ಮಂಗಳೂರು: ಬೆಂಗಳೂರಿನಿಂದ ಬಂದಿದ್ದ ಎರಡು ತಂಡಗಳು ಉಳ್ಳಾಲ ಸಮೀಪದ ಬಟ್ಟಪ್ಪಾಡಿಯಲ್ಲಿ ಕಡಲ ಕಿನಾರೆ ಬಳಿಯ ‘ಅನಧಿಕೃತ ಹೋಂ ಸ್ಟೇ’ಯೊಂದರಲ್ಲಿ ಉಳಿದುಕೊಂಡಿದ್ದವು. ಈ ತಂಡಗಳ ಸದಸ್ಯರು ಕುಡಿದ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಂಡರು. ರಾತ್ರಿ ವೇಳೆ ಶುರುವಾದ ಈ ಜಗಳ ಅಷ್ಟಕ್ಕೇ ನಿಲ್ಲದೇ, ಬೀದಿಗೂ ಬಂತು. ಜಗಳ ತಪ್ಪಿಸಲು ಮುಂದಾದ ಸ್ಥಳೀಯರ ಮೇಲೂ ಪ್ರವಾಸಿಗರು ಹಲ್ಲೆ ಮಾಡಿದರು. ಅಕ್ಕ ಪಕ್ಕದ ಮನೆಗಳಿಗೂ ನುಗ್ಗಿ ದಾಂದಲೆ ನಡೆಸಿದರು.

ಸಂಜೆವರಗೂ ಶಾಂತವಾಗಿದ್ದ ಬಟ್ಟಪ್ಪಾಡಿಯಲ್ಲಿ ಮಧ್ಯರಾತ್ರಿ ದೊಡ್ಡ ಘರ್ಷಣೆಯೇ ನಡೆಯಿತು. ಸ್ಥಳೀಯರ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿದ ಸುದ್ದಿ ಊರಿಡೀ ಹಬ್ಬಿತು. ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ 40–50 ಮಂದಿ ಸೇರಿದ್ದರು. ಆಕ್ರೋಶಗೊಂಡಿದ್ದ ಸ್ಥಳೀಯರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸಪಟ್ಟಿದ್ದರು.

2022ರ ಜೂನ್ 26ರಂದು ನಡೆದ ಈ ಘಟನೆ ‘ಅನಧಿಕೃತ ಹೋಂ ಸ್ಟೇ’ ಗಳಿಂದ ಎದುರಾಗುತ್ತಿರುವ ಸಮಸ್ಯೆಗಳಿಗೆ ಒಂದು ಉದಾಹರಣೆ ಅಷ್ಟೇ. ರಾತ್ರಿ 10ರ ಬಳಿಕವೂ ಕಿವಿಗಡಚಿಕ್ಕುವಂತೆ ಧ್ವನಿ ವರ್ಧಕಗಳ ಬಳಸುವುದು, ಪ್ರವಾಸಿಗರು ಪಾನಮತ್ತರಾಗಿ ನೆರೆ–ಹೊರೆಯವರಿಗೆ ಕಿರಿಕಿರಿ ಉಂಟುಮಾಡುವ ಪ್ರಸಂಗಗಳು ಪದೇ ಪದೇ ಮರುಕಳಿಸುತ್ತಿವೆ.

ಕೆಲವು ಹೋಮ್ ಸ್ಟೇಗಳು ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟ ಬಗ್ಗೆಯೂ ದೂರುಗಳಿವೆ. ಚಿಕ್ಕಮಗಳೂರಿನ ಹೋಮ್ ಸ್ಟೇ ಯೊಂದರಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 25 ಮಂದಿಯನ್ನು 2023ರ ಜೂನ್‌ನಲ್ಲಿ ಪೊಲೀಸರು ಬಂಧಿಸಿದ್ದರು.

‘ಹೋಮ್ ಸ್ಟೇ’ಗಳಲ್ಲಿ ‘ಡ್ರಗ್ ಪಾರ್ಟಿ’ ನಡೆಸಲಾಗುತ್ತಿದೆ ಎಂಬ ದೂರುಗಳೂ ಇವೆ. ಮಂಗಳೂರು ಕಮಿಷನರೇಟ್‌ನ ಪೊಲೀಸರು ಅಂತಹ ಕೆಲವು ಹೋಮ್ ಸ್ಟೇಗಳ ಮೇಲೆ ದಾಳಿಯನ್ನೂ ನಡೆಸಿದ್ದರು. ‘ಮಾದಕ ದ್ರವ್ಯ ವ್ಯಸನಿ’ಗಳು ಹೋಮ್ ಸ್ಟೇಗಳನ್ನು ದುರ್ಬಳಕೆ ಮಾಡಲು ಅವಕಾಶ ಕಲ್ಪಿಸಬಾರದು ಎಂದು ಮಾಲೀಕರಿಗೆ ಸೂಚನೆ ನೀಡಿದ್ದರು.

ಪ್ರವಾಸಕ್ಕೆ ತೆರಳಿದವರು ಅಲ್ಲಿನ ಮನೆಯೊಂದರಲ್ಲೇ ವಾಸ್ತವ್ಯವಿದ್ದು, ಸ್ಥಳೀಯರೊಂದಿಗೆ ಊಟೋಪಚಾರ ಸವಿದು ಕಾಲಕಳೆಯಬೇಕು. ಆ ಊರಿನ ಸಂಸ್ಕೃತಿ, ಆಹಾರ ಪದ್ಧತಿಗಳನ್ನು ತಿಳಿಯಬೇಕು ಎಂಬ ಆಶಯದೊಂದಿಗೆ ಸರ್ಕಾರ ‘ಹೋಮ್ ಸ್ಟೇ’ಗಳಿಗೆ ಅವಕಾಶ ಕಲ್ಪಿಸಿದೆ. ಆದರೆ, ವಾಣಿಜ್ಯ ಸ್ವರೂಪ ಪಡೆದಿರುವ ಕೆಲ ‘ಹೋಮ್ ಸ್ಟೇ’ಗಳು ಈ ಆಶಯಗಳನ್ನೇ ಗಾಳಿಗೆ ತೂರುತ್ತಿವೆ.

ಪ್ರವಾಸಿ ತಾಣಗಳಲ್ಲಿನ ಸ್ಥಳೀಯರ ಮನೆಯಲ್ಲೇ ಪ್ರವಾಸಿಗರು ಉಳಿದುಕೊಂಡರೆ, ಅಲ್ಲಿನ ಸೊಗಡನ್ನು ಪ್ರವಾಸಿಗರ ಜೊತೆ ಹಂಚಿಕೊಳ್ಳಲು ಅವಕಾಶವಾಗುತ್ತದೆ. ಮಿತವ್ಯಯ ಪ್ರವಾಸಕ್ಕೂ ಉತ್ತೇಜನ ಸಿಗುತ್ತದೆ. ಇದರಿಂದ ಸ್ಥಳೀಯ ನಿವಾಸಿಗಳ ಜೀವನೋಪಾಯಕ್ಕೂ ದಾರಿಯಾಗುತ್ತದೆ ಎಂಬುದು ‘ಹೋಮ್ ಸ್ಟೇ’ ಪರಿಕಲ್ಪನೆಯ ಉದ್ದೇಶ. ಆದರೆ, ಲಾಭ ಗಳಿಕೆಯನ್ನೇ ಮಾನದಂಡವನ್ನಾಗಿ ಮಾಡಿಕೊಂಡ ಕೆಲ ‘ಹೋಮ್ ಸ್ಟೇ’ಗಳಿಂದ ಈ ಉದ್ದೇಶ ಮೂಲೆಗುಂಪಾಗಿದೆ. ಹೋಮ್ ಸ್ಟೇಗಳು ಜನಸಾಮಾನ್ಯರ ಜೀವನೋಪಾಯದ ಮಾರ್ಗವಾಗುವ ಬದಲು ಲಾಭ ಗಳಿಕೆಯ ಅಸ್ತ್ರಗಳಾಗುತ್ತಿವೆ.

ಹೋಮ್ ಸ್ಟೇ ಸ್ಥಾಪಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಪರವಾನಗಿ ಕಡ್ಡಾಯ. ಇಂತಹವು ಮಾತ್ರ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಮಾನ್ಯತೆ ಪಟ್ಟಿಯಲ್ಲಿ ಸೇರುತ್ತವೆ. ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೋಮ್ ಸ್ಟೇಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ. ಈ ಜಿಲ್ಲೆಗಳಲ್ಲಿ ಪರವಾನಗಿ ಪಡೆದ ಹೋಮ್ ಸ್ಟೇಗಳಿಗಿಂತ ಅನಧಿಕೃತ ಹೋಮ್ ಸ್ಟೇಗಳ ಸಂಖ್ಯೆ ಅನೇಕ ಪಟ್ಟು ಜಾಸ್ತಿ ಇದೆ. ರಾಜ್ಯದಲ್ಲಿ ಪರವಾನಗಿ ಪಡೆದು ಕಾರ್ಯಾಚರಣೆ ಮಾಡುತ್ತಿರುವ ಹೋಮ್ ಸ್ಟೇಗಳ ನಿಖರ ಮಾಹಿತಿಯೇ ಪ್ರವಾಸೋದ್ಯಮ ಇಲಾಖೆ ಬಳಿ ಇಲ್ಲ.

ಸರ್ಕಾರಿ ನಿಯಮಗಳ ಪ್ರಕಾರ ‘ಹೋಮ್ ಸ್ಟೇ’ಗಳಲ್ಲಿ ಪ್ರವಾಸಿಗರಿಗೆ ಬಾಡಿಗೆಗೆ ನೀಡಲು ಗರಿಷ್ಠ ಐದು ಕೊಠಡಿಗಳನ್ನು ಮಾತ್ರ ಹೊಂದಲು ಅವಕಾಶ ಇದೆ. ಅದಕ್ಕಿಂತ ಹೆಚ್ಚು ಕೊಠಡಿಗಳಿದ್ದರೆ ಅವುಗಳನ್ನು ರೆಸಾರ್ಟ್ ಎಂದು ಪರಿಗಣಿಸಬೇಕಾಗುತ್ತದೆ. ಹೋಮ್ ಸ್ಟೇಗಳು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ರೆಸಾರ್ಟ್ ಎಂದು ನೋಂದಣಿ ಮಾಡಿಸಿದರೆ ಅದರ ಮಾಲೀಕರು ಅದಕ್ಕೆ ಸ್ಥಳೀಯ ಸಂಸ್ಥೆಯಿಂದ ಉದ್ದಿಮೆ ಪರವಾನಗಿ ಪಡೆಯುವುದರ ಜೊತೆಗೆ ಜಿಎಸ್‌ಟಿಯನ್ನೂ ಪಾವತಿಸಬೇಕು. ತೆರಿಗೆ ತಪ್ಪಿಸುವ ಸಲುವಾಗಿ ಅನೇಕರು ಹೋಮ್ ಸ್ಟೇಗೆ ಪಡೆದ ಪರವಾನಗಿಯನ್ನೇ ಬಳಸಿ ರೆಸಾರ್ಟ್ ನಡೆಸುತ್ತಿದ್ದಾರೆ. ಇಂತಹ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಪ್ರವಾಸೋದ್ಯಮ ಇಲಾಖೆ ಇಚ್ಛಾಶಕ್ತಿ ತೋರುತ್ತಿಲ್ಲ. ಇಂತಹ ಅಕ್ರಮ ‘ಹೋಮ್ ಸ್ಟೇ’ಗಳ ವಿರುದ್ಧ ದೂರು ಬಂದರೂ ಅವುಗಳ ಮಾಲೀಕರಿಗಿರುವ ರಾಜಕೀಯ ಪ್ರಭಾವದೆದುರು ಅಧಿಕಾರಿಗಳೂ ತೆಪ್ಪಗಾಗುತ್ತಿದ್ದಾರೆ.

ಸ್ಥಳೀಯ ಊಟೋಪಚಾರದ ಸೊಗಡನ್ನು ಪ್ರವಾಸಿಗರಿಗೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಹೋಮ್ ಸ್ಟೇ ಮಾಲೀಕರು ಅಥವಾ ಅವರ ಕುಟುಂಬದವರು ಅದೇ ಕಟ್ಟಡದಲ್ಲಿ ವಾಸವಿರಬೇಕು ಎಂಬ ನಿಯಮವನ್ನು ರೂಪಿಸಲಾಗಿದೆ. ಆದರೆ ಕೆಲವು ಹೋಮ್ ಸ್ಟೇಗಳು ಇದಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ. ಪರವೂರಿನಲ್ಲಿ ನೆಲೆಸಿರುವ ಮನೆ ಮಾಲೀಕರು ಕೆಲಸಕ್ಕೆ ನೌಕರರನ್ನು ನೇಮಿಸಿಕೊಂಡು ಹೋಮ್‌ಸ್ಟೇಗಳನ್ನು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಒಬ್ಬ ವ್ಯಕ್ತಿ ಒಂದು ಹೋಮ್ ಸ್ಟೇ ನಡೆಸುವುದಕ್ಕೆ ಮಾತ್ರ ಅವಕಾಶ ಇದೆ. ಪಾಲುದಾರಿಕೆಯಲ್ಲಿ ಹೋಮ್‌ಸ್ಟೇ ನಡೆಸುವುದಾದರೂ, ಹತ್ತಿರದ ಸಂಬಂಧಿಗಳ (ತಂದೆ/ ತಾಯಿ/ ಗಂಡ/ ಹೆಂಡತಿ/ ಮಕ್ಕಳು) ಜೊತೆ ಪಾಲುದಾರಿಕೆ ಮಾಡಿಕೊಳ್ಳಬಹುದು. ಒಬ್ಬ ಪಾಲುದಾರ ಆ ಕಟ್ಟಡದ ವಾಸಿ ಆಗಿರಬೇಕು ಎನ್ನುತ್ತದೆ ನಿಯಮ. ಪರವಾನಗಿಯನ್ನೇ ಪಡೆಯದೆ ಈ ವ್ಯವಹಾರದಲ್ಲಿ ತೊಡಗಿರುವವರಿಗೆ ಈ ಯಾವ ನಿಯಮವೂ ಅನ್ವಯವಾಗುವುದಿಲ್ಲ!

ಒತ್ತುವರಿ ಜಾಗದಲ್ಲಿ ಹೋಮ್ ಸ್ಟೇ:

ಚಿಕ್ಕಮಗಳೂರು, ಕೊಡಗಿನಂತಹ ಜಿಲ್ಲೆಗಳಲ್ಲಿ ಬಹುತೇಕ ಹೋಮ್ ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳದೇ ಇರುವುದಕ್ಕೆ ಅವುಗಳು ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿರುವುದೂ ಕಾರಣ. ಹೋಮ್ ಸ್ಟೇಗೆ ಪರವಾನಗಿ ಪಡೆಯುವಾಗ ಸ್ಥಳೀಯ ಸಂಸ್ಥೆಯಿಂದ ಹಾಗೂ ಪೊಲೀಸ್ ಇಲಾಖೆಯಿಂದ 6 ತಿಂಗಳಿನಿಂದ ಈಚೆಗೆ ಪಡೆದ ನಿರಾಕ್ಷೇಪಣ ಪತ್ರವನ್ನು ಪ್ರವಾಸೋದ್ಯಮ ಇಲಾಖೆಗೆ ಒದಗಿಸಬೇಕು. ಒತ್ತುವರಿ ಜಾಗದಲ್ಲಿ ಕಟ್ಟಡವಿದ್ದರೆ ಅದಕ್ಕೆ ಪಂಚಾಯಿತಿಯವರು ನಮೂನೆ 11ಎ ಅಡಿ ಇ–ಖಾತಾ ನೀಡಲು ಬರುವುದಿಲ್ಲ. ಅದಿಲ್ಲದೇ ನಿರಾಕ್ಷೇಪಣಾ ಪತ್ರ ಪಡೆಯುವುದು ಸಾಧ್ಯವಿಲ್ಲ. ಹಾಗಾಗಿ ಇಂತಹವು ಅನಧಿಕೃತವಾಗಿಯೇ ಮುಂದುವರಿಯುತ್ತಿವೆ.

ಕೊಡಗು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಹೊಮ್ ಸ್ಟೇಗಳಿವೆ. ಇಲ್ಲಿ ಸುಮಾರು ಮೂರೂವರೆ ಸಾವಿರ ಹೋಮ್ ಸ್ಟೇಗಳಿದ್ದು, ಅವುಗಳಲ್ಲಿ ನೋಂದಣಿ ಮಾಡಿಸಿಕೊಂಡವುಗಳ ಸಂಖ್ಯೆ 2000 ಮಾತ್ರ. ಸುಮಾರು 500ಕ್ಕೂ ಹೆಚ್ಚು ಹೋಮ್ ಸ್ಟೇಗಳು ನಾಲ್ಕೈದು ತಿಂಗಳಿನಿಂದ ಈಚೆಗೆ ನೋಂದಣಿ ಮಾಡಿಸಿವೆ ಎನ್ನುತ್ತವೆ ಪ್ರವಾಸೋದ್ಯಮ ಇಲಾಖೆಯ ಮೂಲಗಳು.

‘ಹೋಮ್ ಸ್ಟೇಗಳನ್ನು ನಡೆಸುವವರಿಗೆ ಪರವಾನಗಿ ಪಡೆಯುವ ಅಗತ್ಯವನ್ನು ವಿವರಿಸಿ ನೋಂದಣಿ ಮಾಡಿಸಲು ಹೇಳುತ್ತಲೇ ಇದ್ದೇವೆ. ಮೂಲಸೌಕರ್ಯ ಇಲ್ಲದವುಗಳಿಗೆ ಪರವಾನಗಿ ನೀಡುತ್ತಿಲ್ಲ’ ಎನ್ನುತ್ತಾರೆ ಇಲಾಖೆಯ ಕೊಡಗು ಜಿಲ್ಲೆಯ ಉಪನಿರ್ದೇಶಕಿ ಅನಿತಾ ಬಿ.

ಇಲಾಖೆ ಮಾಹಿತಿ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನೋಂದಣಿಯಾಗಿರುವುದು 602 ಹೋಮ್ ಸ್ಟೇಗಳು ಮಾತ್ರ. 100ಕ್ಕೂ ಹೆಚ್ಚು ಹೋಮ್ ಸ್ಟೇ ಮಾಲೀಕರು ಅರ್ಜಿ ಹಾಕಿದ ಬಳಿಕ ದಾಖಲೆಗಳನ್ನೇ ಸಲ್ಲಿಸಿಲ್ಲ. 120ಕ್ಕೂ ಹೆಚ್ಚು ಅರ್ಜಿದಾರರು ಪೊಲೀಸ್ ಇಲಾಖೆಯ ನಿರಾಕ್ಷೇಪಣಾ ಪತ್ರ ಸಲ್ಲಿಸಿಲ್ಲ. ಆದರೆ, ಜಿಲ್ಲೆಯಲ್ಲಿ ಏನಿಲ್ಲವೆಂದರೂ ಸಾವಿರಕ್ಕೂ ಅಧಿಕ ಅನಧಿಕೃತ ಹೋಮ್ ಸ್ಟೇಗಳು ಕಾರ್ಯನಿರ್ವಹಿಸುತ್ತಿವೆ.

‘ಅನಧಿಕೃತ ಹೋಮ್ ಸ್ಟೇಗಳಿಗೆ ನೋಟಿಸ್ ನೀಡಲಾಗಿದ್ದು, ಅವುಗಳನ್ನು ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ’ ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಲೋಹಿತ್.

ಉತ್ತರ ಕನ್ನಡ ಜಿಲ್ಲೆಯಲ್ಲಿ ನೋಂದಣಿಯಾದ 233 ಹೋಮ್ ಸ್ಟೇಗಳಿವೆ. ಅನಧಿಕೃತ ಹೋಮ್ ಸ್ಟೇಗಳು ಮತ್ತು ರೆಸಾರ್ಟ್‍ಗಳ ಸಂಖ್ಯೆ 300ಕ್ಕೂ ಹೆಚ್ಚಿದೆ ಎಂಬುದನ್ನು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಗೋಕರ್ಣ ಪರಿಸರದಲ್ಲಿ 180 ರಷ್ಟು ಅನಧಿಕೃತ ಹೋಮ್ ಸ್ಟೇಗಳಿದ್ದು, ಜಿಲ್ಲಾಡಳಿತ ಅವುಗಳ ಪಟ್ಟಿ ಸಿದ್ಧಪಡಿಸಿದೆ. ಹಲವು ವರ್ಷಗಳಿಂದ ಇವು ಕಾರ್ಯಾಚರಣೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿಲ್ಲ.

‘ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಒಪ್ಪಿಗೆ ಪಡೆಯದೆ ಕೇವಲ ಸ್ಥಳೀಯ ಸಂಸ್ಥೆಯಿಂದ ನಿರಾಕ್ಷೇಪಣ ಪತ್ರ ಪಡೆದು ನಡೆಸುವ ಹೋಮ್‌ಸ್ಟೇಗಳ ಸಂಖ್ಯೆಯೇ ಜಿಲ್ಲೆಯಲ್ಲಿ ಜಾಸ್ತಿ ಇದೆ. ಲೋಕಸಭೆ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಪರಿಶೀಲನೆ ನಡೆಸಿ, ಕ್ರಮ ಜರುಗಿಸಲಾಗುವುದು’ ಎಂದು ಇಲಾಖೆಯ ಉತ್ತರ ಕನ್ನಡ ಜಿಲ್ಲೆಯ ಉಪನಿರ್ದೇಶಕ ಎಚ್.ವಿ.ಜಯಂತ್
ಪ್ರತಿಕ್ರಿಯಿಸಿದರು.

ಹೋಮ್ ಸ್ಟೇಗೆ ಸುಸಜ್ಜಿತ ರಸ್ತೆ ಸಂಪರ್ಕ ಇರಬೇಕು. ‘ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಡಿ ನೋಂದಾಯಿತ’ ಎಂಬ ಫಲಕವನ್ನು ದ್ವಾರದ ಬಳಿ ಹಾಕಬೇಕು. ಉಳಿದುಕೊಳ್ಳುವ ಅತಿಥಿಗಳ ರಿಜಿಸ್ಟರ್ ನಿರ್ವಹಿಸಬೇಕು. ನೈರ್ಮಲ್ಯ ಕಾಪಾಡಬೇಕು. ಅಗ್ನಿಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿರಬೇಕು ಎಂಬ ನಿಯಮಗಳನ್ನೂ ಬಹುತೇಕವು ಪಾಲಿಸುತ್ತಲೇ ಇಲ್ಲ. ಪ್ರವಾಸಿಗರ ವಾಸ್ತವ್ಯಕ್ಕಾಗಿ ಇರುವ ಕೊಠಡಿಗಳು, ಸ್ನಾನದ ಕೋಣೆಗಳು ವಿಶಾಲವಾಗಿರಬೇಕು ಎಂಬ ಮಾರ್ಗಸೂಚಿಗಳನ್ನೂ ಗಾಳಿಗೆ ತೂರಲಾಗುತ್ತಿದೆ.

ಶುಲ್ಕಕ್ಕಿಲ್ಲ ಲಗಾಮು:

ಹೋಮ್ ಸ್ಟೇಗಳನ್ನು ನಡೆಸುವವರು ಪ್ರವಾಸಿಗರಿಂದ ದಿನವೊಂದಕ್ಕೆ ಎಷ್ಟು ಬಾಡಿಗೆ ಪಡೆಯಬಹುದು ಎಂಬುದಕ್ಕೂ ಸ್ಪಷ್ಟ ಕಾರ್ಯಸೂಚಿ ಇಲ್ಲ. ಹೋಮ್ ಸ್ಟೇ ಮಾಲೀಕರು ತಮ್ಮಲ್ಲಿನ ಸೌಲಭ್ಯಗಳ ವಿವರ ಹಾಗೂ ಅವುಗಳಿಗೆ ಪಾವತಿಸಬೇಕಾದ ದರವನ್ನು ಮೊದಲೇ ವಿವರಿಸಬೇಕು ಎಂಬುದು ನಿಯಮ. ಆದರೆ, ಕೆಲವರು ವರ್ಷಾಂತ್ಯದಲ್ಲಿ, ಹಬ್ಬ ಹರಿದಿನಗಳಲ್ಲಿ ಬಾಡಿಗೆಯನ್ನು ಮನಸೋ ಇಚ್ಛೆ ಹೆಚ್ಚಳ ಮಾಡಿ ಪ್ರವಾಸಿಗರನ್ನು ಸುಲಿಗೆ ನಡೆಸುತ್ತಿರುವ ದೂರುಗಳೂ ಇವೆ. ಆನ್‌ಲೈನ್ ಜಾಹೀರಾತುಗಳಲ್ಲಿ ನಮೂದಿಸುವ ದರವೇ ಒಂದು, ಇಲ್ಲಿ ಪ್ರವಾಸಿಗರಿಂದ ಪಡೆಯುವ ದರವೇ ಒಂದು. ಈ ರೀತಿ ವಂಚನೆಗೆ ಒಳಗಾದರೆ ದೂರು ನೀಡಲು ಸೂಕ್ತ ವ್ಯವಸ್ಥೆಗಳಿಲ್ಲ ಎಂಬುದು ಪ್ರವಾಸಿಗರ ಅಳಲು. ಸಾಮಾಜಿಕ ಮಾಧ್ಯಮಗಳಲ್ಲೇ ಪ್ರವಾಸಿಗರು ಈ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಸಿಆರ್‌ಜೆಡ್ ನಿಯಮ ಉಲ್ಲಂಘನೆ:

ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್) ನಿಬಂಧನೆಗಳನ್ನು ಉಲ್ಲಂಘಿಸಿ ಅನೇಕ ರೆಸಾರ್ಟ್‌ಗಳು, ಹೋಮ್ ಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ಸಿಆರ್‌ಜೆಡ್‌ನ ಪರಿಷ್ಕೃತ ನಿಯಮಗಳ ಪ್ರಕಾರ ಸಮುದ್ರದ ತೀರದಿಂದ ಕನಿಷ್ಠ 50 ಮೀ. ದೂರದಲ್ಲಿರಬೇಕು ಮತ್ತು ಉಬ್ಬರದ ಸಮಯದಲ್ಲಿ ಕಡಲಿನ ಅಲೆಗಳು ತಲುಪುವ ಅಂಚಿಗಿಂತ ಕನಿಷ್ಠ 10 ಮೀ ದೂರದಲ್ಲಿರಬೇಕು. ಸಮುದ್ರದ ತೀರದಲ್ಲಿರುವ ಕಟ್ಟಡ 1991ಕ್ಕಿಂತ ಹಿಂದಿನದಾಗಿದ್ದರೆ ಈ ನಿಯಮ ಅನ್ವಯಿಸುವುದಿಲ್ಲ. ಕಿನಾರೆ ಪಕ್ಕದಲ್ಲಿ ಹಾದು ಹೋಗುವ ರಸ್ತೆಯ ಆಚೆ ಇರಬೇಕು. ಆದರೆ ಕೆಲವು ರೆಸಾರ್ಟ್‌ಗಳು ಮತ್ತು ಹೋಮ್ ಸ್ಟೇಗಳು ಈ ನಿಯಮಗಳಿಗೆ ಸಂಬಂಧವೇ ಇಲ್ಲ ಎಂಬಂತೆ ಇರುವುದನ್ನು ಕಾಣಬಹುದು. ಸಿಆರ್‌ಜೆಡ್ ನಿಯಮ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳಿಗೆ ಸ್ಥಳೀಯ ಸಂಸ್ಥೆ ನಿರಾಕ್ಷೇಪಣಾ ಪತ್ರ ನೀಡಲು ನಿಯಮಗಳಲ್ಲಿ ಅವಕಾಶವೇ ಇಲ್ಲ. ಅಂತಹ ಕಟ್ಟಡಗಳಲ್ಲೂ ರೆಸಾರ್ಟ್ ಹಾಗೂ ಹೋಮ್ ಸ್ಟೇಗಳು ಕಾರ್ಯಾಚರಿಸುತ್ತಿವೆ.

ಅಕ್ರಮವೇ ಜಾಸ್ತಿ ಏಕೆ:

‘ಹೋಮ್ ಸ್ಟೇಗಳಿಗೆ ಆನ್‌ಲೈನ್‌ನಲ್ಲೇ ಅರ್ಜಿ ಹಾಕಿ ನೋಂದಣಿ ಮಾಡಿಸಬಹುದು ಎನ್ನುತ್ತದೆ ಪ್ರವಾಸೋದ್ಯಮ ಇಲಾಖೆ. ಅದರೆ, ಈ ಪ್ರಕ್ರಿಯೆ ಅಂದುಕೊಂಡಷ್ಟು ಸರಳವಲ್ಲ. ನಿರಾಕ್ಷೇಪಣಾ ಪತ್ರ ನೀಡಲು ಸ್ಥಳೀಯ ಸಂಸ್ಥೆಯವರು ಹಾಗೂ ಪೊಲೀಸ್ ಇಲಾಖೆಯವರು ಸಾಕಷ್ಟು ಸತಾಯಿಸುತ್ತಾರೆ. ಕೆಲವು ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳು ₹15 ಸಾವಿರದವರೆಗೂ ಶುಲ್ಕ ವಿಧಿಸುತ್ತವೆ. ಇವು ಅಧಿಕೃತವಾಗಿ ಪಡೆಯುವ ಶುಲ್ಕ. ನಿರಾಕ್ಷೇಪಣಾ ಪತ್ರ ಪಡೆಯುವುದಕ್ಕೆ ಮಾಡಬೇಕಾದ ‘ವೆಚ್ಚ’ ಇನ್ನೂ ಜಾಸ್ತಿ. ಪೊಲೀಸ್ ಇಲಾಖೆಯವರೂ ನಿರಾಕ್ಷೇಪಣೆ ಪತ್ರವನ್ನು ಸುಮ್ಮನೆ ನೀಡುವುದಿಲ್ಲ. ಎಲ್ಲ ದಾಖಲೆಗಳನ್ನು ಒದಗಿಸಿದ ಬಳಿಕ ಪ್ರವಾಸೋದ್ಯಮ ಇಲಾಖೆಯವರು ಈ ಕುರಿತ ಕಡತವನ್ನು ಜಿಲ್ಲಾ ಪ್ರವಾಸೋದ್ಯಮ ಸಮಿತಿ ಮುಂದೆ ಮಂಡಿಸುತ್ತಾರೆ. ಆ ಸಮಿತಿಯಿಂದ ಅನುಮೋದನೆಗೊಂಡರೆ ಮಾತ್ರ ನೋಂದಣಿ ಸಾಧ್ಯ. ಈ ಪ್ರಕ್ರಿಯೆಯೂ ಸುಲಭವಲ್ಲ. ಅದಕ್ಕಾಗಿ ನೋಂದಣಿ ಮಾಡಿಸುವ ಗೋಜಿಗೇ ಹೋಗುವುದಿಲ್ಲ’ ಎಂದು ಈ ಕುರಿತ ಅನುಭವ ಇರುವವರೊಬ್ಬರು ‘ಅನಧಿಕೃತ’ ಹೋಮ್ ಸ್ಟೇಗಳ ಹಿಂದಿನ ಮರ್ಮವನ್ನು ಬಿಚ್ಚಿಟ್ಟರು.

ಹೋಮ್ ಸ್ಟೇಗಳ ಆಶಯ ಈಡೇರಬೇಕಾದರೆ ಅವುಗಳಿಗೆ ಪರವಾನಗಿ ನೀಡುವ ವ್ಯವಸ್ಥೆಯೂ ಪಾರದರ್ಶಕವಾಗಬೇಕು. ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಪರವಾನಗಿ ನೀಡಲು ಸತಾಯಿಸುವುದು ನಿಲ್ಲಬೇಕು ಎಂದು ಅವರು ತಿಳಿಸಿದರು.

‘ಪ್ರವಾಸಿಗರು ಹಾಗೂ ಪ್ರವಾಸಿ ತಾಣಗಳ ಸ್ಥಳೀಯ ಸಮುದಾಯದ ಜೊತೆ ನಂಟು ಬೆಸೆಯಬಲ್ಲ ಹೋಮ್ ಸ್ಟೇ ಒಂದು ಉತ್ತಮ ಪರಿಕಲ್ಪನೆಯೇನೋ ನಿಜ. ಆದರೆ, ಹೋಮ್ ಸ್ಟೇ ನಿರ್ವಹಣೆಗೆ ಸಂಬಂಧಿಸಿ ಅನೇಕ ಪ್ರಶ್ನೆಗಳಿಗೆ ಪ್ರವಾಸೋದ್ಯಮ ಇಲಾಖೆ ಬಳಿ ಉತ್ತರವಿಲ್ಲ. ಕೇವಲ ಪರವಾನಗಿ ನೀಡುವುದಷ್ಟೇ ಅವರ ಕೆಲಸ ಆಗಿದೆ. ಮೂಲಸೌಕರ್ಯಗಳಿವೆಯೇ, ಇಲಾಖೆಯೇ ರೂಪಿಸಿರುವ ನಿಯಮಗಳ ಅನುಷ್ಠಾನಕ್ಕೆ ಪ್ರಾಯೋಗಿಕವಾಗಿ ಇರುವ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಆಸಕ್ತಿಯೂ ಇಲ್ಲ. ಪ್ರವಾಸೋದ್ಯಮ ಬೆಳೆಯುವುದು ಪರಸ್ಪರ ನಂಬಿಕೆಯ ಮೇಲೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸ್ಪಷ್ಟವಾದ ನೀತಿಯನ್ನು ನಿರೂಪಿಸುವ ಅಗತ್ಯ ಇದೆ’ ಎನ್ನುತ್ತಾರೆ ಪಣಂಬೂರು ಕಿನಾರೆ ಪ್ರವಾಸೋದ್ಯಮ ಅಭಿವೃದ್ಧಿ ಸಲಹೆಗಾರ ಯತೀಶ್ ಬೈಕಂಪಾಡಿ.

ಅಕ್ರಮ ಮುಚ್ಚಿ ಹಾಕಲು ಕಳ್ಳದಾರಿ

ರಾಜ್ಯದಲ್ಲಿ ‘ಹೋಂ ಸ್ಟೇ’ ಬದಲು ‘ಅತಿಥಿ ಗೃಹ’ಗಳು (ಗೆಸ್ಟ್ ಹೌಸ್) ವ್ಯಾಪಕವಾಗಿವೆ. ಅತಿಥಿ ಗೃಹ ನಡೆಸಲು ಪ್ರವಾಸೋದ್ಯಮ ಇಲಾಖೆಯ ಅನುಮತಿಯ ಅಗತ್ಯವಿಲ್ಲ. ಅದೊಂದು ರೀತಿ, ಮನೆಯನ್ನು ವಸತಿ ಉದ್ದೇಶಕ್ಕೆ ಬಾಡಿಗೆಗೆ ನೀಡಿದಂತೆ. ಅವುಗಳಿಗೆ ಸ್ಥಳೀಯ ಸಂಸ್ಥೆಗಳಿಂದ ವಿಶೇಷ ಪರವಾನಗಿ ಪಡೆಯುವ ಅಗತ್ಯವಿಲ್ಲ. ಅತಿಥಿ ಗೃಹದಿಂದ ಗಳಿಸುವ ವರಮಾನಕ್ಕೆ ಜಿಎಸ್‌ಟಿ ಕಟ್ಟಬೇಕಾಗಿಲ್ಲ. ‘ಹೋಂ ಸ್ಟೇ’ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿ ತಿಂಗಳಾನುಗಟ್ಟಲೆ ಕಾಯುವ ಪ್ರಮೇಯವೂ ಎದುರಾಗದು‘ ಎಂದು ಪ್ರವಾಸೋದ್ಯಮ ಚಟುವಟಿಕೆಗಳ ಆಳಗಲವನ್ನು ಬಲ್ಲವರು ಕಳ್ಳ ದಾರಿಯನ್ನು ವಿವರಿಸಿದರು.

ವನ್ಯಜೀವಿಗಳಿಗೆ ಆಪತ್ತು

ಸಂರಕ್ಷಿತಾರಣ್ಯಗಳ ಅಂಚಿನಲ್ಲಿರುವ ಹೋಂ ಸ್ಟೇಗಳು ಅಥವಾ ರೆಸಾರ್ಟ್‌ಗಳಿಂದಾಗಿ ವನ್ಯಜೀವಿಗಳೂ ತೊಂದರೆ ಎದುರಿಸುವಂತಾಗಿದೆ. ರಾತ್ರಿ ವೇಳೆಯೂ ಧ್ವನಿವರ್ಧಕ ಬಳಸಿ ಮನರಂಜನಾ ಚಟುವಟಿಕೆ ಹಮ್ಮಿಕೊಳ್ಳುವುದು, ಶಿಬಿರಾಗ್ನಿ (ಕ್ಯಾಂಪ್ ಫೈರ್), ಪ್ರವಾಸಿಗರು ಬೇಕಾಬಿಟ್ಟಿ ಬಳಸಿ ಬಿಸಾಡುವ ಪ್ಲಾಸ್ಟಿಕ್, ಮದ್ಯದ ಬಾಟಲಿಗಳು ವನ್ಯಜೀವಿಗಳ ಪ್ರಾಣಕ್ಕೂ ಕುತ್ತು ತರುತ್ತಿವೆ.

ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಧಾಮದಂತಹ ಸಂರಕ್ಷಿತಾರಣ್ಯ ಹಾಗೂ ಅವುಗಳ ಪರಿಸರ ಸೂಕ್ಷ್ಮ ವಲಯಗಳಲ್ಲಿ ಹೋಮ್ ಸ್ಟೇ ಅಥವಾ ರೆಸಾರ್ಟ್‌ಗಳಲ್ಲಿ ಕೆಲವು ಚಟುವಟಿಕೆಗೆ ನಿರ್ಬಂಧಿಸುವ ಕುರಿತು ಸರ್ಕಾರ ಮಾರ್ಗಸೂಚಿ ರಚಿಸಿ 2017ರ ಜುಲೈ 10ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ ವನ್ಯಜೀವಿ ಸೂಕ್ಷ್ಮ ಪ್ರದೇಶಗಳ ಬಳಿ ಹೋಮ್ ಸ್ಟೇ / ರೆಸಾರ್ಟ್ ಆರಂಭಿಸಲು ಪರಿಸರ ಸೂಕ್ಷ್ಮ ವಲಯ ಸಮಿತಿಗಳಿಂದ ಅನುಮತಿ ಕಡ್ಡಾಯ. ಸಂರಕ್ಷಿತ ಪ್ರದೇಶದ ಧಾರಣಾ ಸಾಮರ್ಥ್ಯ ಆಧರಿಸಿ ಪ್ರವಾಸಿ ಚಟುವಟಿಕೆಗೆ ಅವಕಾಶ ನೀಡಬಹುದು. ಕಸ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೂ ಸೂಕ್ತ ಪ್ರಾಧಿಕಾರದ ಅನುಮತಿ ಅಗತ್ಯ. ಅವುಗಳ ತ್ಯಾಜ್ಯ ನೀರನ್ನು ಶುದ್ಧೀಕರಿಸದೇ ನದಿ, ತೊರೆ ಅಥವಾ ಇತರ ಜಲಮೂಲಗಳಿಗೆ ಬಿಡುವಂತಿಲ್ಲ. ವಾಹನಗಳ ಸಂಚಾರಕ್ಕೂ ಪಾಸ್ ವ್ಯವಸ್ಥೆ ಮೂಲಕ ನಿಯಂತ್ರಿಸಬೇಕು. ಪ್ರವಾಸಿ ಚಟುವಟಿಕೆ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಗೆ ಅನುಗುಣವಾಗಿಯೇ ಇರಬೇಕು. ಹುಲಿಧಾಮಗಳ ಬಳಿ ಪ್ರವಾಸಿ ಚಟುವಟಿಕೆ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.

ಈ ಆದೇಶವನ್ನು ಕಡೆಗಣಿಸಿ, ವನ್ಯಪ್ರಾಣಿಗಳ ಆವಾಸಕ್ಕೆ ಅಪಾಯ ತಂದೊಡ್ಡಬಲ್ಲ ಪ್ರದೇಶಗಳಲ್ಲೂ ಹೋಮ್ ಸ್ಟೇಗಳು, ರೆಸಾರ್ಟ್‌ಗಳು ತಲೆ ಎತ್ತುತ್ತಲೇ ಇವೆ. ಈ ಬಗ್ಗೆ ಇಲಾಖೆಗೆ ಸಾರ್ವಜನಿಕರು ದೂರು ನೀಡಿದರೂ ಕ್ರಮವಾಗುತ್ತಿಲ್ಲ.

‘ದಾಂಡೇಲಿ, ಜೊಯಿಡಾ ತಾಲ್ಲೂಕಿನಲ್ಲಿ ಕಾಳಿ ಹುಲಿ ಸಂರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶಗಳ ಬಳಿಯೇ ಅನಧಿಕೃತ ಹೋಮ್ ಸ್ಟೇಗಳು ಹೆಚ್ಚುತ್ತಿದೆ. ಕೆಲವು ಉದ್ಯಮಿಗಳು ನಿಯಮ ಮೀರಿ ಇವುಗಳನ್ನು ನಡೆಸುತ್ತಿದ್ದಾರೆ. ಪ್ರವಾಸಿಗರನ್ನು ಸೆಳೆಯಲು ಪಾರ್ಟಿ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬಫರ್ ಪ್ರದೇಶದಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ರೆಸಾರ್ಟ್‌ಗಳಿಂದ ವನ್ಯಜೀವಿಗಳಿಗೆ ಅಡ್ಡಿಯಾಗುತ್ತಿದೆ’ ಎಂದು ಪರಿಸರ ಕಾರ್ಯಕರ್ತರೊಬ್ಬರು ದೂರಿದರು.

ಬಿಳಿಗಿರಿರಂಗನ ಬೆಟ್ಟದಲ್ಲಿ ಅನಧಿಕೃತ ಹೋಮ್ ಸ್ಟೇ ಹಾಗೂ ರೆಸಾರ್ಟ್ ತೆರವುಗೊಳಿಸುವಂತೆ ಸ್ವತಃ ಹುಲಿ ಸಂರಕ್ಷಣಾ ಪ್ರಾಧಿಕಾರ ವರದಿ ನೀಡಿದ್ದರೂ ಕ್ರಮವಾಗಿಲ್ಲ. ಪ್ರಾಧಿಕಾರವು ಬಂಡೀಪುರ ಹೊರವಲಯದಲ್ಲಿ ಅನಧಿಕೃತ ಹೋಮ್ ಸ್ಟೇ ಮತ್ತು ರೆಸಾರ್ಟ್‌ಗಳ ಮೇಲೆ ಕ್ರಮ ಜರುಗಿಸಿ ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದೆ. ಆದರೂ ಏನೂ ಪ್ರಯೋಜನವಾಗಿಲ್ಲ. ರೈತರು ತಮ್ಮ ಜಮೀನಿನಲ್ಲಿ ಮನೆ ಕಟ್ಟಲು ತಕರಾರು ಎತ್ತುವ ಇಲಾಖೆ ವನ್ಯಜೀವಿಗಳಿಗೆ ಆಪತ್ತು ಉಂಟುಮಾಡುವ ಅಕ್ರಮ ಚಟುವಟಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ.

ಅನಧಿಕೃತ ಹೋಮ್ ಸ್ಟೇಗಳಿಂದಾಗಿ ಪರವಾನಗಿ ಪಡೆದು ಹೋಮ್‌ಸ್ಟೇ ನಡೆಸುವವರಿಗೂ ಕೆಟ್ಟಹೆಸರು. ಸರ್ಕಾರ ಇಂತಹವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿ
-ಎನ್.ಆರ್.ತೇಜಸ್ವಿ ಚಿಕ್ಕಮಗಳೂರು ಜಿಲ್ಲೆ ಹೋಮ್ ಸ್ಟೇ ಅಸೋಸಿಯೇಷನ್ ಅಧ್ಯಕ್ಷ

ಹೋಮ್ ಸ್ಟೇ ಕ್ರಮಬದ್ಧ ನಿರ್ವಹಣೆಗೆ ಇರುವ ತೊಡಕು ನಿವಾರಿಸಿ ಸ್ಪಷ್ಟ ನೀತಿ ರೂಪಿಸಬೇಕು. ಸುಲಭವಾಗಿ ಪರವಾನಗಿ ಸಿಗುವಂತಾದರೆ, ಜನರೂ ಈ ಬಗ್ಗೆ ಆಸಕ್ತಿ ತೋರುತ್ತಾರೆ
ಯತೀಶ್ ಬೈಕಂಪಾಡಿ, ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಸಲಹೆಗಾರ

(ಪೂರಕ ಮಾಹಿತಿ: ವಿಜಯಕುಮಾರ್ ಎಸ್.ಕೆ, ಗಣಪತಿ ಹೆಗಡೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.