ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾವರೆಕೆರೆ: ಶಿಥಿಲಾವಸ್ಥೆಯಲ್ಲಿ ವಸತಿ ಗೃಹಗಳು!

Published 10 ಆಗಸ್ಟ್ 2024, 6:42 IST
Last Updated 10 ಆಗಸ್ಟ್ 2024, 6:42 IST
ಅಕ್ಷರ ಗಾತ್ರ

ತಾವರೆಕೆರೆ (ಚನ್ನಗಿರಿ): ಗ್ರಾಮದಲ್ಲಿನ ಪಿಎಚ್‌ಸಿ ಆರೋಗ್ಯ ಉಪಕೇಂದ್ರಗಳು ಸಮಸ್ಯೆಗಳ ಆಗರವಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆಯ ಜೊತೆಗೆ ಸಿಬ್ಬಂದಿಗೆ ನೀಡಿರುವ ವಸತಿಗೃಹಗಳು ಶಿಥಿಲಾವಸ್ಥೆ ತಲುಪಿವೆ.

ತಾಲ್ಲೂಕಿನ ಉಬ್ರಾಣಿ ಹೋಬಳಿಯ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ನಾಲ್ಕು ಗ್ರಾಮ ಪಂಚಾಯಿತಿಗಳಿದ್ದು ಆ ಗ್ರಾಮಗಳಲ್ಲಿ 20,000ದಷ್ಟು ಜನಸಂಖ್ಯೆಯಿದೆ. ಈ ವ್ಯಾಪ್ತಿಯಲ್ಲಿ ಏಳು ಆರೋಗ್ಯ ಕ್ಷೇಮ (ಉಪಕೇಂದ್ರ) ಕೇಂದ್ರಗಳಿವೆ. ಈ ಪೈಕಿ 3 ಉಪ ಕೇಂದ್ರಗಳ ಸಿಬ್ಬಂದಿ ವಸತಿಗೃಹಗಳು ಯಾವಾಗ ಕುಸಿಯುತ್ತವೆಯೋ ಎಂಬ ಸ್ಥಿತಿ ನಿರ್ಮಾಣವಾಗಿದೆ. ಉಳಿದ ಕಟ್ಟಡಗಳು ದುರಸ್ತಿಯಲ್ಲಿದ್ದು, ಯಾರೂ ವಾಸಿಸುತ್ತಿಲ್ಲ.

ನೆಲ್ಲಿಹಂಕಲು, ದುರ್ವಿಗೆರೆ, ತಾವರೆಕೆರೆ, ಒಡಕಿಕೆರೆ, ಮಸಣಿಕೆರೆ, ಜಮಾಪುರ, ಮರವಂಜಿ ಗ್ರಾಮಗಳಲ್ಲಿರುವ ಉಪಕೇಂದ್ರಗಳ ಪೈಕಿ ದುರ್ವಿಗೆರೆ, ತಾವರೆಕೆರೆ ಹಾಗೂ ಒಡಕಿಕೆರೆಯ ಉಪಕೇಂದ್ರಗಳು ಸಾಕಷ್ಟು ಶಿಥಿಲವಾಗಿವೆ. ವಸತಿಗೃಹ ಕಟ್ಟಡಗಳ ಸುತ್ತಮುತ್ತ ಗಿಡಮರಗಳು ಬೇಕಾಬಿಟ್ಟಿ ಬೆಳೆದುನಿಂತು ಕಾಡಿನಂತಾಗಿದೆ. ಹಾವು, ಚೇಳು, ಹೆಗ್ಗಣ ಹಾಗೂ ಇಲಿಗಳ ವಾಸ ತಾಣವಾಗಿದೆ. ಬೇರೆ ವಸತಿಗೃಹಗಳಿಲ್ಲದ ಕಾರಣ, ಸಿಬ್ಬಂದಿ ಅನಿವಾರ್ಯವಾಗಿ ಈ ಕಟ್ಟಡದಲ್ಲಿಯೇ ವಾಸ ಮಾಡುವಂತಾಗಿದೆ.

ಸಿಬ್ಬಂದಿ ಕೊರತೆ: ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಎರಡು ಹುದ್ದೆಗಳಿದ್ದು, ಒಬ್ಬರು ಮಾತ್ರ ಇದ್ದಾರೆ. ರಾತ್ರಿ ವೇಳೆ ವೈದ್ಯರಿಲ್ಲದೇ ತೊಂದರೆಯಾಗುತ್ತಿದೆ. ತುರ್ತಾಗಿ ಇನ್ನೊಬ್ಬ ವೈದ್ಯ ಹಾಗೂ ಸಿಬ್ಬಂದಿಯನ್ನು ನೇಮಿಸಬೇಕಾಗಿದೆ. ಇಲ್ಲಿ ಅಗತ್ಯ 24 ಸಿಬ್ಬಂದಿ ಪೈಕಿ 19 ಜನ ಇದ್ದಾರೆ. 108 ಅಂಬುಲೆನ್ಸ್ ವ್ಯವಸ್ಥೆ ಇದ್ದು, ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಸಿಬ್ಬಂದಿ ವಸತಿ ಗೃಹಗಳನ್ನು ದುರಸ್ತಿ ಮಾಡಬೇಕು ಇಲ್ಲವೇ ಹೊಸದಾಗಿ ವಸತಿಗೃಹಗಳ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಮುಂದಾಗಬೇಕು ಎಂದು ನೆಲ್ಲಿಹಂಕಲು ಗ್ರಾಮದ ವಾಸಿ ದೇವರಾಜ್ ಆಗ್ರಹಿಸಿದ್ದಾರೆ.

‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿಯಿಂದ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಸಿಬ್ಬಂದಿ ವಸತಿಗೃಹ ಕಟ್ಟಡಗಳಲ್ಲಿ ವಾಸ ಕಷ್ಟವಾಗಿದೆ. ಈ ವಿಚಾರವಾಗಿ ತಾಲ್ಲೂಕು ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಅಮೀರುದ್ದೀನ್ ಖಾಜಿ ತಿಳಿಸಿದರು.

ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿಗೃಹಗಳ ಸಮೀಕ್ಷೆಗೆ ಹಾಗೂ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದು, ಈಗಾಗಲೇ ಸರ್ವೆ ಮಾಡಿ ವರದಿಯನ್ನು ನೀಡಿದ್ದಾರೆ. ಇದನ್ನು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಕಳುಹಿಸಲಾಗುವುದು. 108 ಸಿಬ್ಬಂದಿ ವಿಶ್ರಾಂತಿಗೆ ವಸತಿಗೃಹ ನೀಡುವ ನಿಯಮ ಇಲ್ಲ ಎಂದು ತಾಲ್ಲೂಕು ವೈದ್ಯಾಧಿಕಾರಿ ಈ. ಶಿವಕುಮಾರ್ ಹೇಳಿದರು.

ಸಿಬ್ಬಂದಿ ವಸತಿಗೃಹ ಮತ್ತು ಹಳೆಯ ಕಟ್ಟಡ ತೆರವುಗೊಳಿಸಲು ತಾಲ್ಲೂಕು ವೈದ್ಯಾಧಿಕಾರಿ ಪತ್ರ ಬರೆದಿದ್ದರು. ಅದರಂತೆ ಕಟ್ಟಡ ಪರಿಶೀಲಿಸಿ ತಾಂತ್ರಿಕ ಯೋಜನೆ ಸಿದ್ಧಪಡಿಸಿ ವರದಿ ಅನುಮೋದನೆಗಾಗಿ ಕಳುಹಿಸಲಾಗಿದೆ. ಅನುಮೋದನೆಗೊಂಡ ನಂತರ ತೆರವು ಕಾರ್ಯ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇಇ ಎ.ವಿ. ರವಿಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT