ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಂಗಿ ಶಂಕಿತ ಸಾವು: ಮಕ್ಕಳ ಸಂಖ್ಯೆಯೇ ಹೆಚ್ಚು

ಚಿಣ್ಣರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಪಾಲಕರಿಗೆ ವೈದ್ಯರ ಸಲಹೆ
Published 21 ಜುಲೈ 2024, 20:15 IST
Last Updated 21 ಜುಲೈ 2024, 20:15 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ಡೆಂಗಿ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಈ ವರ್ಷದ ಜನವರಿ 1 ರಿಂದ ಜುಲೈ 19ರ ಅವಧಿಯಲ್ಲಿ ಒಟ್ಟು 10 ಮಂದಿ ಡೆಂಗಿಯಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಮಕ್ಕಳೂ ಸೇರಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಜುಲೈ 8ರಂದು ಶಿವಮೊಗ್ಗದ ಶಿರಾಳಕೊಪ್ಪದಲ್ಲಿ 9 ತಿಂಗಳ ಗಂಡು ಮಗು, ಧಾರವಾಡದಲ್ಲಿ ಗುರುವಾರ ಐದು ತಿಂಗಳ ಹೆಣ್ಣು ಮಗು ಅಸುನೀಗಿತ್ತು. ಜುಲೈ 7ರಂದು ಬ್ಯಾಡಗಿಯ ದೀಕ್ಷಾ (9), 11ರಂದು ಬೆಳಗಾವಿಯ ಸಂಕೇಶ್ವರದ ಶ್ರೇಯಾ (11), 15ರಂದು ಅರಸೀಕೆರೆಯ ಮಾಡಾಳು ಗ್ರಾಮದ ರಾಜೇಶ (8), ಹಾವೇರಿ ಜಿಲ್ಲೆ ಚಳಗೇರಿ ಗ್ರಾಮದ ಪ್ರೇಮಕುಮಾರ್‌ (13) ಹಾಗೂ ಹಾಸನದ ಬೊಮ್ಮನಾಯಕನಹಳ್ಳಿಯ ಅಕ್ಷತಾ (13) ಅವರೂ ಮೃತಪಟ್ಟಿದ್ದರು. ಜ್ವರದಿಂದ ಬಳಲುತ್ತಿದ್ದ ಇವರೆಲ್ಲರೂ ಡೆಂಗಿಯಿಂದಲೇ ಸಾವಿಗೀಡಾಗಿರಬಹುದೆಂದು ಶಂಕಿಸಲಾಗಿದೆ.

ರಾಜ್ಯದಲ್ಲಿ ಡೆಂಗಿಯಿಂದ ಬಾಧಿತರಾಗುತ್ತಿರುವ ಒಂದು ವರ್ಷದೊಳಗಿನ ಮಕ್ಕಳ ಸಂಖ್ಯೆ ಏರುಗತಿ ಪಡೆದಿದೆ. ಆರೋಗ್ಯ ಇಲಾಖೆಯು ಶುಕ್ರವಾರ ಬಿಡುಗಡೆ ಮಾಡಿದ್ದ ದೈನಂದಿನ ‘ಹೆಲ್ತ್‌ ಬುಲೆಟಿನ್‌’ನಲ್ಲಿ ಜನವರಿಯಿಂದ ಜುಲೈ 19ರವರೆಗೆ ಒಂದು ವರ್ಷದೊಳಗಿನ ಒಟ್ಟು 217 ಮಕ್ಕಳು ಡೆಂಗಿ ಪೀಡಿತರಾಗಿರುವುದಾಗಿ ಮಾಹಿತಿ ನೀಡಲಾಗಿದೆ. ಡೆಂಗಿ ಬಾಧಿತ 1 ರಿಂದ 18 ವರ್ಷದೊಳಗಿನವರ ಸಂಖ್ಯೆ 4,592ಕ್ಕೆ ಹೆಚ್ಚಿದೆ. 

‘ಕೆಲ ಮಕ್ಕಳಲ್ಲಿ ರೋಗಗಳು ಸುಪ್ತವಾಗಿರುತ್ತವೆ. ಎಷ್ಟೇ ಪರೀಕ್ಷೆ ನಡೆಸಿದರೂ ಅವುಗಳು ಪತ್ತೆಯಾಗುವುದೇ ಇಲ್ಲ. ಅಂತಹವರಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆ ಇರುತ್ತದೆ. ಡೆಂಗಿ ವೈರಾಣು ಅವರ ದೇಹದ ಒಳ ಹೊಕ್ಕು ಅಂಗಾಂಗಗಳಿಗೆ ಹಾನಿ ಉಂಟು ಮಾಡುತ್ತದೆ. ದೇಹವು ಆ ವೈರಾಣುಗಳಿಗೆ ಪ್ರತಿರೋಧ ಒಡ್ಡಲು ಮುಂದಾದಾಗ ರಕ್ತದೊತ್ತಡ ಕಡಿಮೆಯಾಗಿ, ಕಿಡ್ನಿ ವೈಫಲ್ಯಗೊಂಡು ಅಥವಾ ಉಸಿರಾಟದ ತೊಂದರೆಯಿಂದ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಬಹು ಅಂಗಾಂಗ ವೈಫಲ್ಯದಿಂದಲೂ ಸಾವಿಗೀಡಾಗುವ ಅಪಾಯ ಹೆಚ್ಚಿರುತ್ತದೆ. ರಾಜ್ಯದಲ್ಲಿ ಡೆಂಗಿ ಶಂಕೆಯಿಂದ ಜುಲೈನಲ್ಲಿ ಮೃತಪಟ್ಟಿರುವ ಮಕ್ಕಳಲ್ಲಿ ಇದನ್ನು ನಾವು ಕಾಣಬಹುದು’ ಎಂದು ದಾವಣಗೆರೆಯ ಮಕ್ಕಳ ತಜ್ಞ ಡಾ.ಗುರುರಾಜ್‌ ಹೇಳುತ್ತಾರೆ. 

‘ಮಗುವಿಗೆ ತೀವ್ರ ತೆರನಾದ ಜ್ವರ ಕಾಣಿಸಿಕೊಂಡಿದ್ದರೆ, ಅದು ಅಸಹಜ ರೀತಿಯಲ್ಲಿ ವರ್ತಿಸುತ್ತಿದ್ದರೆ, ಚರ್ಮದ ಮೇಲೆ ದದ್ದುಗಳು ಎದ್ದಿದ್ದರೆ ನಿರ್ಲಕ್ಷ್ಯ ಮಾಡದೆ ಕೂಡಲೇ ಆರೋಗ್ಯ ತಪಾಸಣೆ ಮಾಡಿಸಬೇಕು. ಬಹುಪಾಲು ಪಾಲಕರು ಮಕ್ಕಳ ರಕ್ತ ಪರೀಕ್ಷೆ ಮಾಡಿಸಲು ಹಿಂದೇಟು ಹಾಕುತ್ತಾರೆ. ಹಾಗೆ ಮಾಡುವುದರಿಂದ ನಾವೇ ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದರು.

‘ದಾವಣಗೆರೆ ಸೇರಿದಂತೆ ರಾಜ್ಯದ ಬಹುಪಾಲು ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಶಾಲೆಗಳ ಅಕ್ಕಪಕ್ಕದಲ್ಲೇ ತೆರೆದ ಚರಂಡಿಗಳಿವೆ. ಅವು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿವೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಚಡ್ಡಿ, ಫ್ರಾಕ್‌ಗಳನ್ನು ಹಾಕಿಕೊಂಡು ಶಾಲೆಗಳಿಗೆ ಹೋಗುವುದನ್ನು ನಾವು ಕಾಣುತ್ತೇವೆ. ಅಂತಹವರು ಡೆಂಗಿಗೆ ಗುರಿಯಾಗುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯರೊಬ್ಬರು ತಿಳಿಸಿದರು.

‘ಆರೋಗ್ಯ ಇಲಾಖೆ ವಾರಕ್ಕೆರಡು ದಿನ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಶಾಲೆಯ ಸುತ್ತಲಿನ ತೆರೆದ ಚರಂಡಿಗಳನ್ನು ಮುಚ್ಚುವುದಕ್ಕೆ ಒತ್ತು ಕೊಡಬೇಕು. ಫಾಗಿಂಗ್‌ ಕಾರ್ಯವನ್ನೂ ನಿಯಮಿತವಾಗಿ ಮಾಡಬೇಕು’ ಎಂದು ಆಗ್ರಹಿಸಿದರು. 

ನಿರಂತರ ಜಾಗೃತಿಗೆ ಒತ್ತು

   ‘ಡೆಂಗಿ ನಿಯಂತ್ರಣಕ್ಕಾಗಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಶಾಲೆ ಮತ್ತು ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶಾಲೆ ಪರಿಸರದಲ್ಲಿ ಸ್ವಚ್ಛತೆಗೂ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ದಾವಣಗೆರೆಯ ಡಿಎಚ್‌ಒ ಡಾ.ಎಸ್‌.ಷಣ್ಮುಖಪ್ಪ ತಿಳಿಸಿದರು. ‘ಎಳೆಯ ಮಕ್ಕಳು ಹಗಲು ಹೊತ್ತಿನಲ್ಲಿ ಮಲಗುವುದು ಸಾಮಾನ್ಯ. ಆಗ ಸೊಳ್ಳೆ ಕಚ್ಚುವ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಪಾಲಕರು ದೇಹ ಸಂಪೂರ್ಣವಾಗಿ ಮುಚ್ಚುವಂತಹ ಬಟ್ಟೆಗಳನ್ನು ತೊಡಿಸುವುದರ ಜೊತೆಗೆ ಅವರ ಮೇಲೆ ಹೆಚ್ಚಿನ ನಿಗಾ ಇಡಬೇಕು’ ಎಂದು ಸಲಹೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT