಕಿಸ್ತಾನಕ್ಕೆ ಜೈ ಎನ್ನುವವವರು ಮಂಗಳೂರಿಗೆ ಹೆಜ್ಜೆ ಇಡುವುದಕ್ಕೂ ಬಿಡುವುದಿಲ್ಲ’ ಎಂದು ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಶಾಸಕ ಭರತ್‌ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಿದ್ದನ್ನು ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಕಾವೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಭರತ್ ಶೆಟ್ಟಿ ವಿರುದ್ಧ ಮಾತ್ರ ಅಲ್ಲ, ವೇದಿಕೆಯಲ್ಲಿರುವ ಶಾಸಕ ವೇದವ್ಯಾಸ ಕಾಮತ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದೆ. ಪೊಲೀಸರನ್ನು ದಾಳವಾಗಿ ಬಳಸಿ ಬಿಜೆಪಿ ಶಾಸಕರನ್ನು ಭಯ ಬೀಳಿಸುವ ಕುತಂತ್ರವನ್ನು ಕಾಂಗ್ರೆಸ್‌ ಮಾಡುತ್ತಿದೆ. ದೇಶವನ್ನು ಆಳುತ್ತಿರುವ ಪಕ್ಷ ನಮ್ಮದು. ಪೊಲೀಸ್ ಬೆದರಿಕೆಗೆ ಬಗ್ಗುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ‘ ಎಂದು ಸ್ಪಷ್ಟಪಡಿಸಿದರು.

‘ಪಕ್ಷದ ಯಾವುದೇ  ಶಾಸಕರ ಅಥವಾ ಕಾರ್ಯಕರ್ತರ ವಿರುದ್ಧ ಷಡ್ಯಂತ್ರ ನಡೆಸಿದರೂ, ಅದರ ವಿರುದ್ಧ ಹೊರಾಟ ನಡೆಸುತ್ತೇವೆ. ಇಂತಹ ನೂರು ಪ್ರಕರಣ ದಾಖಲಿಸಿದರೂ ಹೆದರೆವು. ಒಬ್ಬ ಕಾರ್ಯಕರ್ತನಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ರಾಜ್ಯದಲ್ಲಿ ಎಲ್ಲೇ ಪೊಲೀಸ್ ದೌರ್ಜನ್ಯ ನಡೆದರೂ, ಅಲ್ಲಿಗೆ ಬಂದು ನಿಮ್ಮ ಜೊತೆ ನಿಲ್ಲುತ್ತೇನೆ. ನೂರು ಸಿದ್ದರಾಮಯ್ಯ ಬಂದರೂ, ಸಾವಿರ ರಾಹುಲ್ ಗಾಂಧಿ ಬಂದರೂ ಹೋರಾಟ ಮಾಡುತ್ತೇವೆ. ಕೇಂದ್ರದಲ್ಲಿ ನಮಗೆ ನರೇಂದ್ರ ಮೋದಿ ಇದ್ದಾರೆ’ ಎಂದರು.

‘ಹಿಂದೂಗಳು ಇದ್ದರೆ ಮಾತ್ರ ದೇಶ ಉಳಿಯುತ್ತದೆ. ಹಿಂದೂ ವಿಚಾರದ ಬಗ್ಗೆ ಯಾರೇ ಮಾತನಾಡಿದರೂ ನಾವು ಪ್ರತಿಭಟನೆ ನಡೆಸುತ್ತೇವೆ. ಎಂತಹ ತ್ಯಾಗಕ್ಕೂ ಸಿದ್ಧವಿದ್ದೇವೆ’ ಎಂದು ಹೇಳಿದರು. 

‘ಸಂಸತ್ತಿನಲ್ಲಿ ಕೆಲವರು ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಾರೆ. ಇಲ್ಲಿ ನೋಡಿದರೆ ಪೂರ್ತಿ ದೌರ್ಜನ್ಯ. ಪ್ರತಿಭಟನೆ ನಡೆಸಲು ಮುಂದಾದ ನಮ್ಮ ಕಾರ್ಯಕರ್ತರನ್ನು ಮನೆ ಮನೆಗೆ ನುಗ್ಗಿ ಬಂಧಿಸಿದರು. ನರೇಂದ್ರ ಮೋದಿಯವರನ್ನು ಹತ್ಯೆ ಮಾಡಬೇಕು ಎಂದ ವ್ಯಕ್ತಿಗೆ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡಿದೆ. ‘ಜೈ ಪ್ಯಾಲೆಸ್ಟೀನ್‌ ’ ಎಂದ ಅಸಾದುದ್ದೀನ್ ಒವೈಸಿ ಜೊತೆ ಮೈತ್ರಿ ಮಾಡಿಕೊಂಡಿದೆ. ‘ಪಾಕಿಸ್ತಾನ ಜಿಂದಾಬಾದ್‌’ ಎಂದು ವಿಧಾನಸೌಧದಲ್ಲಿ ಘೋಷಣೆ ಕೂಗಿದವರು ಅವರಿಗೆ ಒಳ್ಳೆಯವರು. ಬಾಂಬ್ ಹಾಕುವವರು ಅವರಿಗೆ ‘ಬ್ರದರ್ಸ್‌’ ಎಂದು ವ್ಯಂಗ್ಯವಾಗಿ ಹೇಳಿದರು.

ಜೈ ಶ್ರೀರಾಂ, ಬಜರಂಗ ಬಲಿ ಕೀ ಜೈ ಎಂಬ ಘೋಷಣೆಯೊಂದಿಗೆ ಭಾಷಣ ಆರಂಭಿಸಿದ ಶಾಸಕ ಡಾ.ವೈ.ಭರತ್ ಶೆಟ್ಟಿ, ‘ನನ್ನ ವಿರುದ್ಧ ಎಫ್‌ಐಆರ್ ಸುಡುಗಾಡು ಏನೇ ಹಾಕಲಿ. ಹಿಂದೂಗಳ ಕುರಿತು ಈ ರೀತಿ ಪದ ಬಳಸಿದಾಗ ನಾವು ಶಿವಾಜಿ, ಸಾವರ್ಕರ್ ಅನುಯಾಯಿಗಳು ಎಂದು ತೋರಿಸಿಕೊಡಲೇ ಬೇಕಾಗುತ್ತದೆ‘ ಎಂದರು.

‘ಶಾಲೆಗ ಹೋಗುವ ಮಕ್ಕಳಲ್ಲಿ ಹಿಂದೂ ವಿರೋಧಿ ಮಾತು ಆಡಿದರೆ ಸಹಿಸಬೇಕಂತೆ. ರಾಜಕೀಯ, ಶಾಸಕತನ ಬರುತ್ತದೆ–ಹೋಗುತ್ತದೆ. ಅಗತ್ಯ ಬಿದ್ದಲ್ಲಿ ಶಸ್ತ್ರಾಸ್ತ್ರ ತೆಗೆಯುತ್ತೇವೆ ಎಂಬ ಹೇಳಿಕೆಯನ್ನೇ ಮುಂದಿಟ್ಟುಕೊಂಡು ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಶಾಸ್ತ್ರ ಮತ್ತು ಶಸ್ತ್ರಗಳನ್ನು ಯಾವಾಗ ಉಪಯೋಗಿಸಬೇಕೋ ಆಗ ಹಿಂದೂ ಸಮಾಜ ಉಪಯೋಗಿಸುತ್ತದೆ. ಈ ಮಾತಿಗೆ ಮತ್ತೆ ಕೇಸ್‌ ಹಾಕುತ್ತೀರಾದರೆ ಹಾಕಿ. ಎದುರಿಸಲು ಸಿದ್ಧವಿದ್ದೇನೆ. ಸನಾತನ ಸಂಸ್ಕೃತಿ ಮುಗಿಸುವ ಹುನ್ನಾರವನ್ನು ನಾವು ತಡೆಯಬೇಕಾಗಿದೆ’ ಎಂದರು.

‘ಮಂಗಳೂರು ಉತ್ತರ ಕ್ಷೇತ್ರದ 22 ಪಾಲಿಕೆ ಸದಸ್ಯರಲ್ಲಿ ಅನಿಲ್ ಮಾತ್ರ ಕಾಂಗ್ರೆಸ್‌ನ ಸದಸ್ಯ. ಆತನ ಮೂಲಕ ದೂರು ಕೊಡಿಸುವ ಮೂಲಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಯಾರೊ ಹಿಂದುವನ್ನು ಮುಂದಿಟ್ಟು ನನ್ನ ಮೇಲೆ ಗುರಿ ಇಡುವ ಕೆಲಸವನ್ನು ಮಾಡಿದ್ದಾನೆ’ ಎಂದರು. 

‘ಯಾರದೋ ಚಪ್ಪಲಿಗಳ ಹಾಗೆ ವರ್ತಿಸುವ ಜೋಕರ್‌ಗಳು ನೀವು. ಕಾಂಗ್ರೆಸ್ ಕಾರ್ಯಕರ್ತರ ಮೈಮುಟ್ಟುವಂತೆ ಸವಾಲು ಹಾಕಿದ್ದೀರಿ. ಅದರ ಅಗತ್ಯ ನನಗಿಲ್ಲ. ಆದರೆ, ಹಿಂದುತ್ವದ ವಿರುದ್ಧ ಮಾತನಾಡಿದರೆ, ಕಾರ್ಯಕರ್ತನಾಗಲಿ ರಾಹುಲ್ ಗಾಂಧಿ ಆಗಲಿ, ಸಿದ್ದರಾಮಯ್ಯನೇ ಆಗಲಿ... ಎಲ್ಲರಿಗೂ  ಇದೇ ಟ್ರೀಟ್‌ಮೆಂಟ್‌’ ಎಂದರು.

ಶಾಸಕ ಸುನಿಲ್ ಕುಮಾರ್‌, ‘ಸರ್ಕಾರ ವಿನಾಕಾರಣ ಮೊಕದ್ದಮೆ ದಾಖಲಿಸಿದೆ. ಇನ್ನು ಯಾವುದೇ ಜನಪ್ರತಿನಿಧಿ ಅಥವಾ ಎಂಎಲ್‌ಎ ವಿರುದ್ಧ ಸುಳ್ಳು ಮೊಕದ್ದಮೆ ಹಾಕಿದರೆ, ನಾವು ಒಬ್ಬೊಬ್ಬರೇ ಠಾಣೆಗೆ ಬರುವುದಿಲ್ಲ. ಇದೇ ರೀತಿ  ನೂರಾರು ಸಂಖ್ಯೆಯಲ್ಲಿ ಬರುತ್ತೇವೆ’ ಎಂದರು.

‘ಹಿಂದೂಗಳನ್ನು ಹಿಂಸಾವಾದಿ ಎಂದು ಕರೆದ ರಾಹುಲ್ ಗಾಂಧಿ ಅವರು ಆ ಶಬ್ದವನ್ನು ಹಿಂಪಡೆಯದಿದ್ದರೆ, ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಬಂದಾಗ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ’ ಎಂದರು.

ಪ್ರತಿಭಟನೆ ಬಳಿಕ ಕಾವೂರು ಪೊಲೀಸ್ ಠಾಣೆಯತ್ತ ಹೊರಟ ನಾಯಕರು, ಕಾರ್ಯಕರ್ತರನ್ನು ಪೊಲೀಸರು ತಡೆದರು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್‌, ಹರೀಶ್ ಪೂಂಜ, ರಾಜೇಶ್ ನಾಯ್ಕ ಉಳಿಪಾಡಿ ಮತ್ತಿತರರು ಭಾಗವಹಿಸಿದರು.

‘ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಬಿಡುವುದಿಲ್ಲ’
‘ಕಾಂಗ್ರೆಸ್‌ಗೆ ಎಚ್ಚರಿಕೆ ನೀಡುತ್ತೇನೆ. ಹಿಂದೂ ಧರ್ಮವನ್ನು ಬಿಟ್ಟು ನಿಮ್ಮ ರಾಜಕೀಯ ನೀವು ಮಾಡಿ. ಧರ್ಮ–ಗಿರ್ಮ ಅಧರ್ಮಿಗಳಗೆ ಆಗುವ ವಿಷಯ ಅಲ್ಲ.  ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಖಂಡಿತಾ  ಬಿಡುವ ಪ್ರಶ್ನೆಯೇ ಇಲ್ಲ. ಎಷ್ಟರ ಮಟ್ಟಿಗೆ ಹೋಗಬೇಕೋ ಆ ಎತ್ತರದವರೆಗೆ ಹೋಗಲು ಸಿದ್ಧ. ನೀವು ಭಯೋತ್ಪಾದಕರು ಎಂದು ಬೇಕಾದರೆ ನನ್ನ ಮೇಲೆ ಕೇಸ್‌ ಹಾಕಿ ಒಳಗೆ ಹಾಕಿ. ನಾನೊಬ್ಬ ಹೋದರೆ ಮತ್ತೆ ಎಷ್ಟೊ ಶಾಸಕರು ಅದೇ ಕೆಲಸ ಮಾಡುತ್ತಾರೆ. ನಾವಿಷ್ಟೂ ಶಾಸಕರು ಒಳಗೆ ಹೋದರೆ ಕಾರ್ಯಕರ್ತರು ಆ ಕೆಲಸ ಮಾಡುತ್ತಾರೆ ಎಂಬ ಧೈರ್ಯ ನಮಗಿದೆ‘ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.
ವಿಚಾರಣೆಗೆ ಹಾಜರಾದ ಭರತ್ ಶೆಟ್ಟಿ
ಪ್ರತಿಭಟನಾ ಸಭೆಯ ನಂತರ ಭರತ್‌ ಶೆಟ್ಟಿ ಅವರು ಪಕ್ಷದ ಕೆಲವು ನಾಯಕರೊಂದಿಗೆ ಕಾವೂರು ಠಾಣೆಗೆ ತೆರಳಿದರು. ‘ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಭರತ್ ಶೆಟ್ಟಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಸಂಬಂಧ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ನೀಡಿದೆ. ಅವರು ಇಂದು ವಿಚರಣೆಗೆ ಹಾಜರಾಗಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT