ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಸಿಗದ ಸೇವಾ ಭದ್ರತೆ: ನಿಲ್ಲದ ಹೋರಾಟ

Published 19 ನವೆಂಬರ್ 2023, 5:28 IST
Last Updated 19 ನವೆಂಬರ್ 2023, 5:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯ ಪ್ರತಿ ಅಂಗವಿಕಲರಿಗೂ ಸರ್ಕಾರದ ಸೌಲಭ್ಯ ದೊರೆಯಬೇಕು ಎಂಬ ನಿಟ್ಟಿನಲ್ಲಿ ಅಂಗವಿಕಲರ ಮಾಹಿತಿ ಸಂಗ್ರಹಿಸಿ, ಅವರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ (ರೆಹ್ಯಾಬಿಲಿಟೇಷನ್‌ ವರ್ಕರ್‌) ಇಂದಿಗೂ ಸೇವಾ ಭದ್ರತೆ ದೊರೆಯುತ್ತಿಲ್ಲ.

ಜಿಲ್ಲೆಯಲ್ಲಿನ ಅಂಗವಿಕಲರ ಮಾಹಿತಿ ಸಂಗ್ರಹಿಸಿ, ಅವರಿಗೆ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ದೊರೆಯುವಂತಹ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಕ್ಕಾಗಿ ರಾಜ್ಯ ಸರ್ಕಾರವು 2008ರಲ್ಲಿ ‘ಅಂಗವಿಕಲರ ಗ್ರಾಮೀಣ ಪುನರ್ವಸತಿ ಯೋಜನೆ’ಯಡಿ ಅಂಗವಿಕಲರನ್ನೇ ಎಂಆರ್‌ಡಬ್ಲ್ಯೂ, ವಿಆರ್‌ಡಬ್ಲ್ಯೂ ಮತ್ತು ಯುಆರ್‌ಡಬ್ಲ್ಯೂ ಎಂಬ ಹೆಸರಿನಲ್ಲಿ ಅಂಗವಿಕಲರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನಾಗಿ ಗೌರವಧನದ ಆಧಾರದ ಮೇಲೆ ನೇಮಕ ಮಾಡಿತ್ತು. 

ಇವರು ಜಿಲ್ಲೆಯ ತಾಲ್ಲೂಕು, ನಗರ, ಗ್ರಾಮೀಣಮಟ್ಟದಲ್ಲಿನ ಅಂಗವಿಕಲರನ್ನು ಗುರುತಿಸಿ ಅವರಿಗೆ ಇಲಾಖೆಯಡಿ ಶಿಕ್ಷಣ, ಸಬಲೀಕರಣ, ಸಾಮಾಜಿಕ ಭದ್ರತೆ, ಪಿಂಚಣಿ, ಯುಡಿಐಡಿ ಕಾರ್ಡ್‌ ಸೌಲಭ್ಯ, ವೈದ್ಯಕೀಯ ಪ್ರಮಾಣ ಪತ್ರ ಮಾಡಿಸುವುದು, ಸಲಕರಣೆಗಳ ಕೊಡಿಸುವುದು ಸೇರಿದಂತೆ ಇಲಾಖೆಯಲ್ಲಿನ 40ಕ್ಕೂ ಹೆಚ್ಚು ಯೋಜನೆಗಳ ಅನುಷ್ಠಾನಕ್ಕಾಗಿ ಪರೋಕ್ಷವಾಗಿ ಸಹಕರಿಸುತ್ತಾ ಕಾರ್ಯ ನಿರ್ವಹಿಸುತ್ತಿದ್ದಾರೆ.

157 ಕಾರ್ಯಕರ್ತರು

ಜಿಲ್ಲೆಯಲ್ಲಿ ಪ್ರಸ್ತುತ ತಾಲ್ಲೂಕುಮಟ್ಟದಲ್ಲಿ 5 ಜನ ಎಂಆರ್‌ಡಬ್ಲ್ಯೂ (ಹುಬ್ಬಳ್ಳಿ, ಧಾರವಾಡ, ನವಲಗುಂದ, ಕಲಘಟಗಿ, ಕುಂದಗೊಳ), ನಗರ ಮಟ್ಟದಲ್ಲಿ ಯುಆರ್‌ಡಬ್ಲ್ಯೂ– 8 ಮಂದಿ (ಕಲಘಟಗಿ, ಕುಂದುಗೊಳ, ನವಲಗುಂದ, ಅಳ್ನಾವರ, ಹುಬ್ಬಳ್ಳಿ ಹಾಗೂ ಧಾರವಾಡ ತಲಾ ಎರಡು) ಇವರೊಂದಿಗೆ ಜಿಲ್ಲೆಯ ಗ್ರಾಮೀಣ ಮಟ್ಟದಲ್ಲಿ 144 ಜನ ಸೇರಿದಂತೆ ಒಟ್ಟು 157 ಜನ ಪುನರ್ವಸತಿ ಕಾರ್ಯಕರ್ತರು ಅಂಗವಿಕಲರ ಕಲ್ಯಾಣಕ್ಕಾಗಿ ಪರೋಕ್ಷವಾಗಿ ಕಾರ್ಯ ನಿರ್ವಹಿಸುತ್ತಾರೆ.

25ಸಾವಿರಕ್ಕೂ ಹೆಚ್ಚು ಅಂಗವಿಕಲರು

ನಮ್ಮ ಕಾರ್ಯಕರ್ತರು ಈಚೆಗೆ ನಡೆಸಿದ ಸಮೀಕ್ಷೆ ಪ್ರಕಾರ, ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಅಂಗವಿಕಲರಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆ, ಸೌಲಭ್ಯಗಳು ದೊರಕಿಸಿಕೊಡುವಲ್ಲಿ ತೊಂದರೆಯಾಗುತ್ತಿದೆ’ ಎಂದು ಕರ್ನಾಟಕ ಎಂಆರ್‌ಡಬ್ಲ್ಯೂ ಮತ್ತು ವಿಆರ್‌ಡಬ್ಲ್ಯೂ ರಾಜ್ಯ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಬಸಪ್ಪ ಶಿ. ಬೆಳಾರದ ’ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆಗೆ ಪೂರಕವಾಗಿ ಕೆಲಸ ಮಾಡುವುದಕ್ಕಾಗಿ ರಾಜ್ಯ ಸರ್ಕಾರವು 2008ರಲ್ಲಿ ನಮ್ಮನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಿತು. ಅಲ್ಲಿಂದ ಇಲ್ಲಿಯವರೆಗೆ 15 ವರ್ಷಗಳಿಂದ ನಿರಂತರವಾಗಿ ಕೇವಲ ಗೌರವಧನದಲ್ಲೇ ಕೆಲಸ ಮಾಡುತ್ತಿದ್ದೇವೆ. ನಮ್ಮ ಸೇವೆ ಕಾಯಂ ಮಾಡಿ ಎಂದು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ‘ ಎಂದು ಅವರು ತಿಳಿಸಿದರು.

ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಜಿಲ್ಲೆಯ ಎಲ್ಲಾ ಅಂಗವಿಕಲರು ಕಡ್ಡಾಯವಾಗಿ ಯುಡಿಐಡಿ ಕಾರ್ಡ್‌ ಮಾಡಿಸಿಕೊಳ್ಳಬೇಕು. ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 0836–2744474 ಸಂಪರ್ಕಿಸಬಹುದು.

‘ಕನಿಷ್ಠ ವೇತನ ಜಾರಿಯಾಗಲಿ’

‘ಜಿಲ್ಲೆಯಲ್ಲಿ ಎಂಆರ್‌ಡಬ್ಲ್ಯೂ (ಮಲ್ಟಿಪರ್ಪಸ್‌ ರಿಹ್ಯಾಬಿಲಿಟೇಷನ್‌ ವರ್ಕರ್‌) ಕೆಲಸಗಾರರಿಗೆ ತಿಂಗಳಿಗೆ  ₹ 15 ಸಾವಿರ ಗೌರವಧನ ಮತ್ತು ಯುಆರ್‌ಡಬ್ಲ್ಯೂ ಮತ್ತು ವಿಆರ್‌ಡಬ್ಲ್ಯೂಗಳಿಗೆ ತಿಂಗಳಿಗೆ ₹ 9 ಸಾವಿರ ಗೌರವಧನ ನೀಡಲಾಗುತ್ತಿದೆ. ಆದರೆ ಇದು ಸಾಕಾಗುವುದಿಲ್ಲ. ಹೀಗಾಗಿ ಸರ್ಕಾರ ನಮಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಜೊತೆಗೆ ಸೇವಾ ಭದ್ರತೆ ಕಲ್ಪಿಸಬೇಕು. ವಿಕಲಚೇತನರ ಕ್ಷೇಮಾಭಿವೃದ್ಧಿ ನಿಗಮ ರಚಿಸಬೇಕು‘ ಎಂದು ಬಸಪ್ಪ ಶಿ. ಬೆಳಾರದ ಆಗ್ರಹಿಸುತ್ತಾರೆ. 

‘ಹಂತ ಹಂತವಾಗಿ ಗೌರವಧನ ಹೆಚ್ಚಳ’

‘ರಾಜ್ಯ ಸರ್ಕಾರವು 2008ರಲ್ಲಿ ’ಅಂಗವಿಕಲರ ಗ್ರಾಮೀಣ ಪುನರ್ವಸತಿ ಯೋಜನೆ‘ ಅಡಿಯಲ್ಲಿ ಎಂಆರ್‌ಡಬ್ಲ್ಯೂ ವಿಆರ್‌ಡಬ್ಲ್ಯೂ ಮತ್ತು ಯುಆರ್‌ಡಬ್ಲ್ಯೂ ಪುನರ್ವಸತಿ ಕಾರ್ಯಕರ್ತರನ್ನು ಮಾಸಿಕ ₹800 ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಂಡಿತ್ತು. ನಂತರದ ದಿನಗಳಲ್ಲಿ ಅವರಿಗೆ ಹಂತ ಹಂತವಾಗಿ ಗೌರವಧನ ಹೆಚ್ಚಳ ಮಾಡಲಾಗುತ್ತಿದೆ. ಅವರ ಸೇವಾ ಭದ್ರತೆ ಬೇಡಿಕೆ ಸರ್ಕಾರದ ಮಟ್ಟದಲ್ಲಿದೆ’ ಎಂದು ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಧಾರವಾಡ ಜಿಲ್ಲಾ ಅಧಿಕಾರಿ ಜಗದೀಶ ಕೆಂಪಲಿಂಗನವರ್ ಹೇಳುತ್ತಾರೆ.

ಜಿಲ್ಲೆಯ ಅಂಗವಿಕಲರ ಮಾಹಿತಿ (ಎಂಆರ್‌ಡಬ್ಲ್ಯು ವಿಆರ್‌ಡಬ್ಲ್ಯು ಯುಆರ್‌ಡಬ್ಲ್ಯು ಸಮೀಕ್ಷೆ ಪ್ರಕಾರ)

ತಾಲ್ಲೂಕು;ದೈಹಿಕ;ಅಂಧತ್ವ;ಬುದ್ಧಿಮಾಂಧ್ಯ;ಮಾನಸಿಕ;ಬಹುವಿಧ;ಶ್ರಣದೋಷ;ಇತರೆ

ಧಾರವಾಡ;3005;808;465;183;46;1127;132

ಅಳ್ನಾವರ;341;52;25;31;–;61;18

ಹುಬ್ಬಳ್ಳಿ;5450;762;432;658;86;754;196 ಕಲಘಟಗಿ;1845;289;181;218;27;265;40

ನಲಗುಂದ;1244;243;114;78;5;191;29

ಅಣ್ಣಿಗೇರಿ;460;98;57;32;6;43;15

ಕುಂದುಗೋಳ;2502;340;266;264;30;196;128

ಒಟ್ಟು;14847;2592;1540;1464;200;2637;558

(ಮಾಹಿತಿ: ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಧಾರವಾಡ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT