ಹಬ್ಬವೆಂದರೆ ಅದೊಂದು ಸಂಭ್ರಮ, ಸೊಬಗು, ಉಲ್ಲಾಸ, ಉತ್ಸಾಹ... ಹೀಗೆ ಎಲ್ಲವೂ... ಹಬ್ಬ ಬಂತೆಂದರೆ ಸಾಕು ಖರೀದಿ ಭರಾಟೆ ಹೆಚ್ಚುತ್ತದೆ. ಅದರಲ್ಲೂ ಮಧ್ಯ ಕರ್ನಾಟಕ ಭಾಗದಲ್ಲಿ ಅದ್ದೂರಿಯಾಗಿ ಆಚರಿಸುವ ‘ದೀಪಾವಳಿ’ ಸಮಯದಲ್ಲಿ ಖರೀದಿಯ ಸಂಭ್ರಮ ಇಮ್ಮಡಿಗೊಳ್ಳುತ್ತದೆ. ಅಗತ್ಯದ ದಿನಸಿಯಿಂದ ಹಿಡಿದು ಬಟ್ಟೆ, ತಳಿರು, ತೋರಣ, ಆಕಾಶ ಬುಟ್ಟಿ, ಲೈಟಿನ ಸರ... ಹೀಗೆ ಪಟ್ಟಿ ಕೊನೆಗೊಳ್ಳದು.

ಹಬ್ಬದ ವೇಳೆ ಖರೀದಿಯ ಅಗ್ರಗಣ್ಯ ಸ್ಥಾನ ‘ಬಟ್ಟೆ’ಯದ್ದು. ಮನೆಮಂದಿಯೆಲ್ಲಾ ಹೊಸ ಬಟ್ಟೆ ತೊಟ್ಟರೇನೆ ಹಬ್ಬವೆಂಬೊ ಸಂಪ್ರದಾಯ ಸಂಪನ್ನವಾಗುವುದು. ವರ್ಷದ ದೊಡ್ಡ ಹಬ್ಬ ಎಂದೇ ಕರೆಸಿಕೊಳ್ಳುವ ‘ದೀವಳಿಗೆ’ಗೆ ಬಟ್ಟೆ ಖರೀದಿಯ ಸಂಭ್ರಮ ವಾಣಿಜ್ಯ ನಗರಿಯಲ್ಲಿ ಗರಿಗೆದರಿದೆ. ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದೇ ಹೆಸರು ಪಡೆದಿರುವ ದಾವಣಗೆರೆಯ ಎಲ್ಲ ಬಟ್ಟೆ ಅಂಗಡಿಗಳಲ್ಲೂ ಗ್ರಾಹಕರದ್ದೇ ಕಾರುಬಾರು.

ಬಟ್ಟೆ ಖರೀದಿಗಾಗಿ ನಗರದ ಕೆ.ಆರ್.ಮಾರುಕಟ್ಟೆ, ಹಳೇಪೇಟೆ, ಎನ್.ಆರ್.ರಸ್ತೆ, ಗಡಿಯಾರ ಕಂಬ, ಅಶೋಕ ರಸ್ತೆ, ಡೆಂಟಲ್ ಕಾಲೇಜು ರಸ್ತೆ ಸೇರಿ ಪ್ರಮುಖ ರಸ್ತೆಗಳ ಇಕ್ಕೆಲಗಳ ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರ ಖರೀದಿ ಜೋರಾಗಿದೆ. ನಗರದ ನಾಗರಿಕರಲ್ಲದೆ ಜಿಲ್ಲೆಯ ಗ್ರಾಮೀಣ ಭಾಗದ ಜನರೂ ಬಟ್ಟೆ ಅಂಗಡಿಗಳಿಗೆ ಲಗ್ಗೆ ಇಟ್ಟಿದ್ದರು. ದಾವಣಗೆರೆಯ ಬಟ್ಟೆಗಳೆಂದರೆ ಸುತ್ತಮುತ್ತಲ ಜಿಲ್ಲೆಯ ಜನರಿಗೂ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ಗ್ರಾಹಕರೂ ಬಟ್ಟೆ ಖರೀದಿಗೆ ಮುಗಿಬಿದ್ದಿದ್ದರು.

‘ಅಪ್ಪನ ಕಾಲದಿಂದಲೂ ಪ್ರತಿ ವರ್ಷ ದೀಪಾವಳಿ ಹಬ್ಬಕ್ಕೆ ದಾವಣಗೆರೆಯಲ್ಲೇ ಬಟ್ಟೆ ಖರೀದಿ ಮಾಡುತ್ತೇವೆ. ಹಬ್ಬದ ಸಮಯದಲ್ಲಿ ಒಂದು ದಿನ ಅದಕ್ಕೆಂದೇ ಮೀಸಲಿಡುತ್ತೇವೆ. ಇಲ್ಲಿನ ಬಟ್ಟೆಗಳೆಂದರೆ ಮನೆಮಂದಿಗೆಲ್ಲ ಬಲು ಇಷ್ಟ. ಬೆಳಿಗ್ಗೆಯಿಂದ ರಾತ್ರಿವರೆಗೂ ಶಾಪಿಂಗ್ ಮಾಡುತ್ತೇವೆ. ಹಬ್ಬದ ಇತರ ಸಂಪ್ರದಾಯದೊಂದಿಗೆ ದಾವಣಗೆರೆಯಲ್ಲಿ ಬಟ್ಟೆ ಕೊಳ್ಳುವ ಪರಿಪಾಠವೂ ಒಂದು ರೀತಿ ಸಂಪ್ರದಾಯದಂತೆ ನಮ್ಮೊಂದಿಗೆ ಮಿಳಿತಗೊಂಡಿದೆ’ ಎನ್ನುತ್ತಾರೆ ಚಿತ್ರದುರ್ಗದಿಂದ ಕುಟುಂಬ ಸಮೇತ ಬಟ್ಟೆ ಖರೀದಿಗೆ ಬಂದಿದ್ದ ಟಿ.ಎನ್.ಸುಂದರರಾಜ್.

ಎಲ್ಲ ಅಂಗಡಿಗಳಲ್ಲೂ ಸಾಂಪ್ರದಾಯಿಕ ಬಟ್ಟೆಗಳಿಗೆ ಹೆಚ್ಚು ಬೇಡಿಕೆ ಇತ್ತು. ರೇಷ್ಮೆ ಸೀರೆ, ಮೈಸೂರು ಸಿಲ್ಕ್ ಸೀರೆ, ಫ್ಯಾನ್ಸಿ ಸೀರೆ, ಗಾಗ್ರಾ ಚೋಲಿ, ಲೆಹೆಂಗಾ, ಚೂಡಿದಾರ್, ಪಂಚೆ, ಬನೀನ್, ಶರ್ಟ್ಗಳ ಖರೀದಿ ಜೋರಾಗಿತ್ತು. ಕೆಲ ಮಳಿಗೆಗಳಲ್ಲಿ ಒಬ್ಬರಿಗೆ ಇಷ್ಟವಾದ ಬಟ್ಟೆಯೇ ಮತ್ತೊಬ್ಬರಿಗೂ ಇಷ್ಟವಾಗಿ, ಅದೇ ರೀತಿಯ ಮತ್ತೊಂದು ಬಟ್ಟೆ ಸಿಗದಿದ್ದಾಗ ಗ್ರಾಹಕರ ನಡುವೆ ಗಲಾಟೆಗಳಾದ ಪ್ರಸಂಗಗಳು ನಡೆದವು.

ಮಕ್ಕಳ ಖುಷಿ:

ಹಬ್ಬವೆಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಹೊಸ ಬಟ್ಟೆ ಕೊಳ್ಳುವ ಖುಷಿ ಅವರಲ್ಲಿ ಮನೆ ಮಾಡಿರುತ್ತದೆ. ಕುಟುಂಬದಲ್ಲಿ ದೊಡ್ಡವರಿಗೆ ಬಟ್ಟೆ ಖರೀದಿಸದಿದ್ದರೂ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುವುದಂತೂ ಕಾಯಂ. ಹಬ್ಬದ ದಿನದಂದು ಹೊಸ ಬಟ್ಟೆ ತೊಟ್ಟು ಮಕ್ಕಳು ಮನೆತುಂಬಾ ಓಡಾಡಿದರೆ ದೊಡ್ಡವರಿಗೆ ಅದೇನೋ ಸಮಾಧಾನ. ಹೀಗಾಗಿ ಪ್ರತಿ ಮಳಿಗೆಗಳಲ್ಲೂ ಮಕ್ಕಳ ಬಟ್ಟೆಗಳಿಗೆ ಹೆಚ್ಚು ಪ್ರಾಧಾನ್ಯ. ಅದರಲ್ಲೂ ಹೆಣ್ಣುಮಕ್ಕಳ ಸಾಂಪ್ರದಾಯಿಕ ಉಡುಗೆಗಳಿಗಂತೂ ಈ ಸಮಯದಲ್ಲಿ ಎಲ್ಲಿಲ್ಲದ ಬೇಡಿಕೆ.

ಲೆಹೆಂಗಾ, ಕ್ರಾಪ್ಟಾಪ್, ಗಾಗ್ರಾ, ಲಂಗಾ ದಾವಣಿ, ಲಂಗಾ ಜಾಕಿಟ್, ಲಾಂಗ್ ಫ್ರಾಕ್, ಶಾರ್ಟ್ ಫ್ರಾಕ್, ಗೌನ್, ಮಿಡಿ ಹೀಗೆ ತರಹೇವಾರಿ ಆಯ್ಕೆ ಹೆಣ್ಣು ಮಕ್ಕಳದ್ದು. ಪ್ರತಿ ಶಾಪ್ನಲ್ಲೂ ಮಕ್ಕಳು ತಮಗಿಷ್ಟದ ಡ್ರೆಸ್ ಹುಡುಕುವುದರಲ್ಲಿ ತಲ್ಲೀನರಾಗಿದ್ದುದು ಕಂಡು ಬಂತು.

ಮರೆಯಾದ ಸಂಭ್ರಮ:

ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿರುವ ಬಹುತೇಕರು ಪ್ರತಿ ತಿಂಗಳೂ ಶಾಪಿಂಗ್ ಮಾಡುತ್ತಲೇ ಇರುತ್ತಾರೆ. ವಾರಾಂತ್ಯಕ್ಕೆ ಹೊರಗೆ ಹೋದಾಗಲೆಲ್ಲ ಇಷ್ಟದ ಬಟ್ಟೆ ಕಣ್ಣಿಗೆ ಬಿದ್ದರೆ ಸಾಕು ನಮ್ಮ ವಾರ್ಡ್ರೂಬನ್ನು ಅಲಂಕರಿಸಿರುತ್ತದೆ. ಈಗ ಹೊಸ ಬಟ್ಟೆ ತೊಡಲು ಹಬ್ಬದ ಸಮಯವನ್ನೇ ಕಾಯಬೇಕಿಲ್ಲ. ಹುಟ್ಟು ಹಬ್ಬಕ್ಕೆಂದು, ಸ್ನೇಹಿತರ– ಸಂಬಂಧಿಗಳ ಮದುವೆ, ಅಕ್ಕನ ಜನ್ಮದಿನ, ತಮ್ಮನ ನಾಮಕರಣ ಹೀಗೆ ಹಬ್ಬವೆಂದು ಕಾಯದೆ ಎಲ್ಲ ಸಂಭ್ರಮಕ್ಕೂ ಬಟ್ಟೆ ಖದೀರಿ ಇದ್ದೇ ಇರುತ್ತದೆ.

‘ಹಿಂದೆಲ್ಲ ಮನೆ ಯಜಮಾನರೊಬ್ಬರೇ ಪೇಟೆಗೆ ಹೋಗಿ ಮನೆಮಂದಿಗೆಲ್ಲ ಹೊಸಬಟ್ಟೆ ತರುವ ಪರಿಪಾಠವಿತ್ತು. ಅವಿಭಕ್ತ ಕುಟುಂಬದಲ್ಲಿದ್ದ ಹತ್ತಾರು ಮಕ್ಕಳಿಗೆ ಒಂದೇ ಬಗೆಯ ಬಟ್ಟೆ ತಂದು ಅಂಗಿ– ಜಾಕೀಟ್, ಚಡ್ಡಿ– ಶರ್ಟ್ ಹೊಲೆಸುತ್ತಿದ್ದರು. ವರ್ಷದಲ್ಲಿ ಎರಡು ಅಥವಾ ಮೂರು ಹಬ್ಬಗಳಲ್ಲಿ ಮಾತ್ರವೇ ಹೊಸ ಬಟ್ಟೆ ತೊಡುವ ಭಾಗ್ಯ ಲಭಿಸುತ್ತಿತ್ತು. ಅಪರೂಪಕ್ಕೆ ಸಿಗುವ ಹೊಸಬಟ್ಟೆ ಮೈ ಆವರಿಸುತ್ತಿದ್ದಂತೆ ಮಕ್ಕಳು ರೋಮಾಂಚನಗೊಳ್ಳುತ್ತಿದ್ದರು. ಅಂದಿನ ಆ ಸಂಭ್ರಮ, ಖುಷಿ ಇಂದಿನ ಮಕ್ಕಳಲ್ಲಿ ಇರುವುದಿಲ್ಲ’ ಎಂದು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು ಬಟ್ಟೆ ಕೊಳ್ಳಲು ಬಂದಿದ್ದ 68ರ ಸೀತಮ್ಮ.

ಅದೇನೇ ಇದ್ದರೂ ಹಬ್ಬಕ್ಕೆಂದು ಮತ್ತೊಂದು ಜೊತೆ ಬಟ್ಟೆ ಕೊಂಡರೇನೇ ಸಮಾಧಾನ. ಹೊಸಬಟ್ಟೆ ಶುಭ್ರತೆಯ ಸಂಕೇತ. ಅದನ್ನು ತೊಟ್ಟಾಗ ಪ್ರತಿಯೊಬ್ಬರಲ್ಲೂ ದೊಡ್ಡದೊಂದು ಖುಷಿ ಹೊರಹೊಮ್ಮದೇ ಇರದು. ಹಬ್ಬದ ಸಂಭ್ರಮಕ್ಕೆ ಇನ್ನೇನು ಬೇಕು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.