ಕೊಪ್ಪಳ: ‘ಮಗನ ಸಲುವಾಗಿ ಒಂದು ತಿಂಗಳಿಂದ ಆಸ್ಪತ್ರೆಗೆ ಅಲೆದಾಡುವುದೇ ನಿತ್ಯದ ಕೆಲಸವಾಗಿದೆ. ಚಿಕಿತ್ಸೆ ಕೊಡಿಸಿದರೂ ಕೆಮ್ಮು, ಕಫ ಕಡಿಮೆ ಆಗುತ್ತಿಲ್ಲ. ದೂಳಿನ ಹಾವಳಿಗೆ ಜೀವನವೇ ಸಾಕಾಗಿ ಹೋಗಿದೆ. ಬೀಗರು ಕೂಡ ಊರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ...’

ಜಿಲ್ಲಾ ಕೇಂದ್ರ ಕೊಪ್ಪಳದಿಂದ ಎಂಟು ಕಿ.ಮೀ. ದೂರದಲ್ಲಿರುವ ಅಲ್ಲಾನಗರ ಗ್ರಾಮದಲ್ಲಿ 12 ವರ್ಷಗಳಿಂದ ವಾಸವಾಗಿರುವ ಸಾವಿತ್ರಿ ಚಂದಪ್ಪ ಚವ್ಹಾಣ್ ಅವರ ನೋವಿನ ಮಾತುಗಳು ಇವು. ಇವರ ಮನೆಯ ಸುತ್ತಲೂ ಯಥೇಚ್ಛವಾಗಿ ಕಪ್ಪು ದೂಳು ಉಗುಳುವ ಕಾರ್ಖಾನೆಗಳಿವೆ.

ಉಪಜೀವನಕ್ಕೆಂದು ಮನೆಯ ಮುಂಭಾಗದಲ್ಲಿ ಅವರು ಸಣ್ಣ ಅಂಗಡಿ ನಡೆಸುತ್ತಿದ್ದು, ಮಕ್ಕಳಿಗಾಗಿ ಚಾಕೋಲೆಟ್, ಚಕ್ಕಲಿ, ಬಿಸ್ಕತ್ ಹೀಗೆ ಹಲವು ತಿನಿಸು ಮಾರಾಟ ಮಾಡುತ್ತಾರೆ. ಡಬ್ಬಿಯೊಳಗಿಂದ ಗ್ರಾಹಕರಿಗೆ ತಿನಿಸು ತೆಗೆದುಕೊಡುವಾಗಲೆಲ್ಲ ಅವರ ಕೈಗೆ ಕಪ್ಪು ದೂಳು ಅಡರುತ್ತದೆ. ಸಾಮಗ್ರಿಗಳನ್ನು ಹಾಕಿಟ್ಟ ಪ್ಲಾಸ್ಟಿಕ್ ಡಬ್ಬಿಗಳು, ಚೀಲಗಳು, ತಂಪು ಪಾನೀಯ ಇಟ್ಟಿರುವ ಫ್ರಿಡ್ಜ್ ಎಲ್ಲವೂ ಕಪ್ಪೇ ಕಪ್ಪು.

‘ನಿತ್ಯವೂ ದೂಳಾದರೆ ಬದುಕು ಹೇಗೆ ಸಾಗಿಸುತ್ತೀರಿ’ ಎಂದು ಮಾತಿಗೆಳೆದಾಗ, ‘ಇದೇ ನಮ್ಮ ಬದುಕು. ಅದಕ್ಕಾಗಿಯೇ ಈ ಭಾಗದ ಜನ ಮೇಲಿಂದ ಮೇಲೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ನಮ್ಮ ದುಡಿಮೆಯ ಬಹುಪಾಲು ಹಣ ಆಸ್ಪತ್ರೆಗೆ ಖರ್ಚಾಗುತ್ತಿದೆ. ಹೆಣ್ಣು ಕೊಡಲು ಮೀನಮೇಷ ಎಣಿಸುತ್ತಾರೆ’ ಎಂದರಲ್ಲದೇ ಕಂಕುಳಲ್ಲಿ ಹೊತ್ತುಕೊಂಡಿದ್ದ ತಮ್ಮ ಒಂಬತ್ತು ತಿಂಗಳ ಮಗನ ಕೈ ತೋರಿಸಿದರು. ಮಗನಿಗೆ ಚಿಕಿತ್ಸೆಗೆಂದು ಕೈಗೆ ಹಾಕಲಾಗಿದ್ದ ಬ್ಯಾಂಡೇಜ್ ಹಾಗೆಯೇ ಇತ್ತು.

ಈ ಗ್ರಾಮದಿಂದ ನಾಲ್ಕೈದು ಕಿ.ಮೀ. ದೂರದಲ್ಲಿರುವ ಹಿರೇಬಗನಾಳ ಗ್ರಾಮದ ಜನರ ಬವಣೆ ಮತ್ತಷ್ಟು ದುರಂತಮಯ. ಗ್ರಾಮದ ಆರಂಭದಲ್ಲಿ ವಾಹನಗಳ ದುರಸ್ತಿ ಗ್ಯಾರೇಜ್ ಬಳಿ ಮಾತಿಗೆ ಸಿಕ್ಕ ದೇವಪ್ಪ ಪತ್ತಾರ ಅವರನ್ನು ‘ಕಪ್ಪು ದೂಳಿನ ಹಾವಳಿ ಹೇಗಿದೆ’ ಎಂದು ಕೇಳಿದಾಗ, ‘ಜೀವನ ಸಾಕು ಎನಿಸಿದವರು ಮಾತ್ರ ನಮ್ಮೂರಿಗೆ ಬರಬೇಕು’ ಎಂದು ಹೇಳಿದರು. ಇದು ಅಲ್ಲಿನ ದೂಳುಮಯ ಪರಿಸರ, ಜನರಲ್ಲಿ ಕಾಡುತ್ತಿರುವ ನಿರಂತರ ಅನಾರೋಗ್ಯ, ಅಸಹಾಯಕತೆಗೆ ಸಾಕ್ಷಿಯಂತಿತ್ತು.

ಇವು ಕೆಲವು ಉದಾಹರಣೆಗಳು ಮಾತ್ರ. ಹೀಗೆ ಕಪ್ಪು ದೂಳಿನ ಹೊಡೆತಕ್ಕೆ ಸಿಲುಕಿ ಕೊಪ್ಪಳ ತಾಲ್ಲೂಕಿನ ಚಿಕ್ಕಬಗನಾಳ, ಕಾಸನಕಂಡಿ, ಹಾಲವರ್ತಿ, ಲಾಚನಕೆರೆ, ಕರ್ಕಿಹಳ್ಳಿ, ಹ್ಯಾಟಿ ಹಾಗೂ ಮುಂಡರಗಿ ಗ್ರಾಮಗಳು ನಲುಗಿ ಹೋಗಿವೆ. ಬಹಳಷ್ಟು ಪ್ರಮುಖ ಕಾರ್ಖಾನೆಗಳು ಆಡಳಿತದ ಶಕ್ತಿ ಕೇಂದ್ರ ಕೊಪ್ಪಳ ಜಿಲ್ಲಾಡಳಿತ ಭವನದಿಂದ ಕೇವಲ ನಾಲ್ಕು ಕಿ.ಮೀ. ದೂರದಲ್ಲಿವೆ. ಆರಂಭದಲ್ಲಿ ದೂಳು ಬರುವುದಿಲ್ಲ ಎಂದು ಕೊಪ್ಪಳ ನಗರದ ಜನ ಸುಮ್ಮನಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ನಗರ ಪ್ರದೇಶದಲ್ಲಿಯೂ ಕಪ್ಪು ದೂಳು ಆವರಿಸುತ್ತಿದೆ. ಮನೆಯ ಮೇಲೆ, ಮುಂಭಾಗದ ಮೇಲಿನ ಪ್ರದೇಶವೆಲ್ಲ ಕಪ್ಪಾಗುತ್ತಿದೆ.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರ ಪ್ರಶ್ನೆಗೆ ಸರ್ಕಾರ ಕೊಟ್ಟ ಲಿಖಿತ ಉತ್ತರದ ಪ್ರಕಾರ ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ 202 ಕಾರ್ಖಾನೆಗಳಿವೆ. ಕೆಲ ಸ್ಪಾಂಜ್ ಐರನ್ ತಯಾರಿಕಾ ಘಟಕಗಳ ಅವೈಜ್ಞಾನಿಕ ಹೊಗೆ ವಿಲೇವಾರಿಯಿಂದಾಗಿ ಮಾಲಿನ್ಯ ವಾಗುತ್ತಿದೆ. ಈ ಬಗ್ಗೆ ಅನೇಕ ದೂರುಗಳು ಬಂದಿದ್ದು ಷರತ್ತು ಉಲ್ಲಂಘಿಸಿದ 12 ಕೈಗಾರಿಕೆಗಳನ್ನು ಮುಚ್ಚುವಂತೆ ಅಧಿಕಾರಿಗಳು ಆದೇಶ ಮಾಡಿದರೂ ಕಾರ್ಯರೂಪಕ್ಕೆ ಬಂದಿಲ್ಲ.

ಸ್ಪಾಂಜ್ ಐರನ್ ಘಟಕಗಳಿಗೆ ಸಮರ್ಪಕವಾದ ಬಫರ್ ವಲಯ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದ್ದು, ಇದು ಕೃಷಿಭೂಮಿ ಮೇಲೂ ಪರಿಣಾಮ ಬೀರಿದೆ. ಕಾರ್ಖಾನೆಗಳ ಹತ್ತಿರದಲ್ಲಿಯೇ ಹಲವು ಹಳ್ಳಿಗಳು ಇರುವುದು ಮಾಲಿನ್ಯಕ್ಕೆ ಕಾರಣ ಎನ್ನುವ ಅಂಶವನ್ನು ಖುದ್ದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಒಪ್ಪಿಕೊಂಡಿದೆ.

ಆದರೂ ವೈಜ್ಞಾನಿಕವಾಗಿ ಹಾರುಬೂದಿ ವಿಲೇವಾರಿ ಹಾಗೂ ಜನರ ಆರೋಗ್ಯ ಸುರಕ್ಷತೆಗೆ ಸರ್ಕಾರ ಕ್ರಮ ವಹಿಸಿಲ್ಲ. ಕಾರ್ಖಾನೆಗಳಿಗೆ ಬೇಕಾಗುವ ಕಚ್ಚಾವಸ್ತು, ತ್ಯಾಜ್ಯ ಹೀಗೆ ಅನೇಕ ಸಾಮಗ್ರಿ ಸಾಗಿಸಲು ನಿತ್ಯ ನೂರಾರು ಟಿಪ್ಪರ್ಗಳು ಓಡಾಡುತ್ತವೆ. ಇವುಗಳ ಭಾರ ತಾಳಲಾಗದೆ ರಸ್ತೆ ಗುಂಡಿಮಯವಾಗಿದ್ದು, ಇದರ ದೂಳಿನಿಂದಲೂ ಸಮಸ್ಯೆ ಬಿಗಡಾಯಿಸಿದೆ ಎಂದು ಇಲ್ಲಿನ ಜನ ಹೇಳುತ್ತಾರೆ.

ಕಾರ್ಖಾನೆಗಳ ಸುತ್ತಲಿನ ಹೊಲಗಳಲ್ಲಿ ಕೃಷಿ ಚಟುವಟಿಕೆ ಮಾಡಲಾಗುತ್ತಿತ್ತು. ಈಗ ಅವುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆ. ಆದರೆ, ನಿವೇಶನಗಳಿಗೂ ಬೇಡಿಕೆಯಿಲ್ಲ.

‘ಈಗಿರುವ ಬಹುತೇಕ ಕಾರ್ಖಾನೆಗಳು ಇತ್ತೀಚೆಗಿನ ಎರಡ್ಮೂರು ದಶಕಗಳ ಹಿಂದೆ ಆರಂಭವಾಗಿವೆ. ಅದಕ್ಕಿಂತಲೂ ಮೊದಲೇ ಗ್ರಾಮಗಳ ಜನ ಹೊಗೆಯುಗಳುವ ಕಾರ್ಖಾನೆಗಳಿಗೆ ಅವಕಾಶ ಕೊಟ್ಟಿದ್ದು ಯಾಕೆ’ ಎನ್ನುವ ಪ್ರಶ್ನೆಯನ್ನು ಅಲ್ಲಾನಗರ, ಹಿರೇಬಗನಾಳ ಹಾಗೂ ಕುಣಿಕೇರಿ ಗ್ರಾಮಗಳ ಯುವಕರ ಮುಂದಿಟ್ಟಾಗ ನಮ್ಮ ಹೆಸರು ಬರೆಯಬೇಡಿ ಎನ್ನುವ ಷರತ್ತಿನೊಂದಿಗೆ ಉತ್ತರ ನೀಡಿದರು.

‘ಭೂಮಾಲೀಕರ ನಡುವಿನ ಒಡಕು ಕಾರ್ಖಾನೆಗಳ ಮಾಲೀಕರಿಗೆ ಲಾಭವಾಗಿದೆ. ದೂಳು, ಅನಾರೋಗ್ಯ, ಬೆಳೆ ಹಾಳು ಎಂದು ರೈತರು ದೂರು ಹೇಳಿದಾಗ ಮಾತ್ರ ಕಾರ್ಖಾನೆಯವರು ಒಂದಷ್ಟು ಹಣವನ್ನು ಪರಿಹಾರ ಎನ್ನುವಂತೆ ಕೈಗಿರಿಸಿ ಸುಮ್ಮನಾಗುತ್ತಾರೆ. ಹೀಗೆ ಹಣ ಕೊಡಿಸುವ ದಲ್ಲಾಳಿಗಳು ಕಾರ್ಖಾನೆ ಮತ್ತು ರೈತರ ನಡುವೆ ಕೆಲಸ ಮಾಡುತ್ತಿರುವುದು ಕೂಡ ದೊಡ್ಡ ಸಮಸ್ಯೆಯಾಗಿದೆ. ಕಾರ್ಖಾನೆಗಳಿಂದ ಹೊಲ ಇರುವ ದೂರದ ಆಧಾರದ ಮೇಲೆ ಗ್ರೇಡ್ ಆಧರಿಸಿ ಪರಿಹಾರ ನೀಡುತ್ತಿದ್ದಾರೆ. ಅಲ್ಪ ಹಣದಾಸೆಗೆ ನಾವು ಜೀವವನ್ನೇ ಒತ್ತೆಯಿಟ್ಟಿದ್ದೇವೆ’ ಎಂದು ನೋವು
ವ್ಯಕ್ತಪಡಿಸಿದರು.

‘ಬಹುತೇಕ ಕಾರ್ಖಾನೆಗಳ ಮಾಲೀಕರು ರಾಜಕಾರಣಿಗಳೇ ಇರುವಾಗ ಜನರ ಸಮಸ್ಯೆ ಪರಿಹರಿಸುವವರು ಯಾರು’ ಎಂದು ಪ್ರಶ್ನಿಸಿದರು.

ಸಂಘಟನೆಯಲ್ಲಿದ್ದುಕೊಂಡು ಕಾರ್ಖಾನೆಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಿರುವ ಇಲ್ಲಿಗೆ ಸಮೀಪದ ವದ್ನಾಳ ಗ್ರಾಮದ ಮಹೇಶ ಅವರ ಹೊಲ ತುಂಗಭದ್ರಾ ನದಿಯ ಹಿನ್ನೀರಿಗೆ ಅರ್ಧ ಕಿ.ಮೀ. ದೂರದಲ್ಲಿದೆ. ಯಥೇಚ್ಛವಾಗಿ ನೀರು ಸಿಗುವ ಕಾರಣ ಕೃಷಿ ಚಟುವಟಿಕೆಗೂ ಅನುಕೂಲ. ಆದರೆ ಬೆಳೆದ ಬೆಳೆ ಮೇಲೆ ದೂಳು ಹರಡುತ್ತಿರುವುದರಿಂದ ಬೆಲೆಯೇ ಇಲ್ಲದಂತಾಗಿದೆ. ‘ಕಪ್ಪು ದೂಳಿನ ಹಾವಳಿಯಿಂದ ಜನರಲ್ಲಿ ಉಸಿರಾಟದ ತೊಂದರೆ, ಮೊಣಕಾಲು ನೋವು ವಿಪರೀತವಾಗಿದೆ. ಕಾರ್ಖಾನೆಯವರು ನೀಡುವ ಬಿಡಿಗಾಸಿನ ಪರಿಹಾರ ನಮಗೆ ಬೇಡ. ದೂಳು ನಿಯಂತ್ರಿಸಿದರೆ ನಮ್ಮ ಬದುಕು ಬೆಳೆಯಷ್ಟೇ ಹಸಿರಾಗುತ್ತದೆ’ ಎಂದು ಮಹೇಶ ಹೇಳುತ್ತಾರೆ.

ಕೊಪ್ಪಳ ಜಿಲ್ಲೆಯಲ್ಲಿರುವ ಸಮಸ್ಯೆಯು ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯಲ್ಲಿಯೂ ಇದ್ದು ಜನರ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಯ ವ್ಯಾಪಕ ಪರಿಣಾಮ ಬೀರುತ್ತಿದೆ.

ಅಂಟು ರೋಗ: ‘ಮರಕ್ಕೆ ಹತ್ತಿದ ರೋಗನಾ ಎಣ್ಣಿ ಹೊಡೆದು ಕಂಟ್ರೋಲ್ ಮಾಡಾಕತ್ತೀವಿ. ಆದ್ರ, ‘ಸಿಮೆಂಟಿನ ದೂಳು, ಹೊಗೆ’ಯ ಮುಂದ ನಾವೇ ರೋಗಿಷ್ಠರಾಗಿ ನರಳಾಡ್ತಾ ಕುಂತ್ರೂ ಕಂಪನಿಯರು ನಮ್ಮ ಕಡಿಗಿ ತಿರುಗಿ ನೋಡ್ತಿಲ್ಲ. ಆಫೀಸರ್ಗಳು ನಮ್ಮನ ಕಸಕ್ಕಿಂತ ಕಡಿಯಾಗಿ ನೋಡ್ತಾರಿ...’ ಎನ್ನುತ್ತಲೇ ದೂಳು ಹಿಡಿದು ನೆಲಕ್ಕ ಬಿದ್ದ ಮಾವಿನ ಮಿಡಿ ಕಾಯಿಗಳನ್ನು ಕೈಗೆತ್ತಿಕೊಂಡ ತೋರಿಸಿದ ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಹಂಗನಳ್ಳಿ ಗ್ರಾಮದ ರೈತ ಶಿವರಾಜ.

‘ಐದು ವರ್ಷಗಳಿಂದ ತೋಟ ಮಾಡಿದ್ರೂ ಒಂದು ರೂಪಾಯಿಯೂ ಲಾಭ ಬರುತ್ತಿಲ್ಲ’ ಎಂದು ದಿಟ್ಟಿಸುತ್ತಾ ಹೊಲದ ಬದಿಯಲ್ಲಿದ್ದ ಸಿಮೆಂಟ್ ಕಾರ್ಖಾನೆ ನೋಡಿದ ಶಿವರಾಜನ ಕಣ್ಣಾಲಿಗಳಲ್ಲಿ ನೀರು ಬಂದವು. ಕಣ್ಣೀರು ಕಣ್ಣಿನ ಕೆಳಗೆ ಮೆತ್ತಿದ ದೂಳಲ್ಲಿ ಬೇರೆಯುವಾಗಲೇ ‘ಅಪ್ಪ, ನನ್ನ ಕೈ ರಟ್ಟಿ ಜಾಸ್ತಿ ತಿಂಡಿಕೊಡ್ಲಾ ಕತ್ಯಾದ್ ಸ್ವಲ್ಪ ತುರಿಸು’ ಎನ್ನುತ್ತಾ ಮೈಯಲ್ಲಾ ದೂಳು ಮೆತ್ತಿಕೊಂಡು ಬಂದ 14 ವರ್ಷದ ಮಗ.

ಇವೆಲ್ಲ ಸಿಮೆಂಟ್ ಕಾರ್ಖಾನೆಗಳ ಸುತ್ತಲಿನ ರೈತರ ಜಮೀನಿನಲ್ಲಿ ಕಂಡುಬರುವ ಶೋಚನೀಯ ದೃಶ್ಯಗಳು. ಸೇಡಂ ತಾಲ್ಲೂಕಿನ ಕೋಡ್ಲಾ, ಬೆನಕನಹಳ್ಳಿ, ಹಂಗನಳ್ಳಿ, ಊಡಗಿ, ಮಳಖೇಡ (ನೃಪತುಂಗ ನಗರ), ಚಿತ್ತಾಪುರ ತಾಲ್ಲೂಕಿನ ಸ್ಟೇಷನ್ ತಾಂಡಾ, ಇಟಗಾ, ಮೊಗಲಾ, ಹೂಡಾ, ದಿಗ್ಗಾಂವ, ವಾಡಿ ಪಟ್ಟಣ ಹಾಗೂ ಸುತ್ತಲಿನ ಇಂಗಳಗಿ ಗ್ರಾಮಗಳ ನಿವಾಸಿಗಳ ‘ಉಸಿರಲ್ಲಿ ದೂಳು, ಹೊಗೆ’ ಆವರಿಸಿಕೊಂಡಿದೆ.

‘ಮಳಖೇಡ ಸ್ಟೇಷನ್ ತಾಂಡಾ ಒಂದರಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ 2,410 ಮಂದಿಯಲ್ಲಿ ಕೆಮ್ಮು ಕಾಣಿಸಿಕೊಂಡಿದ್ದರೆ 2,140 ಜನ ಚರ್ಮರೋಗದಿಂದ ಬಳಲುತ್ತಿದ್ದಾರೆ. 107 ಮಂದಿಯಲ್ಲಿ ಧಮ್ಮು, 32 ಮಂದಿಯಲ್ಲಿ ಅಸ್ತಮಾ, 105 ಜನರಲ್ಲಿ ಉಸಿರಾಟ ತೊಂದರೆ, 434 ಮಂದಿ ಇಎನ್ಟಿ ಸಮಸ್ಯೆಯಿಂದ ಪರಿತಪಿಸುತ್ತಿದ್ದರೆ 65 ಜನ ಕ್ಷಯರೋಗಕ್ಕೆ (ಟಿಬಿ) ತುತ್ತಾಗಿದ್ದಾರೆ’ ಎನ್ನುತ್ತಲೇ ಮಳಖೇಡ ಗ್ರಾಮ ಪಂಚಾಯಿತಿ ಸದಸ್ಯ ಉಮೇಶ ಚವ್ಹಾಣ್ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಕಿ–ಅಂಶ ತೋರಿಸಿದರು.

ಗ್ರಾಮಸ್ಥರಿಗೆ ಬೇಗುದಿ: ರಾಜ್ಯಕ್ಕೆ ಬೆಳಕು ನೀಡುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್ಟಿಪಿಎಸ್) ಕಲ್ಲಿದ್ದಲು ಆಧಾರಿತ ವಿದ್ಯುತ್ ಶಕ್ತಿ ಕೇಂದ್ರ ವಾಗಿದ್ದು, ಇಲ್ಲಿಯ ಹಾರುಬೂದಿ ಹಲವು ಸಮಸ್ಯೆಗಳನ್ನು ತಂದೊ ಡ್ಡಿದೆ. ಕೈಗಾರಿಕೆ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಯಿಂದ ಕಾರ್ಯನಿರ್ವಹಿಸದ ಕಾರಣ ಸಮಸ್ಯೆ ಜಟಿಲಗೊಂಡಿದೆ.

ಆರ್ಟಿಪಿಎಸ್ನ ಹಾರುಬೂದಿ ಮಿಶ್ರಿತ ನೀರು ಹೊಂಡದಲ್ಲಿ ಸಂಗ್ರಹವಾದ ನಂತರ ಅದನ್ನು ಲಾರಿ, ಟಿಪ್ಪರ್ ಮತ್ತು ಟ್ಯಾಂಕರ್ಗಳ ಮೂಲಕ ಸಿಮೆಂಟ್ ಫ್ಯಾಕ್ಟರಿಗಳಿಗೆ ಸಾಗಣೆ ಮಾಡಲಾಗುತ್ತದೆ. ಇಟ್ಟಿಗೆ ಭಟ್ಟಿಗಳ ಮಾಲೀಕರೂ ಇದನ್ನು ಇಟ್ಟಿಗೆ ತಯಾರಿಕೆಗೆ ಕೊಂಡೊಯುತ್ತಿದ್ದಾರೆ. ಆರ್ಟಿಪಿಎಸ್ಗೆ ಇದರಿಂದ ಲಾಭವೇ ಇದೆ. ಆದರೆ, ಸುರಕ್ಷತಾ ನಿಯಮಗಳನ್ನು ಬಿಗಿಗೊಳಿಸದ ಕಾರಣ ಶಕ್ತಿನಗರದ ಒಂದನೇ ಮತ್ತು ಎರಡನೇ ಕ್ರಾಸ್ ರಸ್ತೆಗಳಲ್ಲಿರುವ ಗ್ರಾಮಸ್ಥರು ಹಾಗೂ ರೈತರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

‘ಶಾಖೋತ್ಪನ್ನ ಘಟಕಗಳ ಚಿಮಣಿ ಕನಿಷ್ಠ 180 ಮೀಟರ್ ಎತ್ತರ ಇರಬೇಕು. ಆದರೆ, ಆರ್ಟಿಪಿಎಸ್ನಲ್ಲಿರುವ ಚಿಮಣಿಗಳ ಎತ್ತರ ಕಡಿಮೆ ಇದೆ. ಹೀಗಾಗಿ ಸಹಜವಾಗಿ ಗಾಳಿಯಲ್ಲಿ ಸೇರಿಕೊಳ್ಳುತ್ತಿದೆ. ದೂಳು ಗಾಳಿಯಲ್ಲಿ ತೇಲಿ ಬರುತ್ತದೆ ಎನ್ನುತ್ತಾರೆ’ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿ ವೀರೇಶ.

‘ಆರ್ಟಿಪಿಎಸ್ ಸಮೀಪದಲ್ಲೇ ನಮ್ಮ ಮನೆಗಳು ಇವೆ. ಬೂದಿ ಹಾರಿ ಬಂದು ಮನೆಗಳಿಗೆ ಮೆತ್ತಿಕೊಂಡಿದೆ. ಒಮ್ಮೊಮ್ಮೆ ಮನೆಯೊಳಗೂ ಹಾರಿ ಬರುತ್ತದೆ. ಮನೆಯ ಹೊರಗಡೆ ಬಟ್ಟೆ ಒಣ ಹಾಕುವ ಸ್ಥಿತಿಯಲ್ಲೂ ಇಲ್ಲ. ನಮ್ಮ ಗೋಳು ಕೇಳುವವರೇ ಇಲ್ಲ’ ಎಂದು ದೇವಸೂಗೂರಿನ ಯುವತಿ ನವಿತಾ ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಆರ್ಟಿಪಿಎಸ್ನ ಹಾರುಬೂದಿ ಹೊಂಡದಲ್ಲಿ 26 ಸಾವಿರ ದಶಲಕ್ಷ ಕ್ಯೂಬಿಕ್ ಟನ್ ಬೂದಿ ಸಂಗ್ರಹ ಇದೆ. ಸಿಮೆಂಟ್ ಕಂಪನಿಗಳು ಹಾಗೂ ಇಟ್ಟಿಗೆ ಭಟ್ಟಿಗಳು ಸೇರಿ ನಿತ್ಯ 750 ಟನ್ ಬೂದಿ ಖರೀದಿಸುತ್ತವೆ. ಮಾಸಿಕ 22,500 ಟನ್ ಮಾರಾಟವಾಗುತ್ತದೆ.

ಲಾರಿ, ಟಿಪ್ಪರ್ ಮತ್ತು ಟ್ಯಾಂಕರ್ ಸೇರಿ ನಿತ್ಯ ಸುಮಾರು 500 ವಾಹನಗಳು ಸಂಚರಿಸುತ್ತವೆ. ಬೂದಿ ತುಂಬಿದ ವಾಹನಗಳಿಂದ ರಸ್ತೆಯ ಮೇಲೆ ಬೂದಿ ಬೀಳುತ್ತಲೇ ಇದೆ. ಬೂದಿ ತುಂಬಿದ ವಾಹನಗಳ ಮೇಲೆ ತಾಡಪಾಲ್ ಕಟ್ಟಬೇಕು. ಆದರೆ, ವಾಹನಗಳ ಮೇಲೆ ಸರಿಯಾಗಿ ಮುಚ್ಚುವುದೇ ಇಲ್ಲ. ಇದರಿಂದ ದೂಳು ದಟ್ಟ ಅಲೆಯಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಚದುರುತ್ತಿದೆ. ದೂಳಿನಲ್ಲಿ ರಸ್ತೆ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.

ಶಕ್ತಿನಗರದ 25 ಕಿ.ಮೀ ವ್ಯಾಪ್ತಿಯಲ್ಲಿನ ಹಳ್ಳಿಗಳ ಜನ ರಾಯಚೂರಿನ ರೈಸ್ ಮಿಲ್, ಎಪಿಎಂಸಿ, ಸರ್ಕಾರಿ, ಖಾಸಗಿ ಕಚೇರಿ ಕೆಲಸಕ್ಕೆ ಬರುವ ಜನ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ದೂಳು ವಾಹನ ಸವಾರರ ಕಣ್ಣು, ಮೂಗು, ಕಿವಿಯೊಳಗೆ ಸೇರುತ್ತಿದೆ. ಗಂಟಲಿಗೆ ಇಳಿದು ಶ್ವಾಸಕೋಶಕ್ಕೂ ಹಾನಿ ಉಂಟು ಮಾಡುತ್ತಿದೆ. ನಿಯಮ ಪಾಲಿಸದ ಬೂದಿ ಸಾಗಿಸುವ ವಾಹನಗಳ ವಿರುದ್ಧ ಸಂಚಾರ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ. ರಾಯಚೂರಿನ ಆರ್ಟಿಪಿಎಸ್, ಕೊಪ್ಪಳದ ಕಾರ್ಖಾನೆಗಳು ರಾಜ್ಯಕ್ಕೆ ಆರ್ಥಿಕ ಶಕ್ತಿ ತುಂಬುತ್ತಿದ್ದರೆ ಸ್ಥಳೀಯ ಜನರಿಗೆ ಶಾಪವಾಗಿದೆ. ಜಿಲ್ಲಾಡಳಿಗಳು ಇದು ನಮ್ಮ ಸಮಸ್ಯೆಯಲ್ಲ ಎನ್ನುವ ಜಾಣನಿದ್ರೆಯಲ್ಲಿ ಕುಳಿತಿದೆ.

ಹಾಳಾಯಿತು ಕೃಷಿಭೂಮಿ, ಬೆಳೆ

ಕೊಪ್ಪಳ, ರಾಯಚೂರು ಮತ್ತು ಕಲಬುರಗಿಯಲ್ಲಿ ವ್ಯಾಪಕ ಹಾರು ಬೂದಿಯ ಹಾವಳಿಯಿಂದಾಗಿ ಕೃಷಿ ಭೂಮಿ ಹಾಳಾಗುತ್ತಿದ್ದು ಬೆಳೆ ಇಳುವರಿ ಹಾಗೂ ಬೆಲೆಯೂ ಇಳಿಕೆಯಾಗುತ್ತಿದೆ.

‘ಶಕ್ತಿನಗರ 30 ಕಿ.ಮೀ ವ್ಯಾಪ್ತಿಯಲ್ಲಿ ರೈತರು ಹತ್ತಿ ಹಾಗೂ ತರಕಾರಿ ಬೆಳೆಯುವ ಸ್ಥಿತಿಯಲ್ಲಿ ಇಲ್ಲ. ಬೆಳೆದರೂ ದೂಳಿನಿಂದಾಗಿ ನಷ್ಟ ಅನುಭವಿಸಬೇಕಾಗಿದೆ. ಬೆಳೆಗಳು ಕಪ್ಪಾಗಿ ಬೆಳೆ ಹಾಳಾಗುತ್ತಿದೆ’ ಎಂದು ರೈತರ ಹಸಿರು ಸೇನೆ ರಾಯಚೂರು ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಹಾಗೂ ರೈತ ಅಂಬಣ್ಣ ಅರಷಣಿಗಿ ಹೇಳುತ್ತಾರೆ.

ಅಲ್ಲಾನಗರ ಭಾಗದಲ್ಲಿ ಫಸಲು ಕಿತ್ತುವಾಗ ಮೈಕೈಯೆಲ್ಲಾ ಕಪ್ಪುಮಯ. ಬೆಳೆದ ಸಂಕಟಕ್ಕೆ ನೀರಿನಲ್ಲಿ ತೊಳೆದು ಊರಿನ ಸುತ್ತಮುತ್ತಲಿನ ವಾರದ ಸಂತೆಯಲ್ಲಿ ಮಾರಾಟಕ್ಕೆ ಕಳುಹಿಸಿದರೆ ಬೇರೆ ಕಡೆಯಿಂದ ಬಂದ ಬೆಳೆಗೆ ಸಿಗುವುದಕ್ಕಿಂತಲೂ ಶೇ 50ರಷ್ಟು ಕಡಿಮೆ ಬೆಲೆ ಲಭಿಸುತ್ತದೆ. ಆದ್ದರಿಂದ ‘ಕಪ್ಪುದೂಳಿನ ಸಂತ್ರಸ್ತ ರೈತರು’ ಬೇರೆ ಊರುಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ. ಉಳಿದದ್ದನ್ನು ತೊಳೆದುಕೊಂಡು ತಾವೇ ತಿನ್ನುವ ಪರಿಸ್ಥಿತಿ ಎದುರಾಗಿದೆ.

‘ಮರಗಳು, ಬೆಳೆಗಳ ಮೇಲೆ ದೂಳು ಕೂರುವುದರಿಂದ ಎಲೆಗಳಲ್ಲಿ ಪೂರ್ಣಪ್ರಮಾಣದಲ್ಲಿ ದ್ಯುತಿಸಂಶ್ಲೇಷಣೆಯ ಕ್ರಿಯೆ ನಡೆಯುವುದಿಲ್ಲ. ಸಹಜವಾಗಿ ಸಸಿಗಳು ಒಣಗುತ್ತವೆ. ರಾಸಾಯನಿಕ ದೂಳಿನ ಕಣಗಳು ಮಣ್ಣಿನಲ್ಲಿ ಸೇರಿದರೆ ಮಣ್ಣಿನ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ಕಲಬುರಗಿಯ ಕೃಷಿ ವಿಜ್ಞಾನಿ ರಾಜು ತೆಗ್ಗಳ್ಳಿ.

ಕಪ್ಪು ಬೂದಿ ಕೊಪ್ಪಳ ತಾಲ್ಲೂಕಿನ ಜನರ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಆರೋಗ್ಯ ಇಲಾಖೆಯವರನ್ನು ಕೇಳಿದಾಗ ‘ವರದಿ ತಯಾರಿಸಲಾಗುತ್ತಿದೆ’ ಎನ್ನುವ ಉತ್ತರ ನೀಡಿದರು. ಸೇಡಂ ಸಿಮೆಂಟ್ ಕಾರ್ಖಾನೆಗಳ ದೂಳಿನಿಂದ ಬೆಳೆಗಳಿಗೆ ಹಾನಿಯಾಗುತ್ತಿರುವ ಬಗ್ಗೆಯೂ ಕಲಬುರಗಿಯ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ‘ರೈತರು ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ದೂಳಿನಿಂದ ಬೆಳೆ ಹಾನಿಯ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ವರದಿ ನೀಡುವಂತೆ ಕೋರಿ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದರು.

ಬೂದಿ ಅಂಶ ಕಡಿಮೆ ಆಗಲು ಬೇಕು 15 ವರ್ಷ

ಭೂಮಿ ಆಳದಲ್ಲಿನ ಖನಿಜಾಂಶಗಳನ್ನು ಭೂಮಿಯ ಮೇಲ್ಮೈಗೆ ತಂದು ಹಾಕುವುದೆಂದರೆ ಒಂದು ರೀತಿಯಲ್ಲಿ ನಿಸರ್ಗಕ್ಕೆ ವಿರುದ್ಧವಾಗಿಯೇ ನಡೆದುಕೊಂಡಂತೆ. ಕಲ್ಲಿದ್ದಲು ಬಳಸಿಕೊಂಡ ನಂತರ ಅದರ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಅಂದಾಗ ಮಾತ್ರ ಅವುಗಳ ದುಷ್ಪರಿಣಾಮ ತಡೆಯಲು ಸಾಧ್ಯವಿದೆ ಎಂದು ಕೃಷಿ ವಿಜ್ಞಾನಿಗಳು
ಅಭಿಪ್ರಾಯಪಡುತ್ತಾರೆ.

ಹಾರುಬೂದಿಯಿಂದಾಗಿ ಕೃಷಿ ಇಳುವರಿ ಕುಸಿತವಾಗುತ್ತಿದೆಯೇ ಎನ್ನುವ ಕುರಿತು ಸುಧೀರ್ಘ ಅಧ್ಯಯನಗಳು ನಡೆದಿವೆ. ಬೆಳೆಗಳ ಮೇಲೆ ನಿರಂತರವಾಗಿ ಹಾರುಬೂದಿ ಹಾಕಿ ಪರೀಕ್ಷಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಹತ್ತಿಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಬೆಳೆ ಚೆನ್ನಾಗಿ ಬೆಳೆದರೂ ಹಾರುಬೂದಿಯಿಂದಾಗಿ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಹತ್ತಿ ಮಾರಾಟವಾಗುವುದಿಲ್ಲ.

ಹಾರುಬೂದಿಯಲ್ಲಿ ಪಾದರಸ, ಅಲುಮಿನಿಯಂ ನಿಕ್ಕಲ್ನಂತಹ ಖನಿಜಾಂಶಗಳು ಇರುತ್ತವೆ. ಒಂದು ಎಕರೆಗೆ ಭೂಮಿಗೆ 30ರಿಂದ 40 ಟಿಪ್ಪರ್ ಹಾರುಬೂದಿ ಬಳಸಿ ಭೂಮಿಯ ಫಲವತ್ತತೆ ಹೆಚ್ಚಿಸಬಹುದು. ಆದರೆ, ಹಾರುಬೂದಿ ಖರೀದಿ ಹಾಗೂ ಸಾಗಣೆ ಹೆಚ್ಚು ವೆಚ್ಚದಾಯಕ. ಕಲ್ಲಿದ್ದಲು ಉರಿಸಿದರೂ ಅದರಲ್ಲಿನ ಪಾದರಸ, ಅಲುಮಿನಿಯಂ, ನಿಕ್ಕಲ್ ಬೂದಿಯಲ್ಲಿ ಉಳಿದಿರುತ್ತದೆ. ಅದು ನೀರಿನಲ್ಲೂ ಕರಗುವುದಿಲ್ಲ. ಅದರ ಅಂಶ ಸಂಪೂರ್ಣ ಕಡಿಮೆಯಾಗಲು ಕನಿಷ್ಠ 15 ವರ್ಷವಾದರೂ ಬೇಕು ಎಂದು ಕೃಷಿ ವಿಜ್ಞಾನಿ ಡಾ.ವೀರೇಶ ವಿಶ್ಲೇಷಿಸುತ್ತಾರೆ.

ಖರ್ಚು ಉಳಿಸಲು ಕಾರ್ಖಾನೆಗಳ ಕಸರತ್ತು

ಬಹುತೇಕ ಕಾರ್ಖಾನೆಗಳು ತಮ್ಮಲ್ಲಿನ ಕಪ್ಪು ದೂಳು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸ್ಥಾಯಿವಿದ್ಯುತ್ತಿನ ಅವಕ್ಷೇಪಕ (ಇಎಸ್ಪಿ, Electrostatic Precipitators) ಮೊರೆ ಹೋಗುತ್ತವೆ. ಇದನ್ನು ಸ್ಥಾಯಿ ವಿದ್ಯುತ್ನ ದೂಳು ಸಂಗ್ರಹಕವೆಂತಲೂ ಕರೆಯುತ್ತಾರೆ.

ಕಬ್ಬಿಣ, ಉಕ್ಕು, ಸ್ಟೀಲ್ ಹಾಗೂ ಇತರೆ ಕಚ್ಚಾ ವಸ್ತುಗಳಿಂದ ಬರುವ ಕಪ್ಪು ದೂಳನ್ನು ಇಎಸ್ಪಿ ಸಾಧನ ತಡೆದು ಕಪ್ಪು ಕಚ್ಚಾವಸ್ತು ಸ್ಥಳದಲ್ಲಿಯೇ ಸಂಗ್ರಹವಾಗುವಂತೆ ಮಾಡುತ್ತದೆ. ಪರಿಸರಕ್ಕೆ, ಆರೋಗ್ಯಕ್ಕೆ ಹಾನಿ ಉಂಟು ಮಾಡುವ ದೂಳಿನ ಕಣಗಳನ್ನು ತನ್ನಲ್ಲಿಯೇ ಹಿಡಿದಿಟ್ಟುಕೊಂಡು ಬಳಿಕ ಟಿಪ್ಪರ್ಗಳ
ಮೂಲಕ ಬೇರೆಡೆ ಸಾಗಿಸಲಾಗುತ್ತದೆ.

ಈ ಯಂತ್ರ ಬಳಕೆ ಮಾಡಿದರೆ ವಿದ್ಯುತ್ ಶುಲ್ಕ ಹಾಗೂ ಯಂತ್ರದ ನಿರ್ವಹಣಾ ವೆಚ್ಚ ಎರಡೂ ಹೆಚ್ಚಾಗುತ್ತದೆ. ಆದ್ದರಿಂದ ಕೊಪ್ಪಳದ ಬಹುತೇಕ ಕಾರ್ಖಾನೆಗಳು ಜನ ಟೀಕಿಸುತ್ತಾರೆ ಎನ್ನುವ ಕಾರಣಕ್ಕೆ ಹಗಲು ಹೊತ್ತಿನಲ್ಲಿ ಯಂತ್ರವನ್ನು ಆನ್ ಮಾಡಿ, ರಾತ್ರಿ ಹೊತ್ತಿನಲ್ಲಿ ಆಫ್ ಮಾಡುತ್ತಾರೆ ಎನ್ನುವ ಆರೋಪವಿದೆ. ಹೀಗಾಗಿ ಹಾರು ಬೂದಿ ಸುತ್ತಲೂ ಹರಡಿ ಮಾಲಿನ್ಯ ಉಂಟು ಮಾಡುತ್ತಿದೆ.

ಆರ್ಟಿಪಿಎಸ್ನಲ್ಲಿ ವ್ಯವಸ್ಥಿತವಾಗಿ ಹಾರುಬೂದಿ ಸಂಗ್ರಹ ಮಾಡಲಾಗುತ್ತಿದೆ. ಲಾರಿ ಹಾಗೂ ಟಿಪ್ಪರ್ಗಳು ಸರಿಯಾಗಿ ಹೊದಿಕೆ ಹಾಕಿಕೊಂಡು ಸಾಗಬೇಕು. ಈಗಾಗಲೇ ವಾಹನಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ

–ಡಾ. ರತಿಕಾಂತ್ ಸ್ವಾಮಿ, ಕಲಬುರಗಿ ಜಿಲ್ಲಾಸ್ಪತ್ರೆ

ಸಿಮೆಂಟ್ ಕಾರ್ಖಾನೆಗಳ ಸುತ್ತಲಿನ ದೂಳಿನಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತೇವೆ.

–ಪ್ರೇಮಲತಾ, ಆರ್ಟಿಪಿಎಸ್ ಅಧಿಕಾರಿ

ಪೂರಕ ಮಾಹಿತಿ: ಚಂದ್ರಕಾಂತ ಮಸಾನಿ, ಮಲ್ಲಿಕಾರ್ಜುನ ನಾಲವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.