ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಮಹಿಳೆಯರು, ಮಕ್ಕಳ ಆಸ್ಪತ್ರೆಗೆ ಗುಣಮಟ್ಟದ ಗರಿ

‘ಲಕ್ಷ್ಯ’ ಕಾರ್ಯಕ್ರಮದಡಿ ರಾಷ್ಟ್ರೀಯ ಪ್ರಮಾಣಪತ್ರ, ₹ 6 ಲಕ್ಷ ನಗದು ಘೋಷಣೆ
Published 19 ಜುಲೈ 2024, 6:06 IST
Last Updated 19 ಜುಲೈ 2024, 6:06 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಚಾಮರಾಜಪೇಟೆಯಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗೆ ಕೇಂದ್ರ ಸರ್ಕಾರದ ‘ಲಕ್ಷ್ಯ’ ಮಾತೃ ಆರೋಗ್ಯ ಕಾರ್ಯಕ್ರಮದಡಿ ರಾಷ್ಟ್ರೀಯ ಗುಣಮಟ್ಟ ಪ್ರಮಾಣಪತ್ರ ಲಭಿಸಿದೆ.

ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಗ್ಗಿಸಲು ಹಾಗೂ ಆರೋಗ್ಯ ವೃದ್ಧಿಸಲು ಕೇಂದ್ರದ ಆರೋಗ್ಯ ಸಚಿವಾಲಯ ಜಾರಿಗೊಳಿಸಿರುವ ‘ಲಕ್ಷ್ಯ’ ಕಾರ್ಯಕ್ರಮ ರಾಜ್ಯದಲ್ಲಿ 2018ರ ಏಪ್ರಿಲ್‌ನಿಂದ ಜಾರಿಯಲ್ಲಿದೆ. ಇದುವರೆಗೆ ರಾಜ್ಯದ ವಿವಿಧ 12 ಆಸ್ಪತ್ರೆಗಳು ರಾಷ್ಟ್ರೀಯ ಗುಣಮಟ್ಟ ಪ್ರಮಾಣಪತ್ರ ಪಡೆದುಕೊಂಡಿದ್ದು, ಈ ಬಾರಿ ಈ ಆಸ್ಪತ್ರೆ ಆಯ್ಕೆಯಾಗಿದೆ.

‘ಲಕ್ಷ್ಯ’ ಪ್ರಮಾಣಪತ್ರದಲ್ಲಿ ಸೂಚಿಸಿರುವ 600 ಅರ್ಹತೆಗಳನ್ನು ಹೊಂದಲು ಸರ್ಕಾರಿ ಆಸ್ಪತ್ರೆಗಳಿಗೆ 18 ತಿಂಗಳ ಸಮಯ ನೀಡಲಾಗುತ್ತದೆ. ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ ನಂತರ ಕೇಂದ್ರದ ತಂಡ ಬಂದು ಪರಿಶೀಲನೆ ನಡೆಸುತ್ತದೆ. ಕಳೆದ ಮಾರ್ಚ್‌ನಲ್ಲಿ ಕೇಂದ್ರದ ತಂಡ ಈ ಆಸ್ಪತ್ರೆ ಪರಿಶೀಲಿಸಿ ಹೆರಿಗೆ ವಾರ್ಡ್‌ಗೆ ಶೇ 95.98 ಹಾಗೂ ಶಸ್ತ್ರಚಿಕಿತ್ಸೆ ಕೊಠಡಿಗೆ ಶೇ 93.06 ಅಂಕ ನೀಡಿದೆ.

ಈ ಆಸ್ಪತ್ರೆಯ ಹೆರಿಗೆ ಮತ್ತು ಶಸ್ತ್ರ ಚಿಕಿತ್ಸೆ ಕೊಠಡಿಗಳಿಗೆ ಈಚೆಗೆ ಟೈಲ್ಸ್‌ ಹಾಕಿಸಲಾಗಿದೆ. ಶಸ್ತ್ರಚಿಕಿತ್ಸಾಪೂರ್ವ ಕೊಠಡಿ, ಶಸ್ತ್ರಚಿಕಿತ್ಸೆ ನಂತರದ ಕೊಠಡಿ ಹಾಗೂ ಶಸ್ತ್ರಚಿಕಿತ್ಸೆಗೆ ಅಗತ್ಯ ಉಡುಪು ಮತ್ತು ಸಲಕರಣೆಗಳನ್ನು ಕೀಟಾಣುಮುಕ್ತ ಆಗಿಸುವ ‘ಆಟೊಕ್ಲೇವ್‌’ ಕೊಠಡಿ ಆಧುನೀಕರಿಸಲಾಗಿದೆ. ಪ್ರತಿ ಕೊಠಡಿ ಪ್ರವೇಶಿಸಲು ಪ್ರತ್ಯೇಕ ಚಪ್ಪಲಿಗಳು, ಹೆಡ್‌ ಕ್ಯಾಪ್‌, ಮಾಸ್ಕ್‌ ವ್ಯವಸ್ಥೆ ಮಾಡಲಾಗಿದೆ. ‘ಡಿ’ ಗ್ರೂಪ್‌, ಸ್ಟಾಫ್‌ ನರ್ಸ್‌ ಹಾಗೂ ವೈದ್ಯ ಸಿಬ್ಬಂದಿಗೆ ಪ್ರತ್ಯೇಕ ಬಣ್ಣದ ಡ್ರೆಸ್‌ ಕೋಡ್‌ ನಿಗದಿಪಡಿಸಿದ್ದು, ಅದೇ ಉಡುಪನ್ನು ಧರಿಸಿ ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆ ಕೊಠಡಿ ಪ್ರವೇಶಿಸಬೇಕಿರುತ್ತದೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೂ ಪ್ರತ್ಯೇಕ ಉಡುಪು ನೀಡಲಾಗುತ್ತಿದೆ. ಇಂತಹ ಹಲವು ಕ್ರಮಗಳಿಂದಾಗಿ ಆಸ್ಪತ್ರೆಗೆ ಪ್ರಮಾಣಪತ್ರ ದೊರಕಿದೆ.

‘ಆಸ್ಪತ್ರೆಯಲ್ಲಿ ಎರಡು ಆಟೊಕ್ಲೇವ್‌ ಯಂತ್ರಗಳಿವೆ. ಒಂದು ಯಂತ್ರದಲ್ಲಿ ಮೂರು ಆಟೊಕ್ಲೇವ್‌ ಬಿನ್‌ಗಳನ್ನು ಇರಿಸಿ 2 ಗಂಟೆಗಳ ಕಾಲ 121 ಡಿಗ್ರಿ ಸೆಂಟಿಗ್ರೇಡ್‌ ಉಷ್ಣಾಂಶದಲ್ಲಿ ಉಡುಪು ಒಳಗೊಂಡಂತೆ ಸಲಕರಣೆಗಳನ್ನು ಕೀಟಾಣುಮುಕ್ತ ಮಾಡಲಾಗುತ್ತದೆ. ಸಹಜ ಹೆರಿಗೆಗೆ 30 ಆಟೊಕ್ಲೇವ್‌ ಬಿನ್‌ಗಳಿವೆ. ಸಿಜೇರಿಯನ್‌, ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಸಂಬಂಧಿ ಸಮಸ್ಯೆಗಳ ಶಸ್ತ್ರಚಿಕಿತ್ಸೆಗೆ 20 ಆಟೊಕ್ಲೇವ್‌ ಬಿನ್‌ಗಳಿವೆ. ಶಸ್ತ್ರಚಿಕಿತ್ಸೆಗೆ ಮೊದಲು ಅನಸ್ತೇಶಿಯಾ ನೀಡುವವರಿಗೆ ಪ್ರತ್ಯೇಕ ಸ್ಪೈನಲ್‌ ಸೆಟ್‌ಗಳನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ದಿನಕ್ಕೆ 10ರಿಂದ 12 ಹೆರಿಗೆಗಳು, ಕೆಲವೊಮ್ಮೆ 15–17 ಹೆರಿಗೆಗಳು ಆಗುತ್ತವೆ. ದಿನಕ್ಕೆ 20 ಹೆರಿಗೆ ಮಾಡಬಹುದಾದಷ್ಟು ಸೌಲಭ್ಯಗಳಿವೆ. ಸಿಬ್ಬಂದಿಯ ಸಹಕಾರದಿಂದ ಆಸ್ಪತ್ರೆಗೆ ಗುಣಮಟ್ಟದ ಗರಿ ಲಭಿಸಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಸ್‌.ಪಿ.ಮಧು ತಿಳಿಸಿದರು.

ದಾವಣಗೆರೆ ಹಾಗೂ ಸುತ್ತಮುತ್ತಲಿನ ಊರುಗಳಿಂದ ಬಡವರು ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬರುತ್ತಾರೆ. ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ನಮ್ಮ ಗುರಿ.

-ಟಿ.ಪಿ. ಹೇಮಣ್ಣ ಸಹಾಯಕ ಆಡಳಿತಾಧಿಕಾರಿ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ ದಾವಣಗೆರೆ

ಜಿಲ್ಲಾ ಆಸ್ಪತ್ರೆ ಹರಿಹರದ ಸಾರ್ವಜನಿಕ ಆಸ್ಪತ್ರೆಗೆ ಪ್ರಮಾಣಪತ್ರ ಲಭಿಸಿತ್ತು. ಇದೀಗ ಈ ಆಸ್ಪತ್ರೆಗೆ ಪ್ರಮಾಣಪತ್ರ ದೊರಕಿದ್ದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ.

-ಡಾ.ಎಸ್‌.ಷಣ್ಮುಖಪ್ಪ ಡಿಎಚ್‌ಒ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT