ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಹಕರ ಕೈಸುಡುತ್ತಿದೆ ತರಕಾರಿ ದರ

ಗಗನಕ್ಕೇರಿದ ತರಕಾರಿ, ಸೊಪ್ಪು, ಹಣ್ಣು ಬೆಲೆ: ಬೀನ್ಸ್‌ 1 ಕೆ.ಜಿಗೆ ₹200
Published 13 ಮೇ 2024, 4:43 IST
Last Updated 13 ಮೇ 2024, 4:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಳೆ ಕೊರತೆ, ನೀರಿನ ಅಭಾವದಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದೆ ಫಸಲು ಕುಂಠಿತವಾಗಿದೆ.  ಬಿಸಿಲಿನ ಪ್ರಮಾಣ ಹೆಚ್ಚುತ್ತಿದ್ದಂತೆ ಹಣ್ಣು, ತರಕಾರಿ, ಸೊಪ್ಪು ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.

ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪೂರೈಕೆ ಕಡಿಮೆಯಾಗಿದ್ದು, ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಹಣ್ಣು, ತರಕಾರಿಗಳ ಬೆಲೆ ಸಾರ್ವಜನಿಕರನ್ನು ಬಿಸಿಲಿನಷ್ಟೇ ಜೋರು ಸುಡುತ್ತಿದೆ!

ತರಕಾರಿ ಬೆಲೆ ಹೆಚ್ಚಳವಾಗಿದ್ದು, ಬೀನ್ಸ್‌ ಕೆಜಿಗೆ ₹200ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ದಪ್ಪ ಮೆಣಸಿನಕಾಯಿ, ಹಸಿ ಮೆಣಸಿನಕಾಯಿ, ಬದನೆಕಾಯಿ ಸೇರಿ ಹಲವು ತರಕಾರಿಗಳು ತುಟ್ಟಿಯಾಗಿವೆ. ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ನಿಂಬೆಹಣ್ಣು, ಕ್ಯಾರೇಟ್ ಬೆಲೆ ಹೆಚ್ಚಳವಾಗಿದೆ. ₹20ಕ್ಕೆ ಮೂರು ನಿಂಬೆಹಣ್ಣು, ₹10ಕ್ಕೆ ಒಂದು ನುಗ್ಗೇಕಾಯಿ ಮಾರಾಟ ಆಗುತ್ತಿವೆ.

‘ಹುಬ್ಬಳ್ಳಿ ಮಾರುಕಟ್ಟೆಗೆ ಬೆಳಗಾವಿ, ಗದಗ, ಹಾವೇರಿ, ಕಾರವಾರ, ಧಾರವಾಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ತರಕಾರಿ ಪೂರೈಕೆ ಆಗುತ್ತದೆ. ಆದರೆ, ಈ ಸಲ ನೀರಿನ ಕೊರತೆಯಿಂದ ಬೆಳೆ ಇಳುವರಿ ಕುಸಿತವಾಗಿದೆ. ಬೇಡಿಕೆಯ ಅರ್ಧದಷ್ಟೂ ತರಕಾರಿ ಪೂರೈಕೆ ಆಗದ್ದಕ್ಕೆ ಬೆಲೆ ಏರಿಕೆಯಾಗಿದೆ’ ಎನ್ನುವುದು ತರಕಾರಿ ವ್ಯಾಪಾರಸ್ಥರ ಮಾತು.

‘ಬೆಳಗಾಗುವಷ್ಟರಲ್ಲಿ ಎಸಿಎಂಸಿಗೆ ಹೋದರೆ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಹಾಗೂ ತಾಜಾ ತರಕಾರಿ, ಸೊಪ್ಪು ಸಿಗುತ್ತದೆ. ತಾಯಿಯೊಂದಿಗೆ ಸೇರಿ ತರಕಾರಿ ವ್ಯಾಪಾರ ಮಾಡುತ್ತಿದ್ದು, ದಿನಕ್ಕೆ ₹500ರಿಂದ ₹800 ಲಾಭ ಸಿಗುತ್ತದೆ. ತರಕಾರಿ ಬೆಲೆ ಹೆಚ್ಚಳದಿಂದ ಖರೀದಿ ವೇಳೆ ಕೆಲ ಗ್ರಾಹಕರು ಚೌಕಾಸಿ ಮಾಡುತ್ತಾರೆ. ಕೊನೆಗೆ ಕಡಿಮೆ ಬೆಲೆ ಇರುವ ತರಕಾರಿ ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ಹೊಸೂರು ಬಳಿಯ ತರಕಾರಿ ವ್ಯಾಪಾರಿ ಪ್ರೇಮಾ.

‘ಇರುವ 10 ಗುಂಟೆ ಜಮೀನಿನಲ್ಲಿ ಕೊತ್ತಂಬರಿ, ಮೆಂತ್ಯ, ಪಾಲಕ್, ಪುದಿನಾ ಸೊಪ್ಪು ಬೆಳೆದಿದ್ದೇನೆ. ಎರಡು ತಿಂಗಳ ಹಿಂದೆ ಬೆಲೆ ಅಷ್ಟಕ್ಕಷ್ಟೇ ಇತ್ತು. ಇದೀಗ ಸೊಪ್ಪು ಬೆಲೆ ಹೆಚ್ಚಳವಾಗಿದ್ದು, ಉತ್ತಮ ಲಾಭ ಸಿಗುತ್ತಿದೆ’ ಎಂದು ಕುಂದಗೋಳದ ನರಸಮ್ಮ ಭಜಂತ್ರಿ ಹೇಳುತ್ತಾರೆ.

‘ಹೆಚ್ಚು ಹಣ ನೀಡಿದರೂ ಚಿಲ್ಲರೆ ವ್ಯಾಪಾರಿಗಳ ಬಳಿ ತಾಜಾ ತರಕಾರಿ ಸಿಗುತ್ತಿಲ್ಲ. ಹೀಗಾಗಿ ಎರಡು ದಿನಕ್ಕೊಮ್ಮೆ ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿಯಲ್ಲಿ ಸಗಟು ವ್ಯಾಪಾರಿಗಳಿಂದ ತರಕಾರಿ, ಸೊಪ್ಪು ಖರೀಸುತ್ತಿದ್ದೇನೆ’ ಎಂದರು ಹುಬ್ಬಳ್ಳಿಯ ನವೀನ ಕೆರೆಕೊಪ್ಪ.

ಯಥಾಸ್ಥಿತಿಯಲ್ಲಿ ಬಾಳೆಹಣ್ಣು ಬೆಲೆ: ಬೇಸಿಗೆಯಲ್ಲಿ ಹೆಚ್ಚು ಮಾರಾಟವಾಗುವುದೇ ಬಾಳೆಹಣ್ಣು. ಆದರೆ ಇದರ ಬೆಲೆ ಮಾತ್ರ ಸ್ಥಿರವಾಗಿದೆ. ಏಲಕ್ಕಿ ಬಾಳೆಹಣ್ಣು ಕೆ.ಜಿಗೆ ₹60ರಿಂದ ₹80, ಜವಾರಿ ಬಾಳೆಹಣ್ಣು ₹30ರಿಂದ ₹40ಕ್ಕೆ ಮಾರಾಟವಾಗುತ್ತಿವೆ.

‘ಬಿಸಿಲಿಗೆ ಬಾಳೆಹಣ್ಣು ಬೇಗ ಹಣ್ಣಾಗಿ, ಎರಡು ದಿನದೊಳಗೆ ಹಣ್ಣಿನ ಸಿಪ್ಪೆ ಕಪ್ಪಾಗುತ್ತದೆ. ಇದರಿಂದ ಹಲವು ಬಾರಿ ನಷ್ಟ ಅನುಭವಿಸಲಾಗಿದೆ. ಅಂದಿನ ದಿನ ಮಾರಾಟವಾಗುವಷ್ಟು ಬಾಳೆಹಣ್ಣನ್ನು ಮಾತ್ರ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ’ ಎನ್ನುತ್ತಾರೆ ಬಾಳೆಹಣ್ಣು ವ್ಯಾಪಾರಿ ಗೈಬೂಸಾಬ್ ನದಾಫ.

ಸೇಬಿಗಿಂತ ಮಾವು ದುಬಾರಿ ‘ಹಣ್ಣುಗಳ ರಾಜ

ಮಾವು ಬೆಲೆ ಕಳೆದ ಸಲಕ್ಕಿಂತ ಈ ಸಲ ಹೆಚ್ಚಳವಾಗಿದೆ. ಸೇಬು ಹಣ್ಣು ಕೆಜಿಗೆ ₹200ರ ಆಸುಪಾಸಿನಲ್ಲಿ ಮಾರಾಟವಾದರೆ ಮಾವಿನಹಣ್ಣು ಡಜನ್‌ಗೆ ₹300ರಿಂದ ₹600ಕ್ಕೆ ಮಾರಾಟಕ್ಕಿದೆ. ಹುಬ್ಬಳ್ಳಿಯ ಮಾರುಕಟ್ಟೆ ಪ್ರದೇಶ ರಸ್ತೆಬದಿಗಳಲ್ಲಿ ಮಾವಿನಹಣ್ಣು ಮಾರಾಟ ಜೋರಾಗಿದೆ. ಕಲ್ಮಿ ಕರಿ ಇಷಾಡಿ ಆಪೂಸ್ ಸಿಂಧೂರ ಪೈರಿ ಮಲ್ಗೋಬಾ ಬೆನಿಶಾ ಕೇಸರ್ ತೋತಾಪೂರಿ ಹೆಸರಿನ ತಳಿಯ ಮಾವಿನಹಣ್ಣು ಹುಬ್ಬಳ್ಳಿಯಲ್ಲಿ ಮಾರಾಟಕ್ಕಿವೆ. ‘ಆಪೂಸ್ ಸಿಂಧೂರ ತಳಿಯ ಮಾವಿನಹಣ್ಣಿಗೆ ಬೇಡಿಕೆ ಹೆಚ್ಚಿದೆ. ಮಹಾರಾಷ್ಟ್ರದ ಕೊಲ್ಲಾಪೂರ ರತ್ನಗಿರಿ ಬೆಳಗಾವಿ ಧಾರವಾಡ ಹಾಗೂ ಗ್ರಾಮೀಣ ಭಾಗದಿಂದ ಮಾವಿನಹಣ್ಣು ಖರೀದಿಸಿ ಮಾರಾಟ ಮಾಡಲಾಗುತ್ತಿದೆ’ ಎನ್ನುತ್ತಾರೆ ಮಾವಿನಹಣ್ಣಿನ ವ್ಯಾಪಾರಿ ಜನತಾಬಜಾರ್‌ನ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹೇಶ ಎಸ್. ಹಂಜಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT