ಶುಕ್ರವಾರ, 5 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಳೆ ನಾಶಕ್ಕೆ ಸೈಕಲ್ ಎಡೆಕುಂಟೆ

ಬಾಡಿಗೆ, ಕೂಲಿ ಖರ್ಚು ಉಳಿತಾಯ
ರಮೇಶ ಓರಣಕರ
Published 3 ಜುಲೈ 2024, 5:30 IST
Last Updated 3 ಜುಲೈ 2024, 5:30 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಗ್ರಾಮೀಣ ಪ್ರದೇಶದ ಬಹುತೇಕ ಕೃಷಿ ಭೂಮಿಗಳಲ್ಲಿ ಮುಂಗಾರು ಮಳೆಯಿಂದ ಬೆಳೆಗಳ ನಡುವೆ ಚಿಗುರೊಡೆದ ಕಸ ನಾಶ ಪಡಿಸಲು ಹೊಡೆಯುವ ಎಡೆಕುಂಟೆ ಕಾರ್ಯ ಭರದಿಂದ ಸಾಗಿದೆ. ಸೈಕಲ್‌ನಿಂದ ತಯಾರಿಸಿದ ಸಾಧನದಿಂದ ರೈತರು ಎಡೆಕುಂಟೆ ಹೊಡೆಯುತ್ತಿದ್ದಾರೆ.

ಕಳೆದ ತಿಂಗಳು ಸುರಿದ ಮುಂಗಾರು ಮಳೆಗೆ ಹೆಸರು, ಉದ್ದು, ಸೊಯಾಬೀನ್, ಶೇಂಗಾ, ಹತ್ತಿ, ಜವಾರಿ ಜೋಳ ಸೇರಿದಂತೆ ಮೊದಲಾದ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಈಗ ಬೆಳೆಗಳು ಸಮೃದ್ಧವಾಗಿ ಬಂದಿವೆ. ಬಿತ್ತನೆ ಮಾಡಿದ 20 ದಿನಕ್ಕೆ ರೈತರು ಎಡೆಕುಂಟೆ ಹೊಡೆಯುತ್ತಾರೆ.

‘ಈಚಿನ ವರ್ಷಗಳಲ್ಲಿ ಎತ್ತುಗಳ ಎಡೆಕುಂಟೆ ಹೊಡೆಸಲು ರೈತಾಪಿ ಜನ ಹಿಂದೇಟು ಹಾಕುತ್ತಿದ್ದಾರೆ. ಎಕರೆಗೆ ₹1,500ರಿಂದ ₹2 ಸಾವಿರದ ವರೆಗೆ ಬಾಡಿಗೆ ಕೊಟ್ಟು ಹೊಡೆಸಬೇಕಾಗಿದೆ. ಇಷ್ಟು ಹಣ ವ್ಯಯಿಸುವ ಬದಲು ಸೈಕಲ್‌ನಿಂದ ತಯಾರಿಸಿದ ಎಡೆಕುಂಟೆಯಿಂದ ದಿನಕ್ಕೆ ಒಂದು ಎಕರೆ ಭೂಮಿಯನ್ನು ಎಡೆ ಹೊಡೆಯುತ್ತೇವೆ. ಇದರಿಂದ ಬಾಡಿಗೆ ಮತ್ತು ಕೂಲಿ ಖರ್ಚು ಉಳಿತಾಯವಾಗುತ್ತದೆ’ ಎನ್ನುತ್ತಾರೆ ರೈತ ಮಹಾದೇವ ಪಟ್ಟಣಶೆಟ್ಟಿ.

ಮಳೆಯ ರಭಸಕ್ಕೆ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆ ಬಿಗಿದುಕೊಂಡಿರುತ್ತದೆ. ಒಳ್ಳೆಯ ಬೆಳವಣಿಗೆಗಾಗಿ ಮಣ್ಣನ್ನು ಸಡಿಲುಗೊಳಿಸಲು ಮತ್ತು ಬೆಳೆಯ ನಡುವೆ ಚಿಗುರೊಡೆದ ಕಳೆಯನ್ನು ನಾಶ ಪಡಿಸಲು ಎಡೆಕುಂಟೆ ಹೊಡೆಯಲಾಗುತ್ತದೆ. ಹೀಗೆ ಮಾಡುವುದರಿಂದ ಮಣ್ಣು ಬೆಳೆಗಳ ಬುಡಕ್ಕೆ ಹೋಗಿ ಬೀಳುತ್ತದೆ. ಇದರಿಂದ ಬೆಳೆಗಳ ಬೇರುಗಳು ಸಡಿಲುಗೊಂಡು ದೃಢವಾಗಿ, ನೇರವಾಗಿ ಬೆಳೆಯುತ್ತವೆ.

‘ಎತ್ತುಗಳ ಬೆಲೆ ಹೆಚ್ಚಿದೆ, ಅವುಗಳನ್ನು ಖರೀದಿಸಿ ತಂದು ಮೇವು, ವಡಗಾಳ ಹಾಕಿ ಜೋಪಾನ ಮಾಡಬೇಕು. ದನಗಳ ಚಾಕರಿಗಾಗಿ ಒಬ್ಬ ಆಳು ನಿತ್ಯ ದುಡಿಯುತ್ತಾನೆ. ಎಡೆಕುಂಟೆ ಉಪಕರಣಗಳ ಸಿದ್ಧಪಡಿಸುವ ಖರ್ಚು ಇವೆಲ್ಲವನ್ನೂ ಸರಿದೂಗಿಸುವ ಸಲುವಾಗಿ ಎಕರೆಗೆ ಆಳು ಸಹಿತ ₹2ಸಾವಿರ, ಇಲ್ಲವೇ ದಿನದ ಬಾಡಿಗೆಯಂತೆ ಎಡೆಕುಂಟೆ ಹೊಡೆಯಲಾಗುತ್ತದೆ’ ಎಂದು ರೈತ ಬಸಪ್ಪ ಹೆಬ್ಬಳ್ಳಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT