ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆದಾಯ ತಗ್ಗಿಸಿದ ಸರ್ಕಾರದ ನೀತಿ: ಶರಣಬಸವ ಗೋನವಾರ

Published 3 ಮೇ 2024, 15:28 IST
Last Updated 3 ಮೇ 2024, 15:28 IST
ಅಕ್ಷರ ಗಾತ್ರ

ನವಲಗುಂದ: ‘ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ, ರೈತರ ಇರುವ ಆದಾಯವನ್ನೂ ಕುಂಠಿತಗೊಳಿಸುವ, ಅವರ ಜೀವನ ಇನ್ನೂ ಕೆಳಮಟ್ಟಕ್ಕೆ ಹೋಗುವಂತಹ ನೀತಿಗಳನ್ನು ತಂದಿದೆ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಶರಣಬಸವ ಗೋನವಾರ ಆರೋಪಿಸಿದರು.

ಅವರು ಪಟ್ಟಣದ ವಿವಿಧೆಡೆ ಗುರುವಾರ ಮತಯಾಚನೆ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ‘ಬಂಡವಾಳಶಾಹಿಗಳ ಆಸ್ತಿಗಳು ಸಾವಿರಾರು ಕೋಟಿ ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಆದರೆ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಲು, ಬೆಳೆ ಪರಿಹಾರ ನೀಡಲು ಆಸಕ್ತಿ ತೋರದೆ, ಬಂಡವಾಳಗಾರರ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುತ್ತಿದ್ದಾರೆ’ ಎಂದರು.

‘ಇಲ್ಲಿಯವರೆಗೂ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ರೈತರಿಗೆ, ಕೃಷಿ ಕೂಲಿಕಾರರಿಗೆ, ದುಡಿಯುವ ಜನಗಳಿಗೆ ದ್ರೋಹ ಬಗೆಯುತ್ತ ಬಂದಿವೆ. ಈ ಭ್ರಷ್ಟ ಪಕ್ಷಗಳನ್ನು ಧಿಕ್ಕರಿಸಿ ಏಕ ಮಾತ್ರ ಕ್ರಾಂತಿಕಾರಿ ಪಕ್ಷವಾದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷಕ್ಕೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೊರಬ, ತಿರ್ಲಾಪುರ, ಯಮನೂರು ಹಾಗೂ ಅಣ್ಣಿಗೇರಿ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಮತಯಾಚನೆ ಮಾಡಿದರು.

ಪಕ್ಷದ ಧಾರವಾಡ ಜಿಲ್ಲಾ ಸಮಿತಿ ಸದಸ್ಯರಾದ ಭುವನಾ ಬಳ್ಳಾರಿ, ಕಾರ್ಯಕರ್ತರಾದ ಸುಮಾ, ದೇವಮ್ಮ ದೇವತ್ಕಲ್, ಹನುಮೇಶ್ ಹುಡೇದ್, ಶಶಿಕಲಾ ಮೇಟಿ, ಅಪೂರ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT