ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ | ಮಹಿಳಾ ಕಾಲೇಜು ಕಟ್ಟಡ ಕಾಮಗಾರಿಗೆ ಮೀನಮೇಷ: ಸೋರುವ ಕೊಠಡಿಗಳಲ್ಲೇ ಪಾಠ

Published 17 ಜುಲೈ 2024, 7:07 IST
Last Updated 17 ಜುಲೈ 2024, 7:07 IST
ಅಕ್ಷರ ಗಾತ್ರ

ಧಾರವಾಡ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ, ಜಾಗ ಮಂಜೂರಾದರೂ ಕಾಮಗಾರಿ ಆರಂಭವಾಗಿಲ್ಲ. ಶಿಥಿಲಸ್ಥಿತಿಗೆ ತಲುಪಿರುವ ಸೋರುವ ಕಟ್ಟಡದಲ್ಲಿಯೇ ವಿದ್ಯಾರ್ಥಿನಿಯರು ಪಾಠ ಕೇಳುವ ಸ್ಥಿತಿ ಇದೆ.

ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದ ಮುಂಭಾಗದ ಇಎಲ್‌ಟಿಸಿ (ಇಂಗ್ಲಿಷ್‌ ಲಾಂಗ್ವೆಜ್‌ ಲರ್ನಿಂಗ್‌ ಕೋರ್ಸ್‌ ಫಾರ್‌ ಟೀಚರ‍್ಸ್‌) ಕಟ್ಟಡದಲ್ಲಿ ಈ ಕಾಲೇಜು ಇದೆ. ಕಾಲೇಜು ಆರಂಭವಾಗಿ ದಶಕ ಕಳೆದರೂ ಸ್ವಂತ ಕಟ್ಟಡ ಇಲ್ಲ, ಶಿಥಿಲವಾಗಿರುವ ಕಟ್ಟಡವೇ ಗತಿಯಾಗಿದೆ.

ಕಳೆದ ವರ್ಷ ಮಳೆಗಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು ಇಎಲ್‌ಟಿಸಿ ಕಟ್ಟಡದ ದುಃಸ್ಥಿತಿ ವೀಕ್ಷಿಸಿದ್ದರು. ಈ ಕಾಲೇಜಿಗ ಸ್ವಂತ ಕಟ್ಟಡ ನಿರ್ಮಾಣಕ್ಕೆ ಇಎಲ್‌ಟಿಸಿ ಕಟ್ಟಡ ಇರುವ ಒಂದು ಎಕರೆ ಜಾಗ ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕೆ ₹ 3.5 ಕೋಟಿ ಅನುದಾನ ಮಂಜೂರಾಗಿದೆ. ಈ ವರ್ಷ ₹ 1.16 ಕೋಟಿ ಬಿಡುಗಡೆಗೆ ಆದೇಶಿಸಲಾಗಿದೆ. ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದೆ. ಆದರೆ, ಈವರೆಗೆ ಕಾಮಗಾರಿ ಆರಂಭವಾಗಿಲ್ಲ.

ಕಟ್ಟಡ ಕಾಮಗಾರಿ ಆರಂಭಕ್ಕೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು, ಸಚಿವ ಸಂತೋಷ್‌ ಲಾಡ್‌ ಹಾಗೂ ಶಾಸಕ ಅರವಿಂದ ಬೆಲ್ಲದ ಅವರಿಗೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.

‘ಕಾಲೇಜಿನಲ್ಲಿ ಮೂಲಸೌಕರ್ಯ ಇಲ್ಲ. ಚಾವಣಿ ಹೆಂಚುಗಳು ಒಡೆದಿರುವುದರಿಂದ ಬೇಸಿಗೆಯಲ್ಲಿ ಬಿಸಿಲಿನ ತಾಪ, ಮಳೆಗಾಲದಲ್ಲಿನ ಸೋರಿಕೆ ಸಮಸ್ಯೆ ತಪ್ಪಿಲ್ಲ. ತಾತ್ಕಾಲಿಕ ದುರಸ್ತಿಗೂ ಕ್ರಮ ವಹಿಸಿಲ್ಲ’ ಎಂದು ಬಿ.ಎ ವಿದ್ಯಾರ್ಥಿನಿ ಪ್ರೀತಿ ಬಡಿಗೇರ ದೂರಿದರು.

ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದ ಮುಂಭಾಗದ ಇಎಲ್‌ಟಿಸಿ ಕಟ್ಟಡದಲ್ಲಿ ಈ ಕಾಲೇಜು ಇದೆ. ಇಎಲ್‌ಟಿಸಿ ಕಟ್ಟಡದಲ್ಲಿ ಏಳು, ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದಲ್ಲಿ ನಾಲ್ಕು, ಗೌಂಧಿ ಚೌಕದಲ್ಲಿನ ಪ್ರಾಥಮಿಕ ಶಾಲೆ ಹಾಗೂ ಡಯೆಟ್‌ ಕಟ್ಟಡದಲ್ಲಿ ತಲಾ ಮೂರು ತರಗತಿಗಳು ನಡೆಯುತ್ತವೆ.

ಚಾವಣಿಯ ಬಹಳಷ್ಟು ಕಡೆ ಹೆಂಚುಗಳು ಒಡೆದಿವೆ. ಮಳೆಗಾಲದಲ್ಲಿ ಕೊಠಡಿಗಳಲ್ಲಿ ನೀರು ಸೋರುತ್ತದೆ. ಕೆಲವು ಕೊಠಡಿಗಳ ಚಾವಣಿಯ ಕಟ್ಟಿಗೆ ತುಂಡುಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಗೋಡೆಗಳು ಬಿರುಕಾಗಿವೆ. ಒಂದೇ ಕೊಠಡಿಯಲ್ಲಿ ಕಂಪ್ಯೂಟರ್‌ ಪ್ರಯೋಗಾಲಾಯ ಮತ್ತು ಸ್ಟಾಫ್‌ ರೂಮ್‌ ಎರಡೂ ಇವೆ. ಕಟ್ಟಡದ ಹಿಂಭಾಗದ ಆವರಣದಲ್ಲಿ ಪಾರ್ಥೇನಿಯಂ, ಹುಲ್ಲು, ಕಳೆ ಸಸ್ಯಗಳು ಬೆಳೆದಿವೆ. ಸೊಳ್ಳೆ, ನೊಣಗಳ ಹಾವಳಿ ಹೆಚ್ಚಾಗಿವೆ. ನಾಯಿ, ಬೆಕ್ಕುಗಳು ಕಟ್ಟಡದ ಮೂಲೆಗಳಲ್ಲಿ ವಿಶ್ರಾಂತಿ ಪಡೆಯುತ್ತಿವೆ.ಎಲ್ಲೆಂದರಲ್ಲಿ ಕಸ ಹಾಕಾಲಾಗಿದೆ.

ಕುಡಿಯುವ ನೀರಿನ ವ್ಯವಸ್ಥೆ ಇಲ್ಲ: ‘ಕಾಲೇಜಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ನಾವು ಮನೆಯಿಂದ ಬಾಟಲಿಯಲ್ಲಿ ನೀರು ತರುತ್ತೇವೆ. ನಾಲ್ಕು ಶೌಚಾಲಯಗಳು ಇವೆ, ಮೂರಕ್ಕೆ ಬೀಗ ಹಾಕಲಾಗಿದೆ. ಒಂದು ಶೌಚಾಲಯ ಮಾತ್ರ ವಿದ್ಯಾರ್ಥಿನಿಯರ ಬಳಕೆಗೆ ಇದೆ’ ಎಂದು ವಿದ್ಯಾರ್ಥಿನಿಯೊಬ್ಬರು ಸಂಕಷ್ಟ ತೋಡಿಕೊಂಡರು.

ಬೋಧಕರ ಕೊಠಡಿ ಚಾವಣಿ ಹಾಳಾಗಿ ನೀರು ಸೋರಿರುವುದು ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಬೋಧಕರ ಕೊಠಡಿ ಚಾವಣಿ ಹಾಳಾಗಿ ನೀರು ಸೋರಿರುವುದು ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಇಎಲ್‌ಟಿಸಿ ಕಟ್ಟಡದ ಕೊಠಡಿಯೊಂದರ ದುಃಸ್ಥಿತಿ ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಇಎಲ್‌ಟಿಸಿ ಕಟ್ಟಡದ ಕೊಠಡಿಯೊಂದರ ದುಃಸ್ಥಿತಿ ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಇಎಲ್‌ಟಿಸಿ ಕಟ್ಟಡ ಹಿಂಭಾಗದ ಆವರಣದಲ್ಲಿ ಹುಲ್ಲು ಸಸ್ಯಗಳು ಬೆಳೆದಿರುವುದು
ಧಾರವಾಡದ ಇಎಲ್‌ಟಿಸಿ ಕಟ್ಟಡ ಹಿಂಭಾಗದ ಆವರಣದಲ್ಲಿ ಹುಲ್ಲು ಸಸ್ಯಗಳು ಬೆಳೆದಿರುವುದು

4 ಕೋರ್ಸ್‌: 400 ವಿದ್ಯಾರ್ಥಿನಿಯರು

ಕಾಲೇಜಿನಲ್ಲಿ ಬಿ.ಎ ಬಿ.ಎಸ್‌ಸಿ ಬಿ.ಕಾಂ ಹಾಗೂ ಬಿ.ಎಫ್‌.ಟಿ (ಫ್ಯಾಷನ್‌ ಟೆಕ್ನಾಲಜಿ) ಕೋರ್ಸ್‌ಗಳು ಇವೆ. ಸುಮಾರು 400 ವಿದ್ಯಾರ್ಥಿನಿಯರು ಇದ್ದಾರೆ. ಬಹುತೇಕ ವಿದ್ಯಾರ್ಥಿನಿಯರು ಗ್ರಾಮೀಣ ಪ್ರದೇಶದವರು. 26 ಬೋಧಕರು ಇದ್ದಾರೆ. ಕೊಠಡಿಗಳ ಕೊರತೆಯಿಂದಾಗಿ ಹಲವು ವಿದ್ಯಾರ್ಥಿನಿಯರಿಗೆ ‌ದಾಖಲಾತಿ ಪ್ರವೇಶ ನೀಡಲು ಸಾಧ್ಯವಾಗಿಲ್ಲ. ಸುಸಜ್ಜಿತ ಕಟ್ಟಡ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚು ವಿದ್ಯಾರ್ಥಿನಿಯರಿಗೆ ಪ್ರವೇಶಾತಿ ನೀಡಲು ಅನುಕೂಲವಾಗಲಿದೆ ಎಂದು ಕಾಲೇಜಿನ ಬೋಧಕರು ತಿಳಿಸಿದರು.

ಇಎಲ್‌ಟಿಸಿ ಕಟ್ಟಡ ಸೋರುತ್ತಿದೆ. ಬೇರೊಂದು ಕಟ್ಟಡ ವ್ಯವಸ್ಥೆ ಮಾಡಿದರೆ ತರಗತಿ ನಡೆಸಲು ಅನುಕೂಲವಾಗುತ್ತದೆ. ಕಾಲೇಜಿನಲ್ಲಿರುವ ಕೋರ್ಸ್‌ಗಳಿಗೆ ಒಟ್ಟು 16 ಕೊಠಡಿಗಳು ಅಗತ್ಯ ಇದೆ
-ಪ್ರೊ.ಎಸ್‌.ಎಸ್‌.ಅಂಗಡಿ, ಪ್ರಭಾರ ಪ್ರಾಚಾರ್ಯ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT