ಡಾ. ಬಿ.ಸಿ.ರಾಯ್ ನೆನಪಲ್ಲಿ ಆಚರಣೆ
ಬಿ.ಸಿ.ರಾಯ್. ವೈದ್ಯಕೀಯ ಕ್ಷೇತ್ರದ ಮಹಾನ್ ತಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಯಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ ಸಮಾಜ ಸೇವಕರಾಗಿ ಹೆಸರಾಗಿದ್ದರು. ವೈದ್ಯಲೋಕಕ್ಕೆ ಇವರು ನೀಡಿದ ಕೊಡುಗೆ ಅನನ್ಯ ಅದ್ವಿತೀಯ. ಇದನ್ನು ಗಮನಿಸಿಯೇ ಅವರು ಜನಿಸಿದ ಜುಲೈ 1ನೇ ತಾರೀಖನ್ನೇ ದೇಶದಲ್ಲಿ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಡಾ. ಬಿ.ಸಿ.ರಾಯ್ ಅವರು ಜನಿಸಿದ್ದು 1882ರ ಜುಲೈ 1. ಕೊನೆಯುಸಿರೆಳೆದಿದ್ದು 1962ರ ಜುಲೈ 1ರಂದು. ಹುಟ್ಟು ಹಾಗೂ ಸಾವು ಒಂದೇ ದಿನಾಂಕದಂದು ಸಂಭವಿಸಿದ್ದು ಕಾಕತಾಳೀಯ. ಪ್ಲೇಗ್‌ನಿಂದ ಪಶ್ಚಿಮ ಬಂಗಾಳ ನಲುಗಿಹೋಗಿತ್ತು. ಈ ರೋಗ ಸಾವಿರಾರು ಜನರನ್ನು ಬಲಿ ಪಡೆಯುತ್ತಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರಾಗಿದ್ದ ಬಿ.ಸಿ.ರಾಯ್ ಅವರು ಜೀವದ ಹಂಗು ತೊರೆದು ರೋಗಿಗಳನ್ನು ಬದುಕಿಸಿದ್ದರು. ಸ್ವಂತ ಹಣದಲ್ಲೇ ಸಾರ್ವಜನಿಕ ಆಸ್ಪತ್ರೆಗಳ ನಿರ್ವಹಣೆಗೆ ಬೇಕಾದ ವೆಚ್ಚ ಭರಿಸಿದ್ದರು.ಮಹಿಳೆಯರಿಗಾಗಿಯೇ ಪ್ರತ್ಯೇಕ ಆಸ್ಪತ್ರೆ ಆರಂಭಿಸಿದ್ದರು. ಇವರ ನೆನಪಿಗಾಗಿ ರಾಷ್ಟ್ರದಾದ್ಯಂತ ವೈದ್ಯರ ದಿನ ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರತಿವರ್ಷ ಡಾ. ಬಿ.ಸಿ.ರಾಯ್ ಪ್ರಶಸ್ತಿ ನೀಡಲಾಗುತ್ತಿದೆ.