ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಗಾಂಜಾ ಮಾರಾಟ; 12 ಆರೋಪಿಗಳ ಬಂಧನ

ರಾಜಸ್ಥಾನದಿಂದ ಖರೀದಿ; ಹು–ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ
Published 25 ಜುಲೈ 2024, 16:01 IST
Last Updated 25 ಜುಲೈ 2024, 16:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಅರವಿಂದ ನಗರದ ಪಿ ಆ್ಯಂಡ್ ಟಿ ಕ್ವಾರ್ಟಸ್‌ನ ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 12 ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 1 ಕೆ.ಜಿ 365 ಗ್ರಾಂ ಗಾಂಜಾ, ಮೊಬೈಲ್ ಫೋನ್‌, ನಗದು, ಬೈಕ್ ಸೇರಿದಂತೆ ₹4.52 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಗೋಡಕೆ ಪ್ಲಾಟ್‌ನ ಅಭಿಷೇಕ ಹನಮಂತ, ಗಣೇಶಪೇಟೆ ಬಿಂದರಗಿ ಓಣಿಯ ಮಹ್ಮದ್ ಅಯಾಜ್, ಈಶ್ವರ ನಗರದ ಇಸ್ಮಾಯಿಲ್‌, ಆನಂದ ನಗರದ (ಘೋಡಕೆ ಪ್ಲಾಟ್‌) ಜಾಫರ್ ಅಲಿಯಾಸ್ ಬಾಂಬೆ ಜಾಫರ್, ಪುರಖಾನ್‌, ಸದರ ಸೋಪಾ ಬುರ್ಡೋಜರ್‌ ನಗರದ ಜುಬೇರ ಅಹ್ಮದ್‌, ಅಜ್ಮೀರ ನಗರದ ಶಾನವಾಜ್, ಆನಂದ ನಗರದ ಒಂದನೇ ಕ್ರಾಸ್‌ನ ಸೋಹಿಲ್‌, ಆನಂದ ನಗರದ ಮಹ್ಮದ್ ಸಾದಿಕ್‌, ರೋಶನ್ ಶೋಯಬ್, ಮೆಹಬೂಬ ನಗರದ ಸಲೀಂ, ಕರೀಂ ಬಂಧಿತರು.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಹುಬ್ಬಳ್ಳಿ –ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಜುಲೈ 24 ರಾತ್ರಿ 10.30ರ ಸುಮಾರಿಗೆ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಸುರೇಶ ಯಳ್ಳೂರ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು ಎಂದರು.

ಆರೋಪಿಗಳು ರಾಜಸ್ಥಾನದ ಮೂಲದವರಿಂದ ಗಾಂಜಾ ಖರೀದಿಸಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ನಗರದವರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರ, ವ್ಯವಹಾರಕ್ಕಾಗಿ ರಾಜಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿಗೆ ಉತ್ತಮ ರೈಲು, ಬಸ್‌ ಸಂಪರ್ಕ ಸಹ ಇದೆ. ಅಲ್ಲಿಂದ ಮಾದಕ ವಸ್ತು ರವಾನೆಯಾಗುತ್ತಿದೆ ಎಂಬ ಮಾಹಿತಿ ಇದೆ. ಹುಬ್ಬಳ್ಳಿ ಉತ್ತರ ಕರ್ನಾಟಕ ಭಾಗದ ಕೇಂದ್ರ ಸ್ಥಾನವಾಗಿದ್ದು, ಇಲ್ಲಿಂದ ಕಾರವಾರ, ಕುಮಟಾ, ಶಿರಸಿ, ಶಿವಮೊಗ್ಗಕ್ಕೂ ರವಾನೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್, ಇನ್‌ಸ್ಪೆಕ್ಟರ್‌ ಸುರೇಶ ಹಳ್ಳೂರ, ಪಿಎಸ್‌ಐ ಶಿವಾನಂದ ಬನ್ನಿಕೊಪ್ಪ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.

ನಾಲ್ವರ ಬಂಧನ: ನಗರದ ಮೂರು ಸಾವಿರ ಮಠದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇರ್ಫಾನ್‌ ಮಹ್ಮದ್‌ಸಲೀಂ ಬಹ್ಮರವಾಲೆ, ಆಶೀಫ್ ರಫಿಕ್‌ ಬಿಜಾಪುರ, ಸಲ್ಮಾನ ಬಾಬರ ತೇಕಬರಾನ್, ಆಸ್ಪಾಕ ರಿಯಾಜ ಅಹೃದ ಫೀರಜಾದೆ ಎಂಬುವರನ್ನು ‌ಕಮರಿಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಆರೋಪಿಗಳು ಜೈಭಾರತ್‌ ಸರ್ಕಲ್‌ನಿಂದ ಮೂರು ಸಾವಿರ ಮಠಕ್ಕೆ ಹೋಗುವ ಮಾರ್ಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಅವರಿಂದ 232 ಗ್ರಾಂ ಗಾಂಜಾ, ₹1 ಸಾವಿರ ನಗದು, ಎರಡು ಮೊಬೈಲ್ ಸೇರಿ ₹6,700 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇನ್‌ಸ್ಪೆಕ್ಟರ್‌ ಸುನೀಲ್ ಎಂ., ತಿಳಿಸಿದರು. ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Quote - ‌ಮಾದಕ ವಸ್ತು ಮಾರಾಟ ಕುರಿತು ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಎಂಟತ್ತು ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಇದರ ನಿಯಂತ್ರಣಕ್ಕೆ ಸಾರ್ವಜನಿಕರು ಪೊಲೀಸರ ಜತೆ ಕೈಜೋಡಿಸಬೇಕು –ಎನ್‌.ಶಶಿಕುಮಾರ್ ಕಮಿಷನರ್ ಹು–ಧಾ ಕಮಿಷನರೇಟ್‌

Cut-off box - ಗಸಗಸೆ ಕಾಯಿ ಮಾರಾಟ; ಇಬ್ಬರ ಬಂಧನ ನಗರದ ಕಾಳಮ್ಮನ ಅಗಸಿ ಬಳಿ ಗಸಗಸೆ ಗಿಡದ ಒಣಗಿದ ಕಾಯಿ (ಪಾಪಿ ಸ್ಟ್ರಾ) ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸೈಬರ್ ಕ್ರೈಂ ಠಾಣೆ ಪೊಲೀಸರು ಹುಬ್ಬಳ್ಳಿಯ ಲೆಹರ್‌ ಗಿರಿ ಶ್ರವಣ್‌ ಗಿರಿ ಎಂಬುವರನ್ನು ಬಂಧಿಸಿದ್ದಾರೆ ಎಂದು ಕಮಿಷನರ್ ಎನ್‌.ಶಶಿಕುಮಾರ್ ತಿಳಿಸಿದರು. ಆರೋಪಿಗಳು ಶಂಕರಮಠ ಸಮೀಪದ ತಮ್ಮ ಚಹಾ ಅಂಗಡಿಯಲ್ಲಿ ಪಾಪಿ ಸ್ಟ್ರಾ ಮಾರಾಟ ಮಾಡುತ್ತಿದ್ದರು. ಅವರಿಂದ 544 ಗ್ರಾಂ  ಪಾಪಿ ಸ್ಟ್ರಾ ವಶಪಡಿಸಿಕೊಳ್ಳಲಾಗಿದೆ. ಇವರು ಸಹ ರಾಜಸ್ಥಾನ ಮೂಲದವರಿಂದ ಅದನ್ನು ಖರೀದಿಸಿದ್ದರು ಎಂಬ ಮಾಹಿತಿ ಇದೆ ಎಂದರು.

ಗಾಂಜಾ ಸೇವಿಸುವವರ ವಿರುದ್ಧವೂ ಪ್ರಕರಣ

ಅವಳಿ ನಗರದಲ್ಲಿ ಗಾಂಜಾ ಸೇವನೆ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು. ಗಾಂಜಾ ಸೇವನೆ ಮಾಡುವುದು ಸಹ ಅಪರಾಧ. ಅಂತವರ ಪತ್ತೆ ಕಾರ್ಯವನ್ನು ಅಭಿಯಾನದ ರೀತಿ ಹಮ್ಮಿಕೊಳ್ಳಲಾಗುವುದು. ದಾಳಿ ವೇಳೆ ಮಾದಕ ವಸ್ತು ಸೇವನೆ ಮಾಡಿದ್ದು ಪತ್ತೆಯಾದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದರು. ಅವಳಿ ನಗರಗಳನ್ನು ಮಾದಕವಸ್ತು ಮುಕ್ತ ಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು ಕಳೆದ 15 ದಿನಗಳಲ್ಲಿ 45 ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಪಿಜಿ ಹೋಟೆಲ್ ರೆಸ್ಟೋರೆಂಟ್‌ಗಳಲ್ಲಿ ಮಾರಾಟ ಸೇವನೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ದಾಳಿ ವೇಳೆ ಇದು ಪತ್ತೆಯಾದರೆ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT